ವಿಜಯಪುರ (ದೇವನಹಳ್ಳಿ): ವೃತ್ತಿ ಕಲಾವಿದರು ಹಾಗೂ ಹವ್ಯಾಸಿ ಕಲಾವಿದರಿಗೆ ಮಾಸಿಕ ₹5 ಸಾವಿರ ಪ್ರೋತ್ಸಾಹಧನ ನೀಡಬೇಕೆಂದು ಕನ್ನಡ ಕಲಾವಿದರ ಸಂಘದ ತಾಲ್ಲೂಕು ಅಧ್ಯಕ್ಷ ಮೋಹನ್ ಬಾಬು ಅವರು ಸರ್ಕಾರವನ್ನು ಒತ್ತಾಯಿಸಿದರು.
ಪಟ್ಟಣದ ಸಂತೆ ಮೈದಾನ ಬಳಿಯ ದೇವನಹಳ್ಳಿ ತಾಲ್ಲೂಕು ಕನ್ನಡ ಕಲಾವಿದರ ಸಂಘದ ವತಿಯಿಂದ ಮಂಗಳವಾರ ನಡೆದ 123ನೇ ಕನ್ನಡ ದೀಪ ಕಾರ್ಯಕ್ರಮ ಹಾಗೂ ಸದಸ್ಯತ್ವ ಅಭಿಯಾನಕ್ಕೆ ಚಾಲನೆ ನೀಡಿ ಮಾತನಾಡಿದರು.
ರಾಜ್ಯದಲ್ಲಿ ಲಕ್ಷಾಂತರ ಮಂದಿ ಕಲಾವಿದರಿದ್ದಾರೆ. ಕಲೆಯನ್ನು ನಂಬಿ ಜೀವನ ಸಾಗಿಸುವ ಈ ಕಲಾವಿದರು ವೃದ್ಧಾಪ್ಯದಲ್ಲಿ ಜೀವನ ನಡೆಸಲು ತುಂಬಾ ಕಷ್ಟ ಪಡುತ್ತಾರೆ. ಹಾಗಾಗಿ ವೃತ್ತಿ ಹಾಗೂ ಹವ್ಯಾಸಿ ಕಲಾವಿದರಿಗೆ ಮಾಸಿಕ ₹5 ಸಾವಿರ ಪ್ರೋತ್ಸಾಹಧನ ನೀಡುವ ಮೂಲಕ ಕಲಾವಿದರ ಕಷ್ಟಗಳಿಗೆ ಸ್ಪಂದಿಸಬೇಕು. ಈ ಬೇಡಿಕೆ ಈಡೇರಿಕೆಗಾಗಿ ಮುಂದಿನ ದಿನಗಳಲ್ಲಿ ಹೋರಾಟ ರೂಪಿಸಲಾಗುವುದು ಎಂದರು.
ದೇವನಹಳ್ಳಿ ತಾಲ್ಲೂಕು ಕನ್ನಡ ಕಲಾವಿದರ ಸಂಘ ಆರಂಭಿಸಿ 25 ವರ್ಷ ಕಳೆದಿದ್ದು, ಶೀಘ್ರ 25ನೇ ವರ್ಷದ ಸಂಭ್ರಮಾಚರಣೆ ಮಾಡಲಾಗುವುದು. ಈಗಾಗಲೇ ಸಂಘದ ಸದಸ್ಯತ್ವ ಅಭಿಯಾನ ಆರಂಭಿಸಲಾಗಿದ್ದು, ದೇವನಹಳ್ಳಿ ತಾಲ್ಲೂಕಿನಲ್ಲಿ ಕನಿಷ್ಠ 5 ಸಾವಿರ ಸದಸ್ಯತ್ವ ಮಾಡುವ ಗುರಿ ಹಾಕಿಕೊಂಡಿದ್ದೇವೆ ಎಂದು ತಿಳಿಸಿದರು.
ಶರಣ ಸಾಹಿತ್ಯ ಪರಿಷತ್ತು ಅಧ್ಯಕ್ಷ ಚಂದ್ರಶೇಖರ್ ಹಡಪದ್ ಮಾತನಾಡಿ, ಕನ್ನಡ ರಂಗಭೂಮಿ ಹಾಗೂ ಚಲನಚಿತ್ರ ಕಂಡ ಅಪೂರ್ವ ಕಲಾವಿದರಲ್ಲಿ ಬಿ.ಜಯಶ್ರೀ ಒಬ್ಬರು. ರಂಗಭೂಮಿ, ಕಿರುತೆರೆ ಹಾಗೂ ಸಿನಿಮಾ ಮಾಧ್ಯಮದಲ್ಲಿ ತನ್ನದೇ ಆದ ಛಾಪು ಮೂಡಿಸಿದ್ದಾರೆ. ಇಂತಹ ಕಲಾವಿದರು ಈಗಿನ ಕಲಾವಿದರೆ ಮಾದರಿಯಾಗಬೇಕು ಎಂದರು.
ಕನ್ನಡದ ಕಲೆ ಉಳಿದರೆ ಭಾಷೆ ಉಳಿಯುತ್ತದೆ. ಕನ್ನಡ ಕಲಾವಿದರ ಸಂಘದ ಸದಸ್ಯತ್ವ ನೋಂದಣಿ ಪ್ರಕ್ರಿಯೆ ಆರಂಭಗೊಂಡಿದ್ದು, ಹೆಚ್ಚಿನ ಸಂಖ್ಯೆಯಲ್ಲಿ ಕಲಾವಿದರು ನೋಂದಾಯಿಸಿಕೊಳ್ಳುವಂತೆ ಮನವಿ ಮಾಡಿದರು.
ಈ ವೇಳೆ ಸೀತರಾಮಣ್ಣ, ಎಂ.ಸುಬ್ರಹ್ಮಣ್ಯ, ಗೋವಿಂದರಾಜು, ಬೈರೇಗೌಡ, ಅಮರೇಂದ್ರ ಮತ್ತಿತರರು ಉಪಸ್ಥಿತರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.