ADVERTISEMENT

ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಬೆಳ್ಳಿ ಹಬ್ಬದಲ್ಲಿ ಚಂದ್ರಶೇಖರ ಕಂಬಾರ ಆತಂಕ

​ಪ್ರಜಾವಾಣಿ ವಾರ್ತೆ
Published 23 ಫೆಬ್ರುವರಿ 2012, 19:30 IST
Last Updated 23 ಫೆಬ್ರುವರಿ 2012, 19:30 IST

ದೊಡ್ಡಬಳ್ಳಾಪುರ: ನಮ್ಮ ಸರ್ಕಾರಗಳು ವಿದೇಶಿ ಕಂಪನಿಗಳಿಗೆ ಸಾವಿರಾರು ಎಕರೆ ಭೂಮಿ, ಕೇಳಿದಷ್ಟು ಸೌಕರ್ಯಗಳನ್ನು ನೀಡುತ್ತವೆಯಾದರೂ ಆ ಕಂಪೆನಿಗಳಲ್ಲಿ ನಮ್ಮವರಿಗೆ ಉದ್ಯೋಗ ನೀಡದಿರುವ ಬಗ್ಗೆ ಮಾತ್ರ ಯಾರೂ ಚಿಂತನೆ ನಡೆಸುತ್ತಿಲ್ಲ ಎಂದು ಜ್ಞಾನಪೀಠ ಪ್ರಶಸ್ತಿ ಪುರಸ್ಕೃತಿ ಸಾಹಿತಿ ಡಾ.ಚಂದ್ರಶೇಖರ ಕಂಬಾರ ಆತಂಕ ವ್ಯಕ್ತಪಡಿಸಿದರು.


ಗುರುವಾರ ನಗರದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಬೆಳ್ಳಿ ಹಬ್ಬದ ಸಮಾರಂಭದಲ್ಲಿ ಭಾಗವಹಿಸಿ ಅವರು ಮಾತನಾಡಿದರು.

ವಿದೇಶಗಳಲ್ಲಿ ರಾಜಕೀಯ ಪಕ್ಷಗಳಿಗೆ  ಚುನಾವಣಾ ಸಂದರ್ಭದಲ್ಲಿ ಹೊಸ ಉದ್ಯೋಗಗಳ ಸೃಷ್ಟಿಯೇ ಮುಖ್ಯ ಅಜೆಂಡಾ ಆಗಿರುತ್ತದೆ. ಆದರೆ ನಮ್ಮಲ್ಲಿನ ರಾಜಕೀಯ ಪಕ್ಷಗಳಿಗೆ ಈ ಚಿಂತನೆಗಳೇ ಇಲ್ಲವಾಗಿದೆ. ವಿದ್ಯೆ ಕಲಿತವರಿಗೆಲ್ಲಾ ಉದ್ಯೋಗ ಕಲ್ಪಿಸುವಲ್ಲಿ ಅಧಿಕಾರಸ್ಥರು ಆದ್ಯತೆ ನೀಡಬೇಕು.

ವಿದ್ಯಾರ್ಥಿಗಳು ಸಹ ತಮ್ಮ ಉದ್ಯೋಗಗಳನ್ನು ತಾವೇ ಸೃಷ್ಟಿಸಿಕೊಳ್ಳುವಂತಹ ಶಕ್ತಿಯನ್ನು ಬೆಳೆಸಿಕೊಳ್ಳಬೇಕಾದ ಅನಿವಾರ್ಯತೆ ಇದೆ. ಜಗತ್ತಿನಲ್ಲೇ ನಾವು ನೀಡುತ್ತಿರುವ ಶಿಕ್ಷಣ ಉತ್ಕೃಷ್ಟವಾಗಿದೆ. ಇದನ್ನು ಸಮರ್ಥವಾಗಿ ಅರ್ಥಮಾಡಿಕೊಳ್ಳಬೇಕಾಗಿದೆ ಎಂದು ಅವರು ನುಡಿದರು.

