ADVERTISEMENT

ವಿಜಯಪುರ: ₹13.45 ಕೋಟಿ ವೆಚ್ಚದಲ್ಲಿ ಮೊರಾರ್ಜಿ ದೇಸಾಯಿ ವಸತಿ ಶಾಲೆ ಕಟ್ಟಡ

​ಪ್ರಜಾವಾಣಿ ವಾರ್ತೆ
Published 30 ನವೆಂಬರ್ 2017, 9:35 IST
Last Updated 30 ನವೆಂಬರ್ 2017, 9:35 IST
ಬೈರಾಪುರದಲ್ಲಿ ಮೊರಾರ್ಜಿ ದೇಸಾಯಿ ವಸತಿ ಶಾಲೆಯ ಕಟ್ಟಡ ನಿರ್ಮಾಣಕ್ಕೆ ಪಿಳ್ಳಮುನಿಶಾಮಪ್ಪ ಶಂಕುಸ್ಥಾಪನೆ ಮಾಡಿದರು.
ಬೈರಾಪುರದಲ್ಲಿ ಮೊರಾರ್ಜಿ ದೇಸಾಯಿ ವಸತಿ ಶಾಲೆಯ ಕಟ್ಟಡ ನಿರ್ಮಾಣಕ್ಕೆ ಪಿಳ್ಳಮುನಿಶಾಮಪ್ಪ ಶಂಕುಸ್ಥಾಪನೆ ಮಾಡಿದರು.   

ವಿಜಯಪುರ: ಕಳೆದ ಹತ್ತು ವರ್ಷಗಳಿಂದ ಇಲ್ಲಿನ ವಿದ್ಯಾರ್ಥಿಗಳು ಅನುಭವಿಸುತ್ತಿದ್ದ ಸಮಸ್ಯೆ ಸದ್ಯವೇ ದೂರವಾಗಲಿದೆ ಎಂದು ಶಾಸಕ ಪಿಳ್ಳಮುನಿಶಾಮಪ್ಪ ಹೇಳಿದರು.

ಹೋಬಳಿಯ ಬೈರಾಪುರದ ಸರ್ವೇ ನಂಬರ್ 4ರಲ್ಲಿ ₹13.45 ಕೋಟಿ ವೆಚ್ಚದಲ್ಲಿ ನೂತನವಾಗಿ ನಿರ್ಮಾಣ ಮಾಡಲು ಉದ್ದೇಶಿಸಿರುವ ಮೊರಾರ್ಜಿ ದೇಸಾಯಿ ವಸತಿ ಶಾಲೆಯ ಕಟ್ಟಡ ನಿರ್ಮಾಣಕ್ಕೆ ಬುಧವಾರ ಶಂಕುಸ್ಥಾಪನೆ ನೆರವೇರಿಸಿ ಅವರು ಮಾತನಾಡಿದರು.

ಈ ವಸತಿ ಶಾಲೆಗೆ ಸ್ವಂತ ಕಟ್ಟಡ ಇಲ್ಲದ್ದರಿಂದ ವಿದ್ಯಾರ್ಥಿಗಳು ವಸತಿ ಮೂಲ ಸೌಕರ್ಯ ಕೊರತೆ ಸೇರಿದಂತೆ ಅನೇಕ ತೊಂದರೆಗಳಲ್ಲಿಯೇ ಪಾಠ ಪ್ರವಚನದಲ್ಲಿ ತೊಡಗಬೇಕಾಗಿತ್ತು. ಕಟ್ಟಡ ನಿರ್ಮಾಣಕ್ಕಾಗಿ ಹಣ ಮಂಜೂರು ಮಾಡಲಾಗಿದೆ. ಈ ವಸತಿ ಶಾಲೆಯ ಕಟ್ಟಡದಲ್ಲಿ ಎರಡು ಅಂತಸ್ತುಗಳಲ್ಲಿ ತರಗತಿ ಕೋಣೆಗಳು, ವಸತಿ ನಿಲಯ, ಶಿಕ್ಷಕರಿಗೆ ವಸತಿ ಗೃಹ ಸೇರಿದಂತೆ ಒಟ್ಟು 52 ಕೋಣೆಗಳು ನಿರ್ಮಾಣವಾಗಲಿವೆ. ಅಲ್ಲದೇ ಆಟದ ಮೈದಾನ, ಈಜುಕೊಳ ನಿರ್ಮಾಣ ಮಾಡಲಾಗುತ್ತದೆ. ಸರ್ಕಾರದ ಇಂತಹ ಸೌಲಭ್ಯಗಳನ್ನು ಸದ್ಭಳಕೆ ಮಾಡಿಕೊಂಡು ಉತ್ತಮ ಶಿಕ್ಷಣ ಪಡೆಯುವ ಕಡೆಗೆ ಚಿಂತನೆ ನಡೆಸಬೇಕು ಎಂದರು.

