ADVERTISEMENT

ಯುವ ಸಮೂಹದಿಂದ ಪ್ರಜಾಪ್ರಭುತ್ವ ಉಳಿವು

ನಿವೃತ್ತ ಲೋಕಾಯುಕ್ತ ಸಂತೋಷ್‌ ಹೆಗ್ಡೆ ಅಭಿಪ್ರಾಯ

​ಪ್ರಜಾವಾಣಿ ವಾರ್ತೆ
Published 10 ಜನವರಿ 2014, 9:05 IST
Last Updated 10 ಜನವರಿ 2014, 9:05 IST

ಪ್ರಜಾವಾಣಿ ವಾರ್ತೆ
ದೇವನಹಳ್ಳಿ: ‘ಅಕ್ರಮ ಸಂಪಾದನೆಯ ತೃಪ್ತಿಗಿಂತ ಪ್ರಾಮಾಣಿಕ ಸೇವೆಯಿಂದ ತೃಪ್ತಿ ಹೊಂದಬೇಕು’ ಎಂದು ನಿವೃತ್ತ ಲೋಕಾಯುಕ್ತ  ಸಂತೋಷ್‌ ಎನ್‌ ಹೆಗ್ಡೆ ತಿಳಿಸಿದರು.

ದೇವನಹಳ್ಳಿ ನಂದಿ ರೂರಲ್‌ ಎಜುಕೇಷನ್‌ ಸಂಸ್ಥೆ ವತಿಯಿಂದ ಏರ್ಪಡಿಸಿದ್ದ 25 ನೇ ವಾರ್ಷಿಕ ನಂದಿ ಬೆಳ್ಳಿಹಬ್ಬ ಸಮಾರಂಭ ಉದ್ಘಾಟಿಸಿ ಅವರು ಮಾತನಾಡಿದರು.

‘ಪ್ರಜಾಪ್ರಭುತ್ವದ ಮೌಲ್ಯ ಕುಸಿಯುತ್ತಿದೆ. 40 ವರ್ಷದ ರಾಜಕೀಯ ವ್ಯವಸ್ಥೆಗೂ ಇಂದಿನ ರಾಜಕೀಯ ವ್ಯವಸ್ಥೆಗೆ ಭಾರಿ ವ್ಯತ್ಯಾಸವಿದೆ. ನಿಜವಾದ ಪ್ರಜಾಪ್ರಭುತ್ವವನ್ನು ಮರುಸ್ಥಾಪಿಸಲು ವಿದ್ಯಾರ್ಥಿ ಹಾಗೂ ಯುವ ಸಮುದಾಯದಿಂದ ಸಾಧ್ಯ,  ನಮ್ಮ ಸಂಸ್ಕೃತಿಗೆ ವಿದೇಶಿಗರು ಮಾರು ಹೋಗಿದ್ದಾರೆ. ಆದರೆ ವಿದೇಶಿ ಸಂಸ್ಕೃತಿಯನ್ನು ನಾನು ಅನುಕರಣೆ ಮಾಡುತ್ತಿದ್ದೇವೆ ಎಂದರು.

  ‘ಜನರು ನೀರಿಗಾಗಿ ಪರದಾಡುತ್ತಿ ದ್ದಾರೆ. ಕುಡಿಯುವ ನೀರು ಒದಗಿಸುವ ಸಾಮರ್ಥ್ಯವೂ ಸರ್ಕಾರಕಿಲ್ಲವೇ ಎಂದು ಪ್ರಶ್ನಿಸಿದ ಅವರು, ಭ್ರಷ್ಟಾಚಾರಕ್ಕೆ ಕಡಿವಾಣ ಹಾಗೂ ಪ್ರಜಾಪ್ರಭುತ್ವದ ಅರ್ಥ ಬದಲಾದಾಗ ದೇಶದ ಭವಿಷ್ಯ ಬದಲಾವಣೆಯಾಗಲಿದೆ’ ಎಂದು ಅವರು ತಿಳಿಸಿದರು.

