ADVERTISEMENT

ರಂಗಕಲಾವಿದರಿಗೆ ಸೌಲಭ್ಯದಲ್ಲಿ ತಾರತಮ್ಯ

​ಪ್ರಜಾವಾಣಿ ವಾರ್ತೆ
Published 5 ಫೆಬ್ರುವರಿ 2012, 19:30 IST
Last Updated 5 ಫೆಬ್ರುವರಿ 2012, 19:30 IST

ದೊಡ್ಡಬಳ್ಳಾಪುರ: ರಂಗಭೂಮಿ ಕಲಾವಿದರಿಗೆ ಸರ್ಕಾರದ ಸೌಲಭ್ಯಗಳನ್ನು ನೀಡುವಲ್ಲಿ ತಾರತಮ್ಯ ಮಾಡಲಾಗುತ್ತಿದೆ. ರಾಜ್ಯದಲ್ಲಿ ಕೇವಲ 1,200 ಮಂದಿ ರಂಗ ಕಲಾವಿದರಿಗೆ ಮಾತ್ರ ಮಾಸಾಶನ ದೊರೆಯುತ್ತಿದೆ ಎಂದು ನಾಟಕ ರತ್ನ ಡಾ.ಗುಬ್ಬಿವೀರಣ್ಣ ರಂಗಭೂಮಿ ಕಲಾವಿದರ ಒಕ್ಕೂಟದ ರಾಜ್ಯ ಘಟಕದ ಅಧ್ಯಕ್ಷ ಗುಬ್ಬಿ ರಾ.ವೀರೇಶ್ ಹೇಳಿದರು.

ನಗರದ ಡಾ.ರಾಜ್‌ಕುಮಾರ್ ಕಲಾಮಂದಿರದಲ್ಲಿ ಭಾನುವಾರ ನಡೆದ  ನಾಟಕ ರತ್ನ ಡಾ.ಗುಬ್ಬಿವೀರಣ್ಣ ರಂಗಭೂಮಿ ಕಲಾವಿದರ ಒಕ್ಕೂಟದ ತಾಲ್ಲೂಕು ಘಟಕ ಉದ್ಘಾಟನಾ ಸಮಾರಂಭದಲ್ಲಿ ಭಾಗವಹಿಸಿ ಅವರು ಮಾತನಾಡಿದರು.

ರಾಜ್ಯದ ಎಲ್ಲಾ ಕಲಾವಿದರನ್ನು ಒಂದು ವೇದಿಕೆಯಡಿ ತರುವ ಮೂಲಕ ಕಲಾವಿದರ ಸಮಸ್ಯೆಗಳನ್ನು ಸರ್ಕಾರಕ್ಕೆ ಮನವರಿಕೆ ಮಾಡಿಕೊಡಲು ರಾಜ್ಯ ಮಟ್ಟದ ಬೃಹತ್ ಸಮಾವೇಶ ನಡೆಸಲಾಗುತ್ತಿದೆ. ಕಲಾವಿದರು ಮಾಸಾಶನ ಪಡೆಯಲು ಇರುವ ಕಾನೂನಿನ ತಿದ್ದುಪಡಿ ಮಾಡಬೇಕಾಗಿದೆ. 30 ವರ್ಷಗಳ ಕಾಲ ರಂಗಭೂಮಿ ಕಲಾವಿದರಾಗಿ ಸೇವೆ ಸಲ್ಲಿಸಿರುವ ಎಲ್ಲಾ ಕಲಾವಿದರಿಗೂ ಮಾಸಾಶನ ದೊರೆಯುವಂತಾಗಬೇಕು.

ರಾಜ್ಯ ಸರ್ಕಾರ ಈ ಬಾರಿಯ ರಾಜ್ಯೋತ್ಸವ ಪ್ರಶಸ್ತಿ ಸಂಖ್ಯೆಯನ್ನು ಕಡಿಮೆ ಮಾಡಿರುವುದು ಸರಿಯಲ್ಲ. ಪ್ರತಿ ಜಿಲ್ಲೆಗೆ ಒಬ್ಬ ಕಲಾವಿದರನ್ನು ಗುರುತಿಸಿ ರಾಜ್ಯೋತ್ಸವ ಪ್ರಶಸ್ತಿ ನೀಡಬೇಕು ಎಂದು ಹೇಳಿದರು.
ಒಕ್ಕೂಟದ ರಾಜ್ಯ ಕಾರ್ಯದರ್ಶಿ ಡಿ.ಕೆಂಪಣ್ಣ, ಹವ್ಯಾಸಿ ಕಲಾವಿದರಿಂದ ಮಾತ್ರ ಇವತ್ತು ರಂಗ ಭೂಮಿ ಉಳಿದಿದೆ. ರಂಗ ಕಲೆಯನ್ನು ಉಳಿಸಲು ರಾಜ್ಯ ಸರ್ಕಾರ ರಂಗ ತರಬೇತಿ ಶಾಲೆಗಳನ್ನು ಆರಂಭಿಸಬೇಕು ಎಂದು ಆಗ್ರಹಿಸಿದರು.

ಸಮಾರಂಭದ ಅಧ್ಯಕ್ಷತೆಯನ್ನು ಒಕ್ಕೂಟದ ತಾಲ್ಲೂಕು ಘಟಕದ ಅಧ್ಯಕ್ಷ ಜಿ.ನಾಗರಾಜ ವಹಿಸಿದ್ದರು. ಗ್ರಾಮಾಂತರ ಜಿಲ್ಲಾ ಕಲಾವಿದರ ಸಂಘದ ಗೌರವ ಅಧ್ಯಕ್ಷ ಕೆ.ಎಂ.ಕೃಷ್ಣಮೂರ್ತಿ, ನಗರ ಸಭೆ ಸದಸ್ಯ ಟಿ.ಎನ್.ಪ್ರಭುದೇವ್,ಒಕ್ಕೂಟದ ತಾಲ್ಲೂಕು ಪ್ರಧಾನ ಕಾರ್ಯದರ್ಶಿ ಎನ್.ರಾಮಾಂಜಿನಪ್ಪ, ಸಂಘನಾ ಕಾರ್ಯದರ್ಶಿ ಆರ್.ಎ.ಸಂಜೀವರಾಯಪ್ಪ ಇತರರು ಇದ್ದರು.

ಹಿರಿಯ ರಂಗಭೂಮಿ ಕಲಾವಿದರನ್ನು ಅಭಿನಂದಿಸಲಾಯಿತು. ಬೀರಸಂದ್ರ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲಾ ವಿದ್ಯಾರ್ಥಿಗಳು ಅಭಿನಯಿಸಿದ ಶ್ರೀಕೃಷ್ಣಸಂಧಾನ ಪೌರಾಣಿಕ ನಾಟಕ ಪ್ರದರ್ಶನ ಪ್ರೇಕ್ಷರ ಮೆಚ್ಚಿಗೆ ಪಡೆಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.