ADVERTISEMENT

ಕಾರ್ಯಕರ್ತರು ಮತದಾರರ ವಿಶ್ವಾಸಗಳಿಸಿ

ಬಿಜೆಪಿ ಜಿಲ್ಲಾ ಘಟಕ ಉಪಾಧ್ಯಕ್ಷ ಎಚ್.ಎಂ.ರವಿಕುಮಾರ್ ಕಿವಿಮಾತು

​ಪ್ರಜಾವಾಣಿ ವಾರ್ತೆ
Published 4 ಏಪ್ರಿಲ್ 2019, 13:17 IST
Last Updated 4 ಏಪ್ರಿಲ್ 2019, 13:17 IST
ಬಿಜೆಪಿ ಶಕ್ತಿ ಕೇಂದ್ರದ ಕಾರ್ಯಕರ್ತರ ಸಭೆಯಲ್ಲಿ ಪಾಲ್ಗೊಂಡಿದ್ದ ಬಿಜೆಪಿ ಮುಖಂಡರು
ಬಿಜೆಪಿ ಶಕ್ತಿ ಕೇಂದ್ರದ ಕಾರ್ಯಕರ್ತರ ಸಭೆಯಲ್ಲಿ ಪಾಲ್ಗೊಂಡಿದ್ದ ಬಿಜೆಪಿ ಮುಖಂಡರು   

ದೇವನಹಳ್ಳಿ: ಬಿಜೆಪಿ ಕಾರ್ಯಕರ್ತರು ಮತದಾರರ ವಿಶ್ವಾಸಗಳಿಸಿ ಮತಯಾಚಿಸಬೇಕು ಎಂದು ಬಿಜೆಪಿ ಜಿಲ್ಲಾ ಘಟಕ ಉಪಾಧ್ಯಕ್ಷ ಎಚ್.ಎಂ.ರವಿಕುಮಾರ್ ಕಿವಿಮಾತು ಹೇಳಿದರು.

ಇಲ್ಲಿನ ಕೊಯಿರಾ ಗ್ರಾಮದ ಸಮುದಾಯ ಭವನದಲ್ಲಿ ಬಿಜೆಪಿ ಶಕ್ತಿ ಕೇಂದ್ರ ಮತ್ತು ವಿವಿಧ ಘಟಕ ಪದಾಧಿಕಾರಿಗಳ ಮತ್ತು ಕಾರ್ಯಕರ್ತರ ಸಭೆಯಲ್ಲಿ ಮಾತನಾಡಿದರು. ಈ ಹಿಂದಿನ ಚುನಾವಣೆಗಿಂತ ಪ್ರಸ್ತುತ ಲೋಕಸಭಾ ಚುನಾವಣ ಪರಿಸ್ಥಿತಿ ಕಠಿಣವಾಗಿದೆ. ಕಳೆದ ಲೋಕಸಭಾ ಚುನಾವಣೆ ದೇವನಹಳ್ಳಿ ವಿಧಾನಸಭಾ ಕ್ಷೇತ್ರದಲ್ಲಿ ಜೆಡಿಎಸ್ 59 ಸಾವಿರ, ಕಾಂಗ್ರೆಸ್ 54 ಸಾವಿರ, ಬಿಜೆಪಿ 37 ಸಾವಿರ ಮತ ಪಡೆದಿದೆ. ಈ ಬಾರಿ ಬಿಜೆಪಿ ಕನಿಷ್ಠ ಒಂದು ಲಕ್ಷ ಮತ ಪಡೆಯಬೇಕಾದ ಅನಿವಾರ್ಯತೆ ಇದೆ ಎಂದು ಹೇಳಿದರು.

ಬಿಜೆಪಿ ವಿರೋಧಿಗಳ ಬಗ್ಗೆ ಕೀಳಾಗಿ ಮಾತನಾಡಬಾರದು. ಮತ ಸೆಳೆಯುವ ತಂತ್ರಗಾರಿಕೆ ಅತಿಮುಖ್ಯ. ಬೂತ್ ಮಟ್ಟದಲ್ಲಿ ಹೆಚ್ಚು ಮತಗಳಿಸಿದರೆ ಮಾತ್ರ ಗೆಲುವು. ದೇಶದಲ್ಲಿ ನರೇಂದ್ರ‌ಮೋದಿ ಮತ್ತು ರಾಹುಲ್ ಗಾಂಧಿ ನಡುವೆ ಚುನಾವಣೆಯಾಗಿದ್ದು ಈ ಬಾರಿ ಬಿಜೆಪಿಗೆ ಪ್ರತಿಷ್ಠೆಯಾಗಿದೆ ಎಂದು ಹೇಳಿದರು.

