ADVERTISEMENT

ಹಿರಿಯರನ್ನು ಗೌರವಿಸಲು ಸಲಹೆ

​ಪ್ರಜಾವಾಣಿ ವಾರ್ತೆ
Published 25 ಅಕ್ಟೋಬರ್ 2021, 5:41 IST
Last Updated 25 ಅಕ್ಟೋಬರ್ 2021, 5:41 IST
ವಿಜಯಪುರ ಹೋಬಳಿಯ ಚಂದೇನಹಳ್ಳಿ ಗೇಟ್‌ನಲ್ಲಿರುವ ಸರ್ವೋದಯಾ ಸರ್ವಿಸ್ ಸೊಸೈಟಿಯಲ್ಲಿ ನಡೆದ ಸರ್ವೋದಯ ಸಂಭ್ರಮ ಕಾರ್ಯಕ್ರಮದಲ್ಲಿ ವೃದ್ಧರಿಗೆ ಪಿಂಚಣಿ ಮಂಜೂರಾತಿ ಆದೇಶ ಪತ್ರ ವಿತರಿಸಲಾಯಿತು
ವಿಜಯಪುರ ಹೋಬಳಿಯ ಚಂದೇನಹಳ್ಳಿ ಗೇಟ್‌ನಲ್ಲಿರುವ ಸರ್ವೋದಯಾ ಸರ್ವಿಸ್ ಸೊಸೈಟಿಯಲ್ಲಿ ನಡೆದ ಸರ್ವೋದಯ ಸಂಭ್ರಮ ಕಾರ್ಯಕ್ರಮದಲ್ಲಿ ವೃದ್ಧರಿಗೆ ಪಿಂಚಣಿ ಮಂಜೂರಾತಿ ಆದೇಶ ಪತ್ರ ವಿತರಿಸಲಾಯಿತು   

ವಿಜಯಪುರ: ‘ಹಿರಿಯರನ್ನು ಗೌರವಿಸುವುದು ಭಾರತೀಯ ಸಂಸ್ಕಾರದ ಅವಿಭಾಜ್ಯ ಭಾಗ. ಹಿರಿತನ ಮತ್ತು ಹಿರಿಯರನ್ನು ಗೌರವಿಸದವ ಜೀವನದಲ್ಲಿ ಎಂದಿಗೂ ಶ್ರೇಯಸ್ಸನ್ನು ಗಳಿಸಲಾರ ಎಂಬುದು ಭಾರತೀಯರ ಬಲವಾದ ನಂಬಿಕೆ’ ಎಂದು ಜಿಲ್ಲಾಧಿಕಾರಿ ಕೆ. ಶ್ರೀನಿವಾಸ್ ಹೇಳಿದರು.

ಹೋಬಳಿಯ ಚಂದೇನಹಳ್ಳಿ ಗೇಟ್‌ನಲ್ಲಿರುವ ಸರ್ವೋದಯಾ ಸೇವಾ ಸೊಸೈಟಿಯಲ್ಲಿ ಶನಿವಾರ ಆಯೋಜಿಸಿದ್ದ ‘ಸರ್ವೋದಯ ಸಂಭ್ರಮ’ ಕಾರ್ಯಕ್ರಮದಲ್ಲಿ ವೃದ್ಧರಿಗೆ ವಿವಿಧ ಇಲಾಖೆಯಿಂದ ಸಿಗುವ ಸವಲತ್ತುಗಳ ಬಗ್ಗೆ ಮಾಹಿತಿ ನೀಡಿ ಪಿಂಚಣಿ ಮಂಜೂರಾತಿ ಆದೇಶ ಪ್ರತಿಗಳನ್ನು ನೀಡಿ ಅವರು ಮಾತನಾಡಿದರು.

