ADVERTISEMENT

`ಶಾಸಕರಿಗೆ ತಾಲ್ಲೂಕಿನ ಅಭಿವೃದ್ಧಿಯ ಚಿಂತೆಯಿಲ್ಲ'

ಜೆಡಿಎಸ್ ಜನಜಾಗೃತಿ ಪಾದಯಾತ್ರೆಗೆ ಚಾಲನೆ

​ಪ್ರಜಾವಾಣಿ ವಾರ್ತೆ
Published 26 ನವೆಂಬರ್ 2012, 21:41 IST
Last Updated 26 ನವೆಂಬರ್ 2012, 21:41 IST

ಆನೇಕಲ್: `ರಾಜ್ಯದ ಬೊಕ್ಕಸಕ್ಕೆ ತಾಲ್ಲೂಕಿನಿಂದ ವಾರ್ಷಿಕ 2500ಕೋಟಿ ರೂ. ತೆರಿಗೆ ಪಾವತಿಯಾದರೂ ಇದರಲ್ಲಿ ಶೇ.25ರಷ್ಟು ಹಣವನ್ನು ತಾಲ್ಲೂಕಿನ ಅಭಿವೃದ್ಧಿಗೆ ವೆಚ್ಚ ಮಾಡಿಸಲು ಸಾಧ್ಯವಾಗದ ಸ್ಥಳೀಯ ಶಾಸಕ ಹಾಗೂ ಸಚಿವ ಎ.ನಾರಾಯಣ ಸ್ವಾಮಿ ಅವರು ರಾಜೀನಾಮೆ ನೀಡುವುದು ಸೂಕ್ತ' ಎಂದು ಜೆಡಿಎಸ್ ತಾಲ್ಲೂಕು ಅಧ್ಯಕ್ಷ ಟಿ.ಶ್ರೀನಾಥ್ ರೆಡ್ಡಿ ಟೀಕಿಸಿದರು.

ತಾಲ್ಲೂಕಿನ ಮುಗಳೂರಿನ ಬ್ಯಾಟರಾಯಸ್ವಾಮಿ ದೇವಾಲಯದಲ್ಲಿ ಪೂಜೆ ಸಲ್ಲಿಸಿ ಮತ್ತು ಜನಜಾಗೃತಿ ಪಾದಯಾತ್ರೆ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ನಾಲ್ಕು ಬಾರಿ ಶಾಸಕರಾಗಿ ಆಯ್ಕೆಯಾಗಿರುವ ನಾರಾಯಣ ಸ್ವಾಮಿ ಅವರು 1500ಕೋಟಿ ರೂ.ಗೂ ಹೆಚ್ಚು ಆಸ್ತಿ ಮಾಡಿದ್ದಾರೆ. ನಾರಾಯಣ ಸ್ವಾಮಿ ಅವರನ್ನು ನಂಬಿ ಜನ ಜನ ಹಾಕಿದರು, ಆದರೆ ತಾಲ್ಲೂಕಿನ ಅಭಿವೃದ್ಧಿ ಕುರಿತು ಕಿಂಚಿತ್ತೂ ಕಾಳಜಿ ಇಲ್ಲ ಎಂದು ದೂರಿದರು.

ಬಯೋಕಾನ್ ಕಂಪೆನಿಯು ಅಂತರ್ಜಲವನ್ನು ಕಲುಷಿತಗೊಳಿಸುತ್ತಿದೆ. ಪಟ್ಟಣ ಸೇರಿದಂತೆ ಹಲವಾರು ಗ್ರಾಮಗಳಲ್ಲಿ ಕುಡಿಯುವ ನೀರಿನ ಸಮಸ್ಯೆಯಿದೆ. ಬೆಂಗಳೂರಿನ ಪ್ರತಿಷ್ಠಿತ ಬಡಾವಣೆಯಲ್ಲಿ ವಾಸವಾಗಿರುವ ಸಚಿವರಿಗೆ ಸ್ಥಳೀಯ ಸಮಸ್ಯೆಗಳು ಅರಿವಿಗೆ ಬಂದಂತಿಲ್ಲ. ತಾಲ್ಲೂಕಿನ ಶಾಶ್ವತ ಕುಡಿಯುವ ನೀರಿನ ಯೋಜನೆಯಾಗಲಿ, ನೀರಾವರಿ ಯೋಜನೆಗಳಾಗಲಿ ಜಾರಿಗೊಳಿಸದೇ ಕೇವಲ ಚುನಾವಣೆ ರಾಜಕೀಯ ಮಾಡುತ್ತಿದ್ದಾರೆ ಎಂದು ಕುಟುಕಿದರು.

