ಆನೇಕಲ್ : ಸರ್ಕಾರಿ ಶಿಕ್ಷಕರ ಶ್ರಮದಾನದಿಂದ ತಾಲ್ಲೂಕಿನ ಬ್ಯಾಗಡದೇನಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕಾವಲಹೊಸಹಳ್ಳಿ ಜನತಾ ಕಾಲೋನಿಯ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯ ಅಂದ ಹೆಚ್ಚಿದೆ.
ವಾರದಲ್ಲೊಂದು ಸಿಗುವ ಭಾನುವಾರದ ರಜೆಯನ್ನು ಆನೇಕಲ್ ತಾಲ್ಲೂಕಿನ ಶಿಕ್ಷಕರು ಸರ್ಕಾರಿ ಶಾಲೆಗೆ ಮೀಸಲಿಟ್ಟು ಪರಿಣಾಮ, ಶಿಥಿಲಗೊಂಡಿದ್ದ ಆ ಶಾಲಾ ಕಟ್ಟಡ ದುರಸ್ತಿಯಾಗಿದೆ. ಅಲ್ಲದೆ ಶಾಲೆಯ ಚೆಂದ ಹೆಚ್ಚಿದೆ. ಅಲ್ಲದೆ ಕಲಿಕೆಗೆ ಪೂರಕ ವಾತಾವರಣ ನಿರ್ಮಾಣವಾಗಿದೆ.
ಕ್ಷೇತ್ರ ಶಿಕ್ಷಣಾಧಿಕಾರಿ ಜೆ.ಎಂ.ಜಯಲಕ್ಷ್ಮಿ ನೇತೃತ್ವದಲ್ಲಿ ತಾಲ್ಲೂಕಿನ 50ಕ್ಕೂ ಶಿಕ್ಷಕರು ಶಾಲೆಯನ್ನು ನವೀಕರಣಗೊಳಿಸಿದ್ದಾರೆ.
ಜನತಾಕಾಲೋನಿ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯು ಸುಣ್ಣಬಣ್ಣವಿಲ್ಲದೇ ಹಾಳಾಗಿತ್ತು. ಈ ಶಾಲೆಗೆ ಕಾಯಕಲ್ಪ ನೀಡುವ ಸಂಕಲ್ಪ ಮಾಡಿದ ಕ್ಷೇತ್ರ ಶಿಕ್ಷಣಾಧಿಕಾರಿ ಜೆ.ಎಂ.ಜಯಲಕ್ಷ್ಮೀ ಅವರು ಶಿಕ್ಷಕರನ್ನು ಒಗ್ಗೂಡಿಸಿ ಭಾನುವಾರ ಶಾಲೆಯಲ್ಲಿ ಶ್ರಮದಾನ ನಡೆಸಲು ಕರೆ ನೀಡಿದ್ದರು.
ಅದರಂತೆ 50ಕ್ಕೂ ಹೆಚ್ಚು ಶಿಕ್ಷಕರು ಭಾನುವಾರ ಬೆಳಗಿನಿಂದಲೂ ಶಾಲೆಯ ಸ್ವಚ್ಛತೆ, ಶಾಲೆಯಲ್ಲಿ ಗೋಡೆ ಬರಹ, ಶಾಲೆಗೆ ಅವಶ್ಯಕತೆಯಿರುವ ಪಾಠೋಪಕರಣಗಳು ತಯಾರಿಕೆ ಮಾಡಿದರು. ಬೆಳಗ್ಗೆ 8ಕ್ಕೆ ಪ್ರಾರಂಭವಾದ ಶ್ರಮದಾನ ಸಂಜೆ 4ರವರೆಗೂ ನಡೆಯಿತು. ಈ ಅವಧಿಯಲ್ಲಿ ಶಾಲೆಯ ನೋಟವೇ ಸಂಪೂರ್ಣವಾಗಿ ಬದಲಾಯಿತು. ಶಾಲೆ ಶೃಂಗಾರಗೊಂಡಿತು. ವಿದ್ಯಾರ್ಥಿಗಳಿಗೆ ಅವಶ್ಯಕವಿರುವ ಎಲ್ಲಾ ಪಾಠೋಪಕರಣಗಳನ್ನು ಶಿಕ್ಷಕರು ತಯಾರಿಸಿದರು.
