ADVERTISEMENT

ಪೋಲಿಯೊಮುಕ್ತ ದೇಶಕ್ಕೆ ಸಹಕರಿಸಿ

​ಪ್ರಜಾವಾಣಿ ವಾರ್ತೆ
Published 29 ಜನವರಿ 2018, 9:10 IST
Last Updated 29 ಜನವರಿ 2018, 9:10 IST

ವಿಜಯಪುರ: ಭಾರತವನ್ನು ಪೋಲಿಯೊ ಮುಕ್ತವನ್ನಾಗಿಸಲು ಲಸಿಕೆಯನ್ನು ಮಕ್ಕಳಿಗೆ ಹಾಕಿಸಬೇಕು ಎಂದು ಪುರಸಭಾ ಸದಸ್ಯ ಎಸ್.ಭಾಸ್ಕರ್ ಹೇಳಿದರು. ಸಮುದಾಯ ಆರೋಗ್ಯ ಕೇಂದ್ರದಲ್ಲಿ ಭಾನುವಾರ ಆಯೋಜಿಸಿದ್ದ ಪಲ್ಸ್ ಪೋಲಿಯೊ ಕಾರ್ಯಕ್ರಮ ಉದ್ಘಾಟನೆ ಮಾಡಿ ಅವರು ಮಾತನಾಡಿದರು.

1994ರಲ್ಲಿ ಪ್ರಾರಂಭವಾದ ಈ ಪೋಲಿಯೊ ಹನಿ ಯೋಜನೆಯಿಂದಾಗಿ ದೇಶದಲ್ಲಿ ಸಾಕಷ್ಟು ಪ್ರಗತಿ ಕಂಡು ಬಂದಿದೆ. ಪೋಲಿಯೊ ಲಸಿಕೆ ಹಾಕುವ ಅಭಿಯಾನಕ್ಕೆ ರಾಜ್ಯ ಹಾಗೂ ಕೇಂದ್ರ ಸರ್ಕಾರಗಳು ಸಹಕಾರ ನೀಡಿವೆ. ಪೋಲಿಯೊದಿಂದ ಉಂಟಾಗುವ ಅಂಗವಿಕಲತೆಯ ಜೊತೆಯಲ್ಲಿ ಭೀಕರ ಪರಿಣಾಮಗಳನ್ನು ಎದುರಿಸಬಹುದಾದ ಈ ಮಾರಕ ರೋಗ ತಡೆಗಟ್ಟಲು ಸಮೂಹದ ಸಹಕಾರ ಅತ್ಯಗತ್ಯವಾಗಿದೆ ಎಂದರು.

ಐದು ವರ್ಷ ವಯೋಮಿತಿ ಒಳಗಿನ ಎಲ್ಲಾ ಮಕ್ಕಳಿಗೂ ಕಡ್ಡಾಯವಾಗಿ ಪೋಲಿಯೊ ಲಸಿಕೆ ಹಾಕಿಸುವ ಮೂಲಕ ಪೋಷಕರು ಸಹಕಾರ ನೀಡಬೇಕು. 5 ವರ್ಷದೊಳಗಿನ ಎಲ್ಲಾ ಮಕ್ಕಳನ್ನು ಹತ್ತಿರದ ಲಸಿಕಾ ಕೇಂದ್ರಕ್ಕೆ ಕರೆದೊಯ್ದು ಲಸಿಕೆ ಹಾಕಿಸಿ. ದೇಶದಾದ್ಯಂತ ಲಸಿಕೆ ಹಾಕಲಾಗುತ್ತಿದ್ದು, ಇದರ ಉಪಯೋಗ ಪಡೆದುಕೊಳ್ಳಬೇಕು ಎಂದರು.

ADVERTISEMENT

ಮುಖ್ಯಾಧಿಕಾರಿ ಎ.ಎಚ್.ನಾಗರಾಜ್ ಮಾತನಾಡಿ, ‘ಆರೋಗ್ಯವಂತ ಸಮಾಜ ನಿರ್ಮಾಣ ಮಾಡುವುದು ನಮ್ಮೆಲ್ಲರ ಕರ್ತವ್ಯ. ಮಕ್ಕಳನ್ನು ಪೋಲಿಯೊ ಮುಕ್ತರನ್ನಾಗಿ ಮಾಡಲು ಸಾಕಷ್ಟು ಮಂದಿ ಶ್ರಮಿಸುತ್ತಿದ್ದಾರೆ. ರೋಟರಿ ಸೇರಿ ಬಹಳಷ್ಟು ಸಂಸ್ಥೆಗಳು ಈ ಕಾರ್ಯಕ್ಕಾಗಿ ಕೈ ಜೋಡಿಸಿವೆ. ನಾಗರಿಕರು ಹೆಚ್ಚಿನ ಸಹಕಾರ ನೀಡಿದಾಗ ಮಾತ್ರವೇ ಇಂತಹ ಉತ್ತಮ ಕಾರ್ಯಕ್ರಮಗಳು ಯಶಸ್ವಿಯಾಗಲು ಸಾಧ್ಯ’ ಎಂದರು.

ವೈದ್ಯಾಧಿಕಾರಿ ಡಾ.ಮಂಜುಳಾ ಮಾತನಾಡಿ, ಪೋಲಿಯೊ ಲಸಿಕೆಯಿಂದ ಮಕ್ಕಳ ಮೇಲೆ ಯಾವುದೇ ದುಷ್ಪರಿಣಾಮ ಆಗುವುದಿಲ್ಲ. ಈ ಬಗ್ಗೆ ಅನೇಕರಲ್ಲಿ ತಪ್ಪು ಅಭಿಪ್ರಾಯಗಳಿವೆ. ಮಗುವಿನ ಬಾಯಿಗೆ ಎರಡು ಹನಿ ಪೋಲಿಯೊ ಹನಿಗಳನ್ನು ಹಾಕಿ ಅದರ ಎಳೆಚಿಗುರು ಎಡ ಕಿರುಬೆರಳಿಗೆ ನೇರಳೆ ಬಣ್ಣದ ಗುರುತನ್ನು ಹಾಕಲಾಗುತ್ತದೆ ಎಂದರು.

ಡಾ. ನರಸಿಂಹಮೂರ್ತಿ, ರೋಟರಿ ಸಂಸ್ಥೆಯ ಎಸ್.ಬಸವರಾಜು, ಪುರಸಭಾ ಆರೋಗ್ಯಾಧಿಕಾರಿ ಉದಯಶಂಕರ್ ರಾವ್, ಶಾರದಮ್ಮ, ಕಲಾ, ನಾಗಲಕ್ಷ್ಮೀ, ನಾಗರಾಜ್ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.