ADVERTISEMENT

ಉಜ್ವಲ ಯೋಜನೆಯಡಿ 36 ಸಾವಿರ ಸಂಪರ್ಕ

​ಪ್ರಜಾವಾಣಿ ವಾರ್ತೆ
Published 4 ಜನವರಿ 2019, 12:58 IST
Last Updated 4 ಜನವರಿ 2019, 12:58 IST
ಗ್ರಾಹಕರ ಸಂವಾದದಲ್ಲಿ ಪವನ್ ಭೈರವಾನಿ ಮಾಹಿತಿ ನೀಡಿದರು
ಗ್ರಾಹಕರ ಸಂವಾದದಲ್ಲಿ ಪವನ್ ಭೈರವಾನಿ ಮಾಹಿತಿ ನೀಡಿದರು   

ದೇವನಹಳ್ಳಿ: ಕೇಂದ್ರ ಸರ್ಕಾರದ ಪ್ರಧಾನ ಮಂತ್ರಿ ಉಜ್ವಲ ಯೋಜನೆಯಡಿ ಗ್ರಾಮಾಂತರ ಜಿಲ್ಲೆಯಲ್ಲಿ 36,821 ಅರ್ಹ ಕುಟುಂಬಗಳಿಗೆ ಉಚಿತ ಅಡುಗೆ ಅನಿಲ ಸಿಲಿಂಡರ್‌ ಸಂಪರ್ಕ ಕಲ್ಪಿಸಲಾಗಿದೆ ಎಂದು ಯೋಜನೆಯ ಗ್ರಾಮಾಂತರ ಜಿಲ್ಲಾ ಸಂಯೋಜನಾಧಿಕಾರಿ ಪವನ್ ಭೈರವಾನಿ ತಿಳಿಸಿದರು.

ಇಲ್ಲಿನ ಪ್ರಶಾಂತನಗರದಲ್ಲಿರುವ ಎಸ್‌ಎಲ್‌ಎನ್‌ ಭಾರತ್ ಅಡುಗೆ ಅನಿಲ ಸಂಪರ್ಕ ಆಡಳಿತ ಕಚೇರಿ ಆವರಣದಲ್ಲಿ ‘ಗ್ರಾಹಕರೊಂದಿಗೆ ಸಂವಾದ ಮತ್ತು ಉಚಿತ ವಿತರಣೆಗೆ ಅಗತ್ಯವಿರುವ ಪೂರಕ ದಾಖಲೆಗಳ ಪರಿಶೀಲನೆ’ ಕಾರ್ಯಕ್ರಮದಲ್ಲಿ ಮಾತನಾಡಿದರು.

ಕೇಂದ್ರ ಸರ್ಕಾರದ ಮಹಾತ್ವಾಕಾಂಕ್ಷೆಯ ಈ ಯೋಜನೆಗೆ ಬಜೆಟ್‌ನಲ್ಲಿ ₹12,800 ಕೋಟಿ ಅನುದಾನ ಮೀಸಲಿರಿಸಿದೆ. ಪ್ರಸ್ತುತ ದೇಶದಲ್ಲಿ ₹8 ಕೋಟಿ ಕುಟುಂಬಕ್ಕೆ ಸಂಪರ್ಕ ಕಲ್ಪಿಸಲು ಗುರಿ ನಿಗದಿ ಪಡಿಸಲಾಗಿದ್ದು ಈ ಪೈಕಿ ₹6 ಕೋಟಿ ಸಂಪರ್ಕ ಸಾಧಿಸಲಾಗಿದೆ ಎಂದರು.

ADVERTISEMENT

2011ನೇ ಸಾಲಿನ ಎಸ್‌ಇಸಿಸಿ ಡೇಟಾ ನೋಂದಣಿ ಪ್ರಕಾರ ಗ್ರಾಮಾಂತರ ಜಿಲ್ಲೆಯಲ್ಲಿ ಇಂಡೇನ್, ಭಾರತ್, ಎಚ್‌ಪಿಸಿ ಕಂಪನಿ ಅಡುಗೆ ಅನಿಲ ವಿತರಣೆ ಘಟಕದಿಂದ ವಿತರಿಸಲಾಗುತ್ತಿದೆ. ಎಸ್‌ಇಸಿಸಿ ನೋಂದಣಿ ಇಲ್ಲದವರು ಈವರೆಗೆ ಯಾವುದೇ ಅಡುಗೆ ಅನಿಲ ಸಂಪರ್ಕ ಹೊಂದಿಲ್ಲದ ಬಿಪಿಎಲ್‌ ಕಾರ್ಡ್‌ ಇರುವ ಎಲ್ಲ ಸಮುದಾಯದವರಿಗೆ ಉಚಿತ ಅಡುಗೆ ಅನಿಲ ಸಂಪರ್ಕ ಪಡೆಯಬಹುದಾಗಿದೆ ಎಂದರು.

ಪ್ರಸ್ತುತ ಉಜ್ವಲ ಯೋಜನೆಯಡಿ ಮತ್ತು ಇತರೆ ಸಂಪರ್ಕ ಸೇರಿ ಒಟ್ಟು 2.79ಲಕ್ಷ ಅಡುಗೆ ಅನಿಲ ಸಂಪರ್ಕವಿದೆ. ಉಚಿತ ಸಿಲಿಂಡರ್ ನೀಡಲಾಗುತ್ತದೆ. ಸ್ಟವ್ ಮತ್ತು ರೀಫಿಲ್‌ಗೆ ನಿಗದಿತ ಹಣ ನೀಡಬೇಕು. ಸಾಲ ಪಡೆದುಕೊಳ್ಳುವ ಅವಕಾಶವಿದೆ ಎಂದರು.

ಅಡುಗೆ ಅನಿಲ ಘಟಕ ವ್ಯವಸ್ಥಾಪಕರಾದ ವೇಣುಗೋಪಾಲ್, ಮೇಘರಾಜ್, ಮುನಿರಾಜ್ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.