ಜಿಎಂಆರ್ ಎಲೈಟೆ ಅಕಾಡೆಮಿಯ ಜಿ.ಮುನಿರಾಜು, ಬ್ಯಾಗಡದೇನಹಳ್ಳಿ ಗ್ರಾಮ ಪಂಚಾಯಿತಿ ಅಧ್ಯಕ್ಷ ಮಂಜುಳ ಮುನಿರಾಜು, ಉಪಾಧ್ಯಕ್ಷೆ ರೇಣುಕಾ, ಮುಖಂಡರಾದ ಸುನೀಲ್, ಲೋಕೇಶ್, ಸರ್ಕಾರಿ ನೌಕರರ ಸಂಘದ ಖಜಾಂಚಿ ನಾಗರಾಜು, ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಚಂದ್ರಶೇಖರ್, ಪ್ರಧಾನ ಕಾರ್ಯದರ್ಶಿ ಲಿಂಗಮೂರ್ತಿ, ಖಜಾಂಚಿ ಗೋವಿಂದರಾಜು, ಸಾವಿತ್ರಿಬಾಯಿ ಫುಲೆ ಶಿಕ್ಷಕಿಯರ ಸಂಘದ ತಾಲ್ಲೂಕು ಅಧ್ಯಕ್ಷೆ ಸರೋಜಮ್ಮ, ಪ್ರಧಾನ ಕಾರ್ಯದರ್ಶಿ ಕೋಮಲ, ಖಜಾಂಚಿ ನಾರಾಯಣಮ್ಮ, ಸಿಆರ್‌ಪಿಗಳಾದ ಮುನಿಕೃಷ್ಣಪ್ಪ, ರಾಘವೇಂದ್ರ, ದಾಸಣ್, ಶಾಲಾ ಮುಖ್ಯೋಪಾಧ್ಯಾಯಿನಿ ವಿಜಯಲಕ್ಷ್ಮೀ, ಮಂತ್ರಫಾರ್ ಚೇಂಜ್ ಸಂಸ್ಥೆಯ ಪ್ರದೀಪ್ ಇದ್ದರು.
ಶಿಕ್ಷಣಾಧಿಕಾರಿಗಳು ಆಸಕ್ತಿ ವಹಿಸಿ ಇಂತಹ ಉತ್ತಮ ಕಾರ್ಯಕ್ರಮ ರೂಪಿಸಿದ್ದಾರೆ. ತಿಂಗಳಲ್ಲಿ ಒಂದು ದಿನ ಶ್ರಮದಾನ ಮಾಡುವ ಮೂಲಕ ಸರ್ಕಾರಿ ಶಾಲೆಗಳನ್ನು ಸುಂದರಗೊಳಿಸಬೇಕಾಗಿದೆ
-ಶಾಂತಮ್ಮ ಜಿಲ್ಲಾ ಘಟಕದ ಗೌರವಾಧ್ಯಕ್ಷ ಸಾವಿತ್ರಿಬಾಯಿ ಫುಲೆ ಶಿಕ್ಷಕಿಯರ ಸಂಘ
‘ನಮ್ಮ ಶಾಲೆ’ ಎಂಬ ಭಾವನೆ ಮೂಡಬೇಕು
ಶಾಲೆಯು ದೇವಾಲಯವಿದ್ದಂತೆ ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ನೀಡಲು ಸರ್ಕಾರಿ ಶಾಲೆಗಳನ್ನು ಸಬಲೀಕರಣ ಮಾಡಬೇಕಾಗಿದೆ. ಈ ನಿಟ್ಟಿನಲ್ಲಿ ಭಾನುವಾರ ರಜೆ ದಿನವಾದರೂ ಎಲ್ಲಾ ಶಿಕ್ಷಕರು ಆಸಕ್ತಿಯಿಂದ ಪಾಲ್ಗೊಂಡು ನಮ್ಮ ಶಾಲೆ ಎಂಬ ಭಾವನೆಯಿಂದ ಶಾಲೆಗೆ ಸುಂದರ ರೂಪ ನೀಡಿರುವುದು ಸಂತಸ ತಂದಿದೆ ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಜೆ.ಎಂ.ಜಯಲಕ್ಷ್ಮೀ ತಿಳಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.