ADVERTISEMENT

ಹೈಮಾಸ್ಟ್‌ ದೀಪ: ಭ್ರಷ್ಟಾಚಾರ ಆರೋಪ ನಿರಾಧಾರ

ದೇವನಹಳ್ಳಿ ಶಾಸಕ ನಿಸರ್ಗ ನಾರಾಯಣಸ್ವಾಮಿ ಸ್ಪಷ್ಟನೆ

​ಪ್ರಜಾವಾಣಿ ವಾರ್ತೆ
Published 17 ನವೆಂಬರ್ 2022, 4:33 IST
Last Updated 17 ನವೆಂಬರ್ 2022, 4:33 IST
ಪತ್ರಿಕಾಗೋಷ್ಠಿಯಲ್ಲಿ ಶಾಸಕ ಎಲ್‌..ಎನ್‌.ನಾರಾಯಣಸ್ವಾಮಿ ಮಾತನಾಡಿದರು
ಪತ್ರಿಕಾಗೋಷ್ಠಿಯಲ್ಲಿ ಶಾಸಕ ಎಲ್‌..ಎನ್‌.ನಾರಾಯಣಸ್ವಾಮಿ ಮಾತನಾಡಿದರು   

ದೇವನಹಳ್ಳಿ: ‘ಹೈಮಾಸ್ಟ್‌ ದೀಪ ಅಳವಡಿಕೆಯಲ್ಲಿ ಬಿಜೆಪಿ ನನ್ನ ವಿರುದ್ಧ ಮಾಡಿರುವಶೇ 75 ರಷ್ಟು ಕಮಿಷನ್‌ ಆರೋಪ ನಿರಾಧಾರ’ ಎಂದು ಶಾಸಕ ನಿಸರ್ಗ ನಾರಾಯಣಸ್ವಾಮಿ ಹೇಳಿದ್ದಾರೆ.

ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘₹5 ಲಕ್ಷ ವೆಚ್ಚದಲ್ಲಿ ಬೀದಿದೀಪ ಅಳವಡಿಸಿದ್ದೇವೆ. ನನ್ನ ವಿರುದ್ಧ ಆರೋಪ ಮಾಡುತ್ತಿರುವವರ ಅವಧಿಯಲ್ಲಿ ₹6 ಲಕ್ಷಕ್ಕೆ ಹೈ ಮಾಸ್ಟ್‌ ದೀಪ ಅಳವಡಿಸಿದ್ದಾರೆ. ಇಲ್ಲಿ ದುಂದು ವೆಚ್ಚ ಮಾಡಿರುವವರು ಯಾರು? ಎಂದು ಪ್ರಶ್ನಿಸಿದರು.

‘₹2 ಲಕ್ಷಕ್ಕೆ ಹೈ ಮಾಸ್ಟ್‌ ಲೈಟ್‌ ಸಿಗುವುದೇ ನಿಜವಾದಲ್ಲಿ ₹1 ಕೋಟಿ ವೆಚ್ಚದ 50 ಹೈ ಮಾಸ್ಟ್‌ ಲೈಟ್‌ ಉಚಿತವಾಗಿ ಹಾಕಿಸುತ್ತೇನೆ. ಇಲ್ಲದಿದ್ದರೆ ಬಿಜೆಪಿಯವರು ಕ್ಷಮೆ ಯಾಚಿಸಬೇಕು’ ಎಂದರು.

