ADVERTISEMENT

ಹೊಸಕೋಟೆ: ಕಟ್ಟಡ ಕಾರ್ಮಿಕರಿಗೆ ನೆರವು

ಕಾರ್ಮಿಕ ಇಲಾಖೆಯಿಂದ ಕಿಟ್‌ ಪೂರೈಕೆ

​ಪ್ರಜಾವಾಣಿ ವಾರ್ತೆ
Published 24 ಜೂನ್ 2021, 3:50 IST
Last Updated 24 ಜೂನ್ 2021, 3:50 IST
ಹೊಸಕೋಟೆಯಲ್ಲಿ ನಗರಸಭಾ ಸದಸ್ಯೆ ಗಾಯತ್ರಿ ವಿಜಯ್ ಕುಮಾರ್‌ ಕಟ್ಟಡ ಕಾರ್ಮಿಕರಿಗಾಗಿ ಕಾರ್ಮಿಕ ಇಲಾಖೆ ನೀಡಿದ್ದ ದಿನಸಿ ಕಿಟ್ ವಿತರಿಸಿದರು
ಹೊಸಕೋಟೆಯಲ್ಲಿ ನಗರಸಭಾ ಸದಸ್ಯೆ ಗಾಯತ್ರಿ ವಿಜಯ್ ಕುಮಾರ್‌ ಕಟ್ಟಡ ಕಾರ್ಮಿಕರಿಗಾಗಿ ಕಾರ್ಮಿಕ ಇಲಾಖೆ ನೀಡಿದ್ದ ದಿನಸಿ ಕಿಟ್ ವಿತರಿಸಿದರು   

ಹೊಸಕೋಟೆ: ‘ನಗರದ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಕಟ್ಟಡ ಕಾರ್ಮಿಕರು ಹಾಗೂ ಕೂಲಿ ಕಾರ್ಮಿಕರೇ ಹೆಚ್ಚಾಗಿದ್ದಾರೆ. ಅವರಿಗೆ ಶಾಸಕ ಶರತ್ ಬಚ್ಚೇಗೌಡ ಕೋಟಾದಲ್ಲಿ ರಾಜ್ಯ ಸರ್ಕಾರ ಬಿಡುಗಡೆ ಮಾಡಿರುವ ಕಾರ್ಮಿಕ ಇಲಾಖೆಯ ದಿನಸಿ ಕಿಟ್‌ ವಿತರಿಸಲಾಗುತ್ತಿದೆ’ ಎಂದು ನಗರಸಭಾ ಸದಸ್ಯೆ ಗಾಯತ್ರಿ ವಿಜಯ್ ಕುಮಾರ್‌ ತಿಳಿಸಿದರು.

ನಗರದ ಕೋಟೆಯಲ್ಲಿ ಬುಧವಾರ ದಿನಸಿ ಕಿಟ್ ವಿತರಿಸಿ ಅವರು ಮಾತನಾಡಿದರು.

ಈ ಭಾಗದಲ್ಲಿ ಕಟ್ಟಡ ಕಾರ್ಮಿಕರು ಹಾಗೂ ಕೂಲಿ ಕಾರ್ಮಿಕರು ಹೆಚ್ಚಾಗಿ ವಾಸಿಸುತ್ತಿದ್ದಾರೆ. ಅವರಿಗೆ ಕಳೆದ ಎರಡು ತಿಂಗಳಿನಿಂದ ಲಾಕ್‌ಡೌನ್‌ ಪರಿಣಾಮ ಕೆಲಸವಿಲ್ಲ. ಅವರ ಬದುಕು ಕಷ್ಟಕರವಾಗಿದೆ.ಎರಡನೇ ವಾರ್ಡ್‌ನಲ್ಲಿ ಸುಮಾರು 400 ಮಂದಿಗೆಕಾರ್ಮಿಕ ಇಲಾಖೆ ನೀಡಿರುವ ದಿನಸಿ ಕಿಟ್‌ಗಳನ್ನು ವಿತರಿಸಲಾಗಿದೆ ಎಂದು ತಿಳಿಸಿದರು.

ADVERTISEMENT

ನಗರದ ಇತರೇ ಭಾಗಗಳಲ್ಲಿ ಮತ್ತು ತಾಲ್ಲೂಕಿನಲ್ಲಿ ಶಾಸಕ ಶರತ್ ಬಚ್ಚೇಗೌಡ, ಸಂಸದ ಬಿ.ಎನ್. ಬಚ್ಚೇಗೌಡರ ಅಭಿಮಾನಿಗಳು ಕೊರೊನಾದಿಂದ ಸಂಕಷ್ಟಕ್ಕೆ ಸಿಲುಕಿದ ಜನರಿಗೆ ದಿನಸಿ ಕಿಟ್ ಸೇರಿದಂತೆ ಹಲವಾರು ರೀತಿಯಲ್ಲಿ ನೆರವು ನೀಡಿದ್ದಾರೆ ಎಂದರು.

