ದೇವನಹಳ್ಳಿ : ಆಧುನಿಕತೆ ಬೆಳೆದಂತೆ ಪ್ರತಿಯೊಂದು ಕುಟುಂಬ ಒತ್ತಡದಲ್ಲಿ ಜೀವನ ಸಾಗಿಸುತ್ತಿದೆ. ಮನುಷ್ಯ ತನ್ನ ನಿತ್ಯದ ಗೊಂದಲದ ಬದುಕಿನ ನಡುವೆ ಸುಖಕರ ನೆಮ್ಮದಿ ಕಾಣಲು ಭಗವದ್ಗೀತೆ ಪ್ರವಚನ ಒಂದು ಉತ್ತಮ ವೇದಿಕೆ ಎಂದು ಗೋಣೂರಿನ ಶ್ರಿ ಕೃಷ್ಣದೇವಿಜಿ ಮಠದ ಶ್ರಿ ರಾಮಕೃಷ್ಣ ಸ್ವಾಮೀಜಿ ಅಭಿಪ್ರಾಯ ಪಟ್ಟರು.
ನಗರದ ಶ್ರಿ ವೇಣುಗೋಪಾಲಸ್ವಾಮಿ ದೇವಾಲಯದ ಆವರಣದಲ್ಲಿ ಇತ್ತೀಚೆಗೆ ವಿಶ್ವ ಹಿಂದೂ ಪರಿಷತ್ ತಾಲ್ಲೂಕು ಘಟಕ ವತಿಯಿಂದ ಏರ್ಪಡಿಸಿದ್ದ ವಿಶ್ವ ಹಿಂದೂ ಪರಿಷತ್ತಿನ ಹಿತ ಚಂತಕ ಅಭಿಯಾನ ಕಾರ್ಯಕ್ರಮ ಉದ್ಘಾಟಿಸಿ ಭಗವದ್ಗೀತೆ ಬಗ್ಗೆ ಪ್ರವಚನ ನೀಡಿದರು.
ಶ್ರಿ ಕೃಷ್ಣ ಪರಮಾತ್ಮ ಎಲ್ಲಾ ಸಮುದಾಯದ ಆರಾಧ್ಯ ದೈವ. ಎಲ್ಲಾ ಸತ್ಕಾರ್ಯಗಳಲ್ಲಿ ತೊಡಗಿಸಿಕೊಂಡು ಸಮಾಜದ ಅಭಿವೃದ್ಧಿಗೆ ಯಾರು ತೊಡಗಿಸಿಕೊಳ್ಳುತ್ತಾರೊ, ಅಲ್ಲಿ ಇತರರಿಂದ ಅಡ್ಡಗಾಲು ಹಾಕುವ ಸಂಸ್ಕೃತಿ ಪುರಾಣ ಕಾಲದಿಂದಲೇ ಸಾಬೀತಾಗುತ್ತಾ ಬಂದಿದೆ. ಅದಕ್ಕೆ ಶ್ರಿ ಕೃಷ್ಣನಿಗೆ ಬಂದ ತೊಡರುಗಳೆ ಸಾಕ್ಷಿ.
ಬಾಲ್ಯದಿಂದಲೇ ಲೋಕ ಕಲ್ಯಾಣಕ್ಕಾಗಿ ಜಗತ್ತಿನಲ್ಲಿ ಒಳ್ಳೆಯದನ್ನು ಮಾಡುವ ದಿಸೆಯಲ್ಲಿ ಚಿಂತಿತವಾದ ಬಾಲಕೃಷ್ಣನು ಆರಂಭದಲ್ಲೇ ಲೋಕ ಕಂಟಕನಾಗಿದ್ದ. ಕಂಸನನ್ನು ವಧಿಸಿದ, ಕಾಳಿಂಗ ಮರ್ಧನ, ಪೂತನಿಯ ವಧೆ, ಜರಾಸಂಧ ಶಿಶುಪಾಲ ವಧೆ, ಮಹಾಭಾರತದ ದಾಯಾದಿ ಕದನ ಸೇರಿದಂತೆ ದುಷ್ಟರ ಸಂಹಾರ ಮಾಡುತ್ತಾ ಜಗತ್ತಿನ ಒಳಿತಿಗಾಗಿ ಜನ್ಮತಾಳಿದ ಮಹಾನ್ ಪುರುಷ .
ಮಹಾಭಾರತದಲ್ಲಿ ಕರ್ಮದ ಬಗ್ಗೆ ಅರ್ಜುನನಿಗೆ ನೀಡಿದ ವಿಶ್ಲೇಷಣೆ(ಭಗವದ್ಗೀತೆ ಭೋದನೆ) ಅಮರವಾಗಿದೆ. ಅಂತಹ ಶ್ಲೋಕದ ಅರ್ಥವನ್ನು ವಿವರಿಸಿ ಹೇಳುವ ಪರಿಪಾಠ ಪ್ರಸ್ತುತ ಸಮಾಜದ ಪೊಷಕರು ಮಾಡಬೇಕಿದೆ ಎಂದರು.
ವಿಶ್ವ ಹಿಂದೂ ಪರಿಷತ್ತಿನ ಜಿಲ್ಲಾ ಸಹ ಕಾರ್ಯದರ್ಶಿ ಕೇಶವಮೂರ್ತಿ, ಜಿಲ್ಲಾ ಕಾರ್ಯ ನಿರ್ವಾಹಕ ಸಂಯೋಜಕ ದೊಡ್ಡೇಗೌಡ, ಜಿಲ್ಲಾ ಖಜಾಂಚಿ ಮಧು ಸೂದನ್, ತಾಲ್ಲೂಕು ಅಧ್ಯಕ್ಷ ಶಿವಪ್ರಸಾದ್, ಉಪಾಧ್ಯಕ್ಷ ಪಿ.ವಿಶ್ವನಾಥ್, ಟೌನ್ ಅಧ್ಯಕ್ಷ ರಾಜಮಣಿ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.