ADVERTISEMENT

ಬಯಲು ಶೌಚಮುಕ್ತ ನಗರ ಪ್ರಶಸ್ತಿ

ವಿಜಯಪುರ ಪುರಸಭೆಗೆ ಕೇಂದ್ರ ಸರ್ಕಾರದಿಂದ ವಿಶೇಷ ಪುರಸ್ಕಾರ ಪ್ರದಾನ

​ಪ್ರಜಾವಾಣಿ ವಾರ್ತೆ
Published 7 ಜೂನ್ 2018, 6:32 IST
Last Updated 7 ಜೂನ್ 2018, 6:32 IST
ವಿಜಯಪುರ ಪುರಸಭಾ ಮುಖ್ಯಾಧಿಕಾರಿ ಎ.ಎಚ್.ನಾಗರಾಜ್ ಅವರಿಗೆ ಬೆಂಗಳೂರು ಗ್ರಾಮಾಂತರ ಜಿಲ್ಲಾಧಿಕಾರಿ ಪಾಲಯ್ಯ ಅವರು ಬಯಲು ಶೌಚಾಲಯ ಮುಕ್ತ ನಗರ ಪ್ರಶಸ್ತಿ ನೀಡಿದರು
ವಿಜಯಪುರ ಪುರಸಭಾ ಮುಖ್ಯಾಧಿಕಾರಿ ಎ.ಎಚ್.ನಾಗರಾಜ್ ಅವರಿಗೆ ಬೆಂಗಳೂರು ಗ್ರಾಮಾಂತರ ಜಿಲ್ಲಾಧಿಕಾರಿ ಪಾಲಯ್ಯ ಅವರು ಬಯಲು ಶೌಚಾಲಯ ಮುಕ್ತ ನಗರ ಪ್ರಶಸ್ತಿ ನೀಡಿದರು   

ವಿಜಯಪುರ: ರಾಜ್ಯದ ಪ್ರತಿ ಹಳ್ಳಿಯ ಲ್ಲಿಯೂ ಶೌಚಾಲಯ ನಿರ್ಮಿಸುವುದರ ಮೂಲಕ 2018ರ ವೇಳೆಗೆ ಕರ್ನಾಟಕ ವನ್ನು ಬಯಲು ಮುಕ್ತ ಶೌಚಾಲಯ ರಾಜ್ಯವನ್ನಾಗಿ ಮಾಡಲು ರಾಜ್ಯ ಸರ್ಕಾರ ನಿರ್ದೇಶಿಸಿದೆ. ಇದಕ್ಕೆ ಅನುಗುಣವಾಗಿ ವಿಜಯಪುರ ಪುರಸಭೆ ವ್ಯಾಪ್ತಿಯಲ್ಲೆಡೆ ಶೌಚಾಲಯಗಳನ್ನು ನಿರ್ಮಾಣ ಮಾಡಿ 2017–18 ನೇ ಸಾಲಿನ ಬಯಲು ಶೌಚಮುಕ್ತ ಸ್ವಚ್ಛತಾ ಪ್ರಶಸ್ತಿಯನ್ನು ಕೇಂದ್ರ ಸರ್ಕಾರದಿಂದ ಪಡೆದುಕೊಂಡಿದೆ.

ಬೆಂಗಳೂರು ಗ್ರಾಮಾಂತರ ಜಿಲ್ಲಾಧಿ ಕಾರಿ ಪಾಲಯ್ಯ ಅವರು ಪುರಸಭೆ ಮುಖ್ಯಾಧಿಕಾರಿ ಎ.ಹೆಚ್.ನಾಗರಾಜ್ ಅವರಿಗೆ ಈ ಪ್ರಶಸ್ತಿ ನೀಡಿದ್ದಾರೆ.