ಶಾಸಕ ಪಿಳ್ಳಮುನಿಶ್ಯಾಮಪ್ಪ ಮಾತನಾಡಿ, ‘ಇಂದಿನ ಸ್ಥಿತಿಯಲ್ಲಿ ಖಾಸಗಿ ಶಾಲೆಗಳನ್ನು ನಿರ್ವಹಣೆ ಮಾಡುವುದು ಕಷ್ಠಕರ. ಶಿಕ್ಷಣ ಕ್ರಾಂತಿಕಾರಿ ಆಂದೋಲನವಾಗಬೇಕು. ಸರಳ ಜೀವನ ಅಳವಡಿಸಿಕೊಳ್ಳಲು ಪ್ರಯತ್ನಿಸಬೇಕು. ಶಿಕ್ಷಣದಿಂದಲೇ ಸಮಗ್ರ ಬದಲಾವಣೆ ಸಾಧ್ಯ ಎಂಬುದನ್ನು ಅರ್ಥಮಾಡಿಕೊಳ್ಳಬೇಕು’ ಎಂದರು. ಜಿ.ಪಂ ಸದಸ್ಯ ಬಿ.ರಾಜಣ್ಣ ಮಾತನಾಡಿದರು.

ನಂದಿ ರೂರಲ್‌ ಎಜುಕೇಷನ್‌ ಸಂಸ್ಥಾಪಕ ಅಧ್ಯಕ್ಷ ವೈ.ಕೆ.ಚಂದ್ರ ಶೇಖರ್‌, ಸಂಸ್ಥೆ ಬೆಳೆದು ಬಂದ ದಾರಿಯ ಬಗ್ಗೆ ವಿವರಿಸಿದರು. ಸಿಟಿಜನ್‌ ಕೋ.ಆಪರೇಟಿವ್‌ ಬ್ಯಾಂಕ್‌ ಮಾಜಿ ಅಧ್ಯಕ್ಷ ಎಂ.ಗೋಪಾಲ್‌ ನಿವೃತ್ತ ಉಪನ್ಯಾಸಕ ಪಿ.ಕೃಷ್ಣಪ್ಪ ಇದ್ದರು. ಮುಖ್ಯ ಶಿಕ್ಷಕ ಮಂಜುನಾಥ್‌ ವಾರ್ಷಿಕ ವರದಿ ವಾಚಿಸಿದರು. ಶಿಕ್ಷಕ ಅರಸೇಗೌಡ ಸ್ವಾಗತಿಸಿ, ಬಾಲಸ್ವಾಮಿ ನಿರೂಪಿಸಿದರು. ವಿದ್ಯಾರ್ಥಿಗಳಿಂದ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಿತು.

ಯಾವ ಅಧ್ಯಯನಕ್ಕೆ ಪ್ರವಾಸ?
‘ಸರ್ಕಾರ ದಲ್ಲಿರುವ ಶಾಸಕರು ಪದೇ ಪದೇ ತಂಡಗಳನ್ನು ಕಟ್ಟಿಕೊಂಡು ಯಾವ ಅಧ್ಯಯನಕ್ಕೆ ವಿದೇಶಿ ಪ್ರವಾಸಕ್ಕೆ ತೆರಳುತ್ತಾರೆ ಎಂಬುದೇ ಅರ್ಥ ವಾಗುತ್ತಿಲ್ಲ’ ಎಂದು ನಿವೃತ್ತ ಲೋಕಾ ಯುಕ್ತ ಸಂತೋಷ್‌ ಹೆಗ್ಡೆ ಅವರು ಬೇಸರ ವ್ಯಕ್ತಪಡಿಸಿದರು. ಕಾರ್ಯಕ್ರಮಕ್ಕೆ ಮೊದಲು ‘ಪ್ರಜಾವಾಣಿ’ ಯೊಂದಿಗೆ ಮಾತ ನಾಡಿದ ಅವರು, ಈಗಾಗಲೇ ಮೂರು ತಂಡದಲ್ಲಿ ಒಂದು ತಂಡ ಪ್ರವಾಸ ಮುಗಿಸಿ ಬಂದಿದೆ. ಕೃಷಿ ಮತ್ತು ತೋಟ ಗಾರಿಕೆ ಅಧ್ಯಯನಕ್ಕೆ ಹೋಗಿ ದ್ದೇವೆ ಎನ್ನುತ್ತಿದ್ದಾರೆ. ಬೀಜಿಂಗ್‌ನಿಂದ ಶಾಂಘೈ ನಗರದ ಮಾರ್ಗ
ದಲ್ಲಿ ಸಂಚರಿಸುವ 350 ಕಿ.ಮೀ ಬುಲೆಟ್‌ ರೈಲಿನಲ್ಲಿ ಪ್ರಯಾಣ ಮಾಡಿದವರಿಗೆ ಕೃಷಿ ತೋಟಗಾರಿಕೆ ನೋಡಲು ಸಾಧ್ಯವೇ ಎಂದು ಅವರು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.