ADVERTISEMENT

ಸಂಶೋಧನಾ ಫಲ ರೈತರಿಗೆ ದೊರೆಯಲಿ

​ಪ್ರಜಾವಾಣಿ ವಾರ್ತೆ
Published 9 ಜುಲೈ 2012, 5:15 IST
Last Updated 9 ಜುಲೈ 2012, 5:15 IST
ಸಂಶೋಧನಾ ಫಲ ರೈತರಿಗೆ ದೊರೆಯಲಿ
ಸಂಶೋಧನಾ ಫಲ ರೈತರಿಗೆ ದೊರೆಯಲಿ   

ದೇವನಹಳ್ಳಿ: ಕೃಷಿ ಮತ್ತು ತೋಟಗಾರಿಕೆ ಕ್ಷೇತ್ರದಲ್ಲಿ ಆಗುವ ಇಳುವರಿ ಮತ್ತು ಗುಣಮಟ್ಟದ ಸಂಶೋಧನೆಗಳ ಫಲ ಎಲ್ಲಾ ರೈತರಿಗೂ ತಲುಪಿದ್ದೇ ಆದರೆ ಸಂಶೋಧನೆಗಳು ಸಾರ್ಥಕತೆ ಹೊಂದುತ್ತವೆ ಎಂದು ಬೆಂಗಳೂರಿನ ಐಐಎಚ್‌ಆರ್ ಕೇಂದ್ರದ ಹಿರಿಯ ವಿಜ್ಞಾನಿ ಡಾ.ವಿ.ನಾರಾಯಣ ಸ್ವಾಮಿ ಅಭಿಪ್ರಾಯಪಟ್ಟರು.

ತಾಲ್ಲೂಕಿನ ಅಗಲಕೋಟೆ ಗ್ರಾಮದ ಸಾವಯವ ಕೃಷಿಕ ಹಾಗೂ ಮಾಜಿ ಸಂಸದ ಸಿ.ನಾರಾಯಣ ಸ್ವಾಮಿ ಅವರ ಏಲಕ್ಕಿ ಬಾಳೆ ತೋಟದಲ್ಲಿ ಭಾರತೀಯ ತೋಟಗಾರಿಕಾ ಸಂಶೋಧನಾ ಸಂಸ್ಥೆ ಮತ್ತು ತೋಟಗಾರಿಕೆ ಇಲಾಖೆ ಸಂಯುಕ್ತಾಶ್ರಯದಲ್ಲಿ ಶನಿವಾರ ಏರ್ಪಡಿಸಿದ್ದ, ಸಾವಯವ ಏಲಕ್ಕಿ ಬಾಳೆ ಬೆಳೆಯ ಕ್ಷೇತ್ರೋತ್ಸವ ಹಾಗೂ ಬಾಳೆ ಬೆಳೆಯ ವಿಚಾರ ಸಂಕೀರಣದಲ್ಲಿ ಭಾಗವಹಿಸಿ ಅವರು ಮಾತನಾಡಿದರು.

ತೋಟಗಾರಿಕೆ ಬೆಳೆಗಳ ಬಗ್ಗೆ ರೈತರು ಹೆಚ್ಚಿನ ಆದ್ಯತೆ ನೀಡಿದರೆ ಕೃಷಿ ಲಾಭದಾಯಕವಾಗಲಿದೆ. ಈ ನಿಟ್ಟಿನಲ್ಲಿ ಭಾರತ ತೋಟಗಾರಿಕಾ ಸಂಶೋಧನಾ ಸಂಸ್ಥೆ 259 ವಿವಿಧ ತಂತ್ರಜ್ಞಾನಗಳನ್ನು ವಿವಿಧ ತೋಟಗಾರಿಕಾ ಬೆಳೆಗಳ ಮೇಲೆ ಪ್ರಯೋಗ ಕೈಗೊಳ್ಳುವ ಮೂಲಕ ನೂತನ ಅವಿಷ್ಕಾರ ತಂತ್ರಜ್ಞಾನಗಳನ್ನು ರೈತರಿಗೆ ಪರಿಚಯಿಸಿ ಉತ್ತೇಜನ ನೀಡಿದೆ. ಈ ಕ್ಷೇತ್ರೋತ್ಸವದಲ್ಲಿನ ಬಾಳೆ ಕೃಷಿಯಿಂದ ಇದು ಸಾಬೀತಾಗಿದೆ ಎಂದರು.

ಭಾರತೀಯ ತೋಟಗಾರಿಕಾ ಸಂಶೋಧನಾ ಸಂಸ್ಥೆ ಪ್ರಧಾನ ವಿಜ್ಞಾನಿ ಡಾ.ಆರ್.ಚಿತ್ತಿರೈ ಚಲವನ್ ಮಾತನಾಡಿ, ದೇಶದಲ್ಲಿಯೇ ತೋಟಗಾರಿಕೆ ಬೆಳೆಯನ್ನು ಉತ್ಪಾದಿಸುವಲ್ಲಿ ಕರ್ನಾಟಕ ರಾಜ್ಯ ಮುಂಚೂಣಿಯಲ್ಲಿದೆ. ಬಾಳೆ ಕೃಷಿ ಶೇ. 7.6 ರಷ್ಟು ಉತ್ಪಾದನೆಯಾಗುತ್ತಿದೆ. ಇನ್ನಷ್ಟು ಬೆಳೆಯುವ ವಿಪುಲ ಅವಕಾಶವನ್ನು ರೈತರು ಸದುಪಯೋಗ ಮಾಡಿಕೊಳ್ಳಬೇಕು ಎಂದರು.

