ಹೊಸಕೋಟೆ: ತಾಲ್ಲೂಕಿನ ಜಡಗೇನಹಳ್ಳಿ ಹೋಬಳಿಯ ಖಾಜಿ ಹೊಸಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಬೊಮ್ಮನಬಂಡೆ ಗ್ರಾಮದ ಬಳಿ ಬೆಂಗಳೂರಿನ ಕಸ ಮತ್ತು ಆಸ್ಪತ್ರೆಗಳ ತ್ಯಾಜ್ಯ ಸುರಿಯಲಾಗುತ್ತಿದೆ.
ಬಿಬಿಎಂಪಿ ತಂದು ಸುರಿಯುತ್ತಿರುವ ಕಸ ಮತ್ತು ಆಸ್ಪತ್ರೆ ತ್ಯಾಜ್ಯಕ್ಕೆ ಬೆಂಕಿ ಹಚ್ಚುತ್ತಿರುವುದರಿಂದ ಗ್ರಾಮಸ್ಥರಿಗೆ ಆರೋಗ್ಯ ಸಮಸ್ಯೆಯಾಗುತ್ತದೆ ಎಂದು ಬೊಮ್ಮನಬಂಡೆ ಗ್ರಾಮಸ್ಥರು ಆರೋಪಿಸಿದ್ದಾರೆ.
ಬೊಮ್ಮನಬಂಡೆ ಹೊರವಲಯದಲ್ಲಿ ಕಸ ಹಾಗೂ ಸಿರಿಂಜ್, ಗ್ಲೌಸ್, ಅವಧಿ ಮೀರಿದ ಔಷಧಿ ಸೇರಿದಂತೆ ಇನ್ನಿತರ ಆಸ್ಪತ್ರೆ ತ್ಯಾಜ್ಯ ಸುರಿದು ಬೆಂಕಿ ಇಡಲಾಗುತ್ತಿದೆ. ಇದರಿಂದ ದಟ್ಟ ಹೊಗೆ ಆವರಿಸಿ ಉಸಿರಾಡುವ ಗಾಳಿ ಸೇರುತ್ತಿದೆ. ಜನರ ಆರೋಗ್ಯ ಸಮಸ್ಯೆ ಹದಗೆಡುತ್ತಿದೆ ಎಂದು ಗ್ರಾಮಸ್ಥರು ಆರೋಪಿಸಿದ್ದಾರೆ.
ಕಟ್ಟಿಗೇನಹಳ್ಳಿ-ಬೊಮ್ಮನಬಂಡೆ ನಡುವಿನ ಜಮೀನಿನಲ್ಲಿ ಬಿಬಿಎಂಪಿ ವ್ಯಾಪ್ತಿಯಿಂದ ಲೋಡ್‌ಗಟ್ಟಲೇ ವೈದ್ಯಕೀಯ ತ್ಯಾಜ್ಯ ಸೇರಿಂತೆ ಇತರೆ ಕಸದ ರಾಶಿ ತಂದು ಸುರಿಯಲಾಗುತ್ತಿದೆ. ಸ್ಥಳಿಯರು ಪೊಲೀಸರಿಗೆ ಮಾಹಿತಿ ನೀಡಿ ವಾಹನ ಸಮೇತ ಹಿಡಿದುಕೊಟ್ಟರೂ ಯಾವುದೇ ಪ್ರಯೋಜನವಾಗಲಿಲ್ಲ ಎಂದು ಕಟ್ಟಿಗೇನಹಳ್ಳಿ ಮತ್ತು ಬೊಮ್ಮನಬಂಡಿ ಗ್ರಾಮಸ್ಥರು ಆರೋಪಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.