ಎರಡನೇ ವಾರ್ಡ್‌ನಲ್ಲಿ ಈಗಾಗಲೇ ಜನತೆಯ ಪರವಾಗಿ ಸಾಕಷ್ಟು ಕೆಲಸ ಮಾಡಲಾಗಿದೆ. ಸ್ವಂತ ಖರ್ಚಿನಲ್ಲಿ ಕೊಳವೆಬಾವಿ ಕೊರೆಸಿ ಬೀದಿ ನಲ್ಲಿಗಳನ್ನು ಹಾಕಿಸಿ ದಿನನಿತ್ಯ ನೀರು ಪೂರೈಕೆ ಮಾಡಲಾಗುತ್ತಿದೆ. ಸುಮಾರು ₹ 28 ಲಕ್ಷ ವೆಚ್ಚದಡಿ ಉದ್ಯಾನ ಅಭಿವೃದ್ಧಿಪಡಿಸಲಾಗುತ್ತಿದೆ. ಶೀರ್ಘವೇ, ಅದು ಸಾರ್ವಜನಿಕರಿಗೆ ಮುಕ್ತವಾಗಲಿದೆ ಎಂದು ತಿಳಿಸಿದರು.

ಮುಖಂಡ ಬಿ.ವಿ. ಬೈರೇಗೌಡ ಮಾತನಾಡಿ, ತಾಲ್ಲೂಕಿನಲ್ಲಿ ಇತ್ತೀಚೆಗೆ ಕುಟುಂಬದ ಬಗ್ಗೆ ಮಾತನಾಡುವ ಚಾಳಿಯನ್ನು ಕೆಲವರು ಬೆಳೆಸಿಕೊಂಡು ಬರುತ್ತಿದ್ದಾರೆ. ಅದು ಉತ್ತಮ ಬೆಳವಣಿಗೆಯಲ್ಲ. ಕೊರೊನಾ ಸಂದರ್ಭದಲ್ಲಿ ಜನರ ಸೇವೆ ಮಾಡಬೇಕೇ ವಿನಾ ಅನಾವಶ್ಯಕವಾಗಿ ನಮ್ಮ ಕುಟುಂಬದ ಬಗ್ಗೆ ಮಾತನಾಡುವುದನ್ನು ನಿಲ್ಲಿಸಬೇಕು ಎಂದರು.

ಕಾರ್ಮಿಕ ಇಲಾಖೆಯು ಶಾಸಕರಿಗೆ ನೀಡಿರುವ ದಿನಸಿ ಕಿಟ್‌ಗಳನ್ನು ನಾವೇ ವಿತರಿಸುತ್ತಿದ್ದೇವೆ. ಈ ಕಾರ್ಯವನ್ನು ನಾವು ಸ್ವಂತದ್ದು ಎಂದು ಎಲ್ಲಿಯೂ ಹೇಳಿಲ್ಲ. ಕೆಲವರು ಕಾರ್ಮಿಕ ಇಲಾಖೆಯ ಕಿಟ್‌ಗಳನ್ನು ಶಾಸಕರು ತಮ್ಮದೆಂದು ಹೇಳಿಕೊಂಡು ವಿತರಿಸುತ್ತಿದ್ದಾರೆ ಎಂದು ಆರೋಪ ಮಾಡುತ್ತಿದ್ದಾರೆ. ಇದು ಸತ್ಯಕ್ಕೆ ದೂರವಾದ ಸಂಗತಿ. ಕಾರ್ಮಿಕ ಇಲಾಖೆಯಿಂದ ಬಂದಿರುವ ಕಿಟ್‌ಗಳನ್ನು ಹಾಗೆಯೇ ವಿತರಿಸಲಾಗುತ್ತಿದೆ ಎಂದು ಹೇಳಿದರು.

ಶಾಸಕರು ತಮ್ಮ ಸ್ವಂತ ಹಣದಿಂದ ದೊಡ್ಡ ಕೆರೆ ಅಂಗಳದಲ್ಲಿ ಐದು ಲಕ್ಷ ಲೀಟರ್‌ ಸಾರ್ಮಥ್ಯದ ನೀರಿನ ತೊಟ್ಟಿ ಕಟ್ಟಿಸಿ ಜನತೆಗೆ ಕುಡಿಯುವ ನೀರು ಪೂರೈಸುತ್ತಿದ್ದಾರೆ ಎಂದರು.

ಕೇಂದ್ರ ಕಾರ್ಮಿಕ ಭವಿಷ್ಯ ನಿಧಿ ಸದಸ್ಯ ವಿಜಯ್ ಕುಮಾರ್‌, ವೀರಶೈವ ಲಿಂಗಾಯತ ನೌಕರರ ಸಂಘದ ಅಧ್ಯಕ್ಷ ಡಿ.ಎಸ್. ರಾಜಕುಮಾರ್‌, ನಗರಸಭಾ ಮಾಜಿ ಸದಸ್ಯ ಮುನಿನಂಜಪ್ಪ, ವೆಂಕಟರಮಣಪ್ಪ, ಭುಜಂಗರಾವ್ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.