ADVERTISEMENT

ಬಿಜೆಪಿ ಜಿಲ್ಲಾ ಘಟಕ ಅಧ್ಯಕ್ಷ ಬಿ.ರಾಜಣ್ಣ ಮಾತನಾಡಿ, ಸ್ಥಳೀಯವಾಗಿ ಯಾವುದೇ ಪಕ್ಷದಲ್ಲಿ ಗೊಂದಲ ಸಹಜವಾದರೂ ಈ ಕ್ಷೇತ್ರಕ್ಕೆ ಬಿಜೆಪಿ ಅಭ್ಯರ್ಥಿ ಬಿ.ಎನ್.ಬಚ್ಚೇಗೌಡ, ದೇಶಕ್ಕೆ ನರೇಂದ್ರ ಮೊದಿ ಅನಿವಾರ್ಯ. ಬಿಜೆಪಿ ಗೆದ್ದರೆ ಸ್ಥಳೀಯರ ಸಮಸ್ಯೆಗಳಿಗೆ ಪರಿಹಾರ ಸಿಗಲಿದೆ ಮತ್ತು ಕಾರ್ಯಕರ್ತರಿಗೆ ಅನುಕೂಲವಾಗಲಿದೆ. ಬಿ.ಎನ್.ಬಚ್ಚೇಗೌಡರಿಗೆ ಎಲ್ಲಾ ಪಕ್ಷಗಳ ಕಾರ್ಯಕರ್ತರಿಂದ ಅನುಕುಂಪವಿದೆ. ಯಾವುದೆ ಕಾರಣಕ್ಕೂ ನಿರ್ಲಕ್ಷ್ಯ ವಹಿಸುವಂತಿಲ್ಲ. ಬೂತ್‌ನಲ್ಲಿ ಶಕ್ತಿ ತುಂಬವ ಕೆಲಸ ಕಾರ್ಯಕರ್ತರು ಮಾಡಬೇಕು ಎಂದು ಹೇಳಿದರು.

ಬಿಜೆಪಿ ಜಿಲ್ಲಾ ಉಸ್ತುವಾರಿ ಚಿದಾನಂದಮೂರ್ತಿ ಮಾತನಾಡಿ, ದೇಶ ದ್ರೋಹ ಕಾಯ್ದೆಯನ್ನು ಕಾಂಗ್ರೆಸ್ ರದ್ದು ಮಾಡಲು ಪ್ರಣಾಳಿಕೆಯಲ್ಲಿ ಸೇರಿಸಿದೆ. ಪ್ರಧಾನಿ ನರೇಂದ್ರ ಮೋದಿ ಜಾರಿಗೆ ತಂದ 135 ಯೋಜನೆಗಳನ್ನು ಮತದಾರರಿಗೆ ತಿಳಿಸಬೇಕು. ಬೂತ್ ಮಟ್ಟದ ಅಧ್ಯಕ್ಷ, ಪ್ರಭಾರ, ಕಾರ್ಯದರ್ಶಿಗಳ ಪಾತ್ರ ಅತಿಮುಖ್ಯ. ಪ್ರತಿ ಮನೆಗೆ ಮೋದಿ ಸಾಧನೆ ಕರಪತ್ರ ತಲುಪಿಸಿ ಎಂದು ಹೇಳಿದರು.

ಬೈಯಾಪ ಮಾಜಿ ಅಧ್ಯಕ್ಷ ಅಶ್ವಥನಾರಾಯಣ್, ತಾಲ್ಲೂಕು ವ್ಯವಸಾಯೋತ್ಪನ್ನ ಮಾರುಕಟ್ಟೆ ಸಮಿತಿ ಮಾಜಿ ಅಧ್ಯಕ್ಷ ಎ.ವಿ.ನಾರಾಯಣಸ್ವಾಮಿ, ಬಿ.ಜೆ.ಪಿ ರಾಜ್ಯ ಪರಿಷದ್ ಸದಸ್ಯ ದೇ.ಸು.ನಾಗರಾಜ್, ಬಿಜೆಪಿ ಜಿಲ್ಲಾ ಘಟಕ ಪ್ರಧಾನ ಕಾರ್ಯದರ್ಶಿ ನಿಲೇರಿ ಅಂಬರೀಷ್, ಕಾರ್ಯದರ್ಶಿ ಕೆ.ಎನ್.ರಮೇಶ್ ಬಾಬು, ತಾಲ್ಲೂಕು ಘಟಕ ಅಧ್ಯಕ್ಷ ನಾಗರಾಜ್ ಗೌಡ, ಉಪಾಧ್ಯಕ್ಷ ಕೆ.ಸಿ.ಮುನಿರಾಜು, ಪ್ರಧಾನ ಕಾರ್ಯದರ್ಶಿ ಸುನೀಲ್, ಬಿಜೆಪಿ ಶಕ್ತಿಕೇಂದ್ರದ ಅಧ್ಯಕ್ಷ ರಮೇಶ್ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.