ADVERTISEMENT

ಮಾಜಿ ಶಾಸಕರಿಗೆ ಮಾಹಿತಿ ಕೊರತೆ: ಶಾಸಕರ ಅನುದಾನದಲ್ಲಿ ರಸ್ತೆ ಗುಂಡಿ ಮುಚ್ಚಬಹುದಿತ್ತು ಎಂದು ಹೇಳುವ ಮಾಜಿ ಶಾಸಕರಿಗೆ ಮಾಹಿತಿ ಕೊರತೆ ಇದೆ. ಕೋವಿಡ್‌ ಅವಧಿಯಲ್ಲಿ ಅನುದಾನ ನೀಡಿಲ್ಲ. ಪಟ್ಟಣ ಪ್ರದೇಶದಲ್ಲಿ ತುರ್ತು ಕೆಲಸಕ್ಕೆ ₹2.5 ಲಕ್ಷದ ಒಳಗೆ ಅನುದಾನ ಖರ್ಚುಮಾಡಬೇಕು. ನೀಡುವ ₹2 ಕೋಟಿ ಅನುದಾನವನ್ನು 4 ಕಂತಿನಲ್ಲಿ ₹50 ಲಕ್ಷದಂತೆ ನೀಡುತ್ತಾರೆ. ಗುಂಡಿ ಮುಚ್ಚಲು ಅರೆಬರೆ ಕಾಮಗಾರಿ ಮಾಡಿ ಹಣ ವ್ಯಯ ಮಾಡಿ ಎಂಬುದು ಸೂಕ್ತ ಸಲಹೆ ಅಲ್ಲ ಎಂದರು.

ತಾಲ್ಲೂಕು ಜೆಡಿಎಸ್‌ ಅಧ್ಯಕ್ಷ ಆರ್‌.ಮುನೇಗೌಡ, ಪ್ರಧಾನ ಕಾರ್ಯದರ್ಶಿ ಜಿ.ಎ.ರವೀಂದ್ರ, ತಾಲ್ಲೂಕು ಪಿಕಾರ್ಡ್‌ ಬ್ಯಾಂಕ್‌ ಅಧ್ಯಕ್ಷ ಪಿ.ಪಟಾಲಪ್ಪ, ತಾಲ್ಲೂಕು ಸೊಸೈಟಿ ಅಧ್ಯಕ್ಷ ಎ.ದೇವರಾಜ್, ಎಸ್‌.ಸಿ.ಘಟಕದ ಜಿಲ್ಲಾಧ್ಯಕ್ಷ ಎಸ್‌.ಗುರಪ್ಪ, ಟೌನ್‌ ಜೆಡಿಎಸ್‌ ಅಧ್ಯಕ್ಷ ಮುನಿನಂಜಪ್ಪ, ಪ್ರಧಾನ ಕಾರ್ಯದರ್ಶಿ ಸಾಯಿಕುಮಾರ್‌ ಬಾಬು, ಪಿಕಾರ್ಡ್ ಬ್ಯಾಂಕ್‌ ಮಾಜಿ ಅಧ್ಯಕ್ಷ ಸಂಪಂಗಪ್ಪ, ತಾಲೂಕು ಯುವ ಜೆಡಿಎಸ್‌ ಅಧ್ಯಕ್ಷ ಭರತ್‌ ಕುಮಾರ್,ಪುರಸಭಾ ಮಾಜಿ ಸದಸ್ಯರಾದ ಕಾಳಪ್ಪನವರ ವೆಂಕಟೇಶ್, ವಿ.ಗೋಪಾಲ್‌ ಇದ್ದರು.

ಜೈಲಿಗೆ ಹೋಗಿ ಬಂದವರ ಪೋಟೊ ಹಾಕಿ, ಅವಮಾನ

‘ಪ್ರಗತಿಯ ಪ್ರತಿಮೆ ಕಾರ್ಯಕ್ರಮದ ಭಾಗವಾಗಿ ನಡೆದ ಮೃತ್ತಿಕೆ (ಮಣ್ಣು) ಸಂಗ್ರಹ ರಥಯಾತ್ರೆಯಲ್ಲಿ ಒಕ್ಕಲಿಗರ ಸ್ವಾಮೀಜಿಗಳು ಹಾಗೂ ಮಾಜಿ ಪ್ರಧಾನಿ ಸೇರಿ ಸಮುದಾಯದ ಸಾಧಕರ ಭಾವಚಿತ್ರ ಬಳಸದೇ ಜೈಲಿಗೆ ಹೋಗಿ ಬಂದವರ ಪೋಟೊ ಹಾಕಿ ಒಕ್ಕಲಿಗರ ಸಮುದಾಯಕ್ಕೆ ಅಗೌರವ ತೋರಿರುವುದು ಬಿಜೆಪಿ ನೇತೃತ್ವದ ಸರ್ಕಾರ ಹೊರತು ನಾನಲ್ಲ ಎಂದು ಶಾಸಕ ನಿಸರ್ಗ ನಾರಾಯಣಸ್ವಾಮಿ ಆರೋಪಿಸಿದರು.

