ADVERTISEMENT

ಸಂಭ್ರಮದ ಚಂಪಕಧಾಮ ರಥೋತ್ಸವ

​ಪ್ರಜಾವಾಣಿ ವಾರ್ತೆ
Published 14 ಮಾರ್ಚ್ 2012, 19:30 IST
Last Updated 14 ಮಾರ್ಚ್ 2012, 19:30 IST

ಆನೇಕಲ್: ಬನ್ನೇರುಘಟ್ಟದ ಶ್ರೀ ಚಂಪಕಧಾಮ ಸ್ವಾಮಿ ಬ್ರಹ್ಮರಥೋತ್ಸವ ಬುಧವಾರ ಸಂಭ್ರಮ ಸಡಗರಗಳಿಂದ ನೆರವೇರಿತು.

ಮಧ್ಯಾಹ್ನದ ವೇಳೆಗೆ ಶ್ರೀ ಚಂಪಕಧಾಮ ಸ್ವಾಮಿ ಉತ್ಸವ ಮೂರ್ತಿಯನ್ನು ರಥದಲ್ಲಿ ತಂದು ಕೂರಿಸಲಾಯಿತು. ಅಲಂಕೃತಗೊಂಡಿದ್ದ ರಥಕ್ಕೆ ಸಾಂಪ್ರದಾಯಿಕ ಪೂಜೆಗಳನ್ನು ಸಲ್ಲಿಸಿದ ನಂತರ ಉತ್ಸವಕ್ಕೆ ಚಾಲನೆ ನೀಡಲಾಯಿತು. ರಥವು ದೇವಾಲಯದಿಂದ ಗ್ರಾಮದ ಪ್ರಮುಖ ಬೀದಿಗಳಲ್ಲಿ ಸಾಗಿತು.

ರಥವು ದೇವಾಲಯದ ಆವರಣದಿಂದ ಸಾಗುತ್ತಿದ್ದಂತೆ ಸಾವಿರಾರು ಭಕ್ತರು ಜಯಘೋಷ ಮಾಡಿ ಸಂಭ್ರಮಿಸಿದರು. ದವನ ಚುಚ್ಚಿದ ಬಾಳೆಹಣ್ಣುಗಳನ್ನು ತೇರಿನೆಡೆಗೆ ಎಸೆಯುವ ಮೂಲಕ ತಮ್ಮ ಭಕ್ತಿ ಸಮರ್ಪಿಸಿದರು.

ಹಿನ್ನೆಲೆ: ಈ ಚಂಪಕಧಾಮ ಸ್ವಾಮಿಗೆ ಸುಮಾರು ಸಾವಿರ ವರ್ಷಗಳಿಗೂ ಪ್ರಾಚೀನ ಇತಿಹಾಸವಿದೆ.
ಪಾಂಡವರು ಅಜ್ಞಾತ ವಾಸದಲ್ಲಿದ್ದಾಗ ವಹ್ನಿಗಿರಿಯ ಪಕ್ಕದಲ್ಲಿಯ ಈ ದೇವಾಲಯವನ್ನು ಕಟ್ಟಿದರೆಂದು ಪೌರಾಣಿಕ ಹಿನ್ನೆಲೆಯಿದೆ. ಬೆಟ್ಟದ ಮೇಲ್ಭಾಗದಲ್ಲಿ ಲಕ್ಷ್ಮೀ ನರಸಿಂಹಸ್ವಾಮಿ ದೇವಾಲಯವಿದೆ.

ಕ್ರಿ.ಶ 1295ರ ತಮಿಳು ದಾಖಲೆಗಳಲ್ಲಿ ಬನ್ನೇರುಘಟ್ಟದ ಬಗ್ಗೆ ಉಲ್ಲೇಖವಿದೆ. ವರದರಾಜ ಪುರವೆಂದೂ ಸಹ ಬನ್ನೇರುಘಟ್ಟವನ್ನು ಈ ದಾಖಲೆಯಲ್ಲಿ ಕರೆಯಲಾಗಿದೆ.

ದೇವಾಲಯದಲ್ಲಿ ಚಂಪಕಧಾಮ ಸ್ವಾಮಿಯು ಶ್ರೀದೇವಿ, ಭೂದೇವಿ ಸಮೇತರಾಗಿರುವ ಮೂಲ ಮೂರ್ತಿ ಇದೆ. ಈ ದೇವಾಲಯದ ಸುತ್ತಲೂ ಸಂಪಿಗೆ (ಚಂಪಕ) ಮರಗಳು ಹೆಚ್ಚಾಗಿದ್ದುದರಿಂದ ಈ ದೇವರನ್ನು ಚಂಪಕಧಾಮ ಸ್ವಾಮಿ ದೇವರೆಂದು ಕರೆಯಲಾಗಿದೆ.

ಶಾಸಕ ಎಂ.ಕೃಷ್ಣಪ್ಪ, ಜಿಲ್ಲಾ ಪಂಚಾಯಿತಿ ಸದಸ್ಯ ಜಯರಾಮ್, ತಹಶೀಲ್ದಾರ್ ಎಚ್.ಎನ್.ಶಿವೇಗೌಡ, ದೇವಾಲಯದ ಕಾರ್ಯ ನಿರ್ವಾಹಣಾಧಿಕಾರಿ ಓಂಕಾರಪ್ಪ ಮತ್ತಿತರರು ರಥೋತ್ಸವದಲ್ಲಿ ಪಾಲ್ಗೊಂಡಿದ್ದರು. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.