ADVERTISEMENT

ನಾಲ್ಕು ಹೊಸ ಬಸ್ ಸಂಚಾರಕ್ಕೆ ಹಸಿರು ನಿಶಾನೆ

​ಪ್ರಜಾವಾಣಿ ವಾರ್ತೆ
Published 5 ಜುಲೈ 2013, 6:54 IST
Last Updated 5 ಜುಲೈ 2013, 6:54 IST

ದೇವನಹಳ್ಳಿ: `ಪಟ್ಟಣದಿಂದ ಬೆಂಗಳೂರಿಗೆ ಪ್ರತಿದಿನ ರಾಜ್ಯ ರಸ್ತೆ ಸಾರಿಗೆ ಇಲಾಖೆ ವತಿಯಿಂದ ನಾಲ್ಕು ಬಸ್ಸುಗಳನ್ನು ಹೆಚ್ಚುವರಿಯಾಗಿ ಓಡಿಸುವುದರಿಂದ ಪ್ರಯಾಣಿಕರ ಸಮಸ್ಯೆ ಸಾಕಷ್ಟು ಕಡಿಮೆಯಾಗಲಿದೆ' ಎಂದು ಶಾಸಕ ಪಿಳ್ಳಮುನಿಶ್ಯಾಮಪ್ಪ ತಿಳಿಸಿದರು.

ದೇವನಹಳ್ಳಿ ಹಳೆ ಬಸ್ ನಿಲ್ದಾಣದಲ್ಲಿ ಗುರುವಾರ ಹೆಚ್ಚುವರಿ ಬಸ್‌ಗಳ ಸಂಚಾರಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, `ಇನ್ನು ಮುಂದೆ ಪ್ರತಿದಿನ ಎರಡು ಸಾರಿಗೆ ಬಸ್ಸುಗಳು ಬೆಳಿಗ್ಗೆ 8.30ಕ್ಕೆ ಚಿಂತಾಮಣಿಯಿಂದ ಸಂಚಾರ ಆರಂಭಿಸಿ ಬೆಂಗಳೂರಿನ ಕೆ.ಆರ್.ಮಾರ್ಕೆಟ್‌ಗೆ 12 ಗಂಟೆಗೆ ತಲುಪಲಿವೆ. ಅದೇ ರೀತಿ ಬೆಂಗಳೂರಿನಿಂದ 8.30ಕ್ಕೆ ಹೊರಡುವ ಬಸ್ಸು ವಿಜಯಪುರಕ್ಕೆ ಸಂಚರಿಸುತ್ತದೆ' ಎಂದು ಹೇಳಿದರು.

`ದೇವನಹಳ್ಳಿ ಬಿ.ಎಂ.ಟಿ.ಸಿ ಹಾಗೂ ವಿಜಯಪುರ ಕೆ.ಎಸ್.ಆರ್.ಟಿ.ಸಿ ಡಿಪೊಗಳ ಕಾಮಗಾರಿಯನ್ನು ತ್ವರಿತಗತಿಯಲ್ಲಿ ನಡೆಸುವಂತೆ ಸಂಬಂಧಿಸಿದ ಅಧಿಕಾರಿಗಳಿಗೆ ಸೂಚಿಸಲಾಗಿದೆ. ಈ ಘಟಕಗಳು ಆರಂಭಗೊಂಡಲ್ಲಿ ಪ್ರಯಾಣಿಕರಿಗೆ ಇನ್ನಷ್ಟು ಅನುಕೂಲವಾಗಲಿದೆ' ಎಂದರು.

ಸಂಚಾರ ವ್ಯವಸ್ಥಾಪಕ ರವೀಂದ್ರ ಕುಮಾರ್ ಮಾತನಾಡಿ, `ಈ ಮಾರ್ಗದಲ್ಲಿ ಪ್ರತಿ 30 ನಿಮಿಷಕ್ಕೊಂದು ಸಾರಿಗೆ ಬಸ್ಸು ಸಂಚರಿಸಲಿದೆ. ಖಾಸಗಿ ಬಸ್ಸುಗಳ ಪೈಪೋಟಿ ಕಡಿಮೆ ಮಾಡಲು ಪ್ರಸ್ತುತ ಬೆಂಗಳೂರಿಗೆ ಇರುವ ಪ್ರಯಾಣ ದರವನ್ನು 37 ರಿಂದ 30 ರೂಗೆ ಇಳಿಕೆ ಮಾಡಲಾಗಿದೆ.

ಚಿಂತಾಮಣಿ, ಶಿಡ್ಲಘಟ್ಟ, ವಿಜಯಪುರದಿಂದ ಸಂಚರಿಸುವ ಬಸ್ಸುಗಳಲ್ಲೂ ಶೇಕಡವಾರು ಇಳಿಕೆ ಮಾಡಲಾಗಿದೆ. ಇದರಿಂದ ಈ ಭಾಗದ ತರಕಾರಿ ಬೆಳೆಯುವ ರೈತರಿಗೆ, ಪುಷ್ಪೊದ್ಯಮಿಗಳಿಗೆ, ಉದ್ಯೋಗಿಗಳಿಗೆ ಹಾಗೂ ಶಾಲಾ ಕಾಲೇಜು ವಿದ್ಯಾರ್ಥಿಗಳಿಗೆ ಹೆಚ್ಚಿನ ಅನುಕೂಲವಾಗಲಿದೆ' ಎಂದರು.

