ADVERTISEMENT

ಬಹುಶಿಸ್ತೀಯ ಅಧ್ಯಯನಕ್ಕೆ ಸಲಹೆ

ಬೆಂಗಳೂರಿನ ಐಐಐಟಿ ಅಧ್ಯಕ್ಷ ಕ್ರಿನ್ ಗೋಪಾಲಕೃಷ್ಣನ್ ಅಭಿಮತ

​ಪ್ರಜಾವಾಣಿ ವಾರ್ತೆ
Published 5 ಜುಲೈ 2022, 4:45 IST
Last Updated 5 ಜುಲೈ 2022, 4:45 IST
ಆನೇಕಲ್ ತಾಲ್ಲೂಕಿನ ಎಲೆಕ್ಟ್ರಾನಿಕ್‌ಸಿಟಿಯ ಇಂಟರ್ ನ್ಯಾಷನಲ್ ಇನ್‌ಸ್ಟಿಟ್ಯೂಟ್‌ ಆಫ್ ಇನ್ಫರ್ಮೆಷನ್ ಟೆಕ್ನಾಲಜಿಯಲ್ಲಿ ಆಯೋಜಿಸಿದ್ದ ಘಟಿಕೋತ್ಸವದಲ್ಲಿ ವಿದ್ಯಾರ್ಥಿಗಳಿಗೆ ಪದವಿ ಪ್ರದಾನ ಮಾಡಲಾಯಿತು
ಆನೇಕಲ್ ತಾಲ್ಲೂಕಿನ ಎಲೆಕ್ಟ್ರಾನಿಕ್‌ಸಿಟಿಯ ಇಂಟರ್ ನ್ಯಾಷನಲ್ ಇನ್‌ಸ್ಟಿಟ್ಯೂಟ್‌ ಆಫ್ ಇನ್ಫರ್ಮೆಷನ್ ಟೆಕ್ನಾಲಜಿಯಲ್ಲಿ ಆಯೋಜಿಸಿದ್ದ ಘಟಿಕೋತ್ಸವದಲ್ಲಿ ವಿದ್ಯಾರ್ಥಿಗಳಿಗೆ ಪದವಿ ಪ್ರದಾನ ಮಾಡಲಾಯಿತು   

ಆನೇಕಲ್:ಪದವಿಯು ವಿದ್ಯಾರ್ಥಿ ಜೀವನದ ಮಹತ್ವದ ಮೈಲಿಗಲ್ಲಾಗಿದೆ. ವೃತ್ತಿಪರ ಪ್ರಯಾಣ ಪ್ರಾರಂಭಿಸುವ ವಿದ್ಯಾರ್ಥಿಗಳು ದೇಶಕ್ಕೆ ಕೊಡುಗೆ ನೀಡುವ ನಿಟ್ಟಿನಲ್ಲಿ ಪ್ರಯತ್ನ ಮಾಡಬೇಕು. ಅತ್ಯುತ್ತಮ ಕೌಶಲಗಳು, ತಂತ್ರಜ್ಞಾನದಲ್ಲಿ ಉದ್ಯಮಗಳು ಬಯಸುವ ಬಹುಶಿಸ್ತೀಯ ಅಧ್ಯಯನ ನಡೆಸುವುದರಿಂದ ಉನ್ನತ ಉದ್ಯೋಗಗಳನ್ನು ಪಡೆಯಲು ಸಾಧ್ಯ ಎಂದುಬೆಂಗಳೂರಿನ ಐಐಐಟಿ ಅಧ್ಯಕ್ಷ ಕ್ರಿನ್‌ ಗೋಪಾಲಕೃಷ್ಣನ್‌ ತಿಳಿಸಿದರು.

ತಾಲ್ಲೂಕಿನ ಎಲೆಕ್ಟ್ರಾನಿಕ್‌ಸಿಟಿಯ ಇಂಟರ್‌ ನ್ಯಾಷನಲ್‌ ಇನ್‌ಸ್ಟಿಟ್ಯೂಟ್‌ ಆಫ್‌ ಇನ್ಫರ್ಮೆಷನ್‌ ಟೆಕ್ನಾಲಜಿಯಲ್ಲಿ ಆಯೋಜಿಸಿದ್ದ ಘಟಿಕೋತ್ಸವದಲ್ಲಿ ಪದವಿ ಪ್ರದಾನ ಮಾಡಿಅವರು ಮಾತನಾಡಿದರು.

