ADVERTISEMENT

150ಕ್ಕೂ ಹೆಚ್ಚು ಘಟಕಗಳ ಸ್ಥಾಪನೆ: ಸಂಸದ

​ಪ್ರಜಾವಾಣಿ ವಾರ್ತೆ
Published 7 ಆಗಸ್ಟ್ 2016, 19:30 IST
Last Updated 7 ಆಗಸ್ಟ್ 2016, 19:30 IST
150ಕ್ಕೂ ಹೆಚ್ಚು ಘಟಕಗಳ ಸ್ಥಾಪನೆ: ಸಂಸದ
150ಕ್ಕೂ ಹೆಚ್ಚು ಘಟಕಗಳ ಸ್ಥಾಪನೆ: ಸಂಸದ   

ರಾಮನಗರ: ಬೆಂಗಳೂರು ಗ್ರಾಮಾಂತರ ಲೋಕಸಭಾ ಕ್ಷೇತ್ರ ವ್ಯಾಪ್ತಿಯ ಎಲ್ಲ ಜನರು ಶುದ್ಧ ನೀರು ಕುಡಿಯಬೇಕು ಎಂಬ ಉದ್ದೇಶದಿಂದ ಈಗಾಗಲೇ 150ಕ್ಕೂ ಹೆಚ್ಚು ಶುದ್ಧ ನೀರಿನ ಘಟಕಗಳನ್ನು ಸ್ಥಾಪಿಸಲಾಗಿದೆ ಎಂದು ಸಂಸದ ಡಿ.ಕೆ. ಸುರೇಶ್ ಹೇಳಿದರು.

ನಗರದ ನಗರ ಸಭಾ ವ್ಯಾಪ್ತಿಯ ಒಂದು ಮತ್ತು ಎಂಟನೇ ವಾರ್ಡ್ ನಲ್ಲಿ ಶನಿವಾರ ಸಂಜೆ ಶುದ್ಧ ಕುಡಿಯುವ ನೀರಿನ ಘಟಕವನ್ನು ಉದ್ಘಾಟಿಸಿ ಅವರು ಮಾತನಾಡಿದರು. ನನಗೆ ಲಭಿಸುವ ಸಂಸದರ ನಿಧಿಯನ್ನು ಸಂಪೂರ್ಣವಾಗಿ ಶುದ್ಧ ನೀರು ಘಟಕಗಳಿಗೆ ವಿನಿಯೋಗಿಸಲಾಗಿದೆ ಎಂದರು.
ಯಾವುದೇ ಲಾಭದ ಉದ್ದೇಶದಿಂದ ಘಟಕಗಳನ್ನು ಸ್ಥಾಪಿಸುವ ಇರಾದೆಯನ್ನು ಹೊಂದಿಲ್ಲ. ಫ್ಲೋರೈಡ್ ಯುಕ್ತ ನೀರು ಕುಡಿದು ಜನರ ಆರೋಗ್ಯ ಹದಗೆಡಬಾರದು ಎಂಬ ಉದ್ದೇಶದಿಂದ ಕೇವಲ 10 ಪೈಸೆಗೆ ಒಂದು ಲೀಟರ್ ನೀರು ನೀಡಲಾಗುತ್ತಿದೆ ಎಂದು ತಿಳಿಸಿದರು.

ಜಿಲ್ಲೆಯಲ್ಲಿ ಪ್ಲೋರೈಡ್ ಅಂಶ ಕುಡಿಯುವ ನೀರಿನಲ್ಲಿ ಅಪಾಯಕಾರಿ ಮಟ್ಟ ತಲುಪಿದೆ. ಇದನ್ನು ಕುಡಿದರೆ ದಂತಕ್ಷಯ, ಅಂಗವಿಕಲತೆ, ಕೀಲು ನೋವು ಸೇರಿದಂತೆ ವಿವಿಧ ರೋಗಗಳಿಗೆ ಜನರು ತುತ್ತಾಗುತ್ತಿದ್ದಾರೆ. ಇದಕ್ಕೆ ಮುಖ್ಯ ಕಾರಣ ನೀರಿನಲ್ಲಿ ಫ್ಲೋರೈಡ್ ಅಂಶ ಹೆಚ್ಚಾಗಿರುವುದು ಎಂದು ತಿಳಿಸಿದರು.
ರಾಮನಗರ ಪಟ್ಟಣಕ್ಕೆ ಕುಡಿಯುವ ನೀರಿನ ಸಮಸ್ಯೆ ಹೆಚ್ಚಾಗಿ ಕಾಡುತ್ತಿತ್ತು. ಈಗ ಸಮರ್ಪಕವಾಗಿ 7.5 ಎಂಎಲ್ಡಿ ನೀರು ಬರುವಂತೆ ಕ್ರಮ ಕೈಗೊಳ್ಳಲಾಗಿದೆ. ಮುಂದಿನ ದಿನಗಳಲ್ಲಿ ಇನ್ನು 7.5 ಎಂಎಲ್ಡಿ ತರುವ ಯತ್ನದಲ್ಲಿ ಇದ್ದೇವೆ ಎಂದು ಅವರು ಹೇಳಿದರು.

ಶುದ್ಧ ನೀರಿನ ಘಟಕ ಉದ್ಘಾಟಿಸುವ ಸಂದರ್ಭದಲ್ಲಿ ವಾರ್ಡ್ ಮಹಿಳೆಯರು ಸಂಸದರಿಗೆ ಸುತ್ತುವರಿದು ಇಲ್ಲಿ ಗ್ಯಾಸ್ ಗೋದಾಮು ಇದೆ. ಆದಷ್ಟು ಶೀಘ್ರವಾಗಿ ಸ್ಥಳಾಂತರ ಮಾಡಿಸಿಕೊಡಿ ಎಂದು ಸಂಸದರಲ್ಲಿ ಮನವಿ ಮಾಡಿದರು.

ವಿಧಾನ ಪರಿಷತ್ತಿನ ಸದಸ್ಯ ಎಸ್. ರವಿ, ಕೆಎಂಎಫ್ ಅಧ್ಯಕ್ಷ ಪಿ. ನಾಗರಾಜ್, ಮಾಜಿ ಶಾಸಕ ಸಿ.ಎಂ. ಲಿಂಗಪ್ಪ, ಜಿಲ್ಲಾಧಿಕಾರಿ ಡಾ.ಬಿ.ಆರ್. ಮಮತಾ, ಕಾಂಗ್ರೆಸ್ ಸಮಿತಿಯ ಜಿಲ್ಲಾ ಘಟಕದ ಅಧ್ಯಕ್ಷ ಸೈಯ್ಯದ್ ಜಿಯಾವುಲ್ಲಾ, ನಗರಸಭೆ ಅಧ್ಯಕ್ಷ ಎಚ್.ಎಸ್. ಲೋಹಿತ್‌ ಬಾಬು, ಉಪಾಧ್ಯಕ್ಷ ಆರ್. ಮುತ್ತುರಾಜ್, ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷೆ ಶಾರದಾಗೌಡ, ಸದಸ್ಯ ಬಾಬು ಸೇಠ್, ನಗರಸಭಾ ಸದಸ್ಯ ಚೇತನ್‌ ಕುಮಾರ್, ಆಯುಕ್ತ ಕೆ. ಮಾಯಣ್ಣಗೌಡ ಇತರರು ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.