ADVERTISEMENT

‘ಬರ ಪರಿಸ್ಥಿತಿ ನಿಭಾಯಿಸುವಲ್ಲಿ ಸರ್ಕಾರ ವಿಫಲ’

​ಪ್ರಜಾವಾಣಿ ವಾರ್ತೆ
Published 20 ಫೆಬ್ರುವರಿ 2017, 8:37 IST
Last Updated 20 ಫೆಬ್ರುವರಿ 2017, 8:37 IST

ದೊಡ್ಡಬಳ್ಳಾಪುರ: ರಾಜ್ಯದಲ್ಲಿ ಬರ ಪರಿಸ್ಥಿತಿ ನಿಭಾಯಿಸುವಲ್ಲಿ ಸರ್ಕಾರ ಸಂಪೂರ್ಣ ವಿಫಲವಾಗಿದೆ ಎಂದು ಮಾಜಿ ಸಚಿವ ಬಿ.ಎನ್.ಬಚ್ಚೇಗೌಡ ಆರೋಪಿಸಿದರು.

ನಗರದಲ್ಲಿ ಶನಿವಾರ  ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು, ಬರ ಪರಿಸ್ಥಿತಿ ನಿರ್ವಹಿಸಲು ರಚಿಸಲಾಗಿರುವ ಟಾಸ್ಕ್ ಪೋರ್ಸ್ ಸಮಿತಿಯಲ್ಲಿ ಕ್ಷೇತ್ರದ ಶಾಸಕರು ಅಧ್ಯಕ್ಷರಾಗಿರುವುದರಿಂದ ಪಕ್ಷಪಾತ ಧೋರಣೆ ಅನುಸರಿಸಲಾಗುತ್ತಿದೆ. ಟಾಸ್ಕ್ ಪೋರ್ಸ್ ಸಮಿತಿಗೆ ಜಿಲ್ಲಾಧಿಕಾರಿಯನ್ನು ಅಧ್ಯಕ್ಷರನ್ನಾಗಿ ಮಾಡಿ ಬರ ಪರಿಹಾರ ಕಾಮಗಾರಿಗಳನ್ನು ವ್ಯವಸ್ಥಿತವಾಗಿ ನೋಡಿಕೊಳ್ಳಬೇಕಿದೆ ಎಂದು ಆಗ್ರಹಿಸಿದರು.

ನಾಲ್ಕು ವರ್ಷಗಳಿಂದ ರಾಜ್ಯದಲ್ಲಿ ಭೀಕರ ಬರಗಾಲವಿದೆ. ಆದರೆ ಸರ್ಕಾರ ಯಾವುದೇ ಗಂಭೀರ ಕ್ರಮ ಕೈಗೊಳ್ಳುತ್ತಿಲ್ಲ. ಬರ ಪರಿಹಾರ ಮೊದಲುಗೊಂಡಂತೆ ಕಾಂಗ್ರೆಸ್ ಪಕ್ಷದ ಶಾಸಕರಿಗೆ ಆದ್ಯತೆ ನೀಡಲಾಗುತ್ತಿದ್ದು, ಉಳಿದವರನ್ನು ಕಡೆಗಣಿಸಲಾಗುತ್ತಿದೆ. ಶಾಸಕ ಹಾಗೂ ಪಂಚಾಯಿತಿ ಪ್ರತಿನಿಧಿಗಳನ್ನು ಸದಸ್ಯರನ್ನಾಗಿ  ಮಾಡಬೇಕಿದೆ ಎಂದರು.

ರಾಜ್ಯ  ಸರ್ಕಾರ ತೆರೆದಿರುವ ಗೋಶಾಲೆಗಳಲ್ಲಿ ಸಮರ್ಪಕ ಮೇವು ಪೂರೈಕೆಯಾಗದೇ ರಾಸುಗಳು ಸಾವನ್ನಪ್ಪಿವೆ. ಆತ್ಮಹತ್ಯೆ ಮಾಡಿಕೊಂಡ ರೈತರ ಕುಟುಂಬಗಳಿಗೂ ಪರಿಹಾರವನ್ನು ನೀಡಲಾಗುತ್ತಿಲ್ಲ. ಬೆಂಗಳೂರು ಗ್ರಾಮಾಂತರ ಜಿಲ್ಲೆಯ ತಾಲ್ಲೂಕುಗಳಲ್ಲಿ ಬೆಳೆ ನಾಶವಾಗಿದೆ. ಕೆರೆ ಕುಂಟೆಗಳು ಒಣಗಿವೆ; ಕುಡಿಯಲು ನೀರಿಲ್ಲ. ಕೊಳವೆ ಬಾವಿಗಳೂ ವಿಫಲವಾಗಿದೆ ಎಂದರು.

ಸರ್ಕಾರ ಇದ್ಯಾವುದಕ್ಕೂ ಗಮನ ನೀಡುತ್ತಿಲ್ಲ. ಜಿಲ್ಲೆಯಲ್ಲಿ ಗೋಶಾಲೆಗಳನ್ನು ತೆರೆದಿಲ್ಲ. ಮೇವಿಗೆ ಸೂಕ್ತ ವ್ಯವಸ್ಥೆ ಮಾಡಿಲ್ಲ. ಸಾಲ ಸೋಲ ಮಾಡಿದ ಬೆಳೆ ಕೈಗೆ ಬಾರದೇ ರೈತರು ಆತ್ಮಹತ್ಯೆ ಹಾದಿ ಹಿಡಿಯುತ್ತಿದ್ದಾರೆ. ರಾಜ್ಯದಲ್ಲಿ ಬಿಜೆಪಿ ನಿಯೋಗ ಬರ ಅಧ್ಯಯನ ಮಾಡಿ ವರದಿ ನೀಡುತ್ತಿದ್ದರೂ ಸರ್ಕಾರ ಎಚ್ಚತ್ತುಕೊಂಡಿಲ್ಲ. ಈ ನಿಟ್ಟಿನಲ್ಲಿ ರೈತರ ಸಾಲ ಮನ್ನಾ ಮಾಡಬೇಕು. ಬೆಳೆ ನಷ್ಟ ಪರಿಹಾರ ನೀಡಬೇಕು ಎಂದರು.

