ಆನೇಕಲ್: ನಗರದ ಹೊರವಲಯ ಹಾಗೂ ಗ್ರಾಮೀಣ ಪ್ರದೇಶಗಳಲ್ಲಿ ಗುಣಮಟ್ಟದ ಆರೋಗ್ಯ ಸೇವೆ ಒದಗಿಸಲು ರಾಜ್ಯ ಸರ್ಕಾರ ಬದ್ಧವಾಗಿದ್ದು, ಜನಸಂಖ್ಯೆ ಹೆಚ್ಚು ಇರುವ ಪ್ರದೇಶಗಳಲ್ಲಿ ಹೋಬಳಿಗೊಂದು 100 ಹಾಸಿಗೆಯ ಆಸ್ಪತ್ರೆ ನಿರ್ಮಿಸಲು ಕ್ರಿಯಾ ಯೋಜನೆ ರೂಪಿಸಲಾಗಿದೆ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ದಿನೇಶ್ ಗುಂಡೂರಾವ್ ಹೇಳಿದರು.
ತಾಲ್ಲೂಕಿನ ದೊಮ್ಮಸಂದ್ರದಲ್ಲಿ 100 ಹಾಸಿಗೆಗಳ ತಾಲ್ಲೂಕು ಮಟ್ಟದ ಆಸ್ಪತ್ರೆ ನಿರ್ಮಾಣಕ್ಕೆ ಸೋಮವಾರ ಭೂಮಿ ಪೂಜೆ ನೆರವೇರಿಸಿ ಮಾತನಾಡಿದರು.
ಆನೇಕಲ್ ತಾಲ್ಲೂಕು ಬೆಂಗಳೂರಿನ ಹೊರವಲಯದಲ್ಲಿದ್ದರೂ ಹೆಚ್ಚು ಅಭಿವೃದ್ಧಿಯಾಗುತ್ತಿದೆ. ಜನಸಂಖ್ಯೆಯೂ ಹೆಚ್ಚಳವಾಗುತ್ತಿದೆ. ಇಲ್ಲಿ ಇನ್ನೆರಡು ಆಸ್ಪತ್ರೆ ನಿರ್ಮಿಸಿದರೂ ಸಾಲದು. ಎರಡು ಲಕ್ಷ ಜನಸಂಖ್ಯೆಗೆ 100 ಹಾಸಿಗೆ ಸಾಮರ್ಥ್ಯದ ಆಸ್ಪತ್ರೆ ಅವಶ್ಯ. ಆದರೆ ತಾಲ್ಲೂಕಿನ ಜನಸಂಖ್ಯೆ 7ಲಕ್ಷಕ್ಕೂ ಹೆಚ್ಚಿದೆ. ಹೀಗಾಗಿ ಹೋಬಳಿಗೊಂದು 100 ಹಾಸಿಗೆ ಸಾಮರ್ಥ್ಯದ ತಾಲ್ಲೂಕು ಮಟ್ಟದ ಆಸ್ಪತ್ರೆ ನಿರ್ಮಿಸಲಾಗುವುದು ಎಂದು ತಿಳಿಸಿದರು.
ಬೆಂಗಳೂರು ಹೊರವಲಯದ ತಾಲ್ಲೂಕುಗಳಲ್ಲಿ ಜನಸಂಖ್ಯೆ ಹೆಚ್ಚಾಗುತ್ತಿರುವುದರಿಂದ ತಾಲ್ಲೂಕು ಮಟ್ಟದ ಆಸ್ಪತ್ರೆ ನಿರ್ಮಿಸಲು ಮುಖ್ಯಮಂತ್ರಿಗಳನ್ನು ಕೋರಲಾಗಿತ್ತು. ಈ ಹಿನ್ನೆಲೆಯಲ್ಲಿ ದೊಮ್ಮಸಂದ್ರದಲ್ಲಿ ಸುಸಜ್ಜಿತ ಆಸ್ಪತ್ರೆ ನಿರ್ಮಿಸಲು ಭೂಮಿ ಪೂಜೆ ನೆರವೇರಿಸಲಾಗಿದೆ ಎಂದರು.
ಬೆಂಗಳೂರು ಹೊರವಲಯದಲ್ಲಿ ಸುಧಾರಿತ ಆರೋಗ್ಯ ಸೇವೆ ನೀಡಲು ಯೋಜನೆ ರೂಪಿಸಲಾಗಿದ್ದು, ಜೂನ್ ತಿಂಗಳಿನಲ್ಲಿ ಹೊಸಕೋಟೆಯಲ್ಲಿ 100 ಹಾಸಿಗೆಯ ಸರ್ಕಾರಿ ಆಸ್ಪತ್ರೆಗೆ ಭೂಮಿ ಪೂಜೆ ನೆರವೇರಿಸಲಾಗುವುದು. ಹಾಗೇ ನೆಲಮಂಗಲ, ಹೊಸಕೋಟೆ, ಆನೇಕಲ್, ಬೆಂಗಳೂರು ಉತ್ತರ ತಾಲ್ಲೂಕಿನಲ್ಲಿ ಸುಸಜ್ಜಿತ ಆಸ್ಪತ್ರೆ ನಿರ್ಮಾಣಕ್ಕೆ ಕ್ರಿಯಾ ಯೋಜನೆ ರೂಪಿಸಿದ್ದೇವೆ ಎಂದು ತಿಳಿಸಿದರು.
ಸರ್ಕಾರಿ ಆಸ್ಪತ್ರೆಗಳಲ್ಲಿ ಔಷಧಿ ಸಮರ್ಪಕವಾಗಿ ದೊರೆಯುವಂತೆ ಮಾಡಲಾಗುತ್ತಿದೆ. ರಾಜ್ಯದ ಎಲ್ಲಾ ಸರ್ಕಾರಿ ಆಸ್ಪತ್ರೆಗಳಲ್ಲಿ ಇಬ್ಬರು ಸ್ತ್ರೀರೋಗ ತಜ್ಞರು ಮತ್ತು ಮಕ್ಕಳ ತಜ್ಞರು ಇರುವಂತೆ ಕ್ರಮ ವಹಿಸಲಾಗಿದೆ. ಇದರಿಂದ ಮಹಿಳೆಯರಿಗೆ ಮತ್ತು ಮಕ್ಕಳ ಸೇವೆಗೆ ಸರ್ಕಾರಿ ಆಸ್ಪತ್ರೆಗಳು 24ಗಂಟೆಯೂ ತೆರೆದಿರುತ್ತದೆ ಎಂದರು.
ರಾಜ್ಯದಲ್ಲಿ ಒಟ್ಟು 40 ಸಾವಿರ ಆಶಾ ಕಾರ್ಯಕರ್ತರಿದ್ದು, ಈ ಪೈಕಿ 15 ಸಾವಿರ ಆಶಾ ಕಾರ್ಯಕರ್ತರಿಗೆ ವೇತನ ಕಡಿಮೆ ಬರುತ್ತಿತು. ಅವರಿಗೆಲ್ಲ ₹1ಸಾವಿರ ವೇತನ ಹೆಚ್ಚಳ ಮಾಡಲಾಗಿದೆ ಎಂದು ತಿಳಿಸಿದರು.
ಶಾಸಕ ಬಿ.ಶಿವಣ್ಣ ಮಾತನಾಡಿ, ದೊಮ್ಮಸಂದ್ರ ನಗರ ಪ್ರದೇಶಕ್ಕೆ ಹೊಂದಿಕೊಂಡಿದೆ. ಹಾಗಾಗಿ ಸುಸಜ್ಜಿತ ಆರೋಗ್ಯ ಸೇವೆ ಕಲ್ಪಿಸಲು ಸರ್ಕಾರಕ್ಕೆ ಮನವಿ ಸಲ್ಲಿಸಲಾಗಿತ್ತು. ಸರ್ಕಾರ ಸಕರಾತ್ಮಕವಾಗಿ ಸ್ಪಂದಿಸಿದೆ. ಆನೇಕಲ್ ಸೇರಿದಂತೆ ತಾಲ್ಲೂಕಿನ ಎಲ್ಲಾ ಹೋಬಳಿಗಳಲ್ಲಿ ತಾಲ್ಲೂಕು ಮಟ್ಟದ ಆಸ್ಪತ್ರೆ ನಿರ್ಮಿಸಲು ಶ್ರಮಿಸಲಾಗುವುದು ಎಂದು ತಿಳಿಸಿದರು.
ದೊಮ್ಮಸಂದ್ರ ಗ್ರಾಮ ಪಂಚಾಯಿತಿ ಅಧ್ಯಕ್ಷ ನರೇಶ್, ಉಪಾಧ್ಯಕ್ಷೆ ದಿವ್ಯ, ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಮಂಜುನಾಥ್, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ದೊಡ್ಡಹಾಗಡೆ ಹರೀಶ್, ಲಿಂಗಣ್ಣ, ರಘುಪತಿರೆಡ್ಡಿ, ಮೋಹನ್, ಆರೋಗ್ಯ ಇಲಾಖೆಯ ವಿಭಾಗೀಯ ಜಂಟಿ ನಿರ್ದೇಶಕಿ ಡಾ.ಮಮತಾ, ಡಿಎಚ್‌ಓ ಡಾ.ರವೀಂದ್ರನಾಥ್, ತಾಲ್ಲೂಕು ವೈದ್ಯಾಧಿಕಾರಿ ರವಿ, ಗಟ್ಟಹಳ್ಳಿ ಸೀನಪ್ಪ, ಸುರೇಶ್ ರೆಡ್ಡಿ, ಶಿವಕುಮಾರ್, ಪುಷ್ಪರಾಜ್, ಭಾಸ್ಕರ್ ರೆಡ್ಡಿ, ಗೋವಿಂದರಾಜು, ಸುಬ್ರಮಣಿ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.