ರಾಜ್ಯದಲ್ಲಿ ಬಿಜೆಪಿ ಹಣ ಮಾಡುವುದನ್ನೇ ಕಾಯಕವಾಗಿ ಮಾಡಿಕೊಂಡು ಭ್ರಷ್ಟಾಚಾರದಲ್ಲಿ ತೊಡಗಿಕೊಂಡಿದೆ. ಮುಂದಿನ ಚುನಾವಣೆಯಲ್ಲಿ ಬಿಜೆಪಿಗೆ ಜನತೆಯೇ ತಕ್ಕ ಪಾಠ ಕಲಿಸಲಿದ್ದಾರೆ ಎಂದರು. ಜೆಡಿಎಸ್ ತಾಲ್ಲೂಕು ಮಹಾಪ್ರಧಾನ ಕಾರ್ಯದರ್ಶಿ ಪಟಾಪಟ್ ರವಿ ಮಾತನಾಡಿ, ನಾರಾಯಣ ಸ್ವಾಮಿ ಅವರು ಕ್ಷೇತ್ರದ ಶಾಸಕರಾದ ನಂತರ ನಡೆದಿರುವ ಅಭಿವೃದ್ಧಿ ಕಾರ್ಯಗಳ ಬಗ್ಗೆ ಶ್ವೇತಪತ್ರ ಹೊರಡಿಸಬೇಕು.  ತಾಲ್ಲೂಕಿನ ಅಭಿವೃದ್ಧಿ ಮಾಡಲು ಅವರಿಗೆ ಇಚ್ಛಾಶಕ್ತಿಯ ಕೊರತೆಯಿರುವುದರಿಂದ ತಾಲ್ಲೂಕು ಸಮಸ್ಯೆಗಳ ಆಗರವಾಗಿದೆ ಎಂದರು.

ಪಾದಯಾತ್ರೆಯ ನೇತೃತ್ವ ವಹಿಸಿರುವ ತಾ.ಪಂ ಮಾಜಿ ಸದಸ್ಯ ಡಿ.ಶ್ರೀನಿವಾಸ್ ಮಾತನಾಡಿ, ತಾಲ್ಲೂಕಿನ ಎಲ್ಲಾ ಗ್ರಾಮಗಳಲ್ಲಿ ಪಾದಯಾತ್ರೆ ನಡೆಸಿ, ತಾಲ್ಲೂಕಿನ ಸಮಸ್ಯೆಗಳ ಬಗ್ಗೆ ಜನರ ಗಮನ ಸೆಳೆಯಲಾಗುವುದು. ಅಂತಿಮವಾಗಿ ಜೆಡಿಎಸ್ ಅಧ್ಯಕ್ಷ ಕುಮಾರಸ್ವಾಮಿ ಅವರನ್ನು ಕರೆಯಿಸಿ ತಾಲ್ಲೂಕಿನಲ್ಲಿ ಬೃಹತ್ ಸಮಾವೇಶ ನಡೆಸಲಾಗುವುದು ಎಂದರು.

ಜೆಡಿಎಸ್ ಮುಖಂಡರಾದ ಕೂಗುರು ಮುನಿಯಪ್ಪ, ಸಿ.ಕೆ.ಜಗನ್ನಾಥ್, ಜಿಲ್ಲಾ ಮಾಜಿ ಕಾರ್ಯದರ್ಶಿ ನಾರಾಯಣ ಸ್ವಾಮಿ, ಎಸ್‌ಎಸ್‌ವಿ ಸುರೇಶ್, ಸರ್ದಾರ್ ವಲ್ಲಭಬಾಯಿ ಪಟೇಲ್ ವಿದ್ಯಾ ಸಂಸ್ಥೆಯ ರಾಮಸ್ವಾಮಿ ರೆಡ್ಡಿ, ಮಾರನಾಕನಹಳ್ಳಿ ಮುನಿರಾಜು ಮತ್ತಿತರರು ಹಾಜರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.