ADVERTISEMENT

ದೇವನಹಳ್ಳಿ: ಅಂಗವಿಕಲ ನೌಕರರಲ್ಲಿ ಜಾಗೃತಿ ಅಗತ್ಯ 

ಸವಲತ್ತುಗಳ ಚರ್ಚೆ, ಸಂಘದ ನೂತನ ಪದಾಧಿಕಾರಿಗಳ ಆಯ್ಕೆ ಪಟ್ಟಿ ಬಿಡುಗಡೆ

​ಪ್ರಜಾವಾಣಿ ವಾರ್ತೆ
Published 11 ಜನವರಿ 2020, 13:42 IST
Last Updated 11 ಜನವರಿ 2020, 13:42 IST
ಆಯ್ಕೆಯಾದ ನೂತನ ಪದಾಧಿಕಾರಿಗಳಿಗೆ ನೇಮಕ ಆದೇಶ ಪತ್ರ ವಿತರಿಸಲಾಯಿತು
ಆಯ್ಕೆಯಾದ ನೂತನ ಪದಾಧಿಕಾರಿಗಳಿಗೆ ನೇಮಕ ಆದೇಶ ಪತ್ರ ವಿತರಿಸಲಾಯಿತು   

ದೇವನಹಳ್ಳಿ: ‘ಅಂಗವಿಕಲ ನೌಕರರು ಸವಲತ್ತು ಪಡೆಯಲು ಜಾಗೃತರಾಗುವ ಅಗತ್ಯವಿದೆ’ ಎಂದು ಕ್ಷೇತ್ರ ಶಿಕ್ಷಣ ಸಮಾನ್ವಯಾಧಿಕಾರಿ ಹೊನ್ನಪ್ಪ ಹೇಳಿದರು.

ಇಲ್ಲಿನ ಗುರುಭವನದಲ್ಲಿ ಕರ್ನಾಟಕ ರಾಜ್ಯ ಸರ್ಕಾರಿ ಅಂಗವಿಕಲ ನೌಕರರ ಸಂಘದ ಸವಲತ್ತುಗಳ ಚರ್ಚೆ ಮತ್ತು ಸಂಘದ ನೂತನ ಪದಾಧಿಕಾರಿಗಳ ಆಯ್ಕೆ ಪಟ್ಟಿ ಬಿಡುಗಡೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

‘ಶಿಕ್ಷಣ ಇಲಾಖೆ ಸೇರಿದಂತೆ ಪ್ರತಿಯೊಂದು ಇಲಾಖೆ ವ್ಯಾಪ್ತಿಯಲ್ಲಿರುವ ಅಂಗವಿಕಲ ನೌಕರರಿಗೆ ಶೇ 6ರಷ್ಟು ವಿಶೇಷ ಭತ್ಯೆ ಸರ್ಕಾರ ನೀಡುತ್ತದೆ. ಕೆಲ ನೌಕರರು ತಮ್ಮ ಸೇವಾವಧಿಯ ನೋಂದಣಿ ಪುಸ್ತಕದಲ್ಲಿ ಅಂಗವಿಕಲ ನೌಕರ ಎಂದು ನಮೂದಿಸಬೇಕು. ಇಲ್ಲದಿದ್ದರೆ ಭತ್ಯೆ ಪಡೆಯಲು ಸಾಧ್ಯವಾಗುವುದಿಲ್ಲ’ ಎಂದು ತಿಳಿಸಿದರು.

ADVERTISEMENT

‘ಅನೇಕ ಇಲಾಖೆಗಳಲ್ಲಿ ಅಂಗವಿಕಲ ನೌಕರರನ್ನು ಕೀಳಾಗಿ ಕಾಣಲಾಗುತ್ತದೆ. ಇದರಿಂದ ಅಂಗವಿಕಲರು ಅತ್ಮಸ್ಥೈರ್ಯ ಕಳೆದುಕೊಳ್ಳದೆ ಧೈರ್ಯವಾಗಿ ಎದುರಿಸಬೇಕು. ದೇಶದ ಅಭಿವೃದ್ಧಿಯಲ್ಲಿ ಅವರ ಪಾತ್ರ ಕಡೆಗಣಿಸುವಂತಿಲ್ಲ. ಸಂಘದ ಒಗ್ಗಟ್ಟಿನಿಂದ ಸರ್ಕಾರದ ಸವಲತ್ತು ಪಡೆಯಲು ಸಹಕಾರಿ’ ಎಂದು ಹೇಳಿದರು.

