ADVERTISEMENT

ಪರಿಸರ ಸಂರಕ್ಷಣೆ: ಸಾಮೂಹಿಕ ಪ್ರಯತ್ನ ಅವಶ್ಯಕ

ವಿಶ್ವ ಪರಿಸರ ದಿನಾಚರಣೆ, ನೀರಿಗಾಗಿ ಅರಣ್ಯ ಕಾರ್ಯಕ್ರಮಕ್ಕೆ ಚಾಲನೆ

​ಪ್ರಜಾವಾಣಿ ವಾರ್ತೆ
Published 5 ಜೂನ್ 2017, 8:30 IST
Last Updated 5 ಜೂನ್ 2017, 8:30 IST
ದೇವನಹಳ್ಳಿ ಸಾವಕನಹಳ್ಳಿ ಗೇಟ್‌ ಬಳಿ ಇರುವ ವೃಕ್ಷೋದ್ಯಾನದಲ್ಲಿ ನಡೆದ ವಿಶ್ವ ಪರಿಸರ ದಿನಾಚರಣೆ ಹಾಗೂ ನೀರಿಗಾಗಿ ಅರಣ್ಯ ಕಾರ್ಯಕ್ರಮದಲ್ಲಿ ಪರಿಸರ ಸಂರಕ್ಷಣೆ ಸಾಧಕರನ್ನು ಸನ್ಮಾನಿಸಲಾಯಿತು
ದೇವನಹಳ್ಳಿ ಸಾವಕನಹಳ್ಳಿ ಗೇಟ್‌ ಬಳಿ ಇರುವ ವೃಕ್ಷೋದ್ಯಾನದಲ್ಲಿ ನಡೆದ ವಿಶ್ವ ಪರಿಸರ ದಿನಾಚರಣೆ ಹಾಗೂ ನೀರಿಗಾಗಿ ಅರಣ್ಯ ಕಾರ್ಯಕ್ರಮದಲ್ಲಿ ಪರಿಸರ ಸಂರಕ್ಷಣೆ ಸಾಧಕರನ್ನು ಸನ್ಮಾನಿಸಲಾಯಿತು   

ದೇವನಹಳ್ಳಿ: ‘ವಿನಾಶದತ್ತ ಸಾಗುತ್ತಿರುವ ಪರಿಸರ ಸಂರಕ್ಷಣೆಗೆ ಸಾಮೂಹಿಕ ಪ್ರಯತ್ನದ ಅವಶ್ಯಕತೆ ಇದೆ’ ಎಂದು ಪ್ರಧಾನ ಜಿಲ್ಲಾ ಮತ್ತು ಸೆಷನ್ಸ್  ನ್ಯಾಯಾಧೀಶ ಕೃಷ್ಣ ಭಟ್‌ ಅಭಿಪ್ರಾಯ ಪಟ್ಟರು.

ದೇವನಹಳ್ಳಿ ಪಟ್ಟಣದ ಸಾವಕನಹಳ್ಳಿ ಗೇಟ್‌ ಬಳಿ ಇರುವ ವೃಕ್ಷೋದ್ಯಾನದಲ್ಲಿ ಭಾನುವಾರ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ ಮತ್ತು ಜಿಲ್ಲಾಡಳಿತ ಹಾಗೂ ಅರಣ್ಯ ಇಲಾಖೆ ಸಹಯೋಗದಲ್ಲಿ ನಡೆದ ವಿಶ್ವ ಪರಿಸರ ದಿನಾಚರಣೆ ಹಾಗೂ ನೀರಿಗಾಗಿ ಅರಣ್ಯ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

‘ಶತಮಾನದ ವಾತಾವರಣವನ್ನೇ ಏರುಪೇರು ಮಾಡುತ್ತಿರುವ ತಾಪಮಾನ ಪ್ರಸ್ತುತ ಎಚ್ಚರಿಕೆಯಾಗಿದೆ, ಕಳೆದ ದಶಕಗಳ ಹಿಂದೆ ತುರ್ತು ಶಸ್ತ್ರಚಿಕಿತ್ಸೆಗೆ ವೈದ್ಯರು ಮಾಸ್ಕ್ ಹಾಕುತ್ತಿದ್ದರು. ಪ್ರಸ್ತುತ ಪ್ರತಿಯೊಬ್ಬರು ಹಾಕಿಕೊಳ್ಳಬೇಕಾದ ಅನಿವಾರ್ಯತೆಯಲ್ಲಿ ನಾವಿದ್ದೇವೆ. ಪ್ರಾಣವಾಯು ಆಮ್ಲಜನಕ ಹೆಚ್ಚು ಮಾಡಿ ಆರೋಗ್ಯಕರ ವಾತಾವರಣ ಸಮಾನಾಂತರವಾಗಿ ಕಾಯ್ದುಕೊಳ್ಳಲು ಪರಿಸರ ಸಂರಕ್ಷಣೆಗೆ ಮೊದಲ ಆದ್ಯತೆ ನೀಡಬೇಕು’ ಎಂದರು.

ADVERTISEMENT

ಪರಿಸರವಾದಿ ಹಾಗೂ ಸಾವಯವ ಕೃಷಿಕ ನಾರಾಯಣರೆಡ್ಡಿ ಮಾತನಾಡಿ, ವಿಧ್ವಂಸಕ ಕೃತ್ಯಕ್ಕಿಂತ ಮರಕಡಿಯುವುದು ಹೇಯ ಕೃತ್ಯ,  ದೀಪ ಬೆಳಗಿಸುವುದು ಆಗಬೇಕು. ಪ್ರತಿಯೊಬ್ಬರು ಹುಟ್ಟಿದ ಹಬ್ಬಕ್ಕೆ ಒಂದು ಸಸಿ ನೆಟ್ಟು ಬೆಳೆಸಿ ಸಾರ್ಥಕತೆ ಪಡೆಯಿರಿ ಎಂದರು.

