ADVERTISEMENT

ಭೂ ಸ್ವಾಧೀನ ಪ್ರಕ್ರಿಯೆ ನಿಲ್ಲಿಸಲು ಆಗ್ರಹ

​ಪ್ರಜಾವಾಣಿ ವಾರ್ತೆ
Published 5 ಆಗಸ್ಟ್ 2013, 8:46 IST
Last Updated 5 ಆಗಸ್ಟ್ 2013, 8:46 IST

ದೊಡ್ಡಬಳ್ಳಾಪುರ: ಭೂಮಿಯ ಒಡೆತನ ಹೊಂದಿರುವವರಿಗೆ ಭೂ ಸ್ವಾಧೀನಕ್ಕೆ ಸಂಬಂಧಿಸಿದ ನೋಟಿಸ್ ನೀಡದೆ ಹಾಗೂ ಭೂಮಿಗೆ ನಿಗದಿ ಪಡಿಸಿರುವ ಬೆಲೆಯನ್ನು ತಿಳಿಸದೆ ರಾಷ್ಟ್ರೀಯ ಹೆದ್ದಾರಿ 207ಕ್ಕೆ ಭೂ ಸ್ವಾಧೀನ ಪಡಿಸಿಕೊಳ್ಳುತ್ತಿರುವ ಪ್ರಕ್ರಿಯೆ ನಡೆಸಿರುವುದು ಹಲವು ಅನುಮಾನಗಳಿಗೆ ದಾರಿಮಾಡಿಕೊಟ್ಟಿದೆ. ಈ ಕೂಡಲೇ ಸ್ವಾಧೀನ ಪ್ರಕ್ರಿಯೆ ನಿಲ್ಲಿಸಬೇಕು ಎಂದು ರಾಷ್ಟ್ರೀಯ ಹೆದ್ದಾರಿ ಭೂ ಸ್ವಾಧೀನ ಹೋರಾಟ ವಿರೋಧಿ ಹೋರಾಟ ಸಮಿತಿ ಮುಖಂಡ ಆರ್.ಚಂದ್ರತೇಜಸ್ವಿ ಆಗ್ರಹಿಸಿದ್ದಾರೆ.

ಅವರು ತಾಲ್ಲೂಕಿನ ಚಿಕ್ಕಬೆಳವಂಗಲದಲ್ಲಿ ನಡೆದ ರಾಷ್ಟ್ರೀಯ ಹೆದ್ದಾರಿ ಭೂ ಸ್ವಾಧೀನ ಹೋರಾಟ ವಿರೋಧಿ ಹೋರಾಟ ಸಮಿತಿ ಸಭೆಯಲ್ಲಿ  ಮಾತನಾಡಿದರು.

ಭೂ ಸ್ವಾಧಿನಕ್ಕೆ ಸಂಬಂಧಿಸಿದಂತೆ ಯಾವ ಭೂಮಿಗೆ ಎಷ್ಟು ಬೆಲೆ ನಿಗದಿ ಪಡಿಸಲಾಗಿದೆ ಎನ್ನುವ ಬಗ್ಗೆ ಭೂ ಸ್ವಾಧೀನ ಕಚೇರಿಯಲ್ಲಿ ಯಾರೂ ಸೂಕ್ತ ಉತ್ತರವನ್ನೇ ನೀಡುತ್ತಿಲ್ಲ. ಭೂ ಸ್ವಾಧೀನ ಪ್ರಕ್ರಿಯೆಯಲ್ಲಿ ಪಾರದರ್ಶಕತೆ ಪಾಲಿಸಿಲ್ಲ. ರೈತರು ತಮ್ಮ ತೋಟಗಳಲ್ಲಿಯೇ ಮನೆಗಳನ್ನು ನಿರ್ಮಿಸಿಕೊಂಡು ವಾಸ ಮಾಡುತ್ತಿದ್ದಾರೆ. ಆದರೆ ಈಗ ಸ್ವಾಧೀನಕ್ಕೆ ಒಳಗಾಗುತ್ತಿರುವ ಕೃಷಿ ಭೂಯಲ್ಲಿನ ವಾಸದ ಮನೆಗಳಿಗೂ ಬೆಲೆ ನಿಗದಿಪಡಿಸಿ ಹಣ ನೀಡಬೇಕು. ಒಂದೇ ಹೋಬಳಿಯಲ್ಲಿನ ಭೂಮಿಗೆ ಐದಾರು ರೀತಿಯ ಬೆಲೆ ನಿಗದಿಪಡಿಸಿದ್ದಾರೆ.

