ADVERTISEMENT

ಮೊಯಿಲಿ, ಗೌಡರ ವಿರುದ್ಧ ಕೋಡಿಹಳ್ಳಿ ಚಂದ್ರಶೇಖರ್ ವಾಗ್ದಾಳಿ

​ಪ್ರಜಾವಾಣಿ ವಾರ್ತೆ
Published 12 ಮಾರ್ಚ್ 2012, 19:30 IST
Last Updated 12 ಮಾರ್ಚ್ 2012, 19:30 IST

ದೇವನಹಳ್ಳಿ: ಬಯಲು ಸೀಮೆಯ ಜಿಲ್ಲೆಗಳ ನೀರಾವರಿ ಸಮಸ್ಯೆ ಪರಿಹರಿಸಲು ಎತ್ತಿನ ಹೊಳೆ ಯೋಜನೆಯನ್ನು ಜಾರಿ ಮಾಡುತ್ತೇವೆ ಎಂದು ಮುಖ್ಯಮಂತ್ರಿ ಸದಾನಂದಗೌಡರು ಮತ್ತು ಕೇಂದ್ರ ಸಚಿವ ವೀರಪ್ಪ ಮೊಯಿಲಿ  ಭರವಸೆ ನೀಡಿರುವುದು ಚುನಾವಣಾ ಗಿಮಿಕ್ ಎಂದು  ರೈತ  ಸಂಘ ಹಾಗೂ ಹಸಿರು ಸೇನೆ ರಾಜ್ಯ ಘಟಕದ ಅಧ್ಯಕ್ಷ ಕೋಡಿಹಳ್ಳಿ ಚಂದ್ರಶೇಖರ್ ನೇರ ಆರೋಪ ಮಾಡಿದರು.

ಪಟ್ಟಣದ ಪ್ರವಾಸಿ ಮಂದಿರದಲ್ಲಿ ಸೋಮವಾರ ನಡೆದ ದೇವನಹಳ್ಳಿ ಹಾಗೂ ಚಿಕ್ಕಬಳ್ಳಾಪುರ ರೈತ ಸಂಘದ ಪದಾಧಿಕಾರಿಗಳ ಸಭೆಯ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು,  ಎತ್ತಿನಹೊಳೆ ಯೋಜನೆ ಹೆಸರು ಹೇಳಿ ಈ ಇಬ್ಬರೂ ನಾಯಕರು ರೈತರಿಗೆ ಟೋಪಿ ಹಾಕುವ ಕೆಲಸ ಮಾಡುತ್ತಿದ್ದಾರೆ ಎಂದು ದೂರಿದರು.

ದೇಶದಲ್ಲಿಯೇ ಕರ್ನಾಟಕ ಬರಪೀಡಿತ ರಾಜ್ಯಗಳ ಪಟ್ಟಿಯಲ್ಲಿ ಎರಡನೇ ಸ್ಥಾನದಲ್ಲಿದೆ. ಇತರೆ ರಾಜ್ಯದಲ್ಲಿ ನೀರಾವರಿ ಶೇ. 48ರಷ್ಟು ನೀರಾವರಿ ಯೋಜನೆಗಳು ಜಾರಿಯಲ್ಲಿದ್ದರೆ ರಾಜ್ಯದಲ್ಲಿ ಶೇ.30ರಷ್ಟು ಮಾತ್ರ ನೀರಾವರಿ ಯೋಜನೆ ಇದೆ.
 
ಕಾವೇರಿ, ಕೃಷ್ಣ, ಗೋದಾವರಿ ಸೇರಿದಂತೆ ಹಲವು ನದಿ ಮತ್ತು ಉಪನದಿಗಳ ನೀರು ಬಹುಪಾಲು ಅನ್ಯ ರಾಜ್ಯದ ಪಾಲಾಗುತ್ತಿದೆ. ರಾಜಕೀಯ ಮರುಹುಟ್ಟು ಪಡೆಯಲು ಮೊಯಿಲಿ ಅವರಿಗೆ ಚಿಕ್ಕಬಳ್ಳಾಪುರ ಕ್ಷೇತ್ರಬೇಕಾಗಿತ್ತು. ಆದರೆ ಶಾಶ್ವತ ನೀರಾವರಿ ಯೋಜನೆ ಜಾರಿ ಬಗ್ಗೆ ನಿರ್ಲಕ್ಷ್ಯ ತಾಳಿದ್ದು, ಮತದಾರರ ಮೂಗಿಗೆ ತುಪ್ಪ ಸವರುವ ಕೆಲಸ ಮಾಡುತ್ತಿದ್ದಾರೆ. 

