ADVERTISEMENT

ಪುಸ್ತಕದಲ್ಲುಳಿದ ಹಸಿರು ಹೊನ್ನು

​ಪ್ರಜಾವಾಣಿ ವಾರ್ತೆ
Published 29 ಸೆಪ್ಟೆಂಬರ್ 2011, 19:30 IST
Last Updated 29 ಸೆಪ್ಟೆಂಬರ್ 2011, 19:30 IST
ಪುಸ್ತಕದಲ್ಲುಳಿದ ಹಸಿರು ಹೊನ್ನು
ಪುಸ್ತಕದಲ್ಲುಳಿದ ಹಸಿರು ಹೊನ್ನು   

ದೊಡ್ಡಬಳ್ಳಾಪುರ: ರಾಜ್ಯ ಸರ್ಕಾರ ಕಳೆದ ವರ್ಷ ಜಾರಿಗೆ ತಂದ `ಹಸಿರು ಹೊನ್ನು~ ಯೋಜನೆ ಪುಸ್ತಕದಲ್ಲಿ ಇದೆಯೇ ಹೊರತು ವಾಸ್ತವದಲ್ಲಿ ಎಲ್ಲಿಯೂ ಸಹ ಅನುಷ್ಠಾನ ಆಗಿಲ್ಲ ಎಂದು ಕೇಂದ್ರದ ಮಾಜಿ ಸಚಿವ ಆರ್.ಎಲ್.ಜಾಲಪ್ಪ ಆರೋಪಿಸಿದರು.

ಅವರು ತಾಲ್ಲೂಕಿನ ಗಂಟಿಗಾನಹಳ್ಳಿ ಗ್ರಾಮದಲ್ಲಿ ದುರ್ಗಮ್ಮದೇವಿ ದೇವಸ್ಥಾನ ಟ್ರಸ್ಟ್ ವತಿಯಿಂದ ಜಿರ್ಣೋದ್ಧಾರಗೊಳಿಸಲಾಗಿರುವ  ದುರ್ಗಮ್ಮ ದೇವಿ ಪ್ರತಿಷ್ಠಾಪನಾ ಮಹೋತ್ಸವ ಸಮಾರಂಭದಲ್ಲಿ ಭಾಗವಹಿಸಿ ಮಾತನಾಡಿದರು.

`ದೇವರಾಜ ಅರಸು ಟ್ರಸ್ಟ್ ವತಿಯಿಂದ ದೊಡ್ಡಬಳ್ಳಾಪುರ ಹಾಗೂ ಚಿಕ್ಕಬಳ್ಳಾಪುರ ತಾಲ್ಲೂಕಿನ ಗ್ರಾಮ ಪಂಚಾಯಿತಿಗಳಿಗೆ ತಲಾ 50 ಸಾವಿರ ರೂ ನೀಡಿ ಹೊಂಗೆ ಸಸಿಗಳನ್ನು ನಾಟಿ ಮಾಡಿಸಲಾಗಿದೆ. ಕೆಲವು ಪಂಚಾಯಿತಿಗಳವರು ಜವಾಬ್ದಾರಿಯುತವಾಗಿ ಸಸಿಗಳನ್ನು ಹಾಕಿಲ್ಲ.

ನಮ್ಮೂರು ಎನ್ನುವ ಜವಾಬ್ದಾರಿಯಿಂದ ಪ್ರಾಮಾಣಿಕವಾಗಿ ಕೆಲಸ ಮಾಡಬೇಕು. ಇವತ್ತು ಪ್ರಕೃತಿ ಸಂಪತ್ತನ್ನು ನಾಶ ಮಾಡಿದ್ದರ ಪರಿಣಾಮವೇ ಮಳೆ ಕಡಿಮೆ ಆಗಲು ಕಾರಣವಾಗಿದೆ. ನಮ್ಮ ಮಕ್ಕಳ ಭವಿಷ್ಯದ ದೃಷ್ಟಿಯಿಂದಲಾದರೂ ರಸ್ತೆ ಬದಿಗಳಲ್ಲಿ ಹಾಗೂ ಸರ್ಕಾರಿ ಭೂಮಿಯಲ್ಲಿ ವಿವಿಧ ಬಗೆಯ ಸಸಿಗಳನ್ನು ಹಾಕುವ ಮೂಲಕ ಪ್ರಕೃತಿ ಸಂಪತ್ತನ್ನು ಸಮೃದ್ಧಗೊಳಿಸಬೇಕು~ ಎಂದು ಹೇಳಿದರು.

ದೇವಾಲಯ ಪ್ರತಿಷ್ಠಾಪನಾ ಮಹೋತ್ಸವ ಸಮಾರಂಭದಲ್ಲಿ ಕುಕ್ಕೆಸುಬ್ರಹ್ಮಣ್ಯ ಮಹಾಸಂಸ್ಥಾಪಕ ವಿದ್ಯಾಪ್ರಸನ್ನಸ್ವಾಮೀಜಿ, ಬೇಲಿಮಠ ಸಂಸ್ಥಾನದ ಶಿವರುದ್ರಮಹಾಸ್ವಾಮಿಜೀ ದಿವ್ಯಸಾನ್ನಿಧ್ಯ ವಹಿಸಿದ್ದರು.

ಶಾಸಕ ಜೆ.ನರಸಿಂಹಸ್ವಾಮಿ, ಎಪಿಎಂಸಿ ಅಧ್ಯಕ್ಷ ಟಿ.ವಿ.ಲಕ್ಷ್ಮೀನಾರಾಯಣ್, ಉಪಾಧ್ಯಕ್ಷ ಕೆ.ಎಂ.ಕೃಷ್ಣಮೂರ್ತಿ, ಪಿಎಲ್‌ಡಿ ಬ್ಯಾಂಕ್ ಅಧ್ಯಕ್ಷ ಬಿ.ಸಿ.ನಾರಾಯಣಸ್ವಾಮಿ, ಟಿಎಪಿಎಂಸಿಎಸ್ ಅಧ್ಯಕ್ಷ ಎಸ್.ದಯಾನಂದ್, ಮಾಜಿ ಜಿಲ್ಲಾ ಪಂಚಾಯಿತಿ ಸದಸ್ಯ ಎ.ನರಸಿಂಹಯ್ಯ, ದುರ್ಗದಮ್ಮ ದೇವಿ ದೇವಸ್ಥಾನ ಟ್ರಸ್ಟ್ ಅಧ್ಯಕ್ಷ ಎಸ್.ಕೆ.ಗೋವಿಂದರಾಜು,  ಟ್ರಸ್ಟ್‌ನ ಗೌರವ ಅಧ್ಯಕ್ಷ ಎಸ್.ಎಲ್.ವೆಂಕಟೇಶ್‌ಬಾಬು ಮುಂತಾದವರು ಹಾಜರಿದ್ದರು.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.