ADVERTISEMENT

ನೀರು ಪೂರೈಕೆ ವಿಚಾರ: ಗಂಭೀರವಾಗಿ ಪರಿಗಣಿಸಿ

ಎಂ.ಮುನಿನಾರಾಯಣ
Published 12 ಜನವರಿ 2018, 8:59 IST
Last Updated 12 ಜನವರಿ 2018, 8:59 IST

ವಿಜಯಪುರ: ನಗರಾಭಿವೃದ್ಧಿ ಕೋಶದ ಅಧಿಕಾರಿಗಳು ಕುಡಿಯುವ ನೀರಿನ ಪೂರೈಕೆಯ ವಿಚಾರವನ್ನು ಗಂಭೀರವಾಗಿ ಪರಿಗಣಿಸಬೇಕು ಎಂದು ಕಾಂಗ್ರೆಸ್ ನಗರ ಘಟಕದ ಪ್ರಧಾನ ಕಾರ್ಯದರ್ಶಿ ಎಸ್‌. ಮಂಜುನಾಥ್‌ ಒತ್ತಾಯಿಸಿದ್ದಾರೆ.

₹11.5 ಕೋಟಿಗಳ ವೆಚ್ಚದಲ್ಲಿ ಕೈಗೆತ್ತಿಕೊಂಡಿದ್ದ ಕುಡಿಯುವ ನೀರಿನ ಯೋಜನೆ ವಿಫಲವಾಗಿದ್ದು ಫೆಬ್ರುವರಿಯಿಂದ ಜೂನ್ ತಿಂಗಳವರೆಗೆ ಕುಡಿಯುವ ನೀರಿನ ಸಮಸ್ಯೆ ಗಂಭಿರವಾಗಲಿದೆ ಎಂದು ಅಭಿಪ್ರಾಯಪಟ್ಟರು.

ಕರ್ನಾಟಕ ನಗರ ನೀರು ಸರಬರಾಜು ಮತ್ತು ಒಳ ಚರಂಡಿ ಮಂಡಳಿ ಹಾಗು ಪುರಸಭೆ ವಿಜಯಪುರ ಇವರಿಂದ ಯು.ಐ.ಡಿ.ಎಸ್.ಎಸ್. ಎಂ.ಟಿ. ಯೋಜನೆಯಡಿ ಕೊಳವೆ ಬಾವಿಗಳನ್ನು ಕೊರೆಸಲಾಗಿತ್ತು.

ADVERTISEMENT

ಯಲುವಹಳ್ಳಿ ಕೆರೆಯಲ್ಲಿ ಕೊರೆಸಿದ್ದ ಸುಮಾರು 66 ಕೊಳವೆಬಾವಿಗಳ ಪೈಕಿ 44 ಕೊಳವೆ ಬಾವಿಯಲ್ಲಿ ನೀರು ಸಿಕ್ಕಿತ್ತು. ಮೂರು ವರ್ಷಗಳ ನಂತರ 16 ಕೊಳವೆ ಬಾವಿಗಳಿಗೆ ಪಂಪು ಮೋಟಾರ್‌ಗಳನ್ನು ಅಳವಡಿಸಲಾಗಿತ್ತು ಎಂದು ತಿಳಿಸಿದರು. ನಗರದ 23 ವಾರ್ಡ್ ಗಳಿಗೆ ಕುಡಿಯುವ ನೀರು ಪೂರೈಕೆ ಮಾಡಲು ಕೊರೆಸಿದ್ದ 16 ಕೊಳವೆ ಬಾವಿಗಳ ಪೈಕಿ 7 ಕೊಳವೆಬಾವಿಗಳಲ್ಲಿ ಮಾತ್ರ ನೀರು ಬರುತ್ತಿವೆ ಎಂದರು.

ನಾಲ್ಕು ಕಿ.ಮೀಗೂ ಹೆಚ್ಚು ದೂರಕ್ಕೆ ಪೈಪ್‌ ಲೈನ್‌ ಸಂಪರ್ಕ ಮಾಡಲಾಗಿದ್ದು, ಕೆಲವು ವಾರ್ಡ್‌ಗಳಿಗೆ ಪೈಪ್‌ ಲೈನ್‌ ಮುಖಾಂತರ ನೀರು ಲಭ್ಯವಾಗುತ್ತಿಲ್ಲ ಎಂದು ತಿಳಿಸಿದರು. ಪ್ರತಿ ಕೊಳವೆಬಾವಿಯನ್ನು 800 ರಿಂದ 1000 ಅಡಿಗಳಿಗೂ ಹೆಚ್ಚು ಆಳಕ್ಕೆ ಕೊರೆಯಿಸಲಾಗಿದೆ. 3 ಲಕ್ಷ ಲೀಟರ್ ಸಾಮರ್ಥ್ಯದ ನೀರು ಶೇಖರಣಾ ಟ್ಯಾಂಕ್‌, 50 ಸಾವಿರ ಲೀಟರ್‌ ಸಾಮರ್ಥ್ಯದ 2 ಶೇಖರಣಾ ತೊಟ್ಟಿಗಳನ್ನು ನಿರ್ಮಾಣ ಮಾಡಲಾಗಿದೆ ಎಂದರು.

