ADVERTISEMENT

ಸಾಲ ಸೌಲಭ್ಯ ಸದ್ಬಳಕೆಗೆ ಸಲಹೆ

​ಪ್ರಜಾವಾಣಿ ವಾರ್ತೆ
Published 2 ಸೆಪ್ಟೆಂಬರ್ 2021, 3:48 IST
Last Updated 2 ಸೆಪ್ಟೆಂಬರ್ 2021, 3:48 IST
ದೇವನಹಳ್ಳಿ ಪಟ್ಟಣದಲ್ಲಿ ಬಿಡಿಸಿಸಿ ಬ್ಯಾಂಕಿನ ವತಿಯಿಂದ ಮಹಿಳಾ ಸ್ವಸಹಾಯ ಸಂಘಗಳಿಗೆ ಸಾಲದ ಚೆಕ್‌ ವಿತರಿಸಲಾಯಿತು
ದೇವನಹಳ್ಳಿ ಪಟ್ಟಣದಲ್ಲಿ ಬಿಡಿಸಿಸಿ ಬ್ಯಾಂಕಿನ ವತಿಯಿಂದ ಮಹಿಳಾ ಸ್ವಸಹಾಯ ಸಂಘಗಳಿಗೆ ಸಾಲದ ಚೆಕ್‌ ವಿತರಿಸಲಾಯಿತು   

ದೇವನಹಳ್ಳಿ: ‘ರೈತರು ಬಿಡಿಸಿಸಿ ಬ್ಯಾಂಕಿನಲ್ಲಿ ನೀಡುತ್ತಿರುವ ಬಡ್ಡಿರಹಿತ ಕೃಷಿ ಸಾಲ ಪಡೆದುಕೊಂಡು ಆರ್ಥಿಕವಾಗಿ ಸಬಲರಾಗುವ ಕಡೆಗೆ ಕಾಳಜಿ ತೋರಿಸಬೇಕು’ ಎಂದು ಬೆಂಗಳೂರು ಜಿಲ್ಲಾ ಕೇಂದ್ರ ಸಹಕಾರ ಬ್ಯಾಂಕ್‌ ಅಧ್ಯಕ್ಷ ಹನುಮಂತಯ್ಯ ಹೇಳಿದರು.

ಪಟ್ಟಣದಲ್ಲಿ ಬಿಡಿಸಿಸಿ ಬ್ಯಾಂಕ್ ವತಿಯಿಂದ ರೈತರಿಗೆ ಸಾಲ ವಿತರಣೆ ಕಾರ್ಯಕ್ರಮದಲ್ಲಿ ವಿವಿಧ ಮಹಿಳಾ ಸ್ವಸಹಾಯ ಸಂಘಗಳು ಹಾಗೂ ರೈತರಿಗೆ ಕೃಷಿ ಸಾಲದ ಚೆಕ್‌ ವಿತರಣೆ ಮಾಡಿ ಅವರು ಮಾತನಾಡಿದರು.

ಮಹಿಳಾ ಸಂಘದ ಪ್ರತಿನಿಧಿಗಳು ಸಹಕಾರ ಬ್ಯಾಂಕ್‌ಗಳಲ್ಲಿ ಖಾತೆ ತೆರೆಯುವ ಮೂಲಕ ವ್ಯವಹರಿಸಿ ಇಲ್ಲಿ ಸಿಗುವಂತಹ ಸೌಲಭ್ಯ ಪಡೆದುಕೊಳ್ಳಬಹುದಾಗಿದೆ. ಈಬ್ಯಾಂಕ್‌ಗಳು ರೈತರಿಗೆ ಉಪಯುಕ್ತವಾಗಿದ್ದು, ಹೆಚ್ಚಿನ ಸಂಖ್ಯೆಯಲ್ಲಿ ರೈತರು ಸಾಲ ಪಡೆಯಲು ಮುಂದೆ ಬರುತ್ತಿಲ್ಲ ಎಂದು ಹೇಳಿದರು.

ADVERTISEMENT

83 ಪೈಸೆ ಬಡ್ಡಿದರದಲ್ಲಿ ಗೋಲ್ಡ್ ಲೋನ್ ನೀಡಲಾಗುತ್ತಿದೆ. ಗ್ರಾಮ ಪಂಚಾಯಿತಿಯಲ್ಲಿ ಇ-ಖಾತೆಯಾಗಿದ್ದರೆ ನಗರಸಭೆ, ಪುರಸಭೆಯಲ್ಲಿ ಖಾತೆ ಹೊಂದಿರುವವರಿಗೆ ₹ 40 ಲಕ್ಷದವರೆಗೂ ಸಾಲ ವಿತರಣೆ ಮಾಡುವ ವ್ಯವಸ್ಥೆಯಿದೆ. ರೈತರು ಸಾಲದ ಜೊತೆಯಲ್ಲಿ ಅಸಲನ್ನೂ ಕಟ್ಟಿಕೊಂಡು ಹೋದರೆ ಬಡ್ಡಿ ಕಡಿಮೆಯಾಗುತ್ತದೆಎಂದು ಹೇಳಿದರು.

