ADVERTISEMENT

51 ಹೊಸ ನ್ಯಾಯಬೆಲೆ ಅಂಗಡಿ ಆರಂಭ

ಪ್ರತಿ ತಿಂಗಳ ಕನಿಷ್ಠ ಒಂದು ವಾರ ಅಂಗಡಿ ತೆರೆದು ಆಹಾರಧಾನ್ಯ ವಿತರಿಸಲು ಶಾಸಕ ವೆಂಕಟರಮಣಯ್ಯ ಸೂಚನೆ

​ಪ್ರಜಾವಾಣಿ ವಾರ್ತೆ
Published 4 ಜನವರಿ 2018, 10:40 IST
Last Updated 4 ಜನವರಿ 2018, 10:40 IST
ವಡ್ಡರಹಳ್ಳಿ ಗ್ರಾಮದಲ್ಲಿ ಸರ್ಕಾರಿ ನ್ಯಾಯಬೆಲೆ ಅಂಗಡಿಗೆ  ಟಿ.ವೆಂಕಟರಮಣಯ್ಯ ಚಾಲನೆ ನೀಡಿದರು
ವಡ್ಡರಹಳ್ಳಿ ಗ್ರಾಮದಲ್ಲಿ ಸರ್ಕಾರಿ ನ್ಯಾಯಬೆಲೆ ಅಂಗಡಿಗೆ ಟಿ.ವೆಂಕಟರಮಣಯ್ಯ ಚಾಲನೆ ನೀಡಿದರು   

ದೊಡ್ಡಬಳ್ಳಾಪುರ: ತಾಲ್ಲೂಕಿನಲ್ಲಿ ಹೊಸದಾಗಿ 51 ನ್ಯಾಯಬೆಲೆ ಅಂಗಡಿಗಳನ್ನು ತೆರೆಯಲಾಗಿದೆ. ಇದರಿಂದಾಗಿ ಸಾರ್ವಜನಿಕರು ದಿನಗಟ್ಟಲೆ ಪಡಿತರ ಆಹಾರ ಪಡೆಯಲು ಸಾಲುಗಟ್ಟಿ ನಿಲ್ಲುವುದು ಹಾಗೂ ದೂರದ ಗ್ರಾಮಗಳಿಗೆ ಹೋಗಿ ಬರುವ ಕಷ್ಟ ತಪ್ಪಿದೆ ಎಂದು ಶಾಸಕ ಟಿ.ವೆಂಕಟರಮಣಯ್ಯ ಹೇಳಿದರು.

ಅವರು ತಾಲ್ಲೂಕಿನ ವಡ್ಡರಹಳ್ಳಿ ಗ್ರಾಮದಲ್ಲಿ ನೂತನವಾಗಿ ಆರಂಭಿಸಲಾದ ಸರ್ಕಾರಿ ನ್ಯಾಯಬೆಲೆ ಅಂಗಡಿಗೆ ಬುಧವಾರ ಚಾಲನೆ ನೀಡಿ ಮಾತನಾಡಿದರು.

ಪ್ರತಿ ನ್ಯಾಯಬೆಲೆ ಅಂಗಡಿಯು ಕನಿಷ್ಠ ಒಂದು ವಾರ ಕಾಲ ಅಂಗಡಿಯನ್ನು ತೆರೆದು ಆಹಾರ ಧಾನ್ಯವನ್ನು ವಿತರಣೆ ಮಾಡಬೇಕು. ಬಯೋಮೆಟ್ರಿಕ್‌ ವ್ಯವಸ್ಥೆ ಜಾರಿಯಿಂದಾಗಿ ಗ್ರಾಹಕರು ಪಡಿತರ ಧಾನ್ಯವನ್ನು ಪಡೆಯದಿದ್ದರೆ ಸರ್ಕಾರಕ್ಕೆ ವಾಪಸ್‌ ಹೋಗಲಿದೆ. ಮದ್ಯವರ್ತಿಗಳು ಮಾರಾಟ ಮಾಡಿಕೊಳ್ಳಲು ಸಾಧ್ಯವಿಲ್ಲದಾಗಿದೆ ಎಂದರು.

ADVERTISEMENT

ಗ್ರಾಹಕರು 3 ಬಾರಿ ಸರ್ಕಾರಿ ನ್ಯಾಯಬೆಲೆ ಅಂಗಡಿಯಿಂದ ಆಹಾರ ಧಾನ್ಯವನ್ನು ಪಡೆಯದಿದ್ದರೆ ಪಡಿತರ ಕಾರ್ಡ್‌ ರದ್ದಾಗಲಿದೆ. ತಾಲ್ಲೂಕಿನಲ್ಲಿ 67 ಸಾವಿರ ಪಡಿತರ ಕಾರ್ಡ್‌ಗಳು ಇವೆ. ಈ ಹಿಂದೆ ಕೇವಲ 25 ಸಾವಿರ ಕಾರ್ಡ್‌ಗಳು ಮಾತ್ರ ಇದ್ದವು. ಈಗ 5,650 ಹೊಸ ಪಡಿತರ ಕಾರ್ಡ್‌ಗಳು ಅಂಚೆ ಮೂಲಕ ಮನೆಗಳಿಗೆ ತಲುಪಲಿವೆ ಎಂದರು.

ಕ್ಷೀರಭಾಗ್ಯ ಯೋಜನೆ ಜಾರಿಯಿಂದ ಶಾಲಾ ಮಕ್ಕಳಿಗೂ ಉಪಯೋಗವಾಗಿದೆ. ಇದಲ್ಲದೆ ಹಾಲು ಉತ್ಪಾದಕರಿಗು ₹5 ಸಹಾಯಧನ ದೊರೆಯುವಂತಾಗಿದೆ. ಇದರಿಂದ ಗ್ರಾಮೀಣ ಪ್ರದೇಶದಲ್ಲಿ ಹೈನುಗಾರಿಕೆಯನ್ನು ನಂಬಿದ್ದ ರೈತರಿಗೆ ಉಪಯೋಗವಾಗಿದೆ. ತಾಲ್ಲೂಕಿನ 9 ಗ್ರಾಮಗಳಲ್ಲಿ ವಿಕಾಸ ಗ್ರಾಮ ಯೋಜನೆಯಲ್ಲಿ ಅಭಿವೃದ್ಧಿ ಕಾಮಗಾರಿಗಳು ನಡೆಯುತ್ತಿವೆ. ಇದಲ್ಲದೆ ಇತ್ತೀಚೆಗೆ ಗ್ರಾಮಗಳಲ್ಲಿ ಕಾಂಕ್ರೀಟ್‌ ರಸ್ತೆಗಳ ನಿರ್ಮಾಣಕ್ಕೆ ₹47 ಕೋಟಿ ಮಂಜೂರಾಗಿದೆ ಎಂದರು.

ಟಿಎಪಿಎಂಸಿಎಸ್‌ ನಿರ್ದೇಶಕ ಅಂಜನಗೌಡ ಮಾತನಾಡಿ, ಅಭಿವೃದ್ಧಿ ವಿಚಾರದಲ್ಲಿ ಪಕ್ಷಭೇದ ಮರೆತು ರಾಜಕಾರಣಿಗಳು ಕೆಲಸ ಮಾಡಬೇಕು. ಆಗ ಮಾತ್ರ ಜನರ ಹಿತಕಾಪಾಡಲು ಸಾಧ್ಯವಾಗಲಿದೆ. ಕ್ಷೇತ್ರವು ಅಭಿವೃದ್ಧಿಯಾಗಲಿದೆ. ವಡ್ಡರಹಳ್ಳಿ ಗ್ರಾಮದಲ್ಲಿ ಸರ್ಕಾರಿ ನ್ಯಾಯಬೆಲೆ ಅಂಗಡಿ ತೆರೆಯುವಂತೆ ಬಹುದಿನಗಳಿಂದಲು ಬೇಡಿಕೆ ಇತ್ತು. ಈಗ ಟಿಎಪಿಎಂಎಸ್‌ ವತಿಯಿಂದ ನ್ಯಾಯಬೆಲೆ ಅಂಗಡಿಯನ್ನು ತೆರೆಯಲಾಗಿದೆ ಎಂದರು.

ಅಧ್ಯಕ್ಷತೆಯನ್ನು ಟಿಎಪಿಎಂಸಿಎಸ್‌ ಅಧ್ಯಕ್ಷ ಬಿ.ಅಶ್ವತ್ಥನಾರಾಯಣ ವಹಿಸಿದ್ದರು. ನಿರ್ದೇಶಕರಾದ ಆನಂದ್‌, ಕೆ.ಸಿ.ಲಕ್ಷ್ಮೀನಾರಾಯಣ್‌, ಎಂ.ಗೋವಿಂದ
ರಾಜ್‌, ಮಾರೇಗೌಡ, ಜವಾಜಿ ಸೀತಾರಾಂ, ನಗರಸಭೆ ಸದಸ್ಯ ವಿ.ಎಸ್‌.ರವಿಕುಮಾರ್‌, ಭೂ ನ್ಯಾಯ ಮಂಡಲಿ ಸದಸ್ಯೆ ಜಯಲಕ್ಷ್ಮಮ್ಮ, ಜಿಲ್ಲಾ ಪಂಚಾಯಿತಿ ಸದಸ್ಯ ಜಿ.ಚೆಂಚೇಗೌಡ, ಎಂಪಿಸಿಎಸ್‌ ಅಧ್ಯಕ್ಷ ಶ್ರೀನಿವಾಸ್‌ರೆಡ್ಡಿ, ಗ್ರಾಮ ಪಂಚಾಯಿತಿ ಸದಸ್ಯರಾದ ವಿ.ಎಸ್‌.ಸುರೇಶ್‌, ಅಶೋಕ್‌, ರಾಮಚಂದ್ರ, ರಾಜಗೋಪಾಲ್‌, ಟಿಎಪಿಎಂಸಿಎಸ್‌ ಕಾರ್ಯದರ್ಶಿ ಎನ್‌.ವೆಂಕಟರಾಂ, ಕಾಂಗ್ರೆಸ್‌ ನಗರ ಬ್ಲಾಕ್‌ ಅಧ್ಯಕ್ಷ ಕೆ.ಜಿ.ಅಶೋಕ್‌, ಮುಖಂಡರಾದ ವೆಂಕಟೇಶ್‌, ಹರೀಶ್‌ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.