ಪಟ್ಟಣದ ವ್ಯಾಪ್ತಿಯಲ್ಲಿ 714 ಶೌಚಾಲಯ ರಹಿತ ಮನೆಗಳನ್ನು ಗುರು ತಿಸಿ ಅವರಿಗೆ ಸರ್ಕಾರದಿಂದ ಬಿಡುಗಡೆ ಮಾಡಿದ್ದ ₹ 18 ಲಕ್ಷ ಅನುದಾನದಲ್ಲಿ ಶೌಚಾಲಯಗಳನ್ನು ನಿರ್ಮಾಣ ಮಾಡಿಕೊಳ್ಳಲು ಸ್ವಚ್ಛ ಭಾರತ ಅಭಿಯಾನದಡಿಯಲ್ಲಿ ₹ 5,333 ಹಾಗೂ ಎಸ್‌ಎಫ್‌ಸಿ ಯೋಜನೆಯಡಿ ₹ 4,667 ಹಾಗೂ ಫಿಟ್ ಸೌಲಭ್ಯಕ್ಕೆ ₹ 9,667 ಸೇರಿ ಒಬ್ಬ ಫಲಾನುಭವಿಗೆ ₹ 15 ಸಾವಿರ ಬಿಡುಗಡೆ ಮಾಡಲಾಗಿತ್ತು.  ಈ ಮೂಲಕ 23 ವಾರ್ಡುಗಳಲ್ಲಿ ಶೌಚಾಲಯಗಳನ್ನು ನಿರ್ಮಾಣ ಮಾಡಿರುವುದರಿಂದ ಪ್ರಶಸ್ತಿ ಲಭಿಸಿದೆ.

ADVERTISEMENT

ಕೇಂದ್ರ ಸರ್ಕಾರದ ತಂಡವು ಫೆಬ್ರುವರಿ ತಿಂಗಳಿನಲ್ಲಿ ಇಲ್ಲಿಗೆ ಭೇಟಿ ನೀಡಿ ನಿರ್ಮಾಣದ ಗುರಿ ಹೊಂದಿದ್ದ ಶೌಚಾಲಯಗಳು ನಿರ್ಮಾಣವಾಗಿವೆಯೇ ಎಂದು ಪರಿಶೀಲಿಸಿತ್ತು. ಸಾಮೂಹಿಕ ಶೌಚಾಲಯಗಳ ನಿರ್ವಹಣೆ ಹೇಗಿದೆ ಸ್ವಚ್ಛ ಭಾರತ ಅಭಿಯಾನ ಯೋಜನೆ ಯನ್ನು ಸದುಪಯೋಗ ಪಡಿಸಿ ಕೊಳ್ಳಲಾಗಿದೆಯೇ ಎಂದು ಮಾಹಿತಿ ಪಡೆದಿತ್ತು ಎಂದರು.

ಬಯಲಿನಲ್ಲಿ ಯಾರಾದರೂ ಶೌಚಕ್ರಿಯೆಗಳನ್ನು ಮಾಡುತ್ತಿದ್ದಾರೆಯೇ ಎನ್ನುವ ಬಗ್ಗೆ ಪರಿಶೀಲಿಸಿ ಪ್ರಶಸ್ತಿಗೆ ಆಯ್ಕೆ ಮಾಡಿದ್ದಾರೆ.

ಪರಿಸರ ಎಂಜಿನಿಯರ್‌ ಚಿತ್ರಾ ಮಾತನಾಡಿ, ‘ಆರು ತಿಂಗಳ ನಂತರ ಪುನಃ ಪರಿಶೀಲನೆಗೆ ಕೇಂದ್ರ ತಂಡ ಬರಲಿದೆ. ಅಲೆಮಾರಿಗಳು ಸೇರಿದಂತೆ ಹೆಚ್ಚುವರಿಯಾದ ಕುಟುಂಬಗಳು ಶೌಚಾಲಯಗಳನ್ನು ನಿರ್ಮಾಣ ಮಾಡಿ ಕೊಂಡಿದ್ದಾರೆಯೇ ಎನ್ನುವ ಕುರಿತು ಪರಿಶೀಲನೆ ಮಾಡಲಿದ್ದಾರೆ’ ಎಂದರು.