ಬ್ಯಾಂಕ್‌ ಮೂಲಕ ಮೊಬೈಲ್ ಬ್ಯಾಂಕಿಂಗ್ ಸೌಲಭ್ಯ ನೀಡಲಾಗುತ್ತದೆ. ಮೊಬೈಲ್ ವ್ಯಾನ್ ಕೂಡ ಖರೀದಿ ಮಾಡಲಾಗುತ್ತಿದೆ. ರೈತರಿಗೆ ವಿಮಾ ಸೌಲಭ್ಯ ಕಲ್ಪಿಸಿಕೊಡುವ ವ್ಯವಸ್ಥೆ ಮಾಡಲಾಗುತ್ತಿದೆ ಎಂದರು.

ಜಿಲ್ಲಾ ಬ್ಯಾಂಕ್ ನಿರ್ದೇಶಕ ಸೊಣ್ಣಪ್ಪ ಮಾತನಾಡಿ, ‘ರೈತರಿಗೆ ಸಹಕಾರ ಬ್ಯಾಂಕ್‌ಗಳಲ್ಲಿ ಸಿಗುವಷ್ಟು ಸೌಲಭ್ಯ ರಾಷ್ಟ್ರೀಕೃತ ಬ್ಯಾಂಕ್‌ಗಳಲ್ಲಿ ಸಿಗುವುದಿಲ್ಲ. ಸುಮಾರು ₹ 36 ಕೋಟಿಯಷ್ಟು ಸಾಲವನ್ನು ನಾನು ನಿರ್ದೇಶಕನಾದ ನಂತರ ತಾಲ್ಲೂಕಿಗೆ ನೀಡಲಾಗಿದೆ’ ಎಂದು ಹೇಳಿದರು.

ಮೈತ್ರಿ ಸರ್ಕಾರದ ಅವಧಿಯಲ್ಲಿ ರಾಜ್ಯ ಸರ್ಕಾರ ₹ 25 ಸಾವಿರ ಕೋಟಿ ಮನ್ನಾ ಮಾಡಿದೆ. ಅದರಲ್ಲಿ ದೇವನಹಳ್ಳಿ ತಾಲ್ಲೂಕಿನ ₹ 12 ಕೋಟಿ ಮನ್ನಾ ಆಗಿದೆ. ಇದರ ಸದುಪಯೋಗವನ್ನು ರೈತರು ಪಡೆದುಕೊಂಡಿದ್ದಾರೆ. ಮನೆ ನಿರ್ಮಾಣಕ್ಕೂ ಸಾಲ ಸೌಲಭ್ಯ ಸಿಗಲಿದೆ. ಮಹಿಳಾ ಸಂಘಗಳು ಸಹಕಾರ ಬ್ಯಾಂಕಿನಲ್ಲಿ ಖಾತೆ ತೆರೆದು ವ್ಯವಹರಿಸುವ ಮೂಲಕ ಬ್ಯಾಂಕಿನ ಏಳಿಗೆಗಾಗಿ ಶಕ್ತಿ ತುಂಬಬೇಕು ಎಂದು ಸಲಹೆ ನೀಡಿದರು.

ನಿರ್ದೇಶಕ ರಮೇಶ್ ಮಾತನಾಡಿ, ಸಹಕಾರ ಬ್ಯಾಂಕ್‌ಗಳಲ್ಲಿ ಸೌಲಭ್ಯ ಪಡೆದುಕೊಳ್ಳುವುದರಲ್ಲಿ ಉತ್ತರ ಕರ್ನಾಟಕದವರು ಮೊದಲಿಗರಾಗಿದ್ದಾರೆ. ನೂರಾರು ಕೋಟಿ ಹಣವನ್ನು ಅವರು ಠೇವಣಿ ರೂಪದಲ್ಲಿ ಸಂಗ್ರಹಿಸಿದ್ದಾರೆ. ನಮ್ಮ ರೈತರು ರಾಷ್ಟ್ರೀಕೃತ ಬ್ಯಾಂಕ್‌ಗಳ ಮೊರೆ ಹೋಗುತ್ತಿರುವುದು ಶೋಚನೀಯ ಎಂದರು.

ಬಿಡಿಸಿಸಿ ಬ್ಯಾಂಕ್‌ ತಾಲ್ಲೂಕು ಅಧ್ಯಕ್ಷ ವೇಣುಗೋಪಾಲ್, ಪುರಸಭೆ ಸದಸ್ಯ ಜಿ.ಎ. ರವೀಂದ್ರ ಮಾತನಾಡಿದರು. ಪುರಸಭಾ ಅಧ್ಯಕ್ಷೆ ರೇಖಾ ವೇಣುಗೋಪಾಲ್, ಮುಖಂಡರಾದ ಜಗನ್ನಾಥ್, ಜಿಲ್ಲಾ ಬ್ಯಾಂಕ್ ವ್ಯವಸ್ಥಾಪಕ ನಂಜುಂಡೇಗೌಡ, ತಾಲ್ಲೂಕು ಬ್ಯಾಂಕಿನ ಉಪಾಧ್ಯಕ್ಷ ಮಂಜುನಾಥ್, ಬಿದಲೂರು ಸಂಘದ ಅಧ್ಯಕ್ಷ ಮಹೇಶ್, ನರಸಿಂಹಮೂರ್ತಿ, ಬೆಟ್ಟಸ್ವಾಮಿ, ಪುರಸಭಾ ಸದಸ್ಯ ವೇಣುಗೋಪಾಲ್, ದಾಸಪ್ಪ, ರಾಜಣ್ಣ, ಕಸಬಾ ಹೋಬಳಿ ವ್ಯವಸ್ಥಾಪಕ ವೆಂಕಟೇಶ್ ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.