ADVERTISEMENT

ದೇವನಹಳ್ಳಿ: ಒಂದೇ ದಿನ 38 ಮಂದಿಗೆ ಸೋಂಕು

ಬೆಂಗಳೂರು ಗ್ರಾಮಾಂತರ ಜಿಲ್ಲೆಯಲ್ಲಿ ಆರು ಪರೀಕ್ಷಾ ಕೇಂದ್ರ ಸ್ಥಾಪನೆ

​ಪ್ರಜಾವಾಣಿ ವಾರ್ತೆ
Published 18 ಮಾರ್ಚ್ 2021, 3:45 IST
Last Updated 18 ಮಾರ್ಚ್ 2021, 3:45 IST

ದೇವನಹಳ್ಳಿ: ಗ್ರಾಮಾಂತರ ಜಿಲ್ಲೆಯಲ್ಲಿ ಮಂಗಳವಾರ ಒಂದೇ ದಿನ 38 ಜನರಿಗೆ ಕೊರೊನಾ ಸೋಂಕು ದೃಢಪಟ್ಟಿದೆ ಎಂದು ಜಿಲ್ಲಾಧಿಕಾರಿ ಕೆ. ಶ್ರೀನಿವಾಸ್ ತಿಳಿಸಿದ್ದಾರೆ.

ಸೋಂಕಿನ ಕುರಿತು ಬುಧವಾರ ಮಾಹಿತಿ ನೀಡಿದ ಅವರು, ಅತಿ ಕಡಿಮೆ ಇದ್ದ ಸೋಂಕಿತರ ಸಂಖ್ಯೆಯಲ್ಲಿ ವಾರದಿಂದ ಹೆಚ್ಚಳವಾಗುತ್ತಿದೆ. ಇನ್ನೇನು ಕೊರೊನಾ ಸೋಂಕು ನಿಯಂತ್ರಣಕ್ಕೆ ಬಂದಿದೆ ಎಂಬ ವಿಶ್ವಾಸವಿತ್ತು. ಆದರೆ, ಏರುಮುಖವಾಗುತ್ತಿರುವುದರಿಂದ ಹೆಚ್ಚು ಜನಸಂದಣಿ ಇರದಂತೆ ಮತ್ತು ಪ್ರತಿಯೊಬ್ಬರೂ ಮಾಸ್ಕ್ ಧರಿಸುವಂತೆ ತಿಳಿಸಲು ಸಂಬಂಧಿಸಿದ ಅಧಿಕಾರಿಗಳಿಗೆ ಸೂಚಿಸಲಾಗಿದೆ ಎಂದುಹೇಳಿದರು.

ಒಂದೇ ದಿನದಲ್ಲಿ ನೆಲಮಂಗಲ 15, ಹೊಸಕೋಟೆ 5, ದೊಡ್ಡಬಳ್ಳಾಪುರ 5, ದೇವನಹಳ್ಳಿಯಲ್ಲಿ 13 ಜನರಿಗೆ ಸೋಂಕು ದೃಢಪಟ್ಟಿದ್ದು, ಈ ಪೈಕಿ 14 ಮಹಿಳೆಯರಿದ್ದಾರೆ ಎಂದು ಹೇಳಿದರು.

ADVERTISEMENT

ಜಿಲ್ಲೆಯಲ್ಲಿ ಮಾರ್ಚ್‌ 16 ರವರೆಗೆ 18,989 ಜನರಿಗೆ ಸೋಂಕು ಇರುವುದು ದೃಢಪಟ್ಟಿದೆ. ಪರೀಕ್ಷೆಗೆ ಒಳಪಟ್ಟವರಲ್ಲಿ 2,47,490 ಜನರಿಗೆ ನೆಗೆಟಿವ್ ಫಲಿತಾಂಶ ಬಂದಿದೆ. 571 ಜನರ ಫಲಿತಾಂಶ ಬರಬೇಕಾಗಿದೆ. 445 ಜನರು ಕ್ವಾರಂಟೈನ್‌ನಲ್ಲಿದ್ದಾರೆ. ಈವರೆಗೆ 161 ಮರಣ ಹೊಂದಿದ್ದಾರೆ ಎಂದು ಹೇಳಿದರು.

ಜಿಲ್ಲಾ ಆರೋಗ್ಯಾಧಿಕಾರಿ ಡಾ.ಮಂಜುಳಾದೇವಿ, ‘ಅಂತರರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಬರುವ ಮತ್ತು ಹೋಗುವ ಪ್ರಯಾಣಿಕರಿಗೆ ಪರೀಕ್ಷೆ ನಡೆಸಲಾಗಿದೆ. ಸೋಂಕಿನ ಲಕ್ಷಣ ಕಂಡುಬಂದರೆ ಅವರು ಇಚ್ಛಿಸಿದರೆ ಮನೆಯಲ್ಲಿಯೇ ಕ್ವಾರಂಟೈನ್‌ ಇಲ್ಲದಿದ್ದರೆ ಬೆಂಗಳೂರು ನಗರದ ಆಸ್ಪತ್ರೆಗಳಲ್ಲಿ ಕ್ವಾರಂಟೈನ್‌ಗೆ ಒಳಪಡಿಸಲಾಗುತ್ತಿದೆ. ಜಿಲ್ಲೆಯ ಆರು ಕಡೆಗಳಲ್ಲಿ ಸೋಂಕಿನ ಪರೀಕ್ಷಾ ಕೇಂದ್ರಗಳು ದಿನದ 24 ತಾಸು ಕಾರ್ಯ ನಿರ್ವಹಿಸುತ್ತಿವೆ. ಸೋಂಕು ಹರಡುವಿಕೆ ತಡೆಗಟ್ಟಲು ಮುಂಜಾಗ್ರತಾ ಕ್ರಮ ಕೈಗೊಳ್ಳಲಾಗುತ್ತಿದೆ ಎಂದು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.