ಎಷ್ಟೇ ಮನೆಗಳು ನಿರ್ಮಾಣ ವಾದರೂ ಕಡ್ಡಾಯವಾಗಿ ಎಲ್ಲ ಮನೆಗಳಲ್ಲೂ ಶೌಚಾಲಯಗಳನ್ನು ನಿರ್ಮಾಣ ಮಾಡಿಕೊಳ್ಳುವ ಹಾಗೆ ಗಮನ ಹರಿಸುತ್ತೇವೆ. ಇದರ ಜೊತೆಗೆ ಪಟ್ಟಣದಲ್ಲಿ ಸ್ವಚ್ಛತೆ ಕಾಪಾಡುವ ಕಡೆಗೂ ಹೆಚ್ಚು ಗಮನ ಹರಿಸುತ್ತೇವೆ ಎಂದರು.

ಪ್ರಶಸ್ತಿ ವಿತರಿಸಿ ಮಾತನಾಡಿದ ಜಿಲ್ಲಾಧಿಕಾರಿ ಪಾಲಯ್ಯ, ‘ಸರ್ಕಾರದಿಂದ ಬಿಡುಗಡೆಯಾಗುವಂತಹ ಅನುದಾನ ಗಳನ್ನು ಸಮರ್ಪಕವಾಗಿ ಉಪಯೋಗ ಮಾಡಿಕೊಂಡು ಪಟ್ಟಣದಲ್ಲಿ ಸ್ವಚ್ಛತೆಯ ಜೊತೆಗೆ ಅಭಿವೃದ್ಧಿಯ ಕಡೆಗೆ ಹೆಚ್ಚು ಗಮನ ಹರಿಸಬೇಕು. ಪಟ್ಟಣದ ವ್ಯಾಪ್ತಿಯಲ್ಲಿ ಸರ್ಕಾರಕ್ಕೆ ಸಂದಾಯವಾಗಬಹುದಾದ ಕಂದಾಯ ವನ್ನು ಕಡ್ಡಾಯವಾಗಿ ವಸೂಲಿ ಮಾಡಿ ಅಭಿವೃದ್ಧಿಗೆ ಬಳಕೆ ಮಾಡಿಕೊಳ್ಳಬೇಕು’ ಎಂದು ಸೂಚಿಸಿದರು.

ಪುರಸಭಾ ಮುಖ್ಯಾಧಿಕಾರಿ ಎ.ಎಚ್. ನಾಗರಾಜ್ ಮಾತನಾಡಿ, ಅಭಿವೃದ್ಧಿ ಮತ್ತು ಸ್ವಚ್ಛತೆಗೆ ಜನರಿಂದ ಉತ್ತಮ ಸಹಕಾರ ಬೇಕಾಗಿದೆ ಎಂದರು.

ಜನತೆ ಕುಡಿಯುವ ನೀರು, ರಸ್ತೆ, ಚರಂಡಿ, ಬೀದಿ ದೀಪ, ಸೇರಿದಂತೆ ಎಲ್ಲ ಅಗತ್ಯ ಮೂಲಸೌಕರ್ಯಗಳನ್ನು ಒದಗಿಸಲು ಅಗತ್ಯ ಕ್ರಮ ಕೈಗೊಳ್ಳುತ್ತೇವೆ. ಶೌಚಾಲಯಗಳನ್ನು ಸಮರ್ಪಕವಾಗಿ ನಿರ್ವಹಣೆ ಮಾಡಿಕೊಳ್ಳುವಂತೆ ಕ್ರಮ ವಹಿಸಲಾಗುತ್ತದೆ ಎಂದು ನಾಗರಾಜ್‌ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.