ADVERTISEMENT

₹3 ಕೋಟಿ ಅನುದಾನ, ಶೀಘ್ರ ಕಾಮಗಾರಿ 

​ಪ್ರಜಾವಾಣಿ ವಾರ್ತೆ
Published 6 ಫೆಬ್ರುವರಿ 2019, 14:37 IST
Last Updated 6 ಫೆಬ್ರುವರಿ 2019, 14:37 IST
ಭೂಮಿ ಪೂಜೆಯಲ್ಲಿ ಗಣ್ಯರು
ಭೂಮಿ ಪೂಜೆಯಲ್ಲಿ ಗಣ್ಯರು   

ದೇವನಹಳ್ಳಿ: ‘ಪುರಸಭೆಗೆ ಮುಖ್ಯಮಂತ್ರಿ ವಿಶೇಷ ಅನುದಾನದ ಅಡಿ ₹3 ಕೋಟಿ ಬಿಡುಗಡೆಯಾಗುತ್ತಿದೆ. ಶೀಘ್ರದಲ್ಲೇ ವಿವಿಧ ಕಾಮಗಾರಿಗೆ ಚಾಲನೆ ನೀಡಲಾಗುವುದು’ ಎಂದು ಶಾಸಕ ನಿಸರ್ಗ ನಾರಾಯಣಸ್ವಾಮಿ ತಿಳಿಸಿದರು.

ಇಲ್ಲಿನ ಪುರಸಭೆ 6ನೇ ವಾರ್ಡಿನ ತರಗುಪೇಟೆ ಆಂಜನೇಯಸ್ವಾಮಿ ದೇವಾಲಯದ ಆವರಣದಲ್ಲಿ ನೂತನ ಸಮುದಾಯ ಭವನ ನಿರ್ಮಾಣಕ್ಕೆ ನಡೆದ ಭೂಮಿ ಪೂಜೆಯ ನಂತರ ಅವರು ಮಾತನಾಡಿದರು.

ವಿಧಾನಸಭಾ ಕ್ಷೇತ್ರ ಐದು ಹೋಬಳಿ ವ್ಯಾಪ್ತಿಯಲ್ಲಿರುವ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡಗಳ ಕಾಲೊನಿಗಳಲ್ಲಿ ಕುಡಿಯುವ ನೀರು, ಚರಂಡಿ, ಸಿಮೆಂಟ್ ರಸ್ತೆ ನಿರ್ಮಾಣಕ್ಕೆ ತಲಾ ₹2 ಕೋಟಿಯ ಒಟ್ಟು ₹10 ಕೋಟಿ ಕ್ರಿಯಾಯೋಜನೆ ರೂಪಿಸಲಾಗಿದೆ. ಒಂದೆರೆಡು ದಿನಗಳಲ್ಲಿ ಅನುದಾನ ಬಿಡುಗಡೆಯಾಗಲಿದೆ. ವಿಜಯಪುರ ಪುರಸಭೆ ವ್ಯಾಪ್ತಿಯಲ್ಲಿನ 23 ವಾರ್ಡ್‌ಗಳ ಅಭಿವೃದ್ಧಿಗೂ ಕ್ರಿಯಾಯೋಜನೆ ರೂಪಿಸಲಾಗಿದೆ. ಪಕ್ಷಾತೀತವಾಗಿ ಅಭಿವೃದ್ಧಿಯಾಗಬೇಕು ಎಂದರು.

ADVERTISEMENT

‘ಸರ್ಕಾರ ಐದು ವರ್ಷಗಳ ಕಾಲ ಸುಭದ್ರವಾಗಿರಲಿ ಎಂದು ಆಂಜನೇಯಸ್ವಾಮಿಗೆ ಬೇಡಿಕೊಂಡಿದ್ದೇನೆ. ಸರ್ಕಾರಕ್ಕೆ ಯಾವುದೇ ರೀತಿ ಅಪಾಯ ಆಗಬಾರದು. ಸಮ್ಮಿಶ್ರ ಸರ್ಕಾರ ಉತ್ತಮ ಪ್ರಗತಿಪರ ಯೋಜನೆಗಳನ್ನು ಜಾರಿಗೊಳಿಸುವ ನಿರೀಕ್ಷೆ ಇದೆ’ ಎಂದು ಹೇಳಿದರು.

ಪುರಸಭೆ ಅಧ್ಯಕ್ಷ ಎಂ.ಮೂರ್ತಿ ಮಾತನಾಡಿ, 2018–19ನೇ ಸಾಲಿನ 14ನೇ ಹಣಕಾಸು ಯೋಜನೆಯಡಿ ₹28 ಲಕ್ಷ ಅನುದಾನದಲ್ಲಿ ಸಮುದಾಯ ಭವನ ನಿರ್ಮಿಸಲಾಗುತ್ತಿದೆ ಎಂದು ಹೇಳಿದರು.

ಪುರಸಭೆ ಮಾಜಿ ಅಧ್ಯಕ್ಷ ಸಿ.ಜಗನ್ನಾಥ್ ಮಾತನಾಡಿ, ಐದು ನೂರು ವರ್ಷಗಳ ಇತಿಹಾಸವಿರುವ ತರಗುಪೇಟೆ ಆಂಜನೇಯಸ್ವಾಮಿ ದೇವಾಲಯದಲ್ಲಿ ಸಾವಿರಾರು ಮದುವೆಗಳು ಈ ಹಿಂದೆ ನಡೆದಿವೆ. 30 ವರ್ಷಗಳಿಂದ ದೇವಾಲಯದ ಪಕ್ಕದ ಮಂಟಪಗಳು ಪಾಳು ಬಿದ್ದಿವೆ. ಸಂಪೂರ್ಣ ನೆಲಸಮ ಮಾಡಿ ಎರಡು ಅಂತಸ್ತಿನ ಭವನ ನಿರ್ಮಾಣ ಮಾಡಿದರೆ ಬಡ ಮತ್ತು ಮಧ್ಯಮ ವರ್ಗದ ಜನರಿಗೆ ಅನುಕೂಲವಾಗಲಿದೆ ಎಂದು ಹೇಳಿದರು.

ಪುರಸಭೆ ಉಪಾಧ್ಯಕ್ಷೆ ಅಶಾರಾಣಿ, ಸ್ಥಾಯಿ ಸಮಿತಿ ಅಧ್ಯಕ್ಷ ಗೋಪಾಲಕೃಷ್ಣ, ಪುರಸಭೆ ಸದಸ್ಯರಾದ ರವೀಂದ್ರ, ಪದ್ಮಾವತಿ, ಬೇಕರಿ ಮಂಜುನಾಥ್, ಎನ್.ರಘು, ಗಾಯಿತ್ರಿ, ನಾಮಿನಿ ಸದಸ್ಯ ಶ್ರೀಧರ್, ಮುಖ್ಯಾಧಿಕಾರಿ ಹನುಮಂತೇಗೌಡ , ಇಂಜಿನಿಯರ್ ಗಜೇಂದ್ರ, ಜೆಡಿಎಸ್ ನಗರ ಘಟಕ ಅಧ್ಯಕ್ಷ ಮುನಿನಂಜಪ್ಪ, ಪ್ರಧಾನ ಕಾರ್ಯದರ್ಶಿ ಸಾಯಿಬಾಬು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.