ತಾಲ್ಲೂಕು ಜೆ.ಡಿ.ಎಸ್ ಘಟಕದ ಅಧ್ಯಕ್ಷ ಮುನಿಶ್ಯಾಮೇಗೌಡ, ಪ್ರಧಾನ ಕಾರ್ಯದರ್ಶಿ ಜಿ.ಎ.ರವೀಂದ್ರ, ಪುರಸಭೆ ಸದಸ್ಯ ಶಶಿಕುಮಾರ್, ಗೋಪಾಲಕೃಷ್ಣ, ಮಾಜಿ ಸದಸ್ಯ ವಸಂತ ಬಾಬು, ನಾರಾಯಣ ಸ್ವಾಮಿ, ಮಹಿಳಾ ಗ್ರಾಮೀಣಾಭಿವೃದ್ಧಿ ಸಂಸ್ಥೆ ಅಧ್ಯಕ್ಷೆ ಸೂರ್ಯಕಲಾ ಮೂರ್ತಿ, ಗಣೇಶ್‌ಬಾಬು ಇದ್ದರು.

ವಿಜಯಪುರ:  ಸಾಕಷ್ಟು ಪ್ರಯತ್ನಗಳ ಮೂಲಕ ಪಡೆದುಕೊಂಡ ಸೌಲಭ್ಯವನ್ನು ಉಪಯುಕ್ತವಾಗಿ ಬಳಸಿಕೊಳ್ಳುವುದು ಮುಖ್ಯ ಎಂದು ಶಾಸಕ ಪಿಳ್ಳಮುನಿಶಾಮಪ್ಪ ತಿಳಿಸಿದರು.

ಪಟ್ಟಣ ಸಮೀಪದ ಹಾರೋಹಳ್ಳಿ ಗ್ರಾಮದಲ್ಲಿ ಗುರುವಾರ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ ವತಿಯಿಂದ ಸಾರ್ವಜನಿಕರಿಗೆ ಬಸ್ ಸೌಲಭ್ಯ ಒದಗಿಸಲು ಬಸ್‌ಗೆ ಚಾಲನೆ ನೀಡಿ ಅವರು ಮಾತನಾಡಿದರು.

ಶಿಡ್ಲಘಟ್ಟದಿಂದ ವಿಜಯಪುರ ಮಾರ್ಗವಾಗಿ ದಂಡಿಗಾನಹಳ್ಳಿ, ಬೈರಾಪುರ, ಹಾರೋಹಳ್ಳಿ, ಬುಳ್ಳಹಳ್ಳಿ, ಆವತಿ , ದೇವನಹಳ್ಳಿಗೆ ಈ ಸಾರಿಗೆ ವ್ಯವಸ್ಥೆ ಕಲ್ಪಿಸಿದ್ದು, ಇದರೊಂದಿಗೆ ಚಿಂತಾಮಣಿ, ಶಿಡ್ಲಘಟ್ಟ, ವಿಜಯಪುರ, ದೇವನಹಳ್ಳಿ, ಯಲಹಂಕ ಮೂಲಕ ಕೆ.ಆರ್. ಮಾರುಕಟ್ಟೆಗೆ ಪ್ರತಿ ದಿನ ಹೆಚ್ಚುವರಿ 3 ಬಸ್‌ಗಳು ಸಂಚರಿಸಲು ಇಂದಿನಿಂದ ಚಾಲನೆ ನೀಡಲಾಗಿದೆ ಎಂದು ತಿಳಿಸಿದರು.

ಹಾರೋಹಳ್ಳಿ ಗ್ರಾ.ಪಂ.ಅಧ್ಯಕ್ಷ ಸುಬ್ಬಣ್ಣ, ಉಪಾಧ್ಯಕ್ಷೆ ಮುನಿರಾಜಮ್ಮ ಪೂಜಪ್ಪ, ಎನ್.ರಾಜಗೋಪಾಲ್, ಎಚ್.ಸಿ.ಮುನಿರಾಜು, ಮುನಿರೆಡ್ಡಿ, ಎ.ಸಿ.ನಾಗರಾಜ್, ಚಿ.ಮಾ.ಸುಧಾಕರ್, ವೀರಭದ್ರಪ್ಪ, ಸದಾಶಿವಪ್ಪ, ಮಂಜುನಾಥ್ ಬಾಬು, ದಯಾನಂದ್, ಎಚ್.ವಿ.ಮುನಿರೆಡ್ಡಿ, ಮಾರ್ಗಾಧಿಕಾರಿ ವಾಜಿದ್ ಇದ್ದರು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.