ತಂದೆ, ತಾಯಿಯೇ ಆಗಿರಲಿ, ಗುರು ಹಿರಿಯರೇ ಆಗಿರಲಿ ಇವರೆಲ್ಲಾ ಗೌರವ, ಪ್ರೀತಿ, ಔದಾರ್ಯಕ್ಕೆ ಅರ್ಹರಾದವರು. ಯೌವ್ವನವನ್ನು ದಾಟಿ ಅಪರಿಮಿತವಾದ ಅನುಭವಗಳೊಂದಿಗೆ ಹಿರಿತನವನ್ನು ಅಪ್ಪಿಕೊಂಡ ಇವರಿಗೆ ಕಿರಿಯರಾದ ಎಲ್ಲರೂ ಗೌರವ ನೀಡಬೇಕು ಎಂದು ಸಲಹೆ ನೀಡಿದರು.

ADVERTISEMENT

ಜಗತ್ತಿನಲ್ಲಿ ಇಂದು ಹಿರಿಯರು ನಾನಾ ತರನಾದ ನಿಂದನೆ, ದೌರ್ಜನ್ಯಗಳಿಗೆ ಒಳಗಾಗುತ್ತಿದ್ದಾರೆ. ಹಿರಿಯರನ್ನು ಗೌರವಿಸುವ ಸಂಸ್ಕಾರವನ್ನು ರೂಢಿಸಿಕೊಂಡಿರುವ ಭಾರತದಲ್ಲೂ ದೌರ್ಜನ್ಯಕ್ಕೆ ಒಳಗಾಗುತ್ತಿರುವ ಹಿರಿಯರ ಸಂಖ್ಯೆ ಕಡಿಮೆಯಿಲ್ಲ ಎಂದರು.

ದೈಹಿಕ, ಮಾನಸಿಕ ಮತ್ತು ಆರ್ಥಿಕವಾಗಿ ಹಿರಿಯರು ದೌರ್ಜನ್ಯಕ್ಕೆ ಒಳಗಾಗುತ್ತಿದ್ದಾರೆ. ಅದು ಕೂಡ ತಮ್ಮ ಸ್ವಂತ ಮನೆಯಲ್ಲಿ ಸ್ವಂತ ಮಕ್ಕಳಿಂದಲೇ ನಿಂದನೆಗಳನ್ನು ಅನುಭವಿಸುವ ಹಿರಿಯರ ಸಂಖ್ಯೆ ಹೆಚ್ಚಿದೆ. ಕೌಟುಂಬಿಕ ಮೌಲ್ಯಗಳು ಕುಸಿತ ಕಂಡಿರುವುದೇ ಹಿರಿಯರ ಈ ದುಃಸ್ಥಿತಿಗೆ ಪ್ರಮುಖ ಕಾರಣವಾಗಿವೆ ಎಂದರು.

ಹೆಚ್ಚುವರಿ ಜಿಲ್ಲಾಧಿಕಾರಿ ವಿಜಯಾ ಈ. ರವಿಕುಮಾರ್ ಮಾತನಾಡಿ, ವಿಶ್ವಸಂಸ್ಥೆಯ ವರದಿ ಪ್ರಕಾರ ಪ್ರತಿ 6 ಮಂದಿಯಲ್ಲಿ ಒಬ್ಬ ಹಿರಿಯ ವ್ಯಕ್ತಿ ಒಂದಲ್ಲ ಒಂದು ವಿಧದ ನಿಂದನೆಗೆ ಒಳಗಾಗುತ್ತಾರೆ. ಇಂತಹ ನಿಂದನೆಗಳು ದೀರ್ಘಾವಧಿಯ ದೈಹಿಕ ಗಾಯ ಮತ್ತು ಮಾನಸಿಕ ಅಸ್ವಸ್ಥತೆಯನ್ನೂ ಉಂಟು ಮಾಡಬಲ್ಲದು ಎಂದು ಹೇಳಿದರು.

ತಮ್ಮನ್ನು ಕಷ್ಟಪಟ್ಟು ಬೆಳೆಸಿದ್ದಾರೆ. ವಿದ್ಯೆ ಕೊಡಿಸಿದ್ದಾರೆ ಎಂಬುದನ್ನು ಅರ್ಥಮಾಡಿಕೊಳ್ಳದ ಎಷ್ಟೋ ಮಕ್ಕಳು ತಂದೆ, ತಾಯಿಯನ್ನು ಅನಾಥಾಶ್ರಮದಲ್ಲಿ ಬಿಡುತ್ತಿದ್ದಾರೆ. ಕೊನೆಯುಸಿರು ಇರುವವರೆಗೂ ಅಲ್ಲೇ ಮಕ್ಕಳ ನೆನಪಿನಲ್ಲಿ ಹಿರಿಯ ಜೀವಗಳು ಬದುಕುತ್ತವೆ ಎಂದರು.

