ADVERTISEMENT

ಪೊಲೀಸರ ವಿರುದ್ಧ ಪ್ರತಿಭಟನೆ

​ಪ್ರಜಾವಾಣಿ ವಾರ್ತೆ
Published 10 ಜುಲೈ 2012, 5:40 IST
Last Updated 10 ಜುಲೈ 2012, 5:40 IST

ದೇವನಹಳ್ಳಿ: ಹಲ್ಲೆಗೆ ಸಂಬಂಧಿಸಿದಂತೆ ದೂರು ನೀಡಿದ್ದರೂ ಪ್ರಥಮ ಮಾಹಿತಿ ವರದಿ (ಎಫ್‌ಐಆರ್) ದಾಖಲಿಸಿ ಆರೋಪಿಗಳನ್ನು ಬಂಧಿಸಿಲ್ಲ ಎಂದು ದೂರಿ ತಾಲ್ಲೂಕಿನ ಕಸಬಾ ಹೋಬಳಿಯ ಗೋಕರೆ ಗ್ರಾಮಸ್ಥರು ಪಟ್ಟಣದ ಪೊಲೀಸ್ ಠಾಣೆ ಎದುರು ಶನಿವಾರ ಪ್ರತಿಭಟನೆ ನಡೆಸಿದರು.

`ಗ್ರಾ.ಪಂ. ವ್ಯಾಪ್ತಿಯಲ್ಲಿ ನೀರು ಸರಬರಾಜು ಮಾಡುವ ವಾಟರ್‌ಮೆನ್ ಆದ ನನ್ನ ಮೇಲೆ ಗ್ರಾಮಸ್ಥರೇ ಆದ ಮಂಜುನಾಥ್ ಹಾಗೂ ಆನಂದ ಎಂಬುವರು ಸಮರ್ಪಕವಾಗಿ ನೀರು ಪೂರೈಸುತ್ತಿಲ್ಲ ಎಂದು ಅವಾಚ್ಯ ಶಬ್ದಗಳಿಂದ ನಿಂದಿಸಿದರು. ಇದನ್ನು ಪ್ರಶ್ನಿಸಿದ ನನ್ನ ಮೇಲೆ ಅವರ ಪತ್ನಿಯರು ಸೇರಿದಂತೆ ನಾಲ್ವರು ಕಾರದ ಪುಡಿ ಎರಚಿ ಹಲ್ಲೆ ನಡೆಸಿದ್ದಾರೆ ಎಂದು ವಾಟರ್‌ಮೆನ್ ನಾರಾಯಣಪ್ಪ ಪ್ರತಿಭಟನೆ ವೇಳೆ ಆರೋಪಿಸಿದರು.

ಹಲ್ಲೆ ಬಗ್ಗೆ ಪೊಲೀಸರಿಗೆ ದೂರು ನೀಡಿ ಮೂರು ದಿನಗಳಾದರೂ ಪೊಲೀಸರು ಎಫ್‌ಐಆರ್ ದಾಖಲಿಸಿ ಕ್ರಮ ಕೈಗೊಂಡಿಲ್ಲ. ಆರೋಪಿಗಳು ರಾಜಾರೋಷವಾಗಿ ಓಡಾಡುತ್ತಿದ್ದಾರೆ ಎಂದು ಹೇಳಿದರು.

ಗ್ರಾ.ಪಂ. ಉಪಾಧ್ಯಕ್ಷ ಮಂಜುನಾಥ್ ಮಾತನಾಡಿ, ಪ್ರಸ್ತುತ ಗ್ರಾಮೀಣ ಪ್ರದೇಶದಲ್ಲಿ ವಿದ್ಯುತ್ ಸಮಸ್ಯೆ ಇದೆ. ಆದರೂ ಪಂಚಾಯಿತಿ ವ್ಯಾಪ್ತಿಯ ಗ್ರಾಮಗಳಿಗೆ ನಿಗದಿತ ಸಮಯಕ್ಕೆ ವಾಟರ್‌ಮೆನ್ ನೀರು ಸರಬರಾಜು ಮಾಡುತ್ತಿದ್ದಾರೆ. 2, 500 ರೂಪಾಯಿ ವೇತನದಲ್ಲಿ ಇವರು ಜೀವನ ಸಾಗಿಸಬೇಕು.

ಅಸಮರ್ಪಕ ನೀರು ಸರಬರಾಜು ವ್ಯವಸ್ಥೆ ಬಗ್ಗೆ ಪಂಚಾಯಿತಿ ಅಧ್ಯಕ್ಷರ ಮತ್ತು ಅಧಿಕಾರಿಗಳ ಗಮನಕ್ಕೆ ತರಬಹುದಿತ್ತು. ಆದರೆ ಏಕಾಏಕಿ ಹಲ್ಲೆ ಮಾಡಿರುವುದು ಅಪರಾಧ ಎಂದರು. ದೂರು ನೀಡಿ ಮೂರು ದಿನಗಳಾದರೂ ಪೊಲೀಸರು ಪ್ರಕರಣ ದಾಖಲಿಸದಿರುವುದಕ್ಕೆ ಅವರು ಆಕ್ಷೇಪ ವ್ಯಕ್ತಪಡಿಸಿದರು.

ಪ್ರತಿಭಟನಾಕಾರರ ಜತೆ ಮಾತನಾಡಿದ ವೃತ್ತ ನಿರೀಕ್ಷಕ ಶಿವಕುಮಾರ್, ಪ್ರಕರಣ ಬಗ್ಗೆ ಈಗ ಎಫ್‌ಐಆರ್ ದಾಖಲಿಸಿಕೊಳ್ಳಲಾಗಿದ್ದು ಆರೋಪಿಗಳನ್ನು ಬಂಧಿಸಿ ಕಾನೂನು ರೀತಿ ಕ್ರಮ ಕೈಗೊಳ್ಳಲಾಗುವುದು ಎಂದರು. ನಂತರ ಪ್ರತಿಭಟನೆ ಕೈಬಿಡಲಾಯಿತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.