ADVERTISEMENT

ರೈತರಿಗೆ 28ರಿಂದ ಪರಿಹಾರ ವಿತರಣೆ

​ಪ್ರಜಾವಾಣಿ ವಾರ್ತೆ
Published 25 ಮೇ 2012, 5:35 IST
Last Updated 25 ಮೇ 2012, 5:35 IST

ಬೆಂಗಳೂರು: ನಗರದ ಹೊಸೂರು ರಸ್ತೆಯ ಚಂದಾಪುರದ ಮರಸೂರು ಬಳಿ ಕರ್ನಾಟಕ ಗೃಹ ಮಂಡಳಿಯು ಕೈಗೆತ್ತಿಕೊಂಡಿರುವ `ಸೂರ್ಯನಗರ~ ಎರಡನೇ ಹಂತದ ಬಡಾವಣೆ ನಿರ್ಮಾಣಕ್ಕೆ ಜಮೀನು ಒದಗಿಸಿರುವ ರೈತರಿಗೆ ಈ ತಿಂಗಳ 28ರಿಂದ (ಸೋಮವಾರ) ಪರಿಹಾರ ವಿತರಿಸಲಾಗುವುದು ಎಂದು ವಸತಿ ಸಚಿವ ವಿ. ಸೋಮಣ್ಣ ಗುರುವಾರ ಆಶ್ವಾಸನೆ ನೀಡಿದರು.

ಸಮಾಜ ಕಲ್ಯಾಣ ಸಚಿವ ಎ. ನಾರಾಯಣಸ್ವಾಮಿ, ಬೆಂಗಳೂರು ದಕ್ಷಿಣ ಶಾಸಕ ಎಂ. ಕೃಷ್ಣಪ್ಪ ಅವರೊಂದಿಗೆ ಬಡಾವಣೆ ನಿರ್ಮಾಣ ಸ್ಥಳಕ್ಕೆ ಭೇಟಿ ನೀಡಿ ಕಾಮಗಾರಿ ಪರಿಶೀಲನೆ ನಡೆಸಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, `ಸೋಮವಾರದಿಂದ ಗುರುವಾರದವರೆಗೆ ಒಟ್ಟು ನಾಲ್ಕು ದಿನಗಳ ಕಾಲ ಜಮೀನು ಒದಗಿಸಿರುವ ರೈತರಿಗೆ ಪರಿಹಾರ ನೀಡಲಾಗುವುದು. ಇನ್ನು ಮುಂದೆ ಪರಿಹಾರಕ್ಕಾಗಿ ರೈತರು ಗೃಹ ಮಂಡಳಿಯ ಕಚೇರಿಗೆ ಅಲೆಯುವಂತಿರುವುದಿಲ್ಲ~ ಎಂದು ಭರವಸೆ ನೀಡಿದರು.

`ಒಂದು ದಿನದಲ್ಲಿ ಎಷ್ಟು ರೈತರಿಗೆ ಪರಿಹಾರ ನೀಡಬಹುದು? ಭೂಸ್ವಾಧೀನಪಡಿಸಿಕೊಂಡ ಎಷ್ಟು ರೈತರಿಗೆ ಪರಿಹಾರ ನೀಡಲು ಕಡತ ಬಾಕಿ ಉಳಿದಿವೆ? ಈ ಬಗ್ಗೆ ಮಂಡಳಿಯ ಅಭಿಪ್ರಾಯವನ್ನೂ ಸೇರಿಸಿ ಶುಕ್ರವಾರ ಸಂಜೆಯೊಳಗೆ ಫಲಾನುಭವಿಗಳ ಪಟ್ಟಿ ನೀಡಿದಲ್ಲಿ ಶನಿವಾರ ಪರಿಶೀಲಿಸಿ ಪರಿಹಾರ ಒದಗಿಸುವುದಕ್ಕೆ ಅಂಕಿತ ಹಾಕಲಾಗುವುದು~ ಎಂದು ಸ್ಥಳದಲ್ಲಿಯೇ ಉಪಸ್ಥಿತರಿದ್ದ ಗೃಹ ಮಂಡಳಿಯ ಆಯುಕ್ತರಿಗೆ ಸೂಚನೆ ನೀಡಿದರು.