ರಾತ್ರಿ ಆಹ್ವಾನ ನೀಡಿ, ಬೆಳಿಗ್ಗೆ ಗೈರಾದರೇ ಸಮುದಾಯಕ್ಕೆ ಮಾಡಿದ ಅಪಮಾನವೆಂದು ಆರೋಪಿಸುತ್ತಾರೆ. ಮಾಜಿ ಶಾಸಕರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಕೆಲಸ ಮಾಡಿ ಎಂದು ಹೇಳುವ ಅವರು, ಕ್ಷೇತ್ರದ ಮೇಲೆ ಕಾಳಜಿ ಇದ್ದರೇ ಸರ್ಕಾರದಲ್ಲಿ ಮಾತನಾಡಿ, ರಸ್ತೆ ದುರಸ್ತಿ ಕಾಮಗಾರಿ ತ್ವರಿತವಾಗಿ ಪ್ರಾರಂಭಿಸುವಂತೆ ಸವಾಲು ಹಾಕಿದರು.

‘ಇರಿಸು ಮುರಿಸು’

ಪ್ರಗತಿ ಪ್ರತಿಮೆಯ ಕಾರ್ಯಕ್ರಮದ ಭಾಗವಾಗಿ ಪ್ರತಿಯೊಂದು ಗ್ರಾಪಂಗೆ ಆಗಮಿಸಿದ್ದ ಮೃತ್ತಿಕೆ ಸಂಗ್ರಹ ರಥದ ಮುಂದೆ ಬಿಜೆಪಿಯ ಮುಖಂಡರು, ನಾಯಕರು ದಂಡು ಕಟ್ಟಿಕೊಂಡು ಬಂದು, ಇದು ಬಿಜೆಪಿ ಕಾರ್ಯಕ್ರಮವೆಂಬಂತೆ ಬಿಂಬಿಸುತ್ತಿದ್ದರು. ಗ್ರಾಪಂನ ಅಧ್ಯಕ್ಷರು, ಉಪಾಧ್ಯಕ್ಷ, ಸದಸ್ಯರಿಗೆ ಸೂಕ್ತವಾಗಿ ಗೌರವ ನೀಡದೇ ಅವರೇ ರೀತಿಯಲ್ಲಿ ಪ್ರಚಾರದ ಗೀಳಿಗೆ ಇಳಿದಿದ್ದರು. ಸರ್ಕಾರದ ಕಾರ್ಯಕ್ರಮವನ್ನು ಸಂಪೂರ್ಣವಾಗಿ ಕೇಸರಮಯ ಮಾಡಲು ಹೊರಟಿದ್ದವರು ಇಂದು ಒಕ್ಕಲಿಗರಿಗೆ ಮಾಡಿದ ಅಪಮಾನ ಎಂದು ಪತ್ರಿಕೆ ಹೇಳಿಕೆ ನೀಡುತ್ತಾರೆ. ಅವರ ವರ್ತನೆ ಒಂದೊಮ್ಮೆ ಪೂರ್ವಾಲೋಕನ ಮಾಡಿಕೊಳ್ಳಲಿ ಎಂದು ತಾಲ್ಲೂಕು ಜೆಡಿಎಸ್‌ ಅಧ್ಯಕ್ಷ ಆರ್‌.ಮುನೇಗೌಡ ಚಾಟಿ ಬಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.