ಸರ್ವೋದಯ ಸರ್ವಿಸ್ ಸೊಸೈಟಿ ಮುಖ್ಯಸ್ಥ ಗೋಪಾಲರಾವ್ ಮಾತನಾಡಿ, ನಮ್ಮ ಸಂಸ್ಥೆಯಲ್ಲಿ ಬುದ್ಧಿಮಾಂದ್ಯ ಮಕ್ಕಳು, ವೃದ್ಧರಿಗೆ ಆಶ್ರಯ ನೀಡಲಾಗಿದೆ. ಅವರಿಗೆ ಯಾವುದೇ ಸೌಕರ್ಯ ಕಡಿಮೆಯಾಗದಂತೆ ನೋಡಿಕೊಂಡಿದ್ದೇವೆ. ಪ್ರತಿ ಮನುಷ್ಯ ಕೂಡ ಯೌವ್ವನವನ್ನು ದಾಟಿ ಮುಪ್ಪನ್ನು ಹೊಂದಬೇಕು ಎಂದು ಹೇಳಿದರು.

ಮುಪ್ಪಿನ ಕಾಲದಲ್ಲಿ ತನ್ನ ಬದುಕು ಚೆನ್ನಾಗಿರಬೇಕೆಂದು ಬಯಸುವ ಪ್ರತಿ ವ್ಯಕ್ತಿ ಕೂಡ ತನ್ನ ಹಿರಿಯರನ್ನು ಚೆನ್ನಾಗಿ ನೋಡಿಕೊಳ್ಳಬೇಕು. ಈ ವಿಷಯದಲ್ಲಿ ಕರ್ಮ ಯಾರನ್ನೂ ಬಿಡುವುದಿಲ್ಲ ಎಂಬುದನ್ನು ಎಲ್ಲರೂ ಅರ್ಥ ಮಾಡಿಕೊಳ್ಳಬೇಕು. ಆದರೆ, ಇಷ್ಟೊಂದು ಮಂದಿಗೆ ಸೇವೆ ಮಾಡುವ ಅವಕಾಶ ಸಿಕ್ಕಿರುವುದು ನಮ್ಮ ಪುಣ್ಯ ಎಂದರು.

26 ವೃದ್ಧರಿಗೆ ಸಂಧ್ಯಾ ಸುರಕ್ಷಾ, ಇಂದಿರಾಗಾಂಧಿ ವೃದ್ಧಾಪ್ಯ ವೇತನ, ಐವರು ಮಹಿಳೆಯರಿಗೆ ವಿಧವಾ ವೇತನ, 5 ಮನಸ್ವಿನಿ, 12 ಅಂಗವಿಕಲರ ವೇತನ, 43 ಜನರಿಗೆ ಆಧಾರ ಕಾರ್ಡ್, 39 ಜನರಿಗೆ ಆಯುಷ್ಮಾನ್ ಕಾರ್ಡ್ ವಿತರಿಸಿದರು.

ಉಪ ವಿಭಾಗಾಧಿಕಾರಿ ಅರುಳ್ ಕುಮಾರ್, ಜಿಲ್ಲಾ ಆರೋಗ್ಯಾಧಿಕಾರಿ ಡಾ.ತಿಪ್ಪೇಸ್ವಾಮಿ, ತಹಶೀಲ್ದಾರ್ ಅನಿಲ್ ಕುಮಾರ್ ಅರೋಲಿಕರ್, ನಾಡ ಕಚೇರಿಯ ಉಪ ತಹಶೀಲ್ದಾರ್ ಲವಕುಮಾರ್, ಕಂದಾಯ ನಿರೀಕ್ಷಕ ರಾಜು, ಗ್ರಾಮ ಲೆಕ್ಕಾಧಿಕಾರಿಗಳಾದ ಸುನೀಲ್, ಮಡಿವಾಳಪ್ಪ ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.