ADVERTISEMENT

ಇ–ಕ್ಷಣ ತಂತ್ರಾಂಶದಿಂದ ಅನುಕೂಲ

ದೊಡ್ಡಬಳ್ಳಾಪುರ ತಾಲ್ಲೂಕು ಕಚೇರಿಯಲ್ಲಿ ಹಳೆಯ ಪದ್ಧತಿ– ಪ್ರಮಾಣಪತ್ರಕ್ಕಾಗಿ ಜನರ ಪರದಾಟ

​ಪ್ರಜಾವಾಣಿ ವಾರ್ತೆ
Published 20 ಜೂನ್ 2018, 6:09 IST
Last Updated 20 ಜೂನ್ 2018, 6:09 IST
ಜಾತಿ, ಆದಾಯ ಪ್ರಮಾಣ ಪತ್ರ ಪಡೆಯಲು ಮಂಗಳವಾರ ತಾಲ್ಲೂಕು ಕಚೇರಿಯಲ್ಲಿ ಸಾಲುಗಟ್ಟಿ ನಿಂತಿರುವ ಜನ
ಜಾತಿ, ಆದಾಯ ಪ್ರಮಾಣ ಪತ್ರ ಪಡೆಯಲು ಮಂಗಳವಾರ ತಾಲ್ಲೂಕು ಕಚೇರಿಯಲ್ಲಿ ಸಾಲುಗಟ್ಟಿ ನಿಂತಿರುವ ಜನ   

ದೊಡ್ಡಬಳ್ಳಾಪುರ: ಜಾತಿ, ಆದಾಯ ಪ್ರಮಾಣ ಪತ್ರಗಳನ್ನು ಪಡೆಯಲು ತಾಲ್ಲೂಕು ಕಚೇರಿಯಲ್ಲಿ ಸಾಲುಗಟ್ಟಿ ನಿಲ್ಲುವ ವ್ಯವಸ್ಥೆಯನ್ನು ತಪ್ಪಿಸುವ ಸಲುವಾಗಿ ಎನ್.ಐ.ಸಿ, ಅಟಲ್ ಜೀ ಜನ ಸ್ನೇಹಿ ನಿರ್ದೇಶನಾಲಯ ಹಾಗೂ ಭೂಮಿ ಉಸ್ತುವಾರಿ ಕೋಶದ ತಾಂತ್ರಿಕ ಪರಿಣತರ ಸಹಾಯದಿಂದ (Over the counter) ‘ಇ–ಕ್ಷಣ ತಂತ್ರಾಂಶ’ವನ್ನು ರೂಪಿಸಿದ್ದಾರೆ.

ಇದರಿಂದ ಜಾತಿ, ಆದಾಯ ಪ್ರಮಾಣ ಪತ್ರಗಳನ್ನು ಯಾವುದೇ ಕ್ಷಣದಲ್ಲಿ ಬೇಕಾದರೂ ಪಡೆಯಲು ಅವಕಾಶ ಕಲ್ಪಿಸಲಾಗಿದೆ ಎನ್ನುತ್ತಾರೆ ತಾಂತ್ರಿಕ ಪರಿಣತರಾದ ಮಂಜುನಾಥ್ ಗೌಡ, ಕಿರಣ್‌, ರಾಜಶೇಖರ್‌.

ಏನಿದು ಇ–ಕ್ಷಣ: ಕಂದಾಯ ಇಲಾಖೆಯು ಈಗಾಗಲೇ ಆಹಾರ, ನಾಗರಿಕ ಸರಬರಾಜು ಮತ್ತು ಗ್ರಾಹಕರ ಇಲಾಖೆಯಿಂದ ವಿತರಣೆಯಾದ ಪಡಿತರ ಚೀಟಿಯಲ್ಲಿನ ದತ್ತಾಂಶವನ್ನು ಪಡೆದಿದೆ. ಈ ದತ್ತಾಂಶ ಸಹಾಯದಿಂದ ತಪಾಸಣಾ ಪಟ್ಟಿ ತಯಾರಿಸಿ ಕಂದಾಯ ಇಲಾಖೆಯ ಗ್ರಾಮ ಲೆಕ್ಕಾಧಿಕಾರಿಗಳು ಮನೆ ಮನೆ ಸರ್ವೇ ನಡೆಸಿ ಕುಟುಂಬದ ವಾರ್ಷಿಕ ವರಮಾನ ಹಾಗೂ ಜಾತಿಯನ್ನು ಕುಟುಂಬದ ಸದಸ್ಯರ ಒಪ್ಪಿಗೆಯನ್ನು ಪಡೆದು ತಂತ್ರಾಂಶದಲ್ಲಿ ನಮೂದಿಸಲಾಗಿದೆ.

