ADVERTISEMENT

ಹಾಲು ಕರೆಯಲು ಹಸುಗಳೇ ಇರುವುದಿಲ್ಲ..!

​ಪ್ರಜಾವಾಣಿ ವಾರ್ತೆ
Published 23 ಆಗಸ್ಟ್ 2012, 5:40 IST
Last Updated 23 ಆಗಸ್ಟ್ 2012, 5:40 IST

ದೊಡ್ಡಬಳ್ಳಾಪುರ: ಬರ ಹಿನ್ನೆಲೆಯಲ್ಲಿ ರೈತರಿಗೆ ಮೇವು ಪೂರೈಕೆ ಮಾಡುವ ಕಡೆಗೆ ಹಾಲು ಒಕ್ಕೂಟಗಳು ತುರ್ತು ಗಮನ ನೀಡಬೇಕು. ಇಲ್ಲವಾದರೆ ಮುಂದಿನ ಒಂದೆರಡು ತಿಂಗಳ ನಂತರ ಹಾಲು ಕರೆಯಲು ಹಸುಗಳೇ ಇಲ್ಲದಂತಾಗಲಿವೆ ಎಂದು ರೈತರು ಆತಂಕ ವ್ಯಕ್ತಪಡಿಸಿದರು.

ಇಲ್ಲಿನ ಬಸವ ಭವನದಲ್ಲಿ ಬೆಂಗಳೂರು ಹಾಲು ಒಕ್ಕೂಟದ ವತಿಯಿಂದ ನಡೆದ ಪ್ರಾದೇಶಿಕ ಸಭೆಯಲ್ಲಿ ಈ ಒಕ್ಕೊರಲ ಆಗ್ರಹ ಮಂಡಿಸಿದ ಅವರು, ಒಕ್ಕೂಟಗಳು ಹಾಲು ಸಂಗ್ರಹಣೆ ಹಾಗೂ ಗುಣಮಟ್ಟದ ಹಾಲು ಉತ್ಪಾದನೆಗೆ ಕೊಡುವಷ್ಟೇ ಆದ್ಯತೆಯನ್ನು ಮೇವು ಪೂರೈಕೆಗೂ ನೀಡಬೇಕು ಎಂದು ಒತ್ತಾಯಿಸಿದರು.

ಈ ಸಂದರ್ಭದಲ್ಲಿ ಮಾತನಾಡಿದ ತಾಲ್ಲೂಕಿನ ಹೊನ್ನಾದೇವಿ ಪುರ ಗ್ರಾಮದ ಎಂಪಿಸಿಎಸ್ ಅಧ್ಯಕ್ಷ ನಂಜೇಗೌಡ, ಮೇವಿನ ಕೊರತೆ ಇರುವ ಈ ಸಂದರ್ಭದಲ್ಲಿ ಒಕ್ಕೂಟದ ವತಿಯಿಂದ ಪೂರೈಕೆಯಾಗುತ್ತಿರುವ ಪಶು ಆಹಾರದಲ್ಲೂ ತೀವ್ರ ಕೊರತೆ ಉಂಟಾಗಿದೆ. ಹಣ ನೀಡಿ ಒಂದೂವರೆ ತಿಂಗಳು ಕಳೆದರೂ ಸಹಾ ಆಹಾರ ಪೂರೈಕೆ ಆಗುತ್ತಿಲ್ಲ.

ರೈತರು ಹಸಿರು ಮೇವು ಬೆಳೆದುಕೊಳ್ಳಲು ಒಕ್ಕೂಟದ ವತಿಯಿಂದ ನೀಡಲಾಗಿರುವ ಜೋಳದ ಬೀಜಗಳು ಕಳಪೆಯಾಗಿದ್ದು ಮೊಳಕೆಯೇ ಹೊರಬಂದಿಲ್ಲ. ಬರ ಇರುವ ಇಂತಹ ಸಂದರ್ಭದಲ್ಲಿ ಕಳಪೆ ಬೀಜ ವಿತರಣೆ ಮಾಡಿರುವವರ ವಿರುದ್ಧ ಕ್ರಮ ಕೈಗೊಳ್ಳಬೇಕು. ಕಳಪೆ ಬಿತ್ತನೆ ಬೀಜಕ್ಕೆ ರೈತರಿಂದ ಹಣ ಸಂಗ್ರಹ ಮಾಡುವುದನ್ನು ನಿಲ್ಲಸಬೇಕು ಎಂದು ಆಗ್ರಹಿಸಿದರು.