ಕೇಂದ್ರದ ಮಾಜಿ ಸಚಿವ ಆರ್.ಎಲ್.ಜಾಲಪ್ಪ ಮಾತನಾಡಿ, ವಿಜ್ಞಾನ, ತಂತ್ರಜ್ಞಾನ ಕ್ಷೇತ್ರಗಳಲ್ಲಿ ಸಂಶೋಧನೆಗಳು ಕಣ್ಮರೆಯಾಗುತ್ತಿವೆ. ವಿಜ್ಞಾನ, ತಂತ್ರಜ್ಞಾನಗಳ ಅಗಾಧ ಬೆಳವಣಿಗೆಯ ಜೊತೆಜೊತೆಗೆ ಯುವ ಸಮುದಾಯದಲ್ಲಿ ಮೂಢನಂಬಿಕೆಯೂ ಬೆಳೆಯುತ್ತಿರುವುದು ಆತಂಕದ ವಿಚಾರ.

ಇವತ್ತು ಕುಡಿಯುವ ನೀರಿನ ತೀವ್ರ ಬಿಕ್ಕಟ್ಟು ಉಂಟಾಗಿದೆ. ಮಳೆ ಬಂದ್ಲ್ಲಿಲೆಂದು ದೇವರನ್ನು ಪೂಜಿಸಿದರೆ ಬರುವುದಿಲ್ಲ. ಮರ, ಗಿಡಗಳನ್ನು ಬೆಳೆಸಬೇಕೆಂಬ ಸಾಮಾನ್ಯ ಜ್ಞಾನ ಒರೆಗೆ ಹಚ್ಚಬೇಕಿದೆ ಎಂದರು.

ಇವತ್ತಿನ ವಿದ್ಯಾರ್ಥಿಗಳು ಕೇವಲ ಪಠ್ಯ ಪುಸ್ತಕಗಳಿಗೆ ಅಂಟಿಕೊಂಡು ಕುಳಿತುಕೊಳ್ಳದೆ ಪ್ರತಿದಿನ ಹೊರ ಪ್ರಪಂಚದಲ್ಲಿ ನಡೆಯುವ ವಿದ್ಯಮಾನಗಳ ಬಗೆ ಜ್ಞಾನ ವಿಸ್ತರಿಸಿಕೊಂಡು ತಿಳಿವಳಿಕೆಗಾಗಿ ದಿನ ಪತ್ರಿಕೆಗಳನ್ನು ಓದುವ ಹವ್ಯಾಸ ಬೆಳೆಸಿಕೊಳ್ಳಬೇಕು ಎಂದು ಹೇಳಿದರು.

ಜಿಲ್ಲಾ ಉಸ್ತುವಾರಿ ಹಾಗೂ ಕಾರ್ಮಿಕ ಸಚಿವ ಬಿ.ಎನ್.ಬಚ್ಚೇಗೌಡ ಮಾತನಾಡಿ, ತಾಲ್ಲೂಕಿನ ಗ್ರಾಮೀಣ ಪ್ರದೇಶದಲ್ಲಿ ಎರಡನೇ ಪದವಿ ಕಾಲೇಜು ಸ್ಥಾಪನೆ ಮಾಡಲಾಗುವುದು. ಇದರಿಂದ ಗ್ರಾಮೀಣ ಪ್ರದೆಶದಲ್ಲಿನ ಹೆಣ್ಣು ಮಕ್ಕಳು ಉನ್ನತ ಶಿಕ್ಷಣ ಪಡೆಯಲು ಸಾಧ್ಯವಾಗಲಿದೆ ಎಂದರು.

