ADVERTISEMENT

ಸೌಕರ್ಯವಿಲ್ಲದೆ ನಲುಗಿದ ನೀಲೇರಿ

​ಪ್ರಜಾವಾಣಿ ವಾರ್ತೆ
Published 1 ಅಕ್ಟೋಬರ್ 2011, 19:30 IST
Last Updated 1 ಅಕ್ಟೋಬರ್ 2011, 19:30 IST

ದೇವನಹಳ್ಳಿ: 30 ವರ್ಷವಾದರೂ ದುರಸ್ತಿಯಾಗದ ರಸ್ತೆ, ವಿಲೇವಾರಿಯಾಗದ ತ್ಯಾಜ್ಯದಿಂದ ಹರಡಿರುವ ದುರ್ನಾತ, ಕುಡಿಯುವ ನೀರಿಗಾಗಿ ಆಹಾಕಾರ, ಇದು ದೇವನಹಳ್ಳಿಯಿಂದ ಕೇವಲ 2 ಕಿ.ಮೀ ದೂರವಿರುವ ನೀಲೇರಿ ಗ್ರಾಮದ ವಾಸ್ತವ ಪರಿಸ್ಥಿತಿ.

ಪುರಸಭೆ ವ್ಯಾಪ್ತಿಯಲ್ಲಿನ 10 ನೇ ವಾರ್ಡಿಗೆ ಬರುವ ನೀಲೇರಿ ಗ್ರಾಮದಲ್ಲಿ 190 ಕುಟುಂಬಗಳು ವಾಸವಾಗಿದೆ. 1500 ಜನಸಂಖ್ಯೆ ಹೊಂದಿರುವ ಈ ಗ್ರಾಮದಲ್ಲಿ ಶೇ.75 ರಷ್ಟು ಗ್ರಾಮಸ್ಥರು ಕೂಲಿಯನ್ನೇ ವೃತ್ತಿಯಾಗಿಸಿಕೊಂಡಿದ್ದಾರೆ. ಶೇ.25 ರಷ್ಟು ಮಂದಿ ತರಕಾರಿ ಪುಷ್ಪ ಕೃಷಿ ಹೈನುಗಾರಿಕೆಯಲ್ಲಿ ತೊಡಗಿರುವ ಇವರು ಮೂಲ ಸೌಕರ್ಯದಿಂದ ಬೇಸತ್ತಿದ್ದಾರೆ.

ಗುಂಡಿಗಳ ತಾಣವಾಗಿರುವ ರಸ್ತೆ: ದೊಡ್ಡಬಳ್ಳಾಪುರದಿಂದ ನೀರೆಲೆ ಗ್ರಾಮಕ್ಕೆ ಸಂಪರ್ಕಿಸುವ ರಸ್ತೆ 30 ವರ್ಷ ಕಳೆದರೂ ಸಹ ದುರಸ್ತಿ ಭಗ್ಯ ಕಂಡಿಲ್ಲ. ಮಳೆ ಬಂದರೆ ಕೆಸರುಗದ್ದೆಯಾಗುವ ಈ ಗ್ರಾಮದ ರಸ್ತೆಯಲ್ಲಿ ಸಂಚರಿಸುವುದು ಸವಾಲೇ ಸರಿ. ಪರ‌್ಯಾಯ ರಸ್ತೆ ಇದ್ದರೂ ಹೆಚ್ಚುವರಿ ಎರಡು ಕಿ.ಮೀ ಸಂಚರಿಸಿ ಪಟ್ಟಣಕ್ಕೆ ಬರಬೇಕಿದೆ. ಬಸ್ ವ್ಯವಸ್ಥೆ ಇಲ್ಲದ ಗ್ರಾಮದಿಂದ 120 ಕ್ಕೂ ಹೆಚ್ಚು ವಿದ್ಯಾರ್ಥಿಗಳು ವಿವಿಧೆಡೆ ಶಾಲಾ ಕಾಲೇಜಿಗೆ ತೆರಳುತ್ತಾರೆ ಬಸ್ ಹಾಗೂ ವಾಹನ ವ್ಯವಸ್ಥೆ ಇಲ್ಲದ ಇವರ ಪರಿಸ್ಥಿತಿ ನಿಜಕ್ಕೂ ಘೋರ.

