ADVERTISEMENT

ಬಣ್ಣದ ಚಿಟ್ಟೆಗಳ ವಿಸ್ಮಯ ಲೋಕ

ವಡ್ಡನಹಳ್ಳಿ ಬೊಜ್ಯನಾಯ್ಕ
Published 7 ಜೂನ್ 2020, 10:18 IST
Last Updated 7 ಜೂನ್ 2020, 10:18 IST
ಕಾಮನ್ ಇವೆನಿಂಗ್ ಬ್ರೌನ್
ಕಾಮನ್ ಇವೆನಿಂಗ್ ಬ್ರೌನ್   

ದೇವನಹಳ್ಳಿ:ವಿಭಿನ್ನ ದೇಹ ರಚನೆಯಿಂದಾಗಿ ತುಂಬ ಮನ ಮೋಹಕವಾಗಿ ನೋಡುಗರನ್ನು ಸೂಜಿಗಲ್ಲಿನಂತೆ ಸೆಳೆಯುವ ಚಿಟ್ಟೆಗಳು ಅಪೂರ್ವ ಜೀವಿಗಳು.

ಪ್ರಕೃತಿಯಲ್ಲಿ ನಿರಂತರ ಅವಿನಾಭಾವ ಸಂಬಂಧ ಹೊಂದಿ, ಎಲ್ಲಿ ವಿಧ ವಿಧವಾದ ಹೂವುಗಳಿರುತ್ತವೆಯೋ ಅಲ್ಲಿ ಚಿಟ್ಟೆಗಳು ಬಂದು ಬದುಕು ಕಟ್ಟಿಕೊಳ್ಳುವ ಪ್ರಯತ್ನ ಮಾಡುತ್ತಿರುತ್ತವೆ. ನಿಸರ್ಗದ ಆಹಾರದ ಸರಪಳಿಯಲ್ಲಿ ಚಿಟ್ಟೆಗಳಿಗೆ ವಿಶೇಷ ಸ್ಥಾನವಿದೆ. ಅದೇ ರೀತಿ ಸಸ್ಯಗಳ ಪರಾಗ ಸ್ಪರ್ಶ ಪ್ರಕ್ರಿಯೆಯಲ್ಲಿ ಮಹತ್ತರವಾದ ಪಾತ್ರ ವಹಿಸುತ್ತವೆ ಎಂಬುದು ತಜ್ಞರ ಅಭಿಮತ.

‘ಚಿಟ್ಟೆಗಳ ವೀಕ್ಷಣೆ ಅವುಗಳ ಅಧ್ಯಯನ ಮತ್ತು ದಾಖಲೀಕರಣ ಕೆಲವರಲ್ಲಿ ಒಂದು ಹವ್ಯಾಸವಾಗಿದ್ದರೂ ಚಿಟ್ಟೆಗಳ ವಿಷಯದಲ್ಲಿ ಉನ್ನತ ಪದವಿ ವ್ಯಾಸಂಗಕ್ಕೂ ಅವಕಾಶವಿದೆ. ಚಿಟ್ಟೆಗಳನ್ನು ಪರೋಕ್ಷವಾಗಿ ಸಂರಕ್ಷಿಸಬೇಕು. ಪರಂಪರೆಗೆ ಉಳಿಯಬೇಕು. ಚಿಟ್ಟೆಯ ಆಹಾರ ಮತ್ತು ಆತಿಥೇಯ ಸಸ್ಯಸಂಕುಲ ನಾಶವಾಗದಂತೆ ಸಂರಕ್ಷಣೆ ಮಾಡಬೇಕು. ಚಿಟ್ಟೆಗಳ ಸಂತತಿ ಉಳಿಯಬೇಕೆಂದರೆ ಕೀಟನಾಶಕ ಬಳಕೆ, ಪರಿಸರ ಮತ್ತು ಶಬ್ದ ಮಾಲಿನ್ಯ ತಡೆಗಟ್ಟುವಿಕೆ ಅಗತ್ಯವಿದೆ’ ಎಂಬುದು ತಜ್ಞರ ಹೇಳಿಕೆ.

ADVERTISEMENT

ವಿಶ್ವದಲ್ಲಿ 17 ರಿಂದ 20 ಸಾವಿರ ಅದಕ್ಕಿಂತ ಹೆಚ್ಚಿನ ಸಂಖ್ಯೆಯ ವಿವಿಧ ಪ್ರಭೇದ ಮತ್ತು ವಿವಿಧ ವರ್ಣಮಯ ಚಿಟ್ಟೆಗಳಿವೆ. ಭಾರತದಲ್ಲಿ 1502 ಈವರೆಗೂ ಗುರುತಿಸಲಾದ ವಿವಿಧ ಬಗೆಯ ಚಿಟ್ಟೆಗಳಿವೆ. ಕರ್ನಾಟಕ ರಾಜ್ಯದಲ್ಲಿ ಕರಾವಳಿ, ಮಲೆನಾಡು, ಅರೆ ಮಲೆನಾಡು ಮತ್ತು ಬಯಲು ಸೀಮೆ ಪ್ರದೇಶಗಳಲ್ಲಿ ಹವಾಮಾನಕ್ಕೆ ತಕ್ಕಂತೆ ಜೀವಿಸುವ 318 ಬಗೆಯ ಚಿಟ್ಟೆಗಳನ್ನು ಗುರುತಿಸಲಾಗಿದೆ. ಚಿಟ್ಟೆಗಳ ಜೀವತಾವಧಿ ಅದರ ದೇಹ ರಚನೆಯ ಮೇಲೆ ಅವಲಂಬಿತವಾಗಿದೆ. ಕೆಲವು ಚಿಟ್ಟೆಗಳನ್ನು ಗಾತ್ರದ ಮೇಲೆ ಅದರ ಆಯಸ್ಸು ನಿರ್ಧರಿಸಬಹುದಾಗಿದೆ. ಸಾಮಾನ್ಯವಾಗಿ ಚಿಟ್ಟೆಗಳ ಜೀವಿತಾವಧಿ 2 ಮತ್ತು 4 ವಾರಗಳು ಇರುತ್ತದೆ. ಅದರೂ ಕೆಲವೊಂದು ಚಿಟ್ಟೆಗಳು 8 ತಿಂಗಳುಗಳವರೆಗೆ ಬದುಕು ಬಲ್ಲವು.

ಚಿಟ್ಟೆಗಳ ಜೀವನ ಚಕ್ರ: ನಾಲ್ಕು ಹಂತಗಳನ್ನು ಹೊಂದಿರುವ ಚಿಟ್ಟೆಗಳ ಜೀವನ ಚಕ್ರದಲ್ಲಿ ಮೊಟ್ಟೆ, ಲಾರ್ವ, ಪೊರೆ ಮತ್ತು ವಯಸ್ಕ ಹಂತಕ್ಕೆ ಒಳಗಾಗುತ್ತವೆ. ಚಿಟ್ಟೆ ತನ್ನ ಜೀವನ ಚಕ್ರದಲ್ಲಿ ಪರಿಪೂರ್ಣ ಮೆಟಾಮಾರ್ಪಾಸಿಸ್ ಎಂಬ ಪ್ರಕ್ರಿಯೆಗೆ ಒಳಗಾಗುತ್ತದೆ ಅಂದರೆ ಆರಂಭ ಹಂತದ ಮೊಟ್ಟೆಯು ನಂತರ ಲಾರ್ವಾ ಆಗಿ ಮಾರ್ಪಾಟ್ಟು ಅಂತಿಮ ಹಂತದವರೆಗೆ ಅದು ಸುಂದರವಾದ ಮತ್ತು ಆಕರ್ಷಕವಾದ ವಯಸ್ಕ ಚಿಟ್ಟೆಯಾಗಿ ರೂಪಾಂತರ ಹೊಂದುತ್ತದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.