ADVERTISEMENT

ಗ್ರಾಮ ಲೆಕ್ಕಾಧಿಕಾರಿ, ಉಪ ತಹಶೀಲ್ದಾರ್ ಹಾಗೂ ತಹಶೀಲ್ದಾರ್ ಅವರ ಡಿಜಿಟಲ್ ಸಹಿ ಮಾಡುವುದರ ಮೂಲಕ ದೃಢೀಕರಿಸಿ ಸಿದ್ಧಪಡಿಸಿಕೊಂಡಿದ್ದಾರೆ. ಅರ್ಜಿದಾರ ಪಡಿತರ ಚೀಟಿ ಸಂಖ್ಯೆಯ ಮೇಲೆ ಅಥವಾ ಅವರ ಹೆಸರನ್ನು ದತ್ತಾಂಶದಲ್ಲಿ ಶೋಧಿಸಿ ನಿಗದಿತ ಅರ್ಜಿ ಶುಲ್ಕವನ್ನು ತಾಲ್ಲೂಕು ಕಚೇರಿಯಲ್ಲಿನ ಪಡಸಾಲೆಯಲ್ಲಿ ಪಾವತಿಸುವಮೂಲಕ ತಕ್ಷಣದಲ್ಲಿಯೇ ದೃಢೀಕರಣ ಪ್ರಮಾಣ ಪತ್ರವನ್ನು ಪಡೆಯಬಹುದಾಗಿದೆ.

ಏನು ಮಾಡಬೇಕು: ಜಾತಿ, ಆದಾಯ ಹಾಗೂ ವಾಸಸ್ಥಳ ದೃಢೀಕರಣ ಪತ್ರ ಪಡೆಯಬೇಕಾಗಿರುವ ಅರ್ಜಿದಾರನು ತಾಲ್ಲೂಕು ಕಚೇರಿ ಅಥವಾ ಸಮೀಪದ ನಾಡ ಕಚೇರಿಯಲ್ಲಿ ಪಡಿತರ ಚೀಟಿಯ ಸಂಖ್ಯೆ ಅಥವಾ ಹೆಸರನ್ನು ತಿಳಿಸಬೇಕು.

ಕಚೇರಿ ನಿರ್ವಾಹಕ ಅರ್ಜಿದಾರ ನೀಡಿದ ಪಡಿತರ ಚೀಟಿ ಸಂಖ್ಯೆಯನ್ನು ಬಳಸಿ ಈಗಾಗಲೇ ಜಾತಿ ಮತ್ತು ಆದಾಯ ಪ್ರಮಾಣ ಪತ್ರವನ್ನು ತಯಾರಿಸಲಾಗಿದೆಯೇ ಅಥವಾ ಅರ್ಜಿದಾರನ ಹೆಸರಿನಲ್ಲಿ ಈಗಾಗಲೇ ಪ್ರಮಾಣ ಪತ್ರವನ್ನು ಪಡೆದಿದ್ದಾರೆಯೇ ಎಂದು ಪರಿಶೀಲಿಸಲಾಗುತ್ತದೆ.

ಶೋಧನೆಯಲ್ಲಿ ಪ್ರಮಾಣ ಪತ್ರವು ಲಭ್ಯವಿದ್ದರೆ ತಕ್ಷಣದಲ್ಲಿಯೇ ನಿಗದಿತ ಅರ್ಜಿ ಶುಲ್ಕವನ್ನು ಪಡೆಯುವ ಮೂಲಕ ದೃಢೀಕರಣ ಪತ್ರವನ್ನು ನೀಡಲಾಗುತ್ತದೆ. ಶೋಧನೆಯಲ್ಲಿ ಪ್ರಮಾಣ ಪತ್ರವು ಲಭ್ಯವಿಲ್ಲದಿದ್ದಲ್ಲಿ ಕಚೇರಿ ನಿರ್ವಾಹಕ ಹೊಸ ಅರ್ಜಿಯನ್ನು ಪಡೆದು, ವಿವರಗಳನ್ನು ದಾಖಲಿಸಿ ಈ ಹಿಂದೆ ಇದ್ದ ವ್ಯವಸ್ಥೆಯಂತೆ ಮುಂದಿನ ಹಂತಕ್ಕೆ ರವಾನಿಸಲಾಗುತ್ತದೆ.