ಇದರಿಂದ ಭೂಮಿ ಕಳೆದುಕೊಳ್ಳುತ್ತಿರುವ ರೈತರಿಗೆ ಅನ್ಯಾಯವಾಗಿದೆ. ಹೆದ್ದಾರಿ ನಿರ್ಮಾಣಕ್ಕಾಗಿ ಸ್ವಾಧಿನಕ್ಕೆ ಒಳಪಡುತ್ತಿರುವ ಎಲ್ಲಾ ಭೂಮಿಗೂ ಒಂದೇ ರೀತಿಯ ಬೆಲೆ ನಿಗದಿಯಾಗಬೇಕು. ಭೂ ಸ್ವಾಧಿನಕ್ಕೆ ಒಳಗಾಗಿರುವ ರೈತರಿಗೆ ಹಣ ನೀಡುವಾಗ ಖಾಲಿ ಬಾಂಡ್‌ಗಳಿಗೆ ಸಹಿ ಹಾಕಿಸಿಕೊಳ್ಳುವದನ್ನು ನಿಲ್ಲಿಸಬೇಕು' ಎಂದು ಅವರು ಆಗ್ರಹಿಸಿದರು.

ಭೂ ಸ್ವಾಧಿನಕ್ಕೆ ಒಳಪಡುವ ಹಳೆಯ ದಾಖಲಾತಿಗಳು ತಾಲ್ಲೂಕು ಕಚೇರಿಯಲ್ಲಿಯೇ ದೊರೆಯುತ್ತಿಲ್ಲ. ಇಂತಹ ದಾಖಲೆಗಳನ್ನು ರೈತರಿಂದ ಕೇಳಿದರೆ ಎಲ್ಲಿಂದ ತಂದು ಕೊಡಲು ಸಾಧ್ಯ ಎಂದು ಪ್ರಶ್ನಿಸಿದ ಅವರು ಲಭ್ಯ ದಾಖಲೆಗಳನ್ನು ತಾಲ್ಲೂಕು ಕಚೇರಿಯಿಂದ ಸ್ವಾಧೀನ ಪಡಿಸಿಕೊಳ್ಳುತ್ತಿರುವ ಪ್ರಾಧಿಕಾರವೇ ಪಡೆಯಬೇಕು. ಇದರಿಂದ ರೈತರು ವಿನಾಕಾರಣ ತಾಲ್ಲೂಕು ಕಚೇರಿಗೆ ಅಲೆದಾಡಿ ದಾಖಲಾತಿಗಳಿಗಾಗಿ ಮಧ್ಯವರ್ತಿಗಳಿಗೆ ಹಣ ನೀಡುವುದು ತಪ್ಪಲಿದೆ ಎಂದು ಹೇಳಿದರು.

ಸಮಿತಿಯ ಸಂಚಾಲಕ ವಿಜಯಕುಮಾರ್ ಮಾತನಾಡಿ, ರಾಷ್ಟ್ರೀಯ ಹೆದ್ದಾರಿಗಾಗಿ ಭೂಮಿ ಕಳೆದುಕೊಳ್ಳುತ್ತಿರುವ ರೈತರ ಸಮಾವೇಶ ಆಗಸ್ಟ್ ಎರಡನೇ ವಾರ ನಡೆಯಲಿದೆ ಎಂದು ಹೇಳಿದರು.

ಸಭೆಯಲ್ಲಿ ಸಮಿತಿಯ ಮುಖಂಡರಾದ ತಿಮ್ಮೇಗೌಡ, ಸಿ.ಎಚ್.ರಾಮಕೃಷ್ಣ, ಬೈರಪ್ಪ, ಲೋಕೇಶ್,ನಂಜುಂಡಯ್ಯ, ಚಂದ್ರಶೇಖರ್,ರವಿಕುಮಾರ್, ಗ್ರಾ.ಪಂ.ಸದಸ್ಯೆ ಸೌಭಾಗ್ಯಮ್ಮ ಮತ್ತಿತರರು ಭಾಗವಹಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.