ಮಾಜಿ ಸಂಸದ ಸಿ.ನಾರಾಯಣ ಸ್ವಾಮಿ ಮಾತನಾಡಿ, ಹೆಚ್ಚಿನ ಇಳುವರಿ ಪಡೆಯುವ ಏಕೈಕ ಉದ್ದೇಶದಿಂದ ರಾಸಾಯನಿಕ ಯುಕ್ತ ಗೊಬ್ಬರ ಮತ್ತು ಔಷಧಿ ಬೆಳೆಸಿ ನೆಲವನ್ನು ಸತ್ವಹೀನ ಮಾಡಲಾಗುತ್ತಿದೆ ಎಂದು ಆತಂಕ ವ್ಯಕ್ತಪಡಿಸಿದರು.

ಸಾವಯವ ಕೃಷಿಯಲ್ಲಿ ಕಡಿಮೆ ಖರ್ಚಿನಲ್ಲಿ ಹೆಚ್ಚು ಇಳುವರಿ ಪಡೆಯುವ ದಿಸೆಯಲ್ಲಿ ಸಂಶೋಧನೆಗಳು ಅಗತ್ಯವಿದ್ದು ಈಗ ಮತ್ತೊಮ್ಮೆ ನಾವು ಹಿಂದಿನ ಕೃಷಿ ಪದ್ದತಿಗೆ ಮರಳುವ ಸ್ಥಿತಿ ಬಂದೊದಗಿದೆ. ಇದರ ಪರಿಣಾಮ ಬಿಂಬಿಸಲು ಕ್ಷೇತ್ರೋತ್ಸವ ನಡೆಯುತ್ತಿರುವುದು ಉತ್ತಮ ಬೆಳವಣಿಗೆ ಎಂದು ಹೇಳಿದರು.

ಸಾವಯವ ಬಾಳೆ ಕೃಷಿ ನಿರ್ವಾಹಕ ರವೀಂದ್ರ ಮಾತನಾಡಿ, ಬಾಳೆ ಗೊನೆಯಲ್ಲಿ ಗೊನೆ ಕಟ್ಟುವ ವಿಧಾನದಲ್ಲಿ (ಬಂಚ್ ಬ್ಯಾಗಿಂಗ್) ಬಾಳೆಗೊನೆಯ ಹೂ ಮೊಗ್ಗನ್ನು ಕಡಿದು ತುದಿಯಿಂದ ಪೋಷಕಾಂಶ ಒದಗಿಸುವ ಕಡಿಮೆ ವೆಚ್ಚದ ವಿಧಾನವನ್ನು ಐಐಎಚ್‌ಆರ್ ವಿಜ್ಞಾನಿಗಳು ಅಭಿವೃದ್ಧಿ ಪಡಿಸಿದ್ದಾರೆ.
 
ಗೊನೆಯ ಪರಿಪೂರ್ಣ ಬೆಳೆ ಒಂದೇ ಗಾತ್ರದಲ್ಲಿ ಬೆಳವಣಿಗೆಯಾಗಿ ಹೆಚ್ಚು ಇಳುವರಿಗೆ ಕಾರಣವಾಗುತ್ತವೆ. ಸಾವಯವ ಮಾರುಕಟ್ಟೆಗೆ ವಿದೇಶಗಳಲ್ಲಿರುವಂತೆ, ಇಲ್ಲಿಯೂ ದೊರೆತರೆ ಸಾವಯವ ಕೃಷಿಗೆ ಹೆಚ್ಚು ಉತ್ತೇಜನ ದೊರೆಯುತ್ತದೆ ಎಂದರು.

ಐಐಎಚ್‌ಆರ್ ವಿಜ್ಞಾನಿ ಡಾ. ಎಸ್.ಸಿ.ಕೋಟೂರು, ಡಾ.ಎ.ಎನ್.ಗಣೇಶ್ ಮೂರ್ತಿ, ಡಾ.ಸಜು ಜಾರ್ಜ್ ಸೇರಿದಂತೆ ವಿವಿಧ ತಜ್ಞರು ರೈತರೊಂದಿಗೆ ಸಂವಾದ ನಡೆಸಿದರು.

ಮಾಜಿ ಶಾಸಕ ಜಿ.ಚಂದ್ರಣ್ಣ, ತಾ.ಪಂ ಅಧ್ಯಕ್ಷ ಬಿ.ಕೆ.ಶಿವಪ್ಪ, ಕೀಮ್ಸ ಅಧ್ಯಕ್ಷ ಬಿ.ಮುನೇಗೌಡ, ಪಿಎಲ್‌ಡಿ. ಬ್ಯಾಂಕ್ ಅಧ್ಯಕ್ಷ ಸಿ.ಮುನಿರಾಜು, ಕೃಷಿಕ ಸಮಾಜದ ಅಧ್ಯಕ್ಷ ಶ್ರಿನಿವಾಸ ಗೌಡ, ನಿರ್ದೇಶಕ ಎಚ್.ಎಂ.ರವಿಕುಮಾರ್, ತೋಟಗಾರಿಕೆ ಇಲಾಖೆ ಜಂಟಿ ನಿರ್ದೇಶಕ ಡಾ.ಎಸ್.ಅಶ್ವತ್ಥ್, ಐಐಎಚ್‌ಆರ್ ನ ಡಾ.ಎಸ್.ಡಿ ಡೋಯಿಜೋಡಾ, ತೋಟಗಾರಿಕೆ ನಿರ್ದೇಶಕ ಡಾ. ಸಿ.ಜೆ.ನಾಗರಾಜ್, ತೋಟಗಾರಿಕೆ ಇಲಾಖೆ ಸಹಾಯಕ ನಿರ್ದೇಶಕ ಎಂ.ಆರ್ ಚಂದ್ರಶೇಖರ್ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.