ಆನೇಕಲ್: ಶೈಕ್ಷಣಿಕ ವರ್ಷ ಆರಂಭದ ದಿನವಾದ ಶುಕ್ರವಾರ ತಾಲ್ಲೂಕಿನಾದ್ಯಂತ ಸರ್ಕಾರಿ ಶಾಲೆಗಳಲ್ಲಿ ಹಬ್ಬದ ವಾತಾವರಣ ಮನೆ ಮಾಡಿತ್ತು. ಬೇಸಿಗೆ ರಜೆಯ ನಂತರ ಶಾಲೆಗೆ ಆಗಮಿಸಿದ ಪುಟಾಣಿ ಮಕ್ಕಳಿಗೆ ಶಿಕ್ಷಕರು, ಎಸ್‌ಡಿಎಂಸಿ ಸದಸ್ಯರು ಹೂವು ಮತ್ತು ಸಿಹಿ ನೀಡಿ ಸ್ವಾಗತಿಸಿದರು.
ಇಗ್ಗಲೂರು ಸರ್ಕಾರಿ ಶಾಲೆಗೆ ವಿದ್ಯಾರ್ಥಿಗಳನ್ನು ಎತ್ತಿನಗಾಡಿಯಲ್ಲಿ ಕುಳ್ಳರಿಸಿ ಜಾನಪದ ಕಲಾತಂಡಗಳೊಂದಿಗೆ ಮೆರವಣಿಗೆ ಶಾಲೆಗೆ ಸ್ವಾಗತಿಸಿದ್ದು ವಿಶೇಷವಾಗಿತ್ತು.
ಆನೇಕಲ್ ತಾಲ್ಲೂಕಿನ ಚಂದಾಪುರ ಪುರಸಭೆ ವ್ಯಾಪ್ತಿಯ ಇಗ್ಗಲೂರು ಗ್ರಾಮದ ಸರ್ಕಾರಿ ಶಾಲೆಯಲ್ಲಿ ಶಾಲಾ ಆರಂಭೋತ್ಸವದ ಪ್ರಯುಕ್ತ ಎತ್ತಿನ ಗಾಡಿಗಳನ್ನು ಕಟ್ಟಿ ವಿದ್ಯಾರ್ಥಿಗಳನ್ನು ಕುಳ್ಳರಿಸಿಕೊಂಡು ಮೆರವಣಿಗೆ ನಡೆಸಿ ಶಾಲೆಗೆ ಸ್ವಾಗತಿಸಲಾಯಿತು. ತಮಟೆ, ವೀರಗಾಸೆ ಸೇರಿದಂತೆ ಜಾನಪದ ಕಲಾತಂಡಗಳೊಂದಿಗೆ ವಿದ್ಯಾರ್ಥಿಗಳನ್ನು ಸ್ವಾಗತಿಸಿದ್ದು ವಿಶೇಷವಾಗಿತ್ತು.
ತಾಲ್ಲೂಕಿನ ಎಲ್ಲಾ ಸರ್ಕಾರಿ ಶಾಲೆಗಳಲ್ಲಿ ತಳಿರು ತೋರಣಗಳು, ರಂಗೋಲಿ ಹಾಕಿ ಬಲೂನ್‌ಗಳಿಂದ ಸಿಂಗರಿಸಿ ತಮ್ಮ ಶಾಲೆಯ ಆರಂಭೋತ್ಸವವನ್ನು ಸಂಭ್ರಮಿಸಿದರು. ಶಾಲೆಗೆ ಆಗಮಿಸಿದ ಮೊದಲ ದಿನವೇ ವಿದ್ಯಾರ್ಥಿಗಳಿಗೆ ಪಠ್ಯ ಪುಸ್ತಕ ಮತ್ತು ಸಮವಸ್ತ್ರ ದೊರೆತಿರುವುದು ಮಕ್ಕಳಿಗೆ ಖುಷಿ ತಂದಿದೆ.
ಪಟ್ಟಣದ ದೇವಾಂಗಪೇಟೆ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಶಾಲಾ ಆರಂಭೋತ್ಸವಕ್ಕೆ ಶಾಸಕ ಬಿ.ಶಿವಣ್ಣ ಅವರು ಚಾಲನೆ ನೀಡಿದರು. ವಿದ್ಯಾರ್ಥಿಗಳಿಗೆ ಗುಲಾಬಿ ಹೂವುಗಳನ್ನು ನೀಡುವ ಮೂಲಕ ಶಾಲಾ ಪ್ರಾರಂಭೋತ್ಸವಕ್ಕೆ ಚಾಲನೆ ನೀಡಲಾಯಿತು.
ಶಾಲಾ ಪ್ರಾರಂಭೋತ್ಸವದ ಉದ್ಘಾಟನೆ ಪ್ರಯುಕ್ತ ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಹೆಚ್ಚು ಅಂಕಗಳನ್ನು ಗಳಿಸಿದ ವಿದ್ಯಾರ್ಥಿಗಳನ್ನು ಸನ್ಮಾನಿಸಲಾಯಿತು. ಶೇ.100ರಷ್ಟು ಸಾಧನೆ ಮಾಡಿದ ಶಾಲೆಗಳ ಮುಖ್ಯೋಪಾಧ್ಯಾಯರನ್ನು ಸನ್ಮಾನಿಸಲಾಯಿತು.
