ADVERTISEMENT

ಆನೇಕಲ್: ಕಾಡಾನೆಗಳ ಮೇಲೆ ಜಿಪಿಸ್‌ ನಿಗಾ

ಆನೆ–ಮಾನವ ಸಂಘರ್ಷ ತಡೆಗೆ ಕರ್ನಾಟಕ‌, ತಮಿಳುನಾಡು ಅರಣ್ಯ ಇಲಾಖೆ ಅಧಿಕಾರಿಗಳ ಜಂಟಿ ಸಮಾಲೋಚನೆ

​ಪ್ರಜಾವಾಣಿ ವಾರ್ತೆ
Published 19 ಜುಲೈ 2024, 15:58 IST
Last Updated 19 ಜುಲೈ 2024, 15:58 IST
ಆನೇಕಲ್‌ ಸಮೀಪದ ತಮಿಳುನಾಡಿನ ಜವಳಗೆರೆಯಲ್ಲಿ ಕರ್ನಾಟಕ ಮತ್ತು ತಮಿಳುನಾಡಿನ ಅರಣ್ಯ ಇಲಾಖೆಯ ಅಧಿಕಾರಿಗಳು ಮಾತುಕತೆ ನಡೆಸಿದರು
ಆನೇಕಲ್‌ ಸಮೀಪದ ತಮಿಳುನಾಡಿನ ಜವಳಗೆರೆಯಲ್ಲಿ ಕರ್ನಾಟಕ ಮತ್ತು ತಮಿಳುನಾಡಿನ ಅರಣ್ಯ ಇಲಾಖೆಯ ಅಧಿಕಾರಿಗಳು ಮಾತುಕತೆ ನಡೆಸಿದರು   

ಆನೇಕಲ್: ಆನೆ–ಮಾನವ ಸಂಘರ್ಷ ತಡೆಗೆ ಕರ್ನಾಟಕ ಮತ್ತು ತಮಿಳುನಾಡು ಅರಣ್ಯ ಇಲಾಖೆಯ ಅಧಿಕಾರಿಗಳ ಸಮನ್ವಯ ಮತ್ತು ಮಾಹಿತಿ ವಿನಿಮಯಕ್ಕಾಗಿ ಬನ್ನೇರುಘಟ್ಟ ರಾಷ್ಟ್ರೀಯ ಉದ್ಯಾನದ ಅಧಿಕಾರಿಗಳು ತಮಿಳುನಾಡಿನ ಜವಳಗೆರೆ ಅರಣ್ಯ ಪ್ರದೇಶಕ್ಕೆ ಭೇಟಿ ನೀಡಿದರು.

ಬನ್ನೇರುಘಟ್ಟ ರಾಷ್ಟ್ರೀಯ ಉದ್ಯಾನ ವ್ಯಾಪ್ತಿಯ ಅಧಿಕಾರಿಗಳು ಮತ್ತು ಹೊಸೂರು ವಿಭಾಗದ ಅರಣ್ಯ ಇಲಾಖೆಯ ಅಧಿಕಾರಿಗಳು ಪರಸ್ಪರ ಮಾಹಿತಿ ವಿನಿಮಯ ಮಾಡಿಕೊಂಡರು.

ಅರಣ್ಯ ಪ್ರದೇಶದೊಳಗೆ ಆನೆಗಳ ಚಲನವಲನಗಳ ಮಾಹಿತಿ ಹಂಚಿಕೊಳ್ಳಲು ಜಿಪಿಎಸ್‌ ವ್ಯವಸ್ಥೆ ಅಳವಡಿಸಿಕೊಳ್ಳಲು ಎರಡು ರಾಜ್ಯಗಳ ಅಧಿಕಾರಿಗಳು ಒಪ್ಪಿಕೊಂಡಿದ್ದು, ಇದರಿಂದಾಗಿ ನೆರೆಯ ಬೀಟ್‌ ವಿಭಾಗವನ್ನು ಎಚ್ಚರಿಸಲು ಸಹಾಯಕವಾಗುತ್ತದೆ ಮತ್ತು ಮೇಲ್ವಿಚಾರಣೆಗಾಗಿ ತಂಡವನ್ನು ನಿಯೋಜಿಸಲು ಅನುಕೂಲವಾಗುತ್ತದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ADVERTISEMENT

ಹೊಸೂರು ಅರಣ್ಯ ವಿಭಾಗದಲ್ಲಿ ನಿರ್ಮಾಣ ಆಗಿರುವ ಸ್ಟೀಲ್‌ ವೈರ್‌ ರೋಪ್‌ ಬ್ಯಾರಿಕೇಡ್‌ ಪ್ರದೇಶದ ಮಾದರಿ ಮತ್ತು ಕೃತಕ ಬುದ್ಧಿಮತ್ತೆ(ಎಐ) ಕ್ಯಾಮೆರಾ ಅಳವಡಿಸಿರುವ ಕುರಿತು ರಾಜ್ಯದ ಅಧಿಕಾರಿಗಳು ಮಾಹಿತಿ ಪಡೆದುಕೊಂಡರು.

ಒಂದು ಕಿ.ಮೀ. ಸ್ಟೀಲ್‌ ವೈರ್‌ ರೋಪ್‌ ಬ್ಯಾರಿಕೇಡ್‌ ಅಳವಡಿಕೆಗೆ ₹40ಲಕ್ಷ ವೆಚ್ಚವಾಗಿದೆ ಎಂದು ಅಲ್ಲಿನ ಅಧಿಕಾರಿಗಳು ಮಾಹಿತಿ ನೀಡಿದರು.

ಹಗಲು–ರಾತ್ರಿ ಉತ್ತಮ ರೀತಿಯಲ್ಲಿ ಕಾರ್ಯನಿರ್ವಹಿಸುವ ಎಐ ಕ್ಯಾಮೆರಾದಿಂದ ಸೆರೆಹಿಡಿಯಲಾದ ವಿಡಿಯೊಗಳನ್ನು ಎರಡು ರಾಜ್ಯಗಳು ವಿನಿಮಯ ಮಾಡಿಕೊಳ್ಳಬಹುದು. ಇದರಿಂದ ಆನೆಗಳ ಚಲನ ವಲನಗಳ ಬಗ್ಗೆ ಸಂಪೂರ್ಣ ನಿಗಾ ವಹಿಸಬಹುದಾಗಿದೆ. ಆನೆಗಳು ನಿಗದಿತ ಪ್ರದೇಶವನ್ನು ದಾಟದಂತೆ ತಡೆಯಲು ಸೂಚನೆ ನೀಡುವ ನಿಯಂತ್ರಣ ಕೊಠಡಿ ವ್ಯವಸ್ಥೆಯಿದೆ. ಎರಡು ರಾಜ್ಯಗಳು ಉತ್ತಮ ಸಮನ್ವಯಕ್ಕಾಗಿ ಪರಸ್ಪರ ಭೇಟಿ, ಮಾಹಿತಿಗಳ ವಿನಿಮಯದ ಮೂಲಕ ಆನೆ ಮತ್ತು ಮಾನವ ಸಂಘರ್ಷಕ್ಕೆ ಕಡಿವಾಣ ಹಾಕಲು ಅನುಕೂಲವಾಗಿದೆ ಎಂದು ಅಧಿಕಾರಿಗಳು ತಿಳಿಸಿದರು.

ಬನ್ನೇರುಘಟ್ಟ ರಾಷ್ಟ್ರೀಯ ಉದ್ಯಾನದ ಡಿಸಿಎಫ್‌ ಪ್ರಭಾಕರ್‌ ಪ್ರಿಯದರ್ಶಿ, ಹೊಸೂರು ಡಿಸಿಎಫ್‌ ಕಾಂತ್ಯಾಯಿನಿ, ಆನೇಕಲ್‌ ವಲಯ ಅರಣ್ಯ ಅಧಿಕಾರಿ ರಂಜಿತಾ, ಮರಳವಾಡಿ ಆರ್‌ಎಫ್‌ಓ ಅಂಥೋಣಿ, ತಮಿಳುನಾಡು ರೇಂಜರ್‌ಗಳಾದ ಆರ್ಮುಗಂ, ಆನಂದ್‌, ಚೆಲ್ವರಾಜು ಇದ್ದರು. ಆನೇಕಲ್‌, ಕೋಡಿಹಳ್ಳಿ ಮತ್ತು ತಮಿಳುನಾಡಿನ ಜವಳಗೆರೆಯ ಡಿಆರ್‌ಎಫ್‌ಓಗಳು, ಅರಣ್ಯ ಪಾಲಕರು ಭೇಟಿ ಮಾಡಿದ್ದರು.

ತಮಿಳುನಾಡಿನ ಜವಳಗೆರೆಯಲ್ಲಿ ಆನೆಗಳು ಕಾಡಿನಿಂದ ನಾಡಿಗೆ ಬರುವುದನ್ನು ತಡೆಯುವ ಸಲುವಾಗಿ ಅಳವಡಿಸಿರುವ ಸೋಲಾರ್‌ ತಂತಿ ಮತ್ತು ಕ್ಯಾಮೆರಾ

ಗಡಿಯಲ್ಲಿ ಹೆಚ್ಚಿದ ಸಂಘರ್ಷ

ತಮಿಳುನಾಡು ಮತ್ತು ಕರ್ನಾಟಕ ಗಡಿ ಭಾಗಗಳಲ್ಲಿ ಆನೆಗಳ ದಾಳಿ ಮತ್ತು ಕಾಡಾನೆಗಳು ಕಾಡಿನಿಂದ ನಾಡಿನತ್ತ ಬರುತ್ತಿರುವುದರಿಂದ ಮಾನವ ಮತ್ತು ಆನೆಗಳ ನಡುವೆ ನಿರಂತರ ಸಂಘರ್ಷ ನಡೆಯುತ್ತಿದೆ. ಹೀಗಾಗಿ ಆನೆ–ಮಾನವ ಸಂಘರ್ಷ ನಿರ್ವಹಣೆಗೆ ಎರಡು ರಾಜ್ಯಗಳ ಅಧಿಕಾರಿಗಳು ಭೇಟಿ ಮಾಡಿ ಮಾಹಿತಿಗಳ ವಿನಿಮಯ ಮಾಡಿಕೊಂಡಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.