ಇ–ಕ್ಷಣದ ಮೂಲಕವೇ ಈಗ ಜಾತಿ, ಆದಾಯ, ವಾಸಸ್ಥಳ ಪತ್ರಗಳನ್ನು ವಿತರಣೆ ಮಾಡಲಾಗುತ್ತದೆ. ಈ ಹಿಂದೆ ಪಡೆಯಲಾಗಿರುವ ಜಾತಿ, ಆದಾಯ, ವಾಸಸ್ಥಳ ಪ್ರಮಾಣ ಪತ್ರಕ್ಕೆ ಐದು ವರ್ಷಗಳ ಕಾಲಾವಧಿಗೆ ಚಾಲ್ತಿಯಲ್ಲಿ ಇರಲಿದೆ. ಐದು ವರ್ಷ ಮುಕ್ತಾಯವಾದ ನಂತರ ಮತ್ತೆ ಅದನ್ನು ಪಡೆಯಲು ಈ ಹಿಂದಿನ ಜಾತಿ, ಆದಾಯ ಪತ್ರದಲ್ಲಿನ ಸಂಖ್ಯೆಯನ್ನು ಹೇಳಿದರೆ ಹೊಸ ಪ್ರಮಾಣ ಪತ್ರವನ್ನು ನೀಡಲಾಗುತ್ತದೆ, ಅಥವಾ ಪಡಿತರ ಚೀಟಿಯಲ್ಲಿನ ಸಂಖ್ಯೆಯನ್ನು ಹೇಳಿದರೂ ಜಾತಿ, ಆದಾಯ ಪ್ರಮಾಣ ಪತ್ರವನ್ನುತಕ್ಷಣ ಪಡೆಯಲು ಅವಕಾಶ ಇದೆ ಎನ್ನುತ್ತಾರೆ ತಹಶೀಲ್ದಾರ್ ಬಿ.ಎ.ಮೋಹನ್‌.

ಜಾರಿಯಾಗದ ಯೋಜನೆ: ಇ–ಕ್ಷಣ ಯೋಜನೆ ಜಾರಿಗೆ ತಂದಿದ್ದರೂ ಸಹ ತಾಲ್ಲೂಕು ಕಚೇರಿಯಲ್ಲಿನಅಧಿಕಾರಿಗಳು ಜಾತಿ, ಆದಾಯ ಪ್ರಮಾಣ ಪತ್ರಗಳನ್ನು ವಿತರಣೆಮಾಡಲು ಹಳೆ ಪದ್ಧತಿಯನ್ನೇ ಪಾಲಿಸುತ್ತಿದ್ದಾರೆ. ಇದರಿಂದಾಗಿ ಹೊಸದಾಗಿ ಅರ್ಜಿ ಸಲ್ಲಿಸಿ ಹತ್ತಾರು ಬಾರಿ ಅಧಿಕಾರಿಗಳ ಬಳಿಗೆ ಅಲೆದಾಡುವಂತಾಗಿದೆ. ಇದನ್ನೇ ಬಂಡವಾಳ ಮಾಡಿಕೊಂಡಿರುವ ಮಧ್ಯವರ್ತಿಗಳು ಜಾತಿ, ಆದಾಯ ಪತ್ರಗಳನ್ನು ಪಡೆಯಲು ₹ 150 ರಿಂದ ₹ 300 ಗಳವರೆಗೂ ನೀಡಬೇಕಾಗಿದೆ ಎಂದು ನಾಗಸಂದ್ರ ಗ್ರಾಮದ ಮುನಿರಾಜು ದೂರಿದ್ದಾರೆ.

ಹೊಸ ವ್ಯವಸ್ಥೆ ಹೇಗೆ ಭಿನ್ನ

ಈಗ ಇರುವ ವ್ಯವಸ್ಥೆಯಲ್ಲಿ ಒಮ್ಮೆ ನಾವು ಅರ್ಜಿ ಸಲ್ಲಿಸಿದ ಮೇಲೆ ಅರ್ಜಿಯನ್ನು ಗ್ರಾಮ ಲೆಕ್ಕಾಧಿಕಾರಿ ಪರಿಶೀಲಿಸಿ ನಂತರ ಸಂಬಂಧಪಟ್ಟ ರಾಜಸ್ವ ನೀರಿಕ್ಷಕರು ಪರಿಶೀಲಿಸಬೇಕು. ಇದಾದ ನಂತರ ಸಂಬಂಧಪಟ್ಟ ಉಪತಹಶೀಲ್ದಾರ್ ಡಿಜಿಟಲ್‌ ಸಹಿ ಮಾಡುವುದರ ಮೂಲಕ ದೃಢೀಕರಿಸಬೇಕಾಗಿತ್ತು. ಈ ಎಲ್ಲ ಪ್ರಕ್ರಿಯೆ ಮುಗಿಯಲು ಕನಿಷ್ಠ ಒಂದು ವಾರ ಕಾಲಾವಕಾಶವನ್ನು ತೆಗೆದುಕೊಳ್ಳುತ್ತಿತ್ತು. ಆದರೆ ಇ–ಕ್ಷಣದಲ್ಲಿ ಈ ಎಲ್ಲ ಪ್ರಕ್ರಿಯೆ ಅವಶ್ಯಕತೆಯೇ ಇರುವುದಿಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.