ಕಂಟನಕುಂಟೆ ಎಂಪಿಸಿಎಸ್ ಕಾರ್ಯದರ್ಶಿ ರಮೇಶ್ ಶಣೈ ಮಾತನಾಡಿ, `ತಾಲ್ಲೂಕು ಆಡಳಿತದ ವತಿಯಿಂದ ತೆರೆಯಲಾಗಿರುವ ಗೋ ಶಾಲೆಯಲ್ಲಿ ಮೇವು ಸೂಕ್ತ ರೀತಿಯಲ್ಲಿ ಹಂಚಿಕೆಯಾಗುತ್ತಿಲ್ಲ. ಎಲ್ಲ ಬಲಾಢ್ಯರ ಪಾಲಾಗುತ್ತಿದೆ. ಈ ಹಿನ್ನೆಲೆಯಲ್ಲಿ ಹಾಲು ಉತ್ಪಾದಕರ ಸಹಕಾರ ಸಂಘಗಳ ಮೂಲಕ ಮೇವು ಪೂರೈಕೆ ಮಾಡುವಂತಾದರೆ ನಿಖರವಾದ ಲೆಕ್ಕ ದೊರೆಯುತ್ತದೆ. ಆಗ ಮೇವು ಪೂರೈಕೆಯ್ಲ್ಲಲಿ ಯಾವುದೇ ಮೋಸಗಳು ಕಂಡುಬರುವುದಿಲ್ಲ~ ಎಂದು ಸಲಹೆ ನೀಡಿದರು.

ಕೋಳೂರು ಗ್ರಾಮದ ಎಂಪಿಸಿಎಸ್ ಕಾರ್ಯದರ್ಶಿ ಚನ್ನಕೇಶವ ಮಾತನಾಡಿ, ಒಕ್ಕೂಟದ ಕಲ್ಯಾಣ ನಿಧಿಯಿಂದ ಹಸುಗಳು ಅಕಾಲಿಕ ಮರಣ ಹೊಂದಿದಾಗ ನೀಡಲಾಗುತ್ತಿರುವ ಹಣ ಹಾಗೂ ವಿಮೆ ಹಣ ಐದಾರು ತಿಂಗಳು ಕಳೆದರೂ ಬರುತ್ತಿಲ್ಲ. ಇದರಿಂದ ರೈತರು ಸಂಕಷ್ಟಕ್ಕೆ ಸಿಲುಕುವಂತಾಗಿದೆ. ಕನಿಷ್ಠ ವರದಿ ನೀಡಿದ ಒಂದು ತಿಂಗಳ ಒಳಗಾಗಿ ರೈತರ ಕೈಗೆ ಹಣ ತಲುಪುವ ವ್ಯವಸ್ಥೆಯಾಗಬೇಕು ಎಂದು ಆಗ್ರಹಿಸಿದರು.

ಬೇಡಿಕೆ: ಹಾಲು ಉತ್ಪಾದಕರ ಸಹಕಾರ ಸಂಘಗಳ ನೌಕರರ ಒಕ್ಕೂಟದ ತಾಲ್ಲೂಕು ಪ್ರಧಾನ ಕಾರ್ಯದರ್ಶಿ ಎಚ್.ನಾರಾಯಣಪ್ಪ ಮಾತನಾಡಿ, ನೌಕರರು ಹಾಲು ಶೇಖರಣೆಗಷ್ಟೇ ಸೀಮಿತವಾಗದೆ ಯಶಸ್ವಿನಿ, ಜನಶ್ರೀ ಬಿಮಾ ವಿಮಾ ಯೋಜನೆ ಸೇರಿದಂತೆ ಒಕ್ಕೂಟದ ವತಿಯಿಂದ ರೈತರಿಗೆ ದೊರೆಯುವ ಹಲವಾರು ಸೌಲಭ್ಯಗಳನ್ನು ರೈತರಿಗೆ ತಲುಪಿಸಲು ನೌಕರರು ಶ್ರಮಿಸುತ್ತಿದ್ದಾರೆ.
 