ಚರಂಡಿ ತ್ಯಾಜ್ಯ ನಿರ್ವಹಣೆ ನಿರ್ಲಕ್ಷ್ಯ: ಗ್ರಾಮದಲ್ಲಿ ಉತ್ತಮ ಸಿಮೆಂಟ್ ರಸ್ತೆ ನಿರ್ಮಿಸಲಾಗಿದೆ ಅಲ್ಲದೆ ಚರಂಡಿ ಕಾಮಗಾರಿ ಶೇ. 50 ರಷ್ಟು ಮುಗಿದಿದೆ ಇನ್ನಷ್ಟು ಚರಂಡಿ ದುರಸ್ತಿಯಾಗಬೇಕು ಆದರೆ ನಿರ್ಮಾಣವಾಗಿರುವ 3 ಅಡಿ ಚರಂಡಿಯಲ್ಲಿ ಅರ್ಧಭಾಗ ತ್ಯಾಜ್ಯ ನೀರು ಸಮರ್ಪಕವಾಗಿ ಹರಿಯದೆ ರೋಗಗಳ ಕೇಂದ್ರ ಸ್ಥಾನವಾಗುತ್ತಿದೆ.

ಪುರಸಭೆ ವ್ಯಾಪ್ತಿಯಲ್ಲಿದ್ದರೂ ಪಟ್ಟಣದಲ್ಲಿ ಪ್ರತಿನಿತ್ಯ ಚರಂಡಿಯಲ್ಲಿನ ತ್ಯಾಜ್ಯ ನಿರ್ವಹಣೆ ಮಾಡುವ ಪೌರ ಕಾರ್ಮಿಕರು 15 ದಿನಗಳೊಗೊಮ್ಮೆ ಬಂದು ಹಾಜರಾಗಿ ಹೋಗುತ್ತಾರೆ ಎಂಬುದು ಗ್ರಾಮಸ್ಥರ ದೂರು.

ವಿದ್ಯುತ್ ಅಭಾವ:  ಗ್ರಾಮಕ್ಕೆ ಕುಡಿಯುವ ನೀರಿಗಾಗಿ ಒಂದು ಕೊಳವೆಬಾವಿ ಇದೆ ಆದರೆ ಅಕಾಲಿಕ  ಲೋಡ್ ಶೆಡ್ಡಿಂಗ್‌ನಿಂದಾಗಿ ನೀರಿನ ಸಮಸ್ಯೆ ಬಗೆಹರಿಯುತ್ತಿಲ್ಲ ಎನ್ನುತ್ತಾರೆ ಸ್ಥಳೀಯ ಮಹಿಳೆಯರು.

ಕಳೆದ ಹದಿನಾರು ವರ್ಷಗಳಿಂದ ಗ್ರಾಮದ ಯಾರೊಬ್ಬರಿಗೂ ನಿವೇಶನ ವಿತರಣೆಯಾಗಿಲ್ಲ. ಗ್ರಾಮದಲ್ಲಿ ಸರ್ಕಾರಿ ಭೂಮಿ ಸಾಕಷ್ಟಿದೆ.

ಪ್ರಸ್ತುತ ಗ್ರಾಮಕ್ಕೆ 120 ರಿಂದ 200 ನಿವೇಶನ ಕಡುಬಡವರಿಗೆ ಅವಶ್ಯಕತೆ ಇದೆ. ಹೆಚ್ಚುತಿರುವ ಜನಸಂಖ್ಯೆಗೆ ಅನುಗುಣವಾಗಿ 10 ಸಾವಿರ ಲೀಟರ್ ಸಾಮರ್ಥ್ಯದ ಕುಡಿಯುವ ನೀರಿನ ಓವರ್‌ಹೆಡ್ ಟ್ಯಾಂಕ್ ಬೇಕಾಗಿದೆ ಎಂದು ಗ್ರಾಮದ ಗೋಪಿನಾಥ್ ನಾರಾಯಣಸ್ವಾಮಿ, ಮುನಿಯಪ್ಪ ತಿಳಿಸುತ್ತಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.