ಹೊಸಕೋಟೆ: ವೈದ್ಯರ ಚೀಟಿ ಇಲ್ಲದೆ ಔಷಧಿ ಖರೀದಿಗೆ ಬರುವವರಿಗೆ ಔಷಧಿ ನೀಡಬಾರದು. ವೈದ್ಯರ ಸಮಾಲೋಚನೆಗೆ ಒಳಗಾಗಿ ಚೀಟಿ ತನ್ನಿ ಅವರಿಗೆ ಸೌಜನ್ಯದಿಂದ ಮನವರಿಕೆ ಮಾಡಿಕೊಡಬೇಕು ಎಂದು ಜಿಲ್ಲಾ ಔಷಧ ನಿಯಂತ್ರಕ ಗಣೇಶ್ ಬಾಬು ಹೇಳಿದರು.
ತಾಲ್ಲೂಕು ಕೆಮಿಸ್ಟ್ ಅಂಡ್ ಡ್ರಗ್ಗಿಸ್ಟ್ ಅಸೋಸಿಯೇಷನ್ ಆಯೋಜಿಸಿದ್ದ ವಿಶ್ವ ಫಾರ್ಮಸಿಸ್ಟ್ ದಿನಾಚರಣೆಯಲ್ಲಿ ಮಾತನಾಡಿ, ತಾಲ್ಲೂಕಿನ ಮೆಡಿಕಲ್‌ಗಳಲ್ಲಿ ಸ್ವಚ್ಛತೆ ಕಾಪಾಡಿಕೊಳ್ಳದಿದ್ದರೆ, ಅಂತಹ ಮಳಿಗೆಯ ಪರವಾನಗಿ ರದ್ದುಪಡಿಸಲಾಗುವುದು. ಮೆಡಿಕಲ್ ಬರುವವರ ಜತೆ ಸೌಜನ್ಯದಿಂದ ನಡೆದುಕೊಳ್ಳಬೇಕು. ನೈತಿಕತೆ ಮತ್ತು ವೃತ್ತಿ ಧರ್ಮ ಪ್ರದರ್ಶಿಸಬೇಕು ಎಂದು ತಿಳಿಸಿದರು.
ಚೀಟಿ ಇಲ್ಲದೆ ಆಂಟಿಬಯೋಟಿಕ್ಸ್ ಔಷಧಿಗಳನ್ನು ಗ್ರಾಹಕರಿಗೆ ನೀಡಬಾರದು. ಷೆಡ್ಯೂಲ್ಡ್ ಎಚ್–1 ಡ್ರಗ್ಸ್ ಅಡಿಯಲ್ಲಿ ಬರುವ ಔಷದಿಗಳನ್ನು ವೈದ್ಯರ ಸಲಹೆ ಇಲ್ಲದೆ ಖರೀದಿಸುವರ ಹೆಸರು, ದೂರವಾಣಿ ಸಂಖೆಯನ್ನು ದಾಖಲಿಸಿಕೊಂಡು ತಾಲ್ಲೂಕು ಆರೋಗ್ಯ ಅಧಿಕಾರಿಗೆ ಮಾಹಿತಿ ನೀಡಬೇಕು. ಅದರಲ್ಲೂ ಕ್ಷಯ ರೋಗಕ್ಕೆ ಸಂಬಂದಿಸಿದಂತೆ ಡ್ರಗ್ಸ್ ಪಡೆಯಲು ಬಂದವರ ಮಾಹಿತಿಯನ್ನು ಸರ್ಕಾರಕ್ಕೆ ನೀಡಿದರೆ ₹500 ಸಹಾಯದನ ನೀಡಲಾಗುವುದು ಎಂದು ತಿಳಿಸಿದರು.
ಪ್ರತಿಯೊಬ್ಬ ಫಾರ್ಮಸಿಸ್ಟ್ ಮಾದಕ ವಸ್ತುಗಳ ಬಗ್ಗೆ ತಿಳಿದಿರಬೇಕು. ಏನಾದರೂ ಅನಾಹುತ ಸಂಭವಿಸಿದರೆ ಅದಕ್ಕೆ ಮೆಡಿಕಲ್‌ನವರೇ ಕಠಿಣ ಕಾನೂನು ಕ್ರಮ ಎದುರಿಸಬೇಕಾಗುತ್ತದೆ ಎಂದರು.
ಸುಮಾರು 150ಕ್ಕೂ ಹೆಚ್ಚು ಫಾರ್ಮಸಿಸ್ಟ್‌ಗಳಿಗೆ ಮೆಡಿಕಲ್ ಶಾಪ್ ಮತ್ತು ಸುತ್ತಲಿನ ಪರಿಸರವನ್ನು ಹೇಗೆ ಸ್ವಚ್ಛವಾಗಿಟ್ಟುಕೊಳ್ಳಬೇಕು. ಷೆಡ್ಯೂಲ್ಡ್‌ಎಚ್–1 ಡ್ರಗ್ಸ್ ಅಡಿಯಲ್ಲಿ ಯಾವೆಲ್ಲ ಔಷದಿಗಳನ್ನು ಹೇಗೆ ಮಾರಾಟ ಮಾಡಬೇಕು. ಗ್ರಾಹಕರೊಂದಿಗೆ ಹೇಗೆ ವರ್ತಿಸಬೇಕು ಎಂಬುದರ ಬಗ್ಗೆ ತಿಳಿಸಿಕೊಡಲಾಯಿತು.
ಹೊಸಕೋಟೆ ತಾಲ್ಲೂಕು ಘಟಕದ ಔಷದ ವ್ಯಾಪಾರಿಗಳ ಸಂಘದ ಅಧ್ಯಕ್ಷ ರಾಮಾಂಜನಿ, ರಾಜೇಶ್, ಸೋಮಣ್ಣ ಉಪಸ್ಥಿತರಿದ್ದರು.
ಎಂಟಿಪಿ ಮಾರಿದರೆ; ಕಠಿಣ ಕ್ರಮ
ಸಮಾಜದಲ್ಲಿ ಅನೈತಿಕ ಸಂಬಂಧ ಇಲ್ಲವೇ ಹೆಣ್ಣು ಭ್ರೂಣ ಹತ್ಯೆ ಮೊದಲಾದವುಗಳಿಗಾಗಿ ಗರ್ಭಪಾತ ಮಾಡಿಸಿಕೊಳ್ಳುವವರ ಸಂಖ್ಯೆ ಹೆಚ್ಚಾಗಿದೆ. ಇದು ಕಾನೂನಿಗೆ ವಿರುದ್ಧವಾಗಿದ್ದು ಸಂಬಂದಪಟ್ಟ ಆಸ್ಪತ್ರೆ ಹೊರತುಪಡಿಸಿ ಈ ಎಂಟಿಪಿ ಕಿಟ್ ಮಾರಾಟ ಮಾಡುವಂತಿಲ್ಲ. ಈ ಕಿಟ್‌ಗಳನ್ನು ಮಾರಾಟ ಮಾಡಿದೆ ಕಠಿಣ ಶಿಕ್ಷೆಗೆ ಗುರಿ ಆಗಬೇಕಾಗುತ್ತದೆ ಎಂದು ಜಿಲ್ಲಾ ಔಷಧ ನಿಯಂತ್ರಕ ಗಣೇಶ್ ಬಾಬು ಎಚ್ಚರಿಕೆ ನೀಡಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.