ADVERTISEMENT

ಪರಿಸರ ಸಂರಕ್ಷಣೆಗೆ ಜಾಗೃತಿ ಅಗತ್ಯ

​ಪ್ರಜಾವಾಣಿ ವಾರ್ತೆ
Published 26 ಅಕ್ಟೋಬರ್ 2011, 19:30 IST
Last Updated 26 ಅಕ್ಟೋಬರ್ 2011, 19:30 IST

ದೇವನಹಳ್ಳಿ: `ಪರಿಸರ ನಾಶದಿಂದ ಜಾಗತಿಕ ತಾಪಮಾನ ಉಂಟಾಗುತ್ತಿದ್ದು, ವಿದ್ಯಾರ್ಥಿಗಳು ತಮ್ಮ ಮನೆ, ಶಾಲೆ, ಕಾಲೇಜುಗಳ ಆಸುಪಾಸಿನಲ್ಲಿ ಗಿಡ ನೆಡುವ ಮೂಲಕ ಸಾರ್ವಜನಿಕರಲ್ಲಿ ಪರಿಸರ ಸಂರಕ್ಷಣೆಯ ಅರಿವು ಮೂಡಿಸಬೇಕು~ ಎಂದು ಜಿಲ್ಲಾ ಸಾರ್ವಜನಿಕ ಶಿಕ್ಷಣ ಇಲಾಖೆ ಶಿಕ್ಷಣಾಧಿಕಾರಿ ನಾಗರತ್ನ ತಿಳಿಸಿದರು.

ತಾಲ್ಲೂಕಿನ ಚನ್ನಹಳ್ಳಿ ಸರ್ಕಾರಿ ಪ್ರೌಢಶಾಲಾ ಆವರಣದಲ್ಲಿ 10ನೇ ತರಗತಿಯ ವಿದ್ಯಾರ್ಥಿಗಳಿಗೆ ವಿಶೇಷ ತರಬೇತಿ ಶಿಬಿರದ ಸಮಾರೋಪ ಸಮಾರಂಭದಲ್ಲಿ ಹಾಗೂ `ಮಗುವಿಗೊಂದು ಗಿಡ ಶಾಲೆಗೊಂದು ವನ~ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

`ಗಿಡ/ಮರ ನಾಶವಾದ ಸ್ಥಳದಲ್ಲಿ ಕನಿಷ್ಠ ಐದು ಸಸಿಗಳನ್ನು ನೆಟ್ಟು, ಅವುಗಳನ್ನು ಮೂರು ವರ್ಷ ನಿರಂತರವಾಗಿ ಪೋಷಿಸಬೇಕು. ಸಾಮಾಜಿಕ ಸೇವೆಯೊಂದಿಗೆ ಪರಿಸರ ಕಾಳಜಿಯ ಪ್ರಜ್ಞೆ ಬರಲಿದ್ದು, ಇದು ಇತರರಿಗೂ ಮಾದರಿಯಾಗಬಹುದು~ ಎಂದು ತಿಳಿಸಿದರು.

ಜಿಲ್ಲಾ ಸಾರ್ವಜನಿಕ ಶಿಕ್ಷಣ ಇಲಾಖೆ ವಿಷಯ ಪರಿವೀಕ್ಷಕಿ ಶಾರದಮ್ಮ ಮಾತನಾಡಿ, ಸರ್ಕಾರ ಬಿಸಿಯೂಟ, ಉಚಿತ ಸೈಕಲ್ ಸೇರಿದಂತೆ ಹಲವು ಯೋಜನೆಗಳನ್ನು ಜಾರಿಗೆ ತಂದು ಶೈಕ್ಷಣಿಕ ಗುಣಮಟ್ಟ ಉತ್ತಮ ಪಡಿಸಲು ಮುಂದಾಗಿದೆ. `ಶಾಲೆಗೊಂದು ವನ~ ಕಾರ್ಯಕ್ರಮದಡಿ ವಿದ್ಯಾರ್ಥಿಗಳು ಕನಿಷ್ಠ ಎರಡು ಸಸಿಗಳನ್ನು ನೆಟ್ಟು, ಪೋಷಿಸಿದಲ್ಲಿ, ಸರ್ಕಾರದ ಋಣ ತೀರಿಸಿದಂತಾಗುತ್ತದೆ~ ಎಂದು ಹೇಳಿದರು.

ಮುಖ್ಯ ಶಿಕ್ಷಕ ಎಂ.ವೆಂಕಟೇಶ್ ಮಾತನಾಡಿ, ಸರ್ಕಾರಿ ಶಾಲೆಗೆ ಮೀಸಲಾಗಿರುವ 8.23 ಗುಂಟೆ ಮೈದಾನದಲ್ಲಿ ಆಟೋಟಗಳ ಕ್ರೀಡಾ ಅಂಕಣ ಹೊರತುಪಡಿಸಿ, ಉಳಿದ ಶಾಲೆಯ ಸುತ್ತಮುತ್ತ ಎಲ್ಲಾ ಜಾತಿಯ ಸಸಿಗಳನ್ನು ನೆಡುವ ಮೂಲಕ ಉತ್ತಮ ಶಾಲಾ ವನ ನಿರ್ಮಾಣ ಮಾಡಲು ಚಿಂತನೆ ಇದೆ. ಈ ನಿಟ್ಟಿನಲ್ಲಿ ನೀರಿನ ವ್ಯವಸ್ಥೆ ಹಾಗೂ ಶಾಲಾ ಕಾಂಪೌಂಡ್ ಕಲ್ಪಿಸಿಕೊಡಬೇಕೆಂದು ಕೋರಿದರು.

ಸಾಮಾಜಿಕ ಅರಣ್ಯವಲಯಾಧಿಕಾರಿ ಕೃಷ್ಣಪ್ಪ, ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷ ಬೈರೇಗೌಡ ವಿದ್ಯಾರ್ಥಿಗಳು ಮನೆಯಂಗಳದಲ್ಲಿ ಸಸಿಗಳನ್ನು ತಪ್ಪದೇ ಬೆಳೆಸುವಂತೆ ತಿಳಿಸಿದರು. ಕಾರ್ಯಕ್ರಮಕ್ಕೂ ಮುನ್ನ ಶಾಲೆಯಲ್ಲಿನ ವಿದ್ಯಾರ್ಥಿಗಳ ಮೌಲ್ಯಮಾಪನ ಪರಿಶೀಲಿಸಿದ ಕ್ಷೇತ್ರ ಶಿಕ್ಷಣಾಧಿಕಾರಿ ಹನುಮಂತಪ್ಪ ಶೈಕ್ಷಣಿಕ ಪ್ರಗತಿಯತ್ತ ಸಾಗುತ್ತಿರುವುದಕ್ಕೆ ಪ್ರಶಂಶಿಸಿದರು, ಶಿಕ್ಷಕ ಶೇಷಾದ್ರಿ, ಶ್ರಿಪಾದರಾವ್‌ಪುಟ್ಟರಂಗಸ್ವಾಮಿ ಗೌಡ ಇದ್ದರು.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.