ADVERTISEMENT

ಶೋಷಿತರ ಪರ ಚಳವಳಿ ಬಲವರ್ಧನೆಗೆ ಸಲಹೆ

​ಪ್ರಜಾವಾಣಿ ವಾರ್ತೆ
Published 2 ಸೆಪ್ಟೆಂಬರ್ 2013, 8:55 IST
Last Updated 2 ಸೆಪ್ಟೆಂಬರ್ 2013, 8:55 IST

ಆನೇಕಲ್: `ಶೋಷಿತರು, ಯುವಕರು ಹಾಗೂ ಬಡವರ ಪರ ಚಿಂತಿಸುವ ಜನಪ್ರತಿನಿಧಿಗಳು ಕಡಿಮೆ ಇದ್ದಾರೆ. ಹಾಗಾಗಿ ಸಮಾಜದ ಎಲ್ಲಾ ವರ್ಗದವರ ಪರ ಧ್ವನಿ ಎತ್ತಲು ಚಳವಳಿಯನ್ನು ಬಲಪಡಿಸಬೇಕು' ಎಂದು ಪ್ರಜಾವಿಮೋಚನಾ ಚಳವಳಿ (ಎಸ್)  ರಾಜ್ಯ ಘಟಕದ ಅಧ್ಯಕ್ಷ ಆನೇಕಲ್ ಕೃಷ್ಣಪ್ಪ ಹೇಳಿದರು.

  ಬೆಂಗಳೂರು ದಕ್ಷಿಣ ತಾಲ್ಲೂಕು ಹೊಂಬದೇನಹಳ್ಳಿಯ ವೃತ್ತದಲ್ಲಿ ಪಿವಿಸಿ(ಎಸ್)ನ ನಾಲ್ಕು ಗ್ರಾಮ ಶಾಖೆಗಳ ಉದ್ಘಾಟನಾ ಸಮಾರಂಭವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಬಿಬಿಎಂಪಿ ಪ್ರದೇಶಕ್ಕೆ ಹೊಂದಿಕೊಂಡಂತೆ ಸಾವಿರಾರು ಎಕರೆ ಸರ್ಕಾರಿ ಜಮೀನು ಇದೆ. ಇದು ಭೂ ಮಾಫಿಯಾಗಳ ಕೈವಶದಲ್ಲಿವೆ. ಈ ಪ್ರದೇಶಗಳಲ್ಲಿ ಕೋಟಿಗಟ್ಟಲೆ ಬೆಲೆ ಇದೆ. ಶೋಷಿತ ಸಮುದಾಯ, ಸ್ಲಂಗಳಲ್ಲಿರುವ ಬಡಜನತೆ ಬಾಡಿಗೆ ಮನೆಗಳಲ್ಲಿ ವಾಸಮಾಡಿಕೊಂಡಿರುವುದು ನೋವಿನ ಸಂಗತಿ. ಸರ್ಕಾರಗಳು ಇಂತಹ ಕುಟುಂಬಗಳಿಗೆ ನಿವೇಶನ ನೀಡಬೇಕು ಎಂದು ಒತ್ತಾಯಿಸಿದರು.

`ಬಡಜನತೆಯ ಬಗ್ಗೆ ಚಿಂತಿಸುವ ಸರ್ಕಾರಗಳು ಅಧಿಕಾರಕ್ಕೆ ಬರಬೇಕು. ರಾಜ್ಯದ 224 ಎಂಎಲ್‌ಎ ಗಳಲ್ಲಿ  ಶೋಷಿತರು ಮತ್ತು ಬಡವರ ಅಭಿವೃದ್ಧಿಗೆ ಕೊಟ್ಟಿರುವ ಅನುದಾನಗಳನ್ನು ಸಮರ್ಪಕವಾಗಿ ಉಪಯೋಗಿಸದೇ ಕೇವಲ ಶೇ20 ರಿಂದ 30 ಮಾತ್ರ ಬಳಕೆಯಾಗಿ, ಉಳಿದ ಹಣ ವಾಪಸ್ಸು ಹೋಗುತ್ತಿದೆ. ಬಜೆಟ್‌ನಲ್ಲಿ ನಿಗದಿ ಪಡಿಸಿದ ಹಣವನ್ನು ಫಲಾನುಭವಿಗಳಿಗೆ ತಲುಪಿಸುವ ಕೆಲಸ ಮಾಡಬೇಕು' ಎಂದು ಅವರು ಹೇಳಿದರು. 

   ರಾಜ್ಯದ ಮುಖ್ಯಮಂತ್ರಿ ಸಿದ್ದರಾಮಯ್ಯ ಸರ್ಕಾರ ಬಡಜನತೆಗೆ ಉಪಯೋಗವಾಗಲಿ ಎಂದು ಉತ್ತಮ ಯೋಜನೆಗಳನ್ನು ಜಾರಿಗೊಳಿಸಿದ್ದಾರೆ. ಈ ಯೋಜನೆಗಳು ಜನತೆಗೆ ಸರಿಯಾಗಿ ತಲುಪುವಂತಾಗಬೇಕು. ಮುಖ್ಯಮಂತ್ರಿಗಳು ಮನಸ್ಸು ಮಾಡಿ ಬೆಂಗಳೂರು ಸುತ್ತ ಮುತ್ತಲ ಸರ್ಕಾರಿ ಜಮೀನನ್ನು  ಭೂ ಮಾಫಿಯಗಳಿಂದ ವಶಪಡಿಸಿಕೊಂಡು ಶೋಷಿತರಿಗೆ, ಬಡವರಿಗೆ ಉಚಿತವಾಗಿ, ಇಲ್ಲವೇ ಕಡಿಮೆ ದರದಲ್ಲಿ ಕೊಡಬೇಕು ಎಂದು ಒತ್ತಾಯಿಸಿದರು.