ಕೇಂದ್ರ ಸರ್ಕಾರ ಬಜೆಟ್‌ನಲ್ಲಿ ಕೃಷಿಗಾಗಿ 36 ಸಾವಿರ ಕೋಟಿ ಇದ್ದದ್ದು, 46 ಸಾವಿರ ಕೋಟಿ ಹೆಚ್ಚು ಮಾಡಿದೆ. ರಾಜ್ಯದ ಹಲವಾರು ಯೋಜನೆಗಳಿಗೆ ಕೇಂದ್ರದಿಂದಲೇ ಅನುದಾನ ಬರುತ್ತಿದೆ. ಆದರೆ ಕೇಂದ್ರದ ಅನುದಾನವನ್ನು ರಾಜ್ಯ ಸರ್ಕಾರ ಬಳಸಿಕೊಳ್ಳುತ್ತಿಲ್ಲ. ಕೇಂದ್ರ ಸರ್ಕಾರದ ಮೇಲೆ ಸದಾ ಆರೋಪಿಸುವ, ರಾಜ್ಯ ಸರ್ಕಾರವು ಬರ ಪರಿಹಾರ ಅನುದಾನದ ಶೇ 50ರಷ್ಟನ್ನು ನೀಡಿದರೆ ಬರ ಪರಿಸ್ಥಿತಿಯನ್ನು ನಿಭಾಯಿಸಬಹುದು  ಎಂದರು.
ಜಾಹೀರಾತುಗಳಲ್ಲಿ ಮಾತ್ರ ಸರ್ಕಾರದ ಯೋಜನೆಗಳು ಕಾಣಿಸುತ್ತಿದ್ದು, ಸಮರ್ಪಕವಾಗಿ ಜಾರಿ ಮಾಡುವಲ್ಲಿ ಸರ್ಕಾರ ಸೋತಿದೆ. ಕುಡಿಯುವ ನೀರಿನ ಘಟಕಗಳು ದನ ಕಟ್ಟುವ ಕೊಟ್ಟಿಗೆಗಳಾಗಿವೆ. ರಾಜ್ಯ ಸರ್ಕಾರದಲ್ಲಿ ಭ್ರಷ್ಟಾಚಾರ ಹೆಚ್ಚಾಗಿದೆ. ಮುಖ್ಯಮಂತ್ರಿಗಳು ಖುರ್ಚಿ ಉಳಿಸಿಕೊಳ್ಳುವುದರಲ್ಲಿ ಮಗ್ನರಾಗಿದ್ದಾರೆ ವಿನಾ ಆಡಳಿತದ ಕಡೆ ಗಮನ ನೀಡುತ್ತಿಲ್ಲ ಎಂದರು.

ರಾಜೀನಾಮೆ ಪಡೆಯಲಿ: ಸಚಿವ ರಮೇಶ್ ಜಾರಕಿಹೊಳೆ ನಿವಾಸ ಸೇರಿ, ರಾಜ್ಯ ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ಲಕ್ಷ್ಮಿ ಹೆಬ್ಬಾಳ್ಕರ್ ಅವರ ಮೇಲೆ ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು ಇತ್ತೀಚೆಗೆ  ದಾಳಿ ನಡೆಸಿದ್ದಾರೆ. ಶಾಸಕ ಎಂ.ಟಿ.ಬಿ.ನಾಗರಾಜ್ ಅವರ ಮನೆ ಮೇಲೂ ಆದಾಯ ತೆರಿಗೆ ಇಲಾಖೆ ದಾಳಿ ನಡೆಸಲಾಗಿದೆ. ನಾಗರಾಜ್ ಬಯಾಪಾ ಅಧ್ಯಕ್ಷರಾಗಿದ್ದಾರೆ. ಅಕ್ರಮ ಸಂಪತ್ತು ಹೊಂದಿರುವ, ಸರ್ಕಾರಕ್ಕೆ ತೆರಿಗೆ  ವಂಚಿಸಿರುವ ಇವರಿಂದ ಮುಖ್ಯಮಂತ್ರಿರಿಗಳು ರಾಜೀನಾಮೆ ಪಡೆಯಲಿ ಎಂದು ಒತ್ತಾಯಿಸಿದರು. ಸಭೆಯಲ್ಲಿ ಬಿಜೆಪಿ ಬೆಂ.ಗ್ರಾ.  ಜಿಲ್ಲಾಧ್ಯಕ್ಷ ನಾಗೇಶ್, ಮಾಜಿ ಶಾಸಕ ನಾಗರಾಜ್, ಜಿಲ್ಲಾ ಮಹಿಳಾ ಮೋರ್ಚಾ ಅಧ್ಯಕ್ಷೆ ವತ್ಸಲಾ, ನಗರ ಅಧ್ಯಕ್ಷ ಕೆ.ಎಚ್.ರಂಗರಾಜು, ಮುಖಂಡರಾದ ಜೋ.ನ. ಮಲ್ಲಿಕಾರ್ಜುನ್ ಮತ್ತಿತರರು ಹಾಜರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.