ಈ ಹಿನ್ನೆಲೆಯಲ್ಲಿ ಉತ್ಪಾದಕರಿಗೆ 1 ರೂ ಹೆಚ್ಚಾದಾಗ ನೌಕರಿಗೆ 20 ಪೈಸೆ ನೀಡಬೇಕು. ಸಂಘಗಳಲ್ಲಿ ನಿಧಿಗಳು ವರ್ಗಾವಣೆ ಮಾಡುವಂತೆ ನೌಕರರ ಕ್ಷೇಮಾಭಿವೃದ್ಧಿಗೆ ಶೇ.2 ರಷ್ಟು ನಿಧಿಯಾಗಿ ಪರಿಗಣಿಸುವಂತೆ ಬೈಲಾ ತಿದ್ದುಪಡಿಯಾಗಬೇಕು. ನಗರದ ಹಾಲು ಶೀತಲೀಕರಣ ಕೇಂದ್ರದಲ್ಲಿ ಪಶು ಆಹಾರ ಸದಾ ದಾಸ್ತಾನು ಇರುವಂತೆ ಕ್ರಮ ಕೈಗೊಳ್ಳಬೇಕೆಂಬ ಬೇಡಿಕೆಗಳನ್ನು ಒಕ್ಕೂಟದ ಅಧಿಕಾರಿಗಳಿಗೆ ಸಲ್ಲಿಸಿದರು.

ಆಗ್ರಹ: ಪ್ರಾದೇಶಿಕ ಸಭೆಯಲ್ಲಿ ಭಾಗವಹಿಸಿದ್ದ ಒಕ್ಕೂಟದ ಅಧಿಕಾರಿಗಳಿಗೆ ಮನವಿ ಪತ್ರ ಸಲ್ಲಿಸಿದ ರಾಜ್ಯ ರೈತ ಶಕ್ತಿ ಸಂಘದ ರಾಜ್ಯ ಅಧ್ಯಕ್ಷ ಹೊನ್ನಾಘಟ್ಟ ಮಹೇಶ್, ಪ್ರತಿ ಲೀಟರ್ ಹಾಲಿಗೆ ಕನಿಷ್ಠ 30 ರೂಗಳ ದರ ನಿಗದಿ ಪಡಿಸಬೇಕು. ಮೇವಿನ ಕೊರತೆ ಇರುವ ಈ ದಿನಗಳಲ್ಲಿ ರೈತರಿಗೆ ಅಗತ್ಯ ಇರುವ ಪಶು ಆಹಾರವನ್ನು ಪೂರೈಕೆ ಮಾಡಬೇಕು. ಕೃತಕ ಗರ್ಭಧಾರಣೆಯನ್ನು ಉನ್ನತೀರಿಸಬೇಕು. ಹಾಲಿನ ಬೆಲೆಯನ್ನು ಅನಿವಾರ್ಯವಾಗಿ ಇಳಿಕೆ ಮಾಡುವ ಸಂದರ್ಭದಲ್ಲಿ ಬೂಸಾ, ಪಶು ಆಹಾರದ ಬೆಲೆಯನ್ನು ಇಳಿಕೆ ಮಾಡಬೇಕು ಎಂದು ಆಗ್ರಹಿಸಿದರು.