`ಸೂರ್ಯ ನಗರ~ ಬಡಾವಣೆಯಲ್ಲಿ ಒಟ್ಟು 10 ಸಾವಿರ ನಿವೇಶನಗಳನ್ನು ಹಂಚಿಕೆ ಮಾಡಲು ಉದ್ದೇಶಿಸಲಾಗಿದೆ. ಎರಡನೇ ಹಂತದಲ್ಲಿ ಮೂಲಭೂತ ಸೌಲಭ್ಯಗಳನ್ನು ಕಲ್ಪಿಸುವ ಕೆಲಸ ಶೇ 75ರಿಂದ 80ರಷ್ಟು ಪೂರ್ಣಗೊಂಡಿದೆ. ಇನ್ನೆರಡು ತಿಂಗಳಲ್ಲಿ ನಾಲ್ಕು ಸಾವಿರ ನಿವೇಶನಗಳನ್ನು ಹಂಚಿಕೆ ಮಾಡುವ ಪ್ರಕ್ರಿಯೆ ಪ್ರಾರಂಭಿಸಲಾಗುವುದು. ನಾಲ್ಕೈದು ತಿಂಗಳೊಳಗೆ ಬಾಕಿಯಿರುವ ಮೂರು ಸಾವಿರ ನಿವೇಶನಗಳನ್ನು ಅರ್ಹ ಫಲಾನುಭವಿಗಳಿಗೆ ವಿತರಿಸಲಾಗುವುದು~ ಎಂದರು.

ಶಿಂಷಾದಿಂದ ಕುಡಿಯುವ ನೀರು: ಮಂಡ್ಯ ಜಿಲ್ಲೆಯ ಶಿಂಷಾದಿಂದ ಬಡಾವಣೆಗೆ ಕುಡಿಯುವ ನೀರಿನ ಸೌಲಭ್ಯ ಕಲ್ಪಿಸಲು 250 ಕೋಟಿ ರೂಪಾಯಿ ಖರ್ಚು ಮಾಡಲಾಗುತ್ತಿದೆ. ಈ ಉದ್ದೇಶಕ್ಕಾಗಿ ಈಗಾಗಲೇ ಟೆಂಡರ್ ಕರೆಯಲಾಗಿದೆ ಎಂದು ಸಚಿವರು ತಿಳಿಸಿದರು.

`ಮನೆ ಕಟ್ಟಿಕೊಳ್ಳುವಂತಹ ಕನಸು ಕಂಡಿರುವ ಮಧ್ಯಮ ವರ್ಗದವರಿಗೆ ಸೂರು ಕಲ್ಪಿಸಬೇಕೆಂಬುದು ಗೃಹ ಮಂಡಳಿಯ ಮುಖ್ಯ ಉದ್ದೇಶವಾಗಿದೆ. ಹೀಗಾಗಿ, ಲಾಭ-ನಷ್ಟದ ಬಗ್ಗೆ ಸರ್ಕಾರ ಚಿಂತಿಸುವುದಿಲ್ಲ~ ಎಂದರು.

`ಭೂಸ್ವಾಧೀನಪಡಿಸಿಕೊಂಡ ಕೆಲವು ಪ್ರಕರಣಗಳಲ್ಲಿ ನ್ಯಾಯಾಲಯ ಆದೇಶ ನೀಡಿದ್ದರೂ ಪರಿಹಾರ ನೀಡಿಲ್ಲ ಎಂದು ರೈತರು ಅಳಲು ತೋಡಿಕೊಂಡಿದ್ದಾರೆ. ಕಾನೂನಿಗಿಂತ ಯಾರೂ ದೊಡ್ಡವರಲ್ಲ. ಈ ಬಗ್ಗೆ ಪರಿಶೀಲಿಸಿ ಸೂಕ್ತ ಕ್ರಮ ಕೈಗೊಳ್ಳಲಾಗುವುದು~ ಎಂದರು.