  `ಆರ್ಥಿಕವಾಗಿ ಹಿಂದುಳಿದ ಎಲ್ಲವರ್ಗದವರು ಅಂಬೇಡ್ಕರ್ ಅವರ ತತ್ವ ಸಿದ್ಧಾಂತಗಳಲ್ಲಿ ನಂಬಿಕೆ ಇಡಬೇಕು. ಅನ್ಯಾಯದ ವಿರುದ್ಧ ಹೋರಾಟ ಮಾಡುವ ಚೈತನ್ಯ ಬೆಳೆಸಿಕೊಳ್ಳಬೇಕು' ಎಂದು ಹೇಳಿದರು.

ಗ್ರಾಮ ಶಾಖೆಗಳ ನಾಮಫಲಕ ಅನಾವರಣ ಮಾಡಿದ  ಪಿವಿಸಿ (ಎಸ್) ರಾಜ್ಯ ಪ್ರಧಾನ ಕಾರ್ಯದರ್ಶಿ ಮುನಿಆಂಜಿನಪ್ಪ ಮಾತನಾಡಿ, ಡಾ. ಅಂಬೇಡ್ಕರ್ ಅವರ ಕನಸು ನನಸಾಗಬೇಕು. ಅದಕ್ಕಾಗಿ ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಎಲ್ಲ ಜಾತಿಯ ಶೋಷಿತರನ್ನು ಒಗ್ಗೂಡಿಸುವ ಕೆಲಸ ಮಾಡಿ ಅವರಿಗೆ ಸಾಮಾಜಿಕ ನ್ಯಾಯ ಕೊಡಿಸುವ ಪ್ರಯತ್ನವನ್ನು ಪ್ರಜಾವಿಮೋಚನಾ ಚಳವಳಿ ಸಮತವಾದವು ಮಾಡಿಕೊಂಡು ಬಂದಿದೆ. ಬಡವರ ಅಭಿವೃದ್ಧಿ ಬಗ್ಗೆ ಚಿಂತಿಸಲು, ಅವರಲ್ಲಿ ಪರಿವರ್ತನೆಯನ್ನು ಕಾಣಲು ಪ್ರಾಮಾಣಿಕ ಮನಸುಗಳ ಅವಶ್ಯಕತೆ ಇದೆ ಎಂದರು.

   ಬೈಲ ಬಸವನಗುಡಿ ಬಂಡೆ , ಕೋಳಿಫಾರಂ ಗೇಟ್, ಹೊಂಬದೇನಹಳ್ಳಿ, ವಿವರ್ಸ್‌ ಕಾಲೋನಿಯಲ್ಲಿ ನಾಲ್ಕು ಶಾಖೆಗಳನ್ನು ಭಾನುವಾರ ಪ್ರಾರಂಭಿಸಿಲಾಗಿದೆ. ಈ ಶಾಖೆಗಳು ಎಲ್ಲಾ ವರ್ಗದ ಜನತೆಯನ್ನು ಒಗ್ಗೂಡಿಸಿ, ಅವರಲ್ಲಿ ಜಾಗೃತಿ ಉಂಟುಮಾಡಲಾಗುವುದೆಂದು ಹೇಳಿದರು.

  ಪಿವಿಸಿ(ಎಸ್) ಯುವ ಘಟಕದ ಅಧ್ಯಕ್ಷ ಎಚ್. ವೈ ರಮೇಶ್ ಸಭೆಯ ಅಧ್ಯಕ್ಷತೆ ವಹಿಸಿದ್ದರು. ಪಿವಿಸಿ (ಎಸ್)ನ ಬಿಬಿಎಂಪಿ ಶಾಖೆ ಅಧ್ಯಕ್ಷ ಮುನಿಕೃಷ್ಣಪ್ಪ, ಪ್ರಚಾರ ಸಮಿತಿ ಅಧ್ಯಕ್ಷೆ ಭವಾನಿ ಪ್ರಸಾದ್, ಬೆಂಗಳೂರು ನಗರ ಜಿಲ್ಲಾಧ್ಯಕ್ಷ ಜಿ. ರಘೇಶ್, ಉಪಾಧ್ಯಕ್ಷ ಆನೇಕಲ್ ಶಂಕರ್, ಪ್ರಧಾನ ಕಾರ್ಯದರ್ಶಿ ಯಡವನಹಳ್ಳಿ ಕೃಷ್ಣಪ್ಪ, ದೊಡ್ಡ ತೋಗುರು ಗ್ರಾ.ಪಂ ಮಾಜಿ ಉಪಾಧ್ಯಕ್ಷ ಬಿ.ಎಂ. ಕೃಷ್ಣಪ್ಪ, ಚಂದ್ರಪ್ಪ, ಅಳ್ಳೇಳಪ್ಪ ಮುಂತಾದವರು ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.