 ರಾಜ್ಯದ ಸಂಸದರು ಕೇಂದ್ರ ಸರ್ಕಾರದ ಮೇಲೆ ಒತ್ತಡ ಹೇರಿ ಅನುದಾನ ಮತ್ತು ಯೋಜನೆಗಳನ್ನು ಜಾರಿ ಮಾಡಿಸುವಲ್ಲಿ ವಿಫಲವಾಗಿದ್ದಾರೆ. ರಾಜ್ಯ ಬಿಜೆಪಿ ಸರ್ಕಾರದ ಆಂತರೀಕ ಕಚ್ಚಾಟದಿಂದ ಅಭಿವೃದ್ಧಿ ಯೋಜನೆಗಳು ಕಾರ್ಯಗತವಾಗುತ್ತಿಲ್ಲ.
 
ಪ್ರಕೃತಿ ಸಂಪತ್ತನ್ನು ಲೂಟಿ ಮಾಡಿದವರಿಗೆ ಯಾರಿಂದಲೂ ಕ್ಷಮೆ ಇಲ್ಲ. ಸದಾನಂದಗೌಡರು ರಾಜ್ಯದ ದುರ್ಬಲ ಮುಖ್ಯಮಂತ್ರಿಯಾಗಿದ್ದು, ಸರ್ಕಾರವನ್ನು ವಿಸರ್ಜಿಸಿ ಚುನಾವಣೆಗೆ ಹೋಗುವುದು ಸೂಕ್ತ ಎಂದು ಟೀಕಿಸಿದರು. 

 ಹಸಿರು ಸೇನೆ ಜಿಲ್ಲಾ ಅಧ್ಯಕ್ಷ ಕೆ.ಎಸ್ ಹರೀಶ್ ಮಾತನಾಡಿ, ಬಿ.ಜೆ.ಪಿ ರಾಜ್ಯದ ಅಧಿಕಾರದ ಚುಕ್ಕಾಣಿ ಹಿಡಿದ ಮರುದಿನವೇ ಅರ್ಕಾವತಿ ಪುನಶ್ಚೇತನಕ್ಕಾಗಿ 3 ಕೋಟಿ ರೂಪಾಯಿ ಬಿಡುಗಡೆಯಾಗಿದ್ದರೂ, ಯೋಜನೆ ನೆನೆಗುದಿಗೆ ಬಿದ್ದಿದೆ. ದಿಬ್ಬೂರು ಹಳ್ಳಿಯಿಂದ ಟಿ.ಜಿ ಹಳ್ಳಿ ಜಲಾಶಯಕ್ಕೆ ನೀರು ತರುವ ಕೇವಲ 40 ಕಿಲೋಮೀಟರ್‌ಗಳ ಯೋಜನೆಯನ್ನು   ಕೈಬಿಟ್ಟಿರುವಾಗ ಎತ್ತಿನ ಹೊಳೆಯಿಂದ ನೀರು ತರಲು ಸಾಧ್ಯವಿಲ್ಲ.
 
ಮೊಯಿಲಿ, ಸದಾನಂದ ಗೌಡರ ಪ್ರಯತ್ನ ಹಾಸ್ಯಾಸ್ಪದ. ಬಯಲು ಸೀಮೆಗೆ ಸಚಿವ ವೀರಪ್ಪ ಮೊಯಿಲಿ ಅವರಿಂದ ಬಿಡುಗಾಸಿನ ಉಪಯೋಗವಾಗಿಲ್ಲ ಎಂದು ಆರೋಪಿಸಿದರು.ರೈತ ಸಂಘದ ಜಿಲ್ಲಾ ಅಧ್ಯಕ್ಷ ವೆಂಕಟನಾರಾಯಣಪ್ಪ, ತಾಲ್ಲೂಕು ಅಧ್ಯಕ್ಷ ಗಾರೆ ರವಿಕುಮಾರ್ ಇತರರು ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.