ಶಾಸಕ ಬಿ.ಶಿವಣ್ಣ ಮಾತನಾಡಿ, ಸರ್ಕಾರಿ ಶಾಲೆಗಳಲ್ಲಿ ಮೂಲಸೌಲಭ್ಯಗಳನ್ನು ಕಲ್ಪಿಸಲಾಗಿದೆ. ತರಬೇತಿ ಪಡೆದ ನುರಿತ ಶಿಕ್ಷಕರಿದ್ದಾರೆ. ಅಕ್ಷರ ದಾಸೋಹ, ಪಠ್ಯ ಪುಸ್ತಕ, ಸಮವಸ್ತ್ರ ಸೇರಿದಂತೆ ವಿವಿಧ ಸೌಲಭ್ಯಗಳನ್ನು ಉಚಿತವಾಗಿ ನೀಡಲಾಗುತ್ತದೆ. ಹಾಗಾಗಿ ಸರ್ಕಾರಿ ಶಾಲೆಗಳಿಗೆ ಮಕ್ಕಳನ್ನು ಸೇರಿಸುವ ನಿಟ್ಟಿನಲ್ಲಿ ಶಿಕ್ಷಕರು ಗ್ರಾಮಗಳಲ್ಲಿ ದಾಖಲಾತಿ ಆಂದೋಲನ ನಡೆಸಬೇಕು ಎಂದು ಹೇಳಿದರು.
ಶಿಕ್ಷಣ ಮತ್ತು ಆರೋಗ್ಯ ಪ್ರತಿಯೊಬ್ಬರಿಗೂ ಅವಶ್ಯಕ. ಉತ್ತಮ ಶಿಕ್ಷಣವು ಉನ್ನತ ಸಾಧನೆಗೆ ಹಾದಿ. ಹಾಗಾಗಿ ಸರ್ಕಾರವು ಗುಣಾತ್ಮಕ ಶಿಕ್ಷಣ ನೀಡುವುದು ನಮ್ಮೆಲ್ಲರ ಜವಾಬ್ದಾರಿಯಾಗಿದೆ. ಪೋಷಕರು ಶಾಲೆಗೆ ಮಕ್ಕಳು ಗೈರು ಹಾಜರಾಗದಂತೆ ನೋಡಿಕೊಳ್ಳಬೇಕು. ಮೊದಲ ದಿನದಿಂದಲೇ ಶೈಕ್ಷಣಿಕ ಚಟುವಟಿಕೆಗಳು ಆರಂಭವಾಗಿವೆ. ಹಾಗಾಗಿ ತಮ್ಮ ನೆರೆಹೊರೆಯ ಕುಟುಂಬಗಳಿಗೆ ತಿಳಿಸಿ ಎಲ್ಲಾ ಮಕ್ಕಳು ಶಾಲೆಗೆ ಬರುವಂತೆ ಮಾಡಬೇಕು ಎಂದರು.
ಪುರಸಭೆ ಅಧ್ಯಕ್ಷೆ ಸುಧಾ ನಿರಂಜನ್, ಸದಸ್ಯರಾದ ಬಿ.ನಾಗರಾಜು, ರಾಜೇಂದ್ರ ಪ್ರಸಾದ್, ಬಾಬು, ಲೋಕೇಶ್‌ಗೌಡ, ಕ್ಷೇತ್ರ ಶಿಕ್ಷಣಾಧಿಕಾರಿ ಎನ್.ವೆಂಕಟೇಶ್, ದೈಹಿಕ ಶಿಕ್ಷಕರ ಸಂಘದ ಅಧ್ಯಕ್ಷ ಗೋಪಾಲ್, ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಎಚ್.ಮಂಜುನಾಥ್, ಪದಾಧಿಕಾರಿಗಳಾದ ಗಿರೀಶ್, ನಾಗರಾಜ್, ಮುಖಂಡರಾದ ನರೇಂದ್ರ ಕುಮಾರ್, ಹನುಮಂತರಾವ್, ಲಕ್ಷ್ಮೀನಾರಾಯಣ್, ಮಧು, ಕ್ಷೇತ್ರ ಸಮನ್ವಯಾಧಿಕಾರಿ ಭಾಸ್ಕರ್, ಶಿಕ್ಷಣ ಸಂಯೋಜಕಿ ವಾಣಿ, ದೇವಾಂಗಪೇಟೆ ಸರ್ಕಾರಿ ಶಾಲೆಯ ಮುಖ್ಯಶಿಕ್ಷಕಿ ಸರೋಜಮ್ಮ ಇದ್ದರು.
ವಿದ್ಯಾರ್ಥಿಗಳಿಗೆ ಸನ್ಮಾನ ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಉನ್ನತ ಸಾಧನೆ ಮಾಡಿದ ಯೋಗದೀಪ್ ವರ್ಷಿಣಿ ಪ್ರಸ್ತುತಿ ಮುತ್ತಣ್ಣನವರ್ ಹನಿಯಾ.ಜೆ.ರೈ ಶ್ವೇತಾ ವಿನಯ್ ಚರಣ್ ಲಿಖಿತ್ ಅವರನ್ನು ಸನ್ಮಾನಿಸಲಾಯಿತು. ಶೇ 100ರಷ್ಟು ಫಲಿತಾಂಶದ ಸಾಧನೆ ಮಾಡಿದ ಚಂದಾಪುರ ಛತ್ರಖಾನೆ ಸರ್ಕಾರಿ ಪ್ರೌಢ ಶಾಲೆಯ ಶಿಕ್ಷಕರನ್ನು ಸನ್ಮಾನಿಸಲಾಯಿತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.