ADVERTISEMENT

ಅಪಘಾತ ತಾಣಗಳಾಗಿರುವ ಹೆದ್ದಾರಿಗಳು

​ಪ್ರಜಾವಾಣಿ ವಾರ್ತೆ
Published 2 ಜನವರಿ 2019, 13:33 IST
Last Updated 2 ಜನವರಿ 2019, 13:33 IST
ದೇವನಹಳ್ಳಿಯಿಂದ ವಿಜಯಪುರದ ಕಡೆಗೆ ಸಂಚರಿಸುವ ಮುಖ್ಯ ರಸ್ತೆಯಲ್ಲಿ ಭೈಪಾಸ್ ರಸ್ತೆಗೆ ಸಂಪರ್ಕ ಕಲ್ಪಿಸುವ ಕಡೆ ಸೂಚನಾ ಫಲಕಗಳಿಲ್ಲದಿರುವುದು
ದೇವನಹಳ್ಳಿಯಿಂದ ವಿಜಯಪುರದ ಕಡೆಗೆ ಸಂಚರಿಸುವ ಮುಖ್ಯ ರಸ್ತೆಯಲ್ಲಿ ಭೈಪಾಸ್ ರಸ್ತೆಗೆ ಸಂಪರ್ಕ ಕಲ್ಪಿಸುವ ಕಡೆ ಸೂಚನಾ ಫಲಕಗಳಿಲ್ಲದಿರುವುದು   

ವಿಜಯಪುರ: ಅಪಘಾತದ ತಾಣಗಳಾಗಿರುವ ದೇವನಹಳ್ಳಿ, ವಿಜಯಪುರ ಮುಖ್ಯ ರಸ್ತೆ ಹಾಗೂ ವೆಂಕಟಗಿರಿಕೋಟೆಯಿಂದ ದೇವನಹಳ್ಳಿಯ ಕಡೆಗೆ ಸಂಚರಿಸುವ ರಸ್ತೆಗಳಲ್ಲಿ ಸುರಕ್ಷತಾ ಕ್ರಮಗಳನ್ನು ಕೈಗೊಳ್ಳುವಂತೆ ಸಂಬಂಧಪಟ್ಟ ಇಲಾಖೆ ಅಧಿಕಾರಿಗಳು ಮನವಿ ಮಾಡಲಾಗಿದೆ. ಆದರೂ ಕ್ರಮ ಕೈಗೊಂಡಿಲ್ಲ ಎಂದು ಪ್ರಜಾ ವಿಮೋಚನಾ ಬಹುಜನ ಸಮಿತಿ ರಾಜ್ಯ ಘಟಕದ ಅಧ್ಯಕ್ಷ ಬಿಜ್ಜವಾರ ನಾಗರಾಜ್ ಆರೋಪಿಸಿದರು.

‘ಹೈದರಾಬಾದ್ ನಿಂದ ಬೆಂಗಳೂರಿಗೆ ಸಂಚರಿಸುವ ರಾಷ್ಟ್ರೀಯ ಹೆದ್ದಾರಿ 234 ರಲ್ಲಿರುವ ವೆಂಕಟಗಿರಿಕೋಟೆ ಗೇಟ್, ಬುಳ್ಳಹಳ್ಳಿ ಗೇಟ್, ಆವತಿ ಮುಂತಾದ ಕಡೆಗಳಲ್ಲಿ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದವರಾಗಲಿ, ಲೋಕೋಪಯೋಗಿ ಇಲಾಖೆಯ ಅಧಿಕಾರಿಗಳಾಗಲಿ ಮುಂಜಾಗ್ರತಾ ಕ್ರಮಗಳನ್ನು ತೆಗೆದುಕೊಂಡಿಲ್ಲ. ಇಲ್ಲಿ ಹೊರ ಪೊಲೀಸ್ ಠಾಣೆ ತೆರೆಯುವಂತೆ ಆಗ್ರಹಿಸಿದ್ದೇವೆ. ಯಾವುದಕ್ಕೂ ಸ್ಪಂದಿಸದೆ ಇರುವುದರಿಂದ ಅಮಾಯಕರು ಬಲಿಯಾಗುತ್ತಲೇ ಇದ್ದಾರೆ’ ಎಂದು ಆಕ್ರೋಶ ವ್ಯಕ್ತಪಡಿಸಿದರು.

‘ದೇವನಹಳ್ಳಿಯಿಂದ ವಿಜಯಪುರದ ಮಧ್ಯೆ ಇರುವ ಯಲಿಯೂರು ಗೇಟ್‌ನಿಂದ ಬೈಪಾಸ್‌ಗೆ ಸಂಪರ್ಕ ಕಲ್ಪಿಸುವ ರಸ್ತೆಯ ನಡುವೆ ಬಹಳಷ್ಟು ಅಪಘಾತಗಳು ಸಂಭವಿಸಿ ಅನೇಕ ಮಂದಿ ಸಾವನ್ನಪ್ಪಿದ್ದಾರೆ. ಗಾಯಗೊಂಡಿರುವವರು ಆಸ್ಪತ್ರೆಗಳಲ್ಲಿ ಇಂದಿಗೂ ಚಿಕಿತ್ಸೆ ಪಡೆದುಕೊಳ್ಳುತ್ತಿದ್ದಾರೆ. ದೇವನಹಳ್ಳಿ ಕಡೆಯಿಂದ ವಿಜಯಪುರದ ಕಡೆಗೆ ಸಂಚರಿಸುವ ಮಾರ್ಗದಲ್ಲಿ ಬೈಪಾಸ್ ರಸ್ತೆಗೆ ತಿರುವು ಪಡೆಯುವ ಕಡೆ ಸೂಚನಾ ಫಲಕಗಳನ್ನು ಅಳವಡಿಸದ ಕಾರಣ ಕೆಲವು ಭಾರಿ ವಾಹನಗಳು ವಿಜಯಪುರಕ್ಕೆ ಬಂದು ಕೋಲಾರದ ಕಡೆಗೆ ಹೋಗುತ್ತವೆ. ಇದರಿಂದ ಪಟ್ಟಣದಲ್ಲೂ ಸಂಚಾರದ ಸಮಸ್ಯೆ ಉಂಟಾಗುತ್ತಿದೆ. ಈ ಬಗ್ಗೆ ಸಂಬಂಧಪಟ್ಟವರು ಗಮನಹರಿಸಬೇಕು’ ಎಂದು ಒತ್ತಾಯಿಸಿದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.