ಇತ್ತೀಚಿನ ದಿನಗಳಲ್ಲಿ ಮಾಹಿತಿ ತಂತ್ರಜ್ಞಾನ ಕ್ಷೇತ್ರದಲ್ಲಿ ಹೆಚ್ಚಿನ ಉದ್ಯೋಗಾವಕಾಶಗಳಿವೆ. ವಿದ್ಯಾರ್ಥಿಗಳು ತಮ್ಮ ಸಾಮರ್ಥ್ಯವನ್ನು ತೋರಬೇಕು. ವಿದ್ಯಾರ್ಥಿಗಳು ಪದವಿಯ ನಂತರ ದೇಶಕ್ಕೆ ಆಸ್ತಿಯಾಗಬೇಕು. ಸಮಾಜಮುಖಿ ಸಂಶೋಧನೆಗಳಲ್ಲಿ ತೊಡಗಿಕೊಳ್ಳುವ ಮೂಲಕ ತಾವು ಕಲಿತ ಸಮಾಜದ ಋಣವನ್ನು ತೀರಿಸಬೇಕು ಎಂದರು.

ADVERTISEMENT

ಐಐಐಟಿ ನಿರ್ದೇಶಕ ಪ್ರೊ.ದೇಬಬ್ರತ ದಾಸ್‌ ಮಾತನಾಡಿ, ಆರ್ಥಿಕ ಬೆಳವಣಿಗೆ ಮಾಹಿತಿ ತಂತ್ರಜ್ಞಾನವು ಸುಸ್ಥಿರ ಅಭಿವೃದ್ಧಿಗೆ ಕಾರಣವಾಗಿದೆ. ಶಿಕ್ಷಣ, ಹಣಕಾಸು, ಆರೋಗ್ಯ ಕ್ಷೇತ್ರಗಳಲ್ಲಿ ಕ್ರಾಂತಿಕಾರಿ ಕೊಡುಗೆಗಳನ್ನು ನೀಡಲು ಐಟಿ ಪದವೀಧರರಿಗೆ ಹೆಚ್ಚಿನ ಅವಕಾಶಗಳಿವೆ ಎಂದು ತಿಳಿಸಿದರು.

ಕೋವಿಡ್‌ ಪಿಡುಗಿನ ಸಂದರ್ಭದಲ್ಲಿ ಸವಾಲುಗಳನ್ನು ಎದುರಿಸಲು ಐಟಿ ಕ್ಷೇತ್ರದ ಕೊಡುಗೆ ಅಪಾರ. ಐಐಐಟಿ ಕಾಲೇಜಿನ ಒಬ್ಬ ವಿದ್ಯಾರ್ಥಿಯು ವಾರ್ಷಿಕ ₹ 2 ಕೋಟಿ ವೇತನದ ಪ್ಯಾಕೇಜ್‌ ಪಡೆದಿದ್ದಾರೆ. ಹಾಗಾಗಿ, ಸಾಧನೆಗೆ ಸಾಕಷ್ಟು ಅವಕಾಶಗಳಿವೆ ಎಂದರು.

ಮಾಹಿತಿ ತಂತ್ರಜ್ಞಾನ ಕ್ಷೇತ್ರದಲ್ಲಿ ಕರ್ನಾಟಕ ದೇಶದಲ್ಲಿಯೇ ಮೊದಲ ಸ್ಥಾನದಲ್ಲಿದೆ. ಈ ಸ್ಥಾನವನ್ನು ಮತ್ತಷ್ಟು ಅಭಿವೃದ್ಧಿಪಡಿಸುವ ನಿಟ್ಟಿನಲ್ಲಿ ವಿದ್ಯಾರ್ಥಿಗಳು ಕ್ಷೇತ್ರಕ್ಕೆ ಕೊಡುಗೆ ನೀಡಬೇಕು ಎಂದು ಸಲಹೆ ನೀಡಿದರು.

ಘಟಿಕೋತ್ಸವದಲ್ಲಿ 294 ವಿದ್ಯಾರ್ಥಿಗಳು ಪದವಿ ಪ್ರಮಾಣ ಪತ್ರ ಪಡೆದರು. 10 ಮಂದಿ ಪಿಎಚ್‌.ಡಿ ಪದವಿ, 23 ಮಂದಿ ಎಂಎಸ್ಸಿ ಪದವಿ ಪಡೆದರು. ಸೋಹಂದಾಸ್‌, ಅಮೋಘ್ ಜೋಹ್ರಿ ಮತ್ತು ಗಾಯತ್ರಿ ರಾಮನ್‌ ಅವರು ಚಿನ್ನದ ಪದಕಕ್ಕೆ ಭಾಜನರಾಗಿದ್ದಾರೆ.

ಇನ್ಫೋಸಿಸ್‌ ಲಿಮಿಟೆಡ್‌ ಮತ್ತು ಆಕ್ಸಿಲರ್‌ ವೆಂಚರ್ಸ್‌ನ ಸಹ ಸಂಸ್ಥಾಪಕ ಎಸ್‌.ಡಿ. ಶಿಬುಲಾಲ್‌, ನಿಮ್ಹಾನ್ಸ್‌ನ ನಿರ್ದೇಶಕಿ ಡಾ.ಪ್ರತಿಮಾ ಮೂರ್ತಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.