ಸಚಿವರಿಗೆ ರೈತರ ಮುತ್ತಿಗೆ: ಈ ನಡುವೆ, ಸಚಿವರು ಸ್ಥಳಕ್ಕೆ ಆಗಮಿಸುತ್ತಿದ್ದಂತೆಯೇ ಜಮೀನು ನೀಡಿದ ರೈತರು ಪರಿಹಾರಕ್ಕೆ ಒತ್ತಾಯಿಸಿ ಮುತ್ತಿಗೆ ಹಾಕಿದರು. ಸಮಾಜ ಕಲ್ಯಾಣ ಸಚಿವ ನಾರಾಯಣಸ್ವಾಮಿ ಹಾಗೂ ವಿ. ಸೋಮಣ್ಣ ಅವರಿಬ್ಬರೂ ಸಾವಧಾನದಿಂದಲೇ ರೈತರ ಸಮಸ್ಯೆಗಳನ್ನು ಆಲಿಸಿದರು. ಆನಂತರ ಸೋಮವಾರದಿಂದಲೇ ಪರಿಹಾರ ನೀಡಲಾಗುವುದು ಎಂದು ಸಚಿವ ಸೋಮಣ್ಣ ಪ್ರಕಟಿಸಿದರು. 


`ದುಡ್ಡು ನೋಡಿ ಸಾಯ್ತೀವಿ...~

`ನಾವು ಜಮೀನು ಕೊಟ್ಟು ಐದಾರು ವರ್ಷ ಆಗಿದೆ. ನಾಳೆ ಸಾಯೋರ‌್ಯಾರೋ ಬದುಕೋರ‌್ಯಾರೊ? ಮೊದಲು ನಮಗೆ ಪರಿಹಾರ ಕೊಡಲಿ. ನಾವು ಒಂದು ಸಾರಿ ದುಡ್ಡು ನೋಡಿ ಸಾಯ್ತೀವಿ~

- `ಸೂರ್ಯನಗರ~ ಎರಡನೇ ಹಂತದ ಬಡಾವಣೆ ನಿರ್ಮಾಣಕ್ಕೆ 15 ಎಕರೆ ಜಮೀನು ನೀಡಿ ಪರಿಹಾರಕ್ಕಾಗಿ ಚಾತಕ ಪಕ್ಷಿಗಳಂತೆ ಕಾಯುತ್ತಿರುವ ನಾಗನಾಯಕನಹಳ್ಳಿಯ ಮುನಿವೀರಪ್ಪ ಅವರ ಕುಟುಂಬ ಸದಸ್ಯರು ಆಕ್ರೋಶ ವ್ಯಕ್ತಪಡಿಸಿದ್ದು ಹೀಗೆ.

`ನಾವು 15 ಎಕರೆ ಜಾಗ ಕೊಟ್ಟಿದ್ದೇವೆ. ಎಕರೆಗೆ 34 ಲಕ್ಷ ರೂಪಾಯಿ ಪರಿಹಾರ ಹಾಗೂ ಒಂದು ನಿವೇಶನ ನೀಡುವುದಾಗಿ ಹೇಳಿ ಜಾಗ ಸ್ವಾಧೀನಪಡಿಸಿಕೊಂಡ್ರು. ಆದರೆ, ಇದುವರೆಗೂ ನಯಾ ಪೈಸೆ ಪರಿಹಾರ ಸಿಕ್ಕಿಲ್ಲ.

ಇನ್ನೆಷ್ಟು ದಿನ ಕಾಯೋದು? ಗೃಹ ಮಂಡಳಿ ಕಚೇರಿಗೆ ಅಲೆದು ಅಲೆದೂ ಸಾಕಾಗಿದೆ~ ಎಂದು ಸಚಿವದ್ವಯರ ಸಮ್ಮುಖದಲ್ಲಿಯೇ ಮಾಧ್ಯಮ ಪ್ರತಿನಿಧಿಗಳ ಎದುರು ತಮ್ಮ ಅಳಲನ್ನು ತೋಡಿಕೊಂಡರು.

`ನಮಗೂ ಬೇಜಾನ್ ಜನ ಅಣ್ಣ-ತಮ್ಮಂದಿರಿದ್ದಾರೆ. ಪರಿಹಾರದಲ್ಲಿಯೂ ಎಷ್ಟೆಷ್ಟು ಪಾಲು ಬರುತ್ತೋ ಗೊತ್ತಿಲ್ಲ. ಕೊಡೋ ಪರಿಹಾರವನ್ನೂ ಬೇಗ ಕೊಟ್ಟರೆ ಮಕ್ಕಳ ಭವಿಷ್ಯಕ್ಕಾದರೂ ಏನನ್ನಾದರೂ ಮಾಡಬಹುದು~ ಎಂದು ಮನವಿ ಮಾಡಿಕೊಂಡರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.