ADVERTISEMENT

ಜಿಲ್ಲಾ ಪಂಚಾಯಿತಿ ಉಪಾಧ್ಯಕ್ಷೆ ಅನಂತಕುಮಾರಿ ಚಿನ್ನಪ್ಪ ಮಾತನಾಡಿ, ಗುತ್ತಿಗೆದಾರರು ಕಾಮಗಾರಿ ಗುಣಮಟ್ಟ ಕಾಪಾಡಬೇಕು. ನಿಗದಿತ ಕಾಲಮಿತಿಯೊಳಗೆ ಕಟ್ಟಡ ನಿರ್ಮಾಣ ಕಾರ್ಯ ಪೂರ್ಣಗೊಳಸಬೇಕು. ಜನರು ಕಾಮಗಾರಿಗಳನ್ನು ವೀಕ್ಷಣೆ ಮಾಡುವುದರ ಜೊತೆಗೆ ಗುಣಮಟ್ಟವನ್ನು ಪರೀಕ್ಷಿಸಿ ಶಾಶ್ವತವಾದ ಕಾರ್ಯಕ್ರಮಗಳನ್ನು ಸದುಪಯೋಗ ಪಡಿಸಿಕೊಳ್ಳಬೇಕು ಎಂದರು.

ತಾಲ್ಲೂಕು ಪಂಚಾಯಿತಿ ಅಧ್ಯಕ್ಷೆ ಭಾರತಿ ಲಕ್ಷ್ಮಣಗೌಡ ಮಾತನಾಡಿ, ಮಕ್ಕಳಿಗೆ ಶಿಕ್ಷಣ ನೀಡುವುದಕ್ಕಿಂತ ಉತ್ತಮವಾದ ಆಸ್ತಿಯಿಲ್ಲ, ಶೈಕ್ಷಣಿಕ ಪ್ರಗತಿಗಾಗಿ ಇಂತಹ ಸಂಸ್ಥೆಗಳನ್ನು ಕಟ್ಟುವುದರಿಂದ ಮಕ್ಕಳ ಮುಂದಿನ ಭವಿಷ್ಯ ಉಜ್ವಲಗೊಳ್ಳಲಿದೆ ಎಂದರು.

ಮುಖಂಡ ಕೋರಮಂಗಲ ವೀರಪ್ಪ, ಮುಖಂಡ ಬೈರಾಪುರ ರಾಜಣ್ಣ ಮಾತನಾಡಿದರು. ತಾಲ್ಲೂಕು ಪಂಚಾಯಿತಿ ಉಪಾಧ್ಯಕ್ಷೆ ನಂದಿನಿ ವೆಂಕಟೇಶ್, ಸದಸ್ಯೆ ಅನ್ನಪೂರ್ಣ ಚಂದ್ರಪ್ಪ, ಗ್ರಾಮ ಪಂಚಾಯಿತಿ ಅಧ್ಯಕ್ಷೆ ಪಾರಿಜಾತಭೈರೇಗೌಡ, ಉಪಾಧ್ಯಕ್ಷ ಕೆ.ಮುನಿವೆಂಕಟಪ್ಪ,  ನಾಗಭೂಷಣ್, ಉಪತಹಶೀಲ್ದಾರ್ ಉದಯಕುಮಾರ್, ಜನಾರ್ದನ್ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.