ಸಭೆಯಲ್ಲಿ ಭಾಗವಹಿಸಿದ್ದ ಬೆಂಗಳೂರು ಹಾಲು ಒಕ್ಕೂಟದ ಅಧ್ಯಕ್ಷ ದಿಬ್ಬೂರು ಜಯಣ್ಣ ಮಾತನಾಡಿ, ಹಾಲಿನ ಶೇಖರಣೆ ಹಾಗೂ ಮಾರಾಟ ಎರಡೂ ವಿಭಾಗದಲ್ಲೂ ನಂದಿನಿ ಹಾಲಿನ ಗುಮಣಮಟ್ಟ ಕಾಪಾಡುವ ಕಡೆಗೆ  ಪ್ರಥಮ ಆದ್ಯತೆ ನೀಡಲಾಗುತ್ತಿದೆ ಎಂದರು.

 ಪ್ರತಿ ದಿನ ಬೆಂ.ಹಾ.ಒಕ್ಕೂಟದಲ್ಲಿ 10.6 ಲಕ್ಷ ಲೀಟರ್ ಹಾಲು ಸಂಗ್ರಹಣೆಯಾಗುತ್ತಿದೆ. ಅದೇ ರೀತಿ 8.3 ಲಕ್ಷ ಲೀಟರ್ ಹಾಲನ್ನು ಮಾರಾಟ ಮಾಡಲಾಗುತ್ತಿದೆ. ಈ ಹಿನ್ನೆಲೆಯಲ್ಲಿ ಖಾಸಗಿ ಕಂಪೆನಿಗಳು ನಂದಿನಿ ಹಾಲಿನ ವಿರುದ್ಧ ಸುಳ್ಳು ಸುದ್ದಿಗಳನ್ನು ಹರಡುತ್ತಿವೆ. ಈ ಬಗ್ಗೆ ಸಾರ್ವಜನಿಕರು  ಎಚ್ಚರ ವಹಿಸಬೇಕು ಎಂದರು.

ಪ್ರಾದೇಶಿಕ ಸಭೆಯಲ್ಲಿ ಚರ್ಚಿತವಾಗಿರುವ ವಿಷಯಗಳನ್ನು ಮುಂದಿನ ತಿಂಗಳು ನಡೆಯಲಿರುವ ಒಕ್ಕೂಟದ ಸರ್ವ ಸದಸ್ಯರ ಮಹಾ ಸಭೆಯಲ್ಲಿ ಚರ್ಚಿಸಿ ನಿರ್ಧಾರ ಕೈಗೊಳ್ಳಲಾಗುವುದು ಎಂದು ಅವರು ಹೇಳಿದರು. 

 ಸಭೆಯ ಅಧ್ಯಕ್ಷತೆಯನ್ನು ಒಕ್ಕೂದ ದೊಡ್ಡಬಳ್ಳಾಪುರ ಕ್ಷೇತ್ರದ ನಿರ್ದೇಶಕ ಎನ್.ಹನುಮಂತೇಗೌಡ ವಹಿಸಿದ್ದರು. ಸಭೆಯಲ್ಲಿ ಒಕ್ಕೂಟದ ವ್ಯವಸ್ಥಾಪಕ ಡಾ.ರವಿಶಂಕರ್ ಹೆಗ್ಗಡೆ, ನಾಮ ನಿರ್ದೇಶಕಿ ಪುಷ್ಪಾ ಶಿವಶಂಕರ್, ವ್ಯವಸ್ಥಾಪಕ ನಿರ್ದೇಶಕ ಡಾ.ವಿ.ಲಕ್ಷ್ಮಣ ರೆಡ್ಡಿ, ದೊಡ್ಡಬಳ್ಳಾಪುರ ಹಾಲು ಶೀತಲೀಕರದ ವ್ಯವಸ್ಥಾಪಕ ಡಾ.ನರಸಿಂಹನ್ ಮುಂತಾದವರು ಭಾಗವಹಿಸಿದ್ದರು.

ಇದೇ ಸಂದರ್ಭದಲ್ಲಿ ನಿವೃತ್ತರಾದ ಉಪ ಪ್ರಧಾನ ವ್ಯವಸ್ಥಾಪಕ ಆರ್. ಸುಬ್ಬರಾಯಪ್ಪ ಅವರನ್ನು ಅಭಿನಂದಿಸಿ ಬೀಳ್ಕೊಡಲಾಯಿತು. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.