ರಾಜ್ಯದ ಉನ್ನತ ಶಿಕ್ಷಣದಲ್ಲಿ ಶೇ.12.5ರಷ್ಟು ಮಾತ್ರ ಇದೆ. ಈ ಬೆಳೆವಣಿಗೆ ಕನಿಷ್ಠ 20ರಷ್ಟು ಆಗಬೇಕು. ಇದಕ್ಕಾಗಿ ಪದವಿ ಹಂತದ ಕಾಲೇಜುಗಳಿಗೆ ಮೂಲಭೂತ ಸೌಕರ್ಯಗಳನ್ನು ಕಲ್ಪಿಸಿಕೊಡುವ ದೃಷ್ಟಿಯಲ್ಲಿ ಈಗಾಗಲೇ 160 ಕೋಟಿ ರೂಪಾಯಿಗಳಿಗೆ ಸಚಿವ ಸಂಪುಟ ಒಪ್ಪಿಗೆ ನೀಡಿದೆ.

ಬರುವ ಬಜೆಟ್‌ನಲ್ಲಿ 600 ಕೋಟಿ ರೂಪಾಯಿಗಳನ್ನು ಮೀಸಲಿಡಲು ತಿರ್ಮಾನಿಸಲಾಗಿದೆ ಎಂದು ಹೇಳಿದರು. ಇದೇ ಸಂದರ್ಭದಲ್ಲಿ ಕಂಬಾರ ಅವರಿಗೆ ನಗರ ಸಭೆ ವತಿಯಿಂದ ಪೌರಸನ್ಮಾನ ಮಾಡಲಾಯಿತು.

ಶಾಸಕ ಜೆ.ನರಸಿಂಹಸ್ವಾಮಿ ಬೆಳ್ಳಿಹಬ್ಬ ಸಮಾರಂಭದ ಅಧ್ಯಕ್ಷತೆ ವಹಿಸಿದ್ದರು. ವಿಧಾನ ಪರಿಷತ್ ಸದಸ್ಯ ಇ.ಕೃಷ್ಣಪ್ಪ, ರಾಜ್ಯ ರೇಷ್ಮೆ ಮಾರಾಟ ಮಂಡಳಿ ಅಧ್ಯಕ್ಷ ಕೆ.ಎಂ.ಹನುಮಂತರಾಯಪ್ಪ, ಜಿ.ಪಂ.ಅಧ್ಯಕ್ಷೆ ಭಾಗ್ಯಮ್ಮ, ತಾ.ಪಂ.ಅಧ್ಯಕ್ಷ ಎಚ್.ಎಸ್.ಅಶ್ವತ್ಥ್ ನಾರಾಯಣ ಕುಮಾರ, ಉಪಾಧ್ಯಕ್ಷೆ ಎಸ್.ಸುಮಾ ಮಂಜುನಾಥ್, ನಗರಸಭೆ ಅಧ್ಯಕ್ಷ ಎಂ.ಜಗದೀಶ್ ರೆಡ್ಡಿ, ಎಪಿಎಂಸಿ ಅಧ್ಯಕ್ಷ ಟಿ.ವಿ.ಲಕ್ಷ್ಮೀ ನಾರಾಯಣ್,ಉಪಾಧ್ಯಕ್ಷ ಕೆ.ಎಂ.ಕೃಷ್ಣಮೂರ್ತಿ, ಜಿ.ಪಂ.ಸದಸ್ಯರಾದ ಎನ್.ಹನುಮಂತೇ ಗೌಡ, ಎನ್.ಅರವಿಂದ್, ಉಮಾ ಗೋಪಾಲ್ ನಾಯ್ಕ, ಕೊಡಿಗೇಹಳ್ಳಿ ಗ್ರಾ.ಪಂ.ಅಧ್ಯಕ್ಷೆ ಹನುಮಕ್ಕ,ಉಪಾಧ್ಯಕ್ಷ ಪ್ರಕಾಶ್ ಕುಮಾರ್, ಪ್ರಾಂಶುಪಾಲ ಪ್ರೊ.ಎಸ್.ಪಿ.ರಾಜಣ್ಣ ಮುಂತಾದವರು ಭಾಗವಹಿಸಿದ್ದರು. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT