ADVERTISEMENT

ನೇಕಾರರ ಸಮಸ್ಯೆ : ಸಿ.ಎಂ. ಬಳಿಗೆ ನಿಯೋಗ

​ಪ್ರಜಾವಾಣಿ ವಾರ್ತೆ
Published 14 ಮಾರ್ಚ್ 2011, 9:05 IST
Last Updated 14 ಮಾರ್ಚ್ 2011, 9:05 IST
ನೇಕಾರರ ಸಮಸ್ಯೆ : ಸಿ.ಎಂ. ಬಳಿಗೆ ನಿಯೋಗ
ನೇಕಾರರ ಸಮಸ್ಯೆ : ಸಿ.ಎಂ. ಬಳಿಗೆ ನಿಯೋಗ   

ದೊಡ್ಡಬಳ್ಳಾಪುರ: ನೇಕಾರರ ಸಮಸ್ಯೆಗಳ ಕುರಿತು ಚರ್ಚಿಸಲು ಮುಖ್ಯಮಂತ್ರಿಗಳ ಬಳಿಗೆ ನಿಯೋಗ ಕರೆದೊಯ್ಯುವುದಾಗಿ ಶಾಸಕ ಹಾಗೂ ರಾಜ್ಯ ಕೊಳಚೆ ನಿರ್ಮೂಲನಾ ಮಂಡಳಿ ಮಂಡಳಿ ಅಧ್ಯಕ್ಷ ಜೆ.ನರಸಿಂಹಸ್ವಾಮಿ ಹೇಳಿದರು.

ನಗರದ ಆರ್.ಎಲ್.ಜಾಲಪ್ಪ ಕಲಾ ಮಂದಿರದಲ್ಲಿ ಕೈಮಗ್ಗ ಮತ್ತು ಜವಳಿ ಇಲಾಖೆ, ಬೆಂ.ಗ್ರಾ.ಜಿಲ್ಲಾ ಪಂಚಾಯಿತಿ, ರಾಜ್ಯ ಜವಳಿ ಮೂಲ ಸೌಲಭ್ಯ ಅಭಿವೃದ್ದಿ ನಿಗಮ, ಭಾರತೀಯ ಜೀವ ವಿಮಾ ನಿಗಮ ಮತ್ತು ವಿವಿಧ ನೇಕಾರ ಸಹಕಾರ ಸಂಘಗಳ ಸಹಯೋಗದೊಂದಿಗೆ ನಡೆದ 2010-11ನೇ ಸಾಲಿನ ವಿದ್ಯುತ್ ಮಗ್ಗ ನೇಕಾರರ ಗುಂಪು ವಿಮಾ ಯೋಜನೆಯಡಿ ನೇಕಾರರ ಮಕ್ಕಳಿಗೆ ವಿದ್ಯಾರ್ಥಿ ವೇತನದ ಚೆಕ್ ವಿತರಣಾ ಸಮಾರಂಭದಲ್ಲಿ ಮಾತನಾಡಿದರು.

ನೇಕಾರರಿಗೆ ಶೇ.3 ಬಡ್ಡಿ ದರದಲ್ಲಿ ಸಾಲ, ವಿದ್ಯುತ್ ಸಮಸ್ಯೆ ಪರಿಹಾರ, ವಿದ್ಯುತ್ ಮಗ್ಗ ನೇಕಾರರಿಗೂ ಎಚ್‌ಐಎಸ್, ಎಸ್‌ಎಸ್‌ವೈ ಯೋಜನೆ ವಿಸ್ತರಣೆ ಮತ್ತಿತರ ನೇಕಾರರ ಸಮಸ್ಯೆಗಳನ್ನು ಬಗೆಹರಿಸುವಂತೆ ನೇಕಾರ ಸಂಘಟನೆಗಳು ಮಾಡಿದ ಮನವಿಗೆ ಉತ್ತರಿಸಿದ ಅವರು, ನೇಕಾರರಿಗೆ ಹಲವು ಸಮಸ್ಯೆಗಳಿವೆ.

ನೇಕಾರರಿಗೆ ನೆರವು ನೀಡುವ ದಿಸೆಯಲ್ಲಿ ಸರ್ಕಾರ ಹಲವು ಯೋಜನೆಗಳನ್ನು ರೂಪಿಸಿದ್ದು, ಮಕ್ಕಳಿಗೆ ವಿದ್ಯಾರ್ಥಿ ವೇತನ ವಿತರಿಸುವ ಮಹತ್ವದ ಯೋಜನೆಯೂ ಒಂದಾಗಿದೆ. ಆರೋಗ್ಯ ವಿಮೆ ಸೇರಿದಂತೆ ವಿವಿಧ ರೀತಿಯಲ್ಲಿ ಸರ್ಕಾರ ನೇಕಾರರಿಗೆ ನೆರವು ನೀಡುತ್ತಿದೆ. ಸರ್ಕಾರದ ಯೋಜನೆಗಳನ್ನು ನೇಕಾರರು ಸದುಪಯೋಗಪಡಿಸಿಕೊಳ್ಳಬೇಕು ಎಂದರು.

ಬೆಂ.ಗ್ರಾ.ಜಿಲ್ಲಾ ಕೈಮಗ್ಗ ಮತ್ತು ಜವಳಿ ಇಲಾಖೆ ಉಪನಿರ್ದೇಶಕ ಲಿಂಗರಾಜು ಪ್ರಸ್ತಾವಿಕವಾಗಿ ಮಾತನಾಡಿ, 2010-11 ನೇ ಸಾಲಿನ ವಿದ್ಯುತ್ ಮಗ್ಗ ನೇಕಾರರ ಗುಂಪು ವಿಮಾ ಯೋಜನೆಯಡಿ ನೇಕಾರರ ಮಕ್ಕಳಿಗೆ ವಿದ್ಯಾರ್ಥಿ ವೇತನವನ್ನು ವಿತರಿಸಲಾಗುತ್ತಿದೆ. 7762 ನೇಕಾರರನ್ನು ಈ ಯೋಜನೆಯಡಿ ನೋಂದಾಯಿಸಲಾಗಿದ್ದು, ರಾಜ್ಯದಲ್ಲಿಯೇ ಬೆಂ.ಗ್ರಾ.ಜಿಲ್ಲೆ ಮುಂಚೂಣಿಯಲ್ಲಿದೆ.

ಈ ಯೋಜನೆಯಡಿ  9 ರಿಂದ 12ನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿರುವ 5469 ವಿದ್ಯಾರ್ಥಿಗಳಿಗೆ 1,200 ರೂಪಾಯಿ ವಿದ್ಯಾರ್ಥಿ ವೇತನ ನೀಡಲಾಗುತ್ತಿದ್ದು, ದೊಡ್ಡಬಳ್ಳಾಪುರ ತಾಲ್ಲೂಕಿನಲ್ಲಿಯೇ 3698ಮಂದಿ ಫಲಾನುಭವಿಗಳಿದ್ದಾರೆ.

ಜೊತೆಗೆ ಜವಳಿ ಇಲಾಖೆಯಿಂದ ಹೊಲಿಗೆ ಯಂತ್ರ ತರಬೇತಿ ನೀಡಿ ಉದ್ಯೋಗಾವಕಾಶಗಳನ್ನು ನೀಡಲಾಗುತ್ತಿದೆ ಎಂದರು. ಕರ್ನಾಟಕ ರೇಷ್ಮೆ ಮಾರಾಟ ಮಂಡಳಿ ಅಧ್ಯಕ್ಷ ಕೆ.ಎಂ.ಹನುಮಂತರಾಯಪ್ಪ, ಬೆಂ.ಗ್ರಾ.ಜಿಲ್ಲಾ ಪಂಚಾಯತಿ ಅಧ್ಯಕ್ಷೆ ಭಾಗ್ಯಮ್ಮ, ಜಿ.ಪಂ.ಸದಸ್ಯರಾದ ಎನ್.ಹನುಮಂತೇಗೌಡ, ಉಮಾಬಾಯಿ, ಎನ್.ಅರವಿಂದ್, ತಾ.ಪಂ.ಅಧ್ಯಕ್ಷ ಅಶ್ವತ್ಥನಾರಾರಾಯಣ ಕುಮಾರ್, ಉಪಾಧ್ಯಕ್ಷೆ ಎಸ್.ಸುಮಾಮಂಜುನಾಥ್, ಎಲ್.ಐ.ಸಿ ವಿಭಾಗೀಯ ವ್ಯವಸ್ಥಾಪಕ ಲಕ್ಷ್ಮಣ್ ಜೆ.ಶಾನ್‌ಭಾಗ್, ನೇಕಾರ ಮಹಾಮಂಡಲದ ಅಧ್ಯಕ್ಷ ಎಚ್.ಜಿ.ಜಗನ್ನಾಥ್, ಉಪಾಧ್ಯಕ್ಷ ಕೆ.ಟಿ.ವೆಂಕಟಾಚಲಯ್ಯ, ತಾ.ಪಂ. ಕಾರ್ಯನಿರ್ವಹಣಾಧಿಕಾರಿ ದ್ಯಾಮಪ್ಪ, ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪ ನಿರ್ದೇಶಕ ವೆಂಕಟೇಶಪ್ಪ ಇತರರು ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.