ಕೆಆರ್‌ವಿಪಿ ಜಿಲ್ಲಾ ಘಟಕ ಗೌರವ ಕಾರ್ಯದರ್ಶಿ ಕೆ.ವಿ.ಶ್ರಿಕಾಂತ್ ಮಾತನಾಡಿ, ‘ಸತತ ಪ್ರಯತ್ನದಿಂದ ಮೊದಲ ಬಾರಿಗೆ ಕರ್ನಾಟಕ ರಾಜ್ಯ ಸರ್ಕಾರಿ ಅಂಗವಿಕಲ ನೌಕರರ ಸಂಘ ಅಸ್ತಿತ್ವಕ್ಕೆ ತಂದು, ಸರ್ವ ಸದಸ್ಯರ ಒಪ್ಪಿಗೆಯಂತೆ ಪದಾಧಿಕಾರಿಗಳ ನೇಮಕ ಮಾಡಲಾಗಿದೆ. ಜಿಲ್ಲೆಯ ವಿವಿಧ ಇಲಾಖೆಯಲ್ಲಿ 258 ಅಂಗವಿಕಲ ನೌಕರರಿದ್ದು, ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳವ ಏಕೈಕ ಮಾರ್ಗ ಇದಾಗಿದೆ’ ಎಂದು ಹೇಳಿದರು.

‘ಅನೇಕ ಇಲಾಖೆಗಳಲ್ಲಿ ಅಂಗವಿಕಲ ನೌಕರರನ್ನು ಕನಿಷ್ಠವಾಗಿ ನೋಡುವುದು, ಹಿರಿಯ ಅಧಿಕಾರಿಗಳಿಂದ ಮಾನಸಿಕ ಕಿರುಕುಳ, ದೌರ್ಜನ್ಯ ಸಹಿಸಿ ಕೆಲಸ ಮಾಡಬೇಕಾದ ಸ್ಥಿತಿಯಿದೆ. ಅವರೆಲ್ಲರಿಗೂ ಸಂಘದ ಮೂಲಕ ಶಕ್ತಿ ತುಂಬುವ ಕೆಲಸ ಮಾಡಬೇಕು’ ಎಂದು ಹೇಳಿದರು.

ನೂತನ ಪದಾಧಿಕಾರಿಗಳು

ಎಲ್. ಪ್ರಭಾವತಿ; ಅಧ್ಯಕ್ಷೆ (ಹೊಸಕೋಟೆ), ಅರುಣ್ ಕುಮಾರ್ (ದೊಡ್ಡಬಳ್ಳಾಪುರ), ನಾಗರಾಜ್ (ದೇವನಹಳ್ಳಿ) ಉಪಾಧ್ಯಕ್ಷರು. ಮಲ್ಲಿಕಾರ್ಜುನ; ಪ್ರಧಾನ ಕಾರ್ಯದರ್ಶಿ (ದೇವನಹಳ್ಳಿ ), ಶಾರದಮ್ಮ; ಖಜಾಂಚಿ (ಹೊಸಕೋಟೆ). ನರಸಿಂಹ ಮೂರ್ತಿ, ಲಕ್ಷ್ಮಿ ನಾರಾಯಣ (ಹೊಸಕೋಟೆ), ಅನಂದ್ (ದೊಡ್ಡಬಳ್ಳಾಪುರ), ವಿಜಯಲಕ್ಷ್ಮಿ (ನೆಲಮಂಗಲ), ವೇದಾವತಿ (ದೇವನಹಳ್ಳಿ ), ಸಂಘಟನಾ ಕಾರ್ಯದರ್ಶಿಗಳು. ಕೃಷ್ಣಮೂರ್ತಿ, ಆಂಜನೇಯ ರೆಡ್ಡಿ; ಸದಸ್ಯರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.