ದೊಡ್ಡಬಳ್ಳಾಪುರ: ಕ್ರೀಡೆಯಿಂದ ಕೇವಲ ದೈಹಿಕ ಅನುಕೂಲವಲ್ಲದೆ ಮಾನಸಿಕವಾಗಿ ದೃಢತೆ ಕಾಯ್ದುಕೊಳ್ಳಬಹುದಾಗಿದೆ ಎಂದು ಹಿರಿಯ ಸಿವಿಲ್ ನ್ಯಾಯಾಧೀಶ ಎಂ.ಬಿ.ಕುಲಕರ್ಣಿ ತಿಳಿಸಿದರು.
ನಗರದ ಶ್ರೀ ದೇವರಾಜ ಅರಸ್ ಅಂತರರಾಷ್ಟ್ರೀಯ ವಸತಿ ಶಾಲೆಯಲ್ಲಿ ಶನಿವಾರ ನಡೆದ ವಾರ್ಷಿಕ ಕ್ರೀಡಾಕೂಟಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.
ಮಕ್ಕಳ ಸದೃಢ ಆರೋಗ್ಯಕ್ಕೆ ಕ್ರೀಡೆ ಅವಶ್ಯಕ. ಆಟ ಎಂಬ ಕೀಳಿರಿಮೆಬೇಡ. ಉತ್ತಮ ಕ್ರೀಡಾಪಟುಗಳಿಗೆ ಸೇನೆಯಲ್ಲಿ ಸೇವೆ ಸಲ್ಲಿಸುವ ಅವಕಾಶವೂ ದೊರೆಯುತ್ತದೆ ಎಂದು ಅಭಿಪ್ರಾಯಪಟ್ಟರು.
ಇಂದು ವಿಶ್ವ ಏಡ್ಸ್ ದಿನವನ್ನು ಎಲ್ಲೆಡೆ ಆಚರಿಸುತ್ತಿದ್ದು ಮಾರಕ ರೋಗವಾದ ಏಡ್ಸ್ ತಡೆಗೆ ಕೈಗೊಳ್ಳಬೇಕಾದ ಮುಂಜಾಗ್ರತೆಗಳ ಕುರಿತಂತೆ ವಿದ್ಯಾರ್ಥಿಗಳು ಅರಿತುಕೊಳ್ಳಬೇಕಿದೆ ಎಂದು ತಿಳಿಸಿದರು.
ಏಕಲವ್ಯ ಪ್ರಶಸ್ತಿ ವಿಜೇತ ಕ್ರೀಡಾ ತರಬೇತುದಾರ ಬಿ.ಪಿ.ನಂಜುಂಡೇಗೌಡ ಮಾತನಾಡಿ, ಉತ್ತಮ ಸಾಧನೆ ಮಾಡುವ ಕ್ರೀಡಾಪಟುಗಳಿಗೆ ಪೊಲೀಸ್ ಇಲಾಖೆ, ಎಂಜನಿಯರಿಂಗ್, ಮೆಡಿಕಲ್ ಮುಂತಾದ ಕ್ಷೇತ್ರಗಳಲ್ಲಿ ನೇರ ನೇಮಕಾತಿ ದೊರೆಯುತ್ತದೆ ಎಂದರು.
ಧ್ವಜಾರೋಹಣ, ತಂಡಗಳ ಪರಿಚಯ ಹಾಗೂ ಅತಿಥಿಗಳಿಗೆ ಗೌರವ ವಂದನೆ ಸಲ್ಲಿಸಲಾಯಿತು. ಪ್ರಥಮ ದರ್ಜೆ ಸಿವಿಲ್ ನ್ಯಾಯಾಧೀಶರಾದ ಸಂದೀಪ್ ಎ.ನಾಯಕ್, ಸರ್ಕಾರಿ ಅಭಿಯೋಜಕ ಸುಬ್ರಹ್ಮಣ್ಯ, ಸರ್ಕಲ್ ಇನ್‌ಸ್ಪೆಕ್ಟರ್ ಜಿ.ಸಿದ್ದರಾಜು, ಶ್ರೀ ದೇವರಾಜ ಅರಸು ಅಂತರರಾಷ್ಟ್ರೀಯ ವಸತಿ ಶಾಲೆಯ ಆಡಳಿತ ನಿರ್ದೇಶಕ ಜೆ.ರಾಜೇಂದ್ರ, ನಿರ್ದೇಶಕ ಎನ್.ಅರವಿಂದ್, ಪ್ರಾಂಶುಪಾಲರಾದ ದೇವಿಕರಾಣಿ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.