ಜಿಲ್ಲಾ ಪಂಚಾಯಿತಿ ಕಾರ್ಯನಿರ್ವಹಣಾಧಿಕಾರಿ ದಯಾನಂದ್‌ ಮಾತನಾಡಿ, ನಮ್ಮ ಆಸೆಗಳನ್ನು ಪೂರೈಸುವ ಶಕ್ತಿ ಪರಿಸರಕ್ಕಿದೆ, ದುರಾಸೆಯನ್ನಲ್ಲ ಮುಂದಿನ ಭವಿಷ್ಯದ ಪೀಳಿಗೆಗಾಗಿ  ಪರಿಸರ ಸಂರಕ್ಷಣೆ ಮಾಡಬೇಕು ಎಂದರು.

ಜಿಲ್ಲಾ ಉಪ ಅರಣ್ಯ ಸಂರಕ್ಷಣಾಧಿಕಾರಿ ಎಸ್‌.ಆರ್.ನಟೇಶ್‌, ಜಿಲ್ಲಾ ಸಾಮಾಜಿಕ ಅರಣ್ಯವಿಭಾಗ ಉಪ ಅರಣ್ಯ ಸಂರಕ್ಷಣಾಧಿಕಾರಿ ಗಂಗಾಧರ್‌, 5ನೇ ಹೆಚ್ಚುವರಿ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಧೀಶ ಎಂ.ಎನ್‌.ಸಂಶಿ, ಹಿರಿಯ ಸಿವಿಲ್‌ ನ್ಯಾಯಾಧೀಶ ದಿನೇಶ್‌ ಹೆಗ್ಡೆ, ವಕೀಲ ಸಂಘದ ತಾಲ್ಲೂಕು ಅಧ್ಯಕ್ಷ ನಾರಾಯಣಸ್ವಾಮಿ, ಗ್ರಾಮ ಅರಣ್ಯ ಸಮಿತಿ ಅಧ್ಯಕ್ಷ ಕೋಡಿಮಂಚೇನಹಳ್ಳಿ ನಾಗೇಶ್‌, ಉಪವಿಭಾಗಾಧಿಕಾರಿ ಜಗದೀಶ್‌, ತಹಶೀಲ್ದಾರ್‌ ನಾರಾಯಣ ಸ್ವಾಮಿ ಉಪಸ್ಥಿತರಿದ್ದರು. ವಿವಿಧ ಶಾಲೆಯ ಮಕ್ಕಳಿಗೆ ಸಸಿ ವಿತರಿಸ ಲಾಯಿತು. ಮತ್ತು ಪರಿಸರ ಸಂರಕ್ಷಣೆ ಸಾಧಕರಾದ ನಾರಾಯಣರೆಡ್ಡಿ, ಜಿ. ನಾಗೇಶ್‌, ವೆಂಕಟೇಶ್‌ ಅವರನ್ನು ಸನ್ಮಾನಿಸ ಲಾಯಿತು.

**

2018ರಲ್ಲಿ ಚಿತ್ರದುರ್ಗಕ್ಕೆ ಎತ್ತಿನಹೊಳೆ
ಅಧ್ಯಕ್ಷತೆವಹಿಸಿ ಮಾತನಾಡಿದ ಜಿಲ್ಲಾಧಿಕಾರಿ ಎಸ್.ಪಾಲಯ್ಯ, ಪ್ರಸ್ತುತ ಜಿಲ್ಲೆಯಲ್ಲಿ 65 ಗ್ರಾಮ, ಪುರಸಭೆ 20 ವಾರ್ಡ್‌ಗಳಲ್ಲಿ ಟ್ಯಾಂಕರ್‌ ಮೂಲಕ ಕುಡಿಯುವ ನೀರು ಪೂರೈಕೆ ಮಾಡಲಾಗುತ್ತಿದೆ.

ಐದು ವರ್ಷ ಹೀಗೆ ಮುಂದುವರೆದರೆ ಸಂಕಷ್ಟ ತಪ್ಪಿದ್ದಲ್ಲ. 2018 ಜನವರಿಯೊಳಗೆ ಎತ್ತಿನ ಹೊಳೆ ಯೋಜನೆ ನೀರು ಚಿತ್ರದುರ್ಗಕ್ಕೆ ಬರಲಿದೆ ನಂತರ ಈ ಜಿಲ್ಲೆಗೆ ನೀರು ಹರಿಯಲಿದೆ. ಜಿಲ್ಲೆಯಲ್ಲಿ ಇರಬೇಕಾದ ಅರಣ್ಯ ಸಂಪತ್ತು ಶೇ 32 ರಷ್ಟು ಪ್ರಸ್ತುತ ಶೇ 7 ರಷ್ಟು ಮಾತ್ರ ಇದೆ. 2017–18 ನೇ ಸಾಲಿಗೆ ಜಿಲ್ಲೆಯಲ್ಲಿ ಹತ್ತು ಲಕ್ಷ ಸಸಿ ವಿತರಿಸುವ ಗುರಿ ಇದ್ದು ವಿದ್ಯಾರ್ಥಿಗಳ ಮೂಲಕ ಸಸಿ ನೀಡಿ ಕಡ್ಡಾಯವಾಗಿ  ಬೆಳೆಸುವಂತೆ ಸೂಚಿಸಲಾಗಿದೆ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.