ADVERTISEMENT

ಹಳ್ಳಿಗಳಲ್ಲಿ ಆರ್ಥಿಕ ಸಾಕ್ಷರತೆ ಬೆಳೆಸಬೇಕು

​ಪ್ರಜಾವಾಣಿ ವಾರ್ತೆ
Published 18 ಆಗಸ್ಟ್ 2011, 19:30 IST
Last Updated 18 ಆಗಸ್ಟ್ 2011, 19:30 IST
ಹಳ್ಳಿಗಳಲ್ಲಿ ಆರ್ಥಿಕ ಸಾಕ್ಷರತೆ ಬೆಳೆಸಬೇಕು
ಹಳ್ಳಿಗಳಲ್ಲಿ ಆರ್ಥಿಕ ಸಾಕ್ಷರತೆ ಬೆಳೆಸಬೇಕು   

ಆನೇಕಲ್: ಹಳ್ಳಿಗಳೇ ದೇಶದ ಬೆನ್ನೆಲುಬು, ಗ್ರಾಮಾಂತರ ಪ್ರದೇಶದ ಆರ್ಥಿಕ ಅಭಿವೃದ್ಧಿಯಿಂದ ದೇಶ ಪ್ರಗತಿಯತ್ತ ಸಾಗುತ್ತದೆ. ಹಾಗಾಗಿ ಗ್ರಾಮೀಣ ಭಾಗದ ಜನರಲ್ಲಿ ಆರ್ಥಿಕ ಸಾಕ್ಷರತೆ ಬೆಳೆಸುವ ಸಲುವಾಗಿ ಸಿಂಡಿಕೇಟ್ ಬ್ಯಾಂಕ್ ರಾಜ್ಯಾದ್ಯಂತ ಕಾರ್ಯಕ್ರಮಗಳನ್ನು ರೂಪಿಸಿದೆ ಎಂದು ಬ್ಯಾಂಕ್‌ನ ಕಾರ್ಯ ನಿರ್ವಾಹಕ ನಿರ್ದೇಶಕ ಎಂ.ಆಂಜನೇಯ ಪ್ರಸಾದ್ ನುಡಿದರು.

ಅವರು ತಾಲ್ಲೂಕಿನ ಮಾಯಸಂದ್ರದಲ್ಲಿ ಸಿಂಡಿಕೇಟ್ ಬ್ಯಾಂಕ್ ಮತ್ತು ನಬಾರ್ಡ್ ಸಂಯುಕ್ತಾಶ್ರಯದಲ್ಲಿ ಆಯೋಜಿಸಿದ್ದ ಯಕ್ಷಗಾನದ ಮೂಲಕ ಆರ್ಥಿಕ ಸಾಕ್ಷರತೆ ಅಭಿಯಾನ ಕಾರ್ಯಕ್ರಮದ ಉದ್ಘಾಟನೆ ನೆರವೇರಿಸಿ ಮಾತನಾಡಿದರು.

ಪ್ರತಿ ಎರಡು ಸಾವಿರ ಜನಸಂಖ್ಯೆಯಿರುವ ಗ್ರಾಮಗಳಲ್ಲಿ ಸಿಂಡಿಕೇಟ್ ಬ್ಯಾಂಕ್‌ನ ಶಾಖೆಗಳನ್ನು ತೆರೆಯಲಾಗಿದೆ. ಜನರು ಖಾತೆಗಳನ್ನು ತೆರೆದು ಉಳಿತಾಯ ಮಾಡುವಂತಾಗಲೀ ಎಂಬ ಉದ್ದೇಶದಿಂದ ಹಾಗೂ ಅರ್ಹರಿಗೆ ಸಾಲ ಸೌಲಭ್ಯಗಳನ್ನು ನೀಡಲು ಸುಲಭವಾಗುವಂತೆ ಬ್ಯಾಂಕಿಂಗ್ ಕ್ಷೇತ್ರವನ್ನು ವಿಸ್ತರಿಸಲಾಗಿದೆ ಎಂದು ನುಡಿದರು.

ಸಾಲ ಸೌಲಭ್ಯಗಳನ್ನು ಪಡೆದವರು ಸಕಾಲಕ್ಕೆ ಮರುಪಾವತಿ ಮಾಡಿ, ತಾವು ಹಾಗೂ ಬ್ಯಾಂಕ್ ಬೆಳೆಯಲು ಸಹಕರಿಸಬೇಕು ಎಂದರು. ನವೀಕರಿಸಬಹುದಾದ ಇಂಧನಗಳನ್ನು ರೈತರು ಬಳಸಲು ಬ್ಯಾಂಕ್ ಪ್ರೋತ್ಸಾಹಿಸುತ್ತಿದೆ. ದೀಪ, ಬಿಸಿನೀರು ಮತ್ತಿತರ ವ್ಯವಸ್ಥೆಗಾಗಿ ಸಾಲ ಸೌಲಭ್ಯಗಳನ್ನು ನೀಡಲಾಗುತ್ತದೆ. ಇದಕ್ಕೆ ಪ್ರೋತ್ಸಾಹ ಧನ ಸಹ ನೀಡಲಾಗುವುದು ಎಂದು ತಿಳಿಸಿದರು.

ಬ್ಯಾಂಕ್‌ನ ವ್ಯವಹಾರಗಳ ಬಗ್ಗೆ ಅರಿವು ಮೂಡಿಸಲು ಕರ್ನಾಟಕ ಕಲಾ ದರ್ಶಿನಿ ತಂಡದ ಕಲಾವಿದರು ಯಕ್ಷಗಾನವನ್ನು ಗ್ರಾಮಗಳಲ್ಲಿ ಪ್ರದರ್ಶಿಸುತ್ತಿದ್ದಾರೆ. ಇದರ ಸದುಪಯೋಗವನ್ನು ಸಹ ಪಡೆದುಕೊಳ್ಳಬೇಕು ಎಂದು ನುಡದರು.

ನಬಾರ್ಡ್‌ನ ಮುಖ್ಯ ಮಹಾಪ್ರಭಂದಕ ಎಸ್.ಎನ್.ಎ.ಜಿನ್ನಾ ಅವರು ಮಾತನಾಡಿ ಸಿಂಡಿಕೇಟ್ ಬ್ಯಾಂಕ್ ನಿಜವಾದ ರೈತಸ್ನೇಹಿ ಬ್ಯಾಂಕ್ ಹಾಗಾಗಿ ನಬಾರ್ಡ್ ಸಿಂಡಿಕೇಟ್ ಬ್ಯಾಂಕ್‌ನೊಂದಿಗೆ ಒಪ್ಪಂದ ಮಾಡಿಕೊಂಡು ರೈತರಿಗಾಗಿ ಹಲವಾರು ಕಾರ್ಯಕ್ರಮಗಳನ್ನು ರೂಪಿಸಲಾಗುತ್ತಿದೆ. ಕಡಿಮೆ ದರದಲ್ಲಿ ಕೃಷಿ ಸಾಲ, ಕಿಸಾನ್ ಕ್ರೆಡಿಟ್‌ಕಾರ್ಡ್ ಸೇರಿದಂತೆ ಹಲವಾರು ಸೌಲಭ್ಯಗಳನ್ನು ನೀಡಲಾಗುತ್ತಿದೆ. ಸೌಲಭ್ಯ ಪಡೆಯಲು ಪ್ರತಿ ಕುಟುಂಬವೂ ಬ್ಯಾಂಕ್ ಖಾತೆ ಹೊಂದಿರಬೇಕು ಎಂದರು.

ಬೆಳೆಸಾಲ, ವಾಹನ ಸಾಲ, ಕೃಷಿ ಪರಿಕರಗಳನ್ನು ಕೊಳ್ಳಲು ಸಾಲ ಸೌಲಭ್ಯ ನೀಡಲಾಗುತ್ತಿದೆ. ಇದಕ್ಕೆ ನಬಾರ್ಡ್ ನೆರವು ನೀಡುತ್ತಿದೆ. ರೈತರು ಆಧುನಿಕ ತಂತ್ರಜ್ಞಾನವನ್ನು ಬಳಸಿಕೊಂಡು ಪ್ರಗತಿ ಹೊಂದಬೇಕು ಎಂದು ನುಡಿದರು.

ಸೌರ ವ್ಯವಸ್ಥೆಯ ಮೂಲಕ ರೈತರು ಪಡೆಯಬಹುದಾದ ಸೌಲಭ್ಯಗಳ ಬಗ್ಗೆ ಕೋಟಕ್ ಸಂಸ್ಥೆಯ ಶ್ರೀನಿವಾಸರೆಡ್ಡಿ ಅವರು ಪ್ರಾತ್ಯಕ್ಷಿಕೆಗಳನ್ನು ಪ್ರದರ್ಶಿಸಿದರು.ಉಳಿತಾಯ, ಮರುಪಾವತಿ, ಸ್ವಾವಲಂಬನೆ, ಸಮಾಲೋಚನೆ ಸೇರಿದಂತೆ ಆರ್ಥಿಕ ಸಾಕ್ಷರತೆ ಬಗ್ಗೆ ಜಾಗೃತಿ ಮೂಡಿಸುವ ವಿವಿಧ ಸಂದರ್ಭಗಳನ್ನು `ಆರ್ಥಿಕ ಸಂಧಾನ~ ಎಂಬ ಯಕ್ಷಗಾನ ನಾಟಕದ ಮೂಲಕ ಕಲಾವಿದರು ಪ್ರದರ್ಶಿಸಿದರು.

ಸಿಂಡಿಕೇಟ್ ಬ್ಯಾಂಕ್ ಮಹಾಪ್ರಬಂಧಕರಾದ ಜಿ.ರಾಮನಾಥನ್, ಕೆ.ಸಂತೋಷ್‌ಕಾಮತ್, ಪ್ರಾದೇಶಿಕ ಕಚೇರಿಯ ಹಿರಿಯ ವ್ಯವಸ್ಥಾಪಕ ಹೆಚ್.ಜಿ.ಕಲ್ಲೇಶ್, ಕ್ಷೇತ್ರೀಯ ಕಚೇರಿಯ ಸಹಾಯಕ ಮಹಾಪ್ರಭಂದಕ ಶ್ರೀಹರಿ, ಅತ್ತಿಬೆಲೆ ಶಾಖೆಯ ವ್ಯವಸ್ಥಾಪಕ ಬಸವಯ್ಯ, ಮಾಯಸಂದ್ರ ಶಾಖೆಯ ವ್ಯವಸ್ಥಾಪಕ ಕೆ.ಆರ್.ಉಮೇಶ್ ಮತ್ತಿತರರು ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.