ADVERTISEMENT

ಪ್ರತಿ ಗ್ರಾ.ಪಂ.ಗೆ 100 ಮನೆ ಮಂಜೂರು

ಶೀಘ್ರವೇ ಫಲಾನುಭವಿಗಳ ಆಯ್ಕೆ: ಶಾಸಕ ಶರತ್‌ ಬಚ್ಚೇಗೌಡ ಭರವಸೆ

​ಪ್ರಜಾವಾಣಿ ವಾರ್ತೆ
Published 5 ಜುಲೈ 2022, 4:43 IST
Last Updated 5 ಜುಲೈ 2022, 4:43 IST
ಹೊಸಕೋಟೆ ತಾಲ್ಲೂಕಿನ ಸೊಣ್ಣದೇನಹಳ್ಳಿಯಲ್ಲಿ ಸಿ.ಸಿ ರಸ್ತೆ ಕಾಮಗಾರಿಗೆ ಶಾಸಕ ಶರತ್ ಬಚ್ಚೇಗೌಡ ಭೂಮಿಪೂಜೆ ನೆರವೇರಿಸಿದರು. ಬಮೂಲ್ ನಿರ್ದೇಶಕ ದೊಡ್ಡಹುಲ್ಲೂರು ಮಂಜುನಾಥ್ ಇದ್ದರು
ಹೊಸಕೋಟೆ ತಾಲ್ಲೂಕಿನ ಸೊಣ್ಣದೇನಹಳ್ಳಿಯಲ್ಲಿ ಸಿ.ಸಿ ರಸ್ತೆ ಕಾಮಗಾರಿಗೆ ಶಾಸಕ ಶರತ್ ಬಚ್ಚೇಗೌಡ ಭೂಮಿಪೂಜೆ ನೆರವೇರಿಸಿದರು. ಬಮೂಲ್ ನಿರ್ದೇಶಕ ದೊಡ್ಡಹುಲ್ಲೂರು ಮಂಜುನಾಥ್ ಇದ್ದರು   

ಹೊಸಕೋಟೆ: ‘ವಿಧಾನಸಭಾ ಅಧಿವೇಶನದಲ್ಲಿ ತಾಲ್ಲೂಕಿನಲ್ಲಿರುವ ಎಲ್ಲಾ ಕಡು ಬಡವರಿಗೆ ಸರ್ಕಾರದಿಂದಲೇ ಮನೆಗಳನ್ನು ಕಟ್ಟಿಸಿ ಕೊಡಬೇಕೆಂದು ಒತ್ತಾಯಿಸಿದ ಹಿನ್ನೆಲೆಯಲ್ಲಿ ಸರ್ಕಾರ ತಾಲ್ಲೂಕಿನ ಪ್ರತಿ ಗ್ರಾಮ ಪಂಚಾಯಿತಿಗೆ ತಲಾ 100 ಮನೆಗಳನ್ನು ಮಂಜೂರು ಮಾಡಿದೆ’ ಎಂದು ಶಾಸಕ ಶರತ್ ಬಚ್ಚೇಗೌಡ ತಿಳಿಸಿದರು.

ತಾಲ್ಲೂಕಿನ ಸೊಣ್ಣದೇನಹಳ್ಳಿಯಲ್ಲಿ ಜಲ ಸಂಪನ್ಮೂಲ ಇಲಾಖೆಯಿಂದ ಎತ್ತಿನಹೊಳೆ ಯೋಜನೆಯ ಅನುದಾನದಡಿ ₹ 19 ಲಕ್ಷ ವೆಚ್ಚದಲ್ಲಿ ಸಿ.ಸಿ ರಸ್ತೆ ಕಾಮಗಾರಿಗೆ ಭೂಮಿಪೂಜೆ ನೆರವೇರಿಸಿ ಅವರು ಮಾತನಾಡಿದರು.

ತಾಲ್ಲೂಕಿನಲ್ಲಿ 26 ಗ್ರಾಮ ಪಂಚಾಯಿತಿಗಳಿವೆ. ವಸತಿ ಯೋಜನೆಯಡಿ ಪ್ರತಿ ಪಂಚಾಯಿತಿಗೆ 100 ಮನೆಗಳು ದೊರೆಯಲಿವೆ. ಶೀಘ್ರದಲ್ಲಿಯೇ ಫಲಾನುಭವಿಗಳನ್ನು ಗುರುತಿಸಲಾಗುತ್ತದೆ ಎಂದರು.

ADVERTISEMENT

ಸರ್ಕಾರದ ಎಲ್ಲಾ ಯೋಜನೆಗಳನ್ನು ತಾಲ್ಲೂಕಿನಲ್ಲಿ ಸಮರ್ಪಕವಾಗಿ ಅನುಷ್ಠಾನಗೊಳಿಸಿ ರಾಜ್ಯದಲ್ಲಿಯೇ ಹೊಸ ಕೋಟೆ ತಾಲ್ಲೂಕನ್ನು ಮಾದರಿಯಾಗಿ ಮಾಡಲಾಗುವುದು ಎಂದರು.

ಬಮೂಲ್ ನಿರ್ದೇಶಕ ದೊಡ್ಡ ಹುಲ್ಲೂರು ಮಂಜುನಾಥ್ ಮಾತನಾಡಿ, ‘ನಮ್ಮ ಪಂಚಾಯಿತಿ ವ್ಯಾಪ್ತಿಯ ಕೆಲವು ಊರುಗಳಲ್ಲಿ ಮನೆಗಳ ಅವಶ್ಯಕತೆ ಕಡಿಮೆಯಿದೆ. ಹಾಗಾಗಿ, ಹೆಚ್ಚಿನ ಮನೆಗಳನ್ನು ಸೊಣ್ಣದೇನಹಳ್ಳಿಗೆ ನೀಡಲಾಗುವುದು’ ಎಂದು ತಿಳಿಸಿದರು.

ಕಾರ್ಯಕ್ರಮದಲ್ಲಿ ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷ ಶ್ರೀನಿವಾಸ್, ಸದಸ್ಯರಾದ ಜಿ. ರಾಮಾಂಜಿ, ಮಂಜುಳಾ ಶಿವಯ್ಯ, ಬಿ. ರಾಮದಾಸ್ ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.