ಮೂರು ಕಡೆಗಳಲ್ಲಿ ಪಂಪ್ ಹೌಸ್ ನಿರ್ಮಾಣ ಮಾಡಲಾಗಿದೆ. 7 ಕೊಳವೆಬಾವಿಗಳಿಂದ ಶೇಖರಿಸಿದಂತಹ ನೀರನ್ನು ಬೃಹತ್ ಪಂಪುಗಳಿಂದ ಪಂಪ್‌ ಮಾಡಿ ಪೈಪ್ ಲೈನ್ ಮೂಲಕ ಪಟ್ಟಣದ ಪಂಪ್ ಹೌಸ್‌ಗೆ ಹಾಯಿಸಲಾಗುತ್ತದೆ.

ಇಲ್ಲಿಂದ ವಾರ್ಡ್‌ಗಳಿಗೆ ನೀರು ಸರಬರಾಜು ಮಾಡುವ ವ್ಯವಸ್ಥೆ ಮಾಡಲಾಗಿದೆಯಾದರು ಎಲ್ಲಾ ವಾರ್ಡ್‌ಗಳಿಗೆ ಸಮರ್ಪಕವಾಗಿ ನೀರು ಪೂರೈಕೆಯಾಗದ ಕಾರಣ ಕೆಲವು ವಾರ್ಡ್‌ಗಳಿಗೆ ಟ್ಯಾಂಕರು ಗಳ ಮೂಲಕ ಪೂರೈಕೆ ಮಾಡಲಾಗುತ್ತಿದೆ ಎಂದರು.

ಪೈಪ್‌ಲೈನ್‌ ಮೂಲಕ ನೀರು ಸರಬರಾಜು ಮಾಡುವ ಭರವಸೆ ಆಗಯೇ ಉಳಿದಿದ್ದು, ಟ್ಯಾಂಕರ್‌ಗಳ ಮೂಲಕ ನೀರು ಸರಬರಾಜು ಮಾಡಲಾಗುತ್ತಿದೆ ಎಂದರು. ಬೇಸಿಗೆಯಲ್ಲಿ ಜನರಿಗೆ ಅಗತ್ಯಕ್ಕೆ ತಕ್ಕಷ್ಟು ನೀರು ಪೂರೈಕೆಯಾಗುವುದು ಅನುಮಾನವಾಗಿದೆ ಎಂದು ಬೇಸರ ವ್ಯಕ್ತ ಪಡಿಸಿದರು.

ಜಿಲ್ಲಾಧಿಕಾರಿ, ಹಾಗೂ ನಗರಾಭಿವೃದ್ಧಿ ಕೋಶದ ಅಧಿಕಾರಿಗಳು ಗಮನಹರಿಸಬೇಕು ಎಂದು ನಾಗರಿಕರಾದ ಮುನಿರಾಜು, ಕೆ.ಮಂಜುನಾಥ್, ನರಸಿಂಹಮೂರ್ತಿ ಒತ್ತಾಯಿಸಿದ್ದಾರೆ.

ಸೌಲಭ್ಯ ವಂಚಿತ ಪುರಸಭೆಯ ಕಾರ್ಮಿಕರು

ಪಂಪ್‌ಹೌಸ್‌ಗಳನ್ನು ನಿರ್ಮಾಣ ಮಾಡಿರುವ ಕಡೆಗೆ ಸಂಚಾರ ಮಾಡಬೇಕಾದರೆ, ಸರಿಯಾದ ರಸ್ತೆಯಿಲ್ಲ. ಇರುವ ಬಂಡಿ ದಾರಿಯ ಇಕ್ಕೆಲುಗಳಲ್ಲಿ ದಟ್ಟವಾಗಿ ಬೆಳೆದು ನಿಂತಿರುವ ಜಾಲಿಮರಗಳು, ಹಾವುಗಳ ಹಾವಳಿ, ಮಳೆ ಬಂದರೆ, ಒಳಗೆ ಬರುವುದೂ ದುಸ್ತರವಾಗಿದೆ. ಕಷ್ಟಪಟ್ಟು ಬಂದರೂ ಪಂಪ್‌ಹೌಸ್‌ನಲ್ಲಿರುವ ವಿದ್ಯುತ್ ಚಾಲಿತ ಯಂತ್ರಗಳ ಬಳಿಯಲ್ಲಿ ಕೆಲಸ ಮಾಡುವ ನೌಕರರಿಗೆ ಮುಂಜಾಗ್ರತಾ ಕ್ರಮವಾಗಿ ಹೆಲ್ಮೆಟ್‌, ಕಾಲುಗಳಿಗೆ ಬೂಟುಗಳು ಸೇರಿದಂತೆ ಯಾವುದೇ ಸೌಲಭ್ಯಗಳನ್ನು ಒದಗಿಸಿಲ್ಲ, ಹಗಲು ರಾತ್ರಿ ಇಲ್ಲೆ ಇರಬೇಕು. ಪದೇ ಪದೇ ಕೈಕೊಡುವ ವಿದ್ಯುತ್‌ನಿಂದಾಗಿ ನೌಕರರು ಮೂರು ಪಂಪ್‌ಹೌಸ್‌ಗಳಿಗೆ ಸುತ್ತಾಡಬೇಕಾಗಿರುವುದರಿಂದ ಪರದಾಡುವಂತಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.