ADVERTISEMENT

ಹಾಲು ಉತ್ಪಾದಕರ ಹಿತಕ್ಕೆ ಒಕ್ಕೂಟ ಬದ್ಧ

​ಪ್ರಜಾವಾಣಿ ವಾರ್ತೆ
Published 1 ಅಕ್ಟೋಬರ್ 2012, 3:30 IST
Last Updated 1 ಅಕ್ಟೋಬರ್ 2012, 3:30 IST

ದೇವನಹಳ್ಳಿ: ಹಾಲಿಗೆ ಪ್ರತಿ ಲೀಟರ್‌ಗೆ 60 ಪೈಸೆ ಇಳಿಕೆ ಮಾಡಿರುವುದರಿಂದ ಹಾಲು ಉತ್ಪಾದಕರ ಹಿತಕ್ಕೆ ಯಾವುದೇ ಧಕ್ಕೆ ಉಂಟಾಗಿಲ್ಲ ಎಂದು ಬಮುಲ್ ನಿರ್ದೇಶಕ ಸೋಮಣ್ಣ ತಿಳಿಸಿದರು.

ತಾಲ್ಲೂಕಿನ ಸಾವಕನಹಳ್ಳಿ ಹಾಲು ಉತ್ಪಾದಕರ ಸಹಕಾರ ಸಂಘದ ಸರ್ವ ಸದಸ್ಯರ ವಾರ್ಷಿಕ ಸಭೆಯ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ರಾಜ್ಯದ ವಿವಿಧ ಒಕ್ಕೂಟಗಳಲ್ಲಿ ನೀಡುತ್ತಿರುವ ಹಾಲಿನ ದರಕ್ಕಿಂತ ಬಮುಲ್ ಪ್ರತಿ ಲೀಟರ್‌ಗೆ 20.60ರೂಪಾಯಿ ನೀಡುತ್ತಿದೆ ಎಂದರು.

ಹಾಲಿನ ಪೂರೈಕೆ ಮತ್ತು ಬೇಡಿಕೆಯಲ್ಲಿನ ಕೆಲ ವ್ಯತ್ಯಾಸ ಮತ್ತು ಹಾಲಿನಲ್ಲಿ ಉತ್ಪಾದನೆಯಾಗುತ್ತಿರುವ ಪೌಡರ್ ಹಾಗೂ ಬೆಣ್ಣೆಯಂತಹ ದಿನಬಳಕೆ ವಸ್ತುಗಳಿಗೆ ಮಾರುಕಟ್ಟೆಯಲ್ಲಿ ಬೆಲೆ ಇಳಿಮುಖವಾಗಿದೆ. ಆದ ಕಾರಣ ಲೀಟರ್ ಹಾಲಿನ ದರದಲ್ಲಿ ಬೆಲೆ ಇಳಿಕೆ ಮಾಡಲಾಗಿದೆ ಎಂದು ಅವರು ಹೇಳಿದರು.

ಹೆಚ್ಚುತ್ತಿರುವ ಹಾಲಿನ ಉತ್ಪಾದನೆಗೆ ಈಗಿರುವ ಮಾರುಕಟ್ಟೆ ವ್ಯವಸ್ಥೆ ಸಮರ್ಪಕವಾಗಿದೆ. ಆದರೆ ಹೊರರಾಜ್ಯದಿಂದ ಬರುತ್ತಿರುವ ಹಾಲಿನ ಸರಬರಾಜುಗೆ ಸರ್ಕಾರ ಕಡಿವಾಣ ಹಾಕಬೇಕು. ಇದು ಒಕ್ಕೂಟದಿಂದ ಸಾಧ್ಯವಿಲ್ಲದ ಕೆಲಸ. ಸರ್ಕಾರ ರಕ್ಷಣಾತ್ಮಕವಾಗಿ ಗಡಿಭಾಗದ ಪ್ರಮುಖ ಮಾರ್ಗಗಳಲ್ಲಿ ಕಣ್ಗಾವಲಿಡಬೇಕು ಎಂದು ಒತ್ತಾಯಿಸಿದರು.

ಹಾಲು ಉತ್ಪಾದಕರಿಗೆ ಒಕ್ಕೂಟವು ಸಾಲ ಯೋಜನೆ, ಪಶು ಮೇವು ಬೆಳವಣಿಗೆಗೆ ಮತ್ತು ಪಶು ಸಾಕಾಣಿಕೆಗಾಗಿ ಶೆಡ್ ನಿರ್ಮಾಣ ಹಾಗೂ ಮೇವು ಕಟಾವು ಯಂತ್ರ, ಆಕಸ್ಮಿಕವಾಗಿ ಸಾವನ್ನಪ್ಪಿದ ಪಶುಗಳಿಗೆ 30 ರಿಂದ 40 ಸಾವಿರ ರೂಪಾಯಿಗಳವರೆಗೆ ವಿಮೆ ಹಣ, ಉತ್ಪಾದಕರು ಮರಣ ಹೊಂದಿದರೆ 50 ಸಾವಿರ ಹಣ ಮತ್ತು ಉತ್ಪಾದಕರ ವಿದ್ಯಾರ್ಥಿಗಳಿಗೆ  ಶೈಕ್ಷಣಿಕ ಪ್ರೋತ್ಸಾಹಧನ ನೀಡಲಾಗುತ್ತಿದೆ ಎಂದರು.

ಎಂ.ಪಿ.ಸಿ.ಎಸ್ ಅಧ್ಯಕ್ಷ ಚಿಕ್ಕನಾರಾಯಣ ಸ್ವಾಮಿ ಅಧ್ಯಕ್ಷತೆ ವಹಿಸಿದ್ದರು. ಒಕ್ಕೂಟ ಉಪ ವ್ಯವಸ್ಥಾಪಕ ವಿ.ಜೆ.ನಾಯ್ಕ, ವಿಸ್ತರಣಾಧಿಕಾರಿ ನಾಗರಾಜ್, ಕೃಷಿಕ ಸಮಾಜ ನಿರ್ದೇಶಕ ಎಸ್.ಪಿ.ಮುನಿರಾಜು, ಹಾಲು ಉತ್ಪಾದಕರ ನೌಕರರ ಸಂಘದ ಅಧ್ಯಕ್ಷ ವೆಂಕಟೇಶ್,ಜಿ.ಕುಮಾರ್, ನಿರ್ದೇಶಕ ನಾರಾಯಣಪ್ಪ, ಮಾಜಿ ಅಧ್ಯಕ್ಷ ರಾಜಶೇಖರ್, ಮುನಿರಾಜು, ಸದಸ್ಯ ಗೋಪಾಲ ಸ್ವಾಮಿ, ಕೆ.ಮಂಜುನಾಥ್, ಟಿ.ಆರ್.ಮಾರಪ್ಪ, ದೇವರಾಜ್,ಸಾಕಮ್ಮ, ಸದಸ್ಯ